ಉಚ್ಚಾಟಿತ ನಾಯಕ ಒ.ಪನ್ನೀರಸೆಲ್ವಂ, ಶಶಿಕಲಾ ಮತ್ತು ಟಿಟಿವಿ ದಿನಕರನ್ ಅಣ್ಣಾಡಿಎಂಕೆಗೆ ಮರಳಲು ಆಸಕ್ತಿ ತೋರಿದ್ದಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಕಾರ್ಯಕರ್ತರಿಂದ ಚುನಾವಣೆ ನಡೆದರೆ ಮಾತ್ರ ಮರಳುವುದಾಗಿ ಷರತ್ತು ವಿಧಿಸಿದ್ದಾರೆ. ಏಕಪಕ್ಷೀಯ ನೇಮಕಾತಿಯನ್ನು ವಿರೋಧಿಸಿದ್ದಕ್ಕೆ ಪನ್ನೀರಸೆಲ್ವಂರನ್ನು ಈ ಹಿಂದೆ ಪಕ್ಷದಿಂದ ಹೊರಹಾಕಲಾಗಿತ್ತು. ಆದರೆ, ನ್ಯಾಯಾಲಯದಲ್ಲಿರುವ ವಿಚಾರಗಳನ್ನು ಹಿಂಪಡೆದು, ಆಂತರಿಕ ವಿಷಯಗಳನ್ನು ಬಹಿರಂಗವಾಗಿ ಚರ್ಚಿಸದಿದ್ದರೆ ಮಾತ್ರ ಪಕ್ಷಕ್ಕೆ ಮರಳಲು ಅವಕಾಶ ಎಂದು ಅಣ್ಣಾಡಿಎಂಕೆ ತಿಳಿಸಿದೆ.

ಚೆನ್ನೈ: ಅಣ್ಣಾ ಡಿಎಂಕೆಯಿಂದ ಉಚ್ಚಾಟನೆಗೊಂಡಿದ್ದ ತಮಿಳುನಾಡು ಮಾಜಿ ಸಿಎಂ ಒ. ಪನ್ನೀರಸೆಲ್ವಂ, ಪಕ್ಷಕ್ಕೆ ಮರಳುವ ಇರಾದೆ ವ್ಯಕ್ತಪಡಿಸಿದ್ದಾರೆ. ತಾವಲ್ಲದೆ ಪಕ್ಷದ ದಿವಂಗತ ನಾಯಕಿ ಜಯಲಲಿತಾರ ಆಪ್ತ ಗೆಳತಿ ವಿ.ಕೆ. ಶಶಿಕಲಾ ಹಾಗೂ ಮುಖಂಡ ಟಿಟಿವಿ ದಿನಕರನ್‌ ಕೂಡ ಪಕ್ಷಕ್ಕೆ ಮರಳಲು ಉತ್ಸುಕರಾಗಿದ್ದಾರೆ ಎಂದಿದ್ದಾರೆ.

ಆದರೆ ಅದಕ್ಕೆ ಅವರು ಷರತ್ತು ವಿಧಿಸಿದ್ದಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿ (ಅಧ್ಯಕ್ಷ ಹುದ್ದೆಗೆ ಸಮನಾದ ಪದವಿ) ಹುದ್ದೆಗೆ ಕಾರ್ಯಕರ್ತರಿಂದ ಚುನಾವಣೆ ನಡೆಯಬೇಕು. ಏಕಪಕ್ಷೀಯ ಆಯ್ಕೆ ನಡೆಯಕೂಡದು. ಆಗ ತಾವು ಪಕ್ಷಕ್ಕೆ ಮರಳುತ್ತೇವೆ ಎಂದಿದ್ದಾರೆ.

ಅಣ್ಣಾ ಡಿಎಂಕೆಗೆ ಎಡಪ್ಪಾಡಿ ಪಳನಿಸ್ವಾಮಿಯೇ ಬಾಸ್‌, ಒಪಿಎಸ್‌ಗೆ ಭಾರಿ ಹಿನ್ನಡೆ

2022ರಲ್ಲಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರನ್ನು ಪಕ್ಷದ ಸಂವಿಧಾನ ಬದಲಿಸಿ ಏಕಪಕ್ಷೀಯವಾಗಿ ಪ್ರಧಾನ ಕಾರ್ಯದರ್ಶಿ ಮಾಡಿದ್ದನ್ನು ಪನ್ನೀರಸೆಲ್ವಂ ವಿರೋಧಿಸಿದ್ದರು. ಆಗ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.

ಅಣ್ಣಾಡಿಎಂಕೆಗೆ ಶೀಘ್ರ ಏಕನಾಯಕತ್ವ: ಈ ನಿರ್ಧಾರದ ಹಿಂದಿದೆ ಶಶಿಕಲಾ ಷಡ್ಯಂತ್ರ!

ಸುಮ್ಮನೇ ಕರೆದುಕೊಳ್ಳಲ್ಲ- ಅಣ್ಣಾಡಿಎಂಕೆ: ಈ ನಡುವೆ, ಪನ್ನೀರಸೆಲ್ವಂ ಆಫರ್‌ಗೆ ಪ್ರತಿಕ್ರಿಯೆ ನೀಡಿರುವ ಅಣ್ಣಾ ಡಿಎಂಕೆ ನಾಯಕ ವಿ.ವಿ. ರಾಜನ್‌ ಚೆಲ್ಲಪ್ಪ, ‘ಪಕ್ಷದ ವಿದ್ಯಮಾನಗಳ ವಿರುದ್ಧ ಪನ್ನೀರಸೆಲ್ವಂ ಈಗಾಗಲೇ ಕೋರ್ಟಿಗೆ ಹೋಗಿದ್ದಾರೆ. ಇನ್ನು ಮುಂದೆ ಅವರು ಕೋರ್ಟಿಗೆ ಹೋಗುವುದನ್ನು ನಿಲ್ಲಿಸಬೇಕು ಹಾಗೂ ಆಂತರಿಕ ವಿಚಾರಗಳ ಬಗ್ಗೆ ಬಹಿರಂಗವಾಗಿ ಮಾತಾಡಕೂಡದು. ಆಗ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ’ ಎಂದಿದ್ದಾರೆ.