ಆಪರೇಷನ್ ಸಿಂದೂರ್ ನಂತರ, ಪಾಕಿಸ್ತಾನದ ಹ್ಯಾಕರ್‌ಗಳು ಭಾರತದ ಮೇಲೆ 15 ಲಕ್ಷಕ್ಕೂ ಹೆಚ್ಚು ಸೈಬರ್ ದಾಳಿಗಳನ್ನು ನಡೆಸಿದ್ದಾರೆ. ಆದರೆ, ಕೇವಲ 150 ದಾಳಿಗಳು ಮಾತ್ರ ಯಶಸ್ವಿಯಾಗಿವೆ ಎಂದು ಮಹಾರಾಷ್ಟ್ರ ರಾಜ್ಯ ಸೈಬರ್ ಅಪರಾಧ ವಿಭಾಗ ತಿಳಿಸಿದೆ.

ಆಪರೇಷನ್ ಸಿಂದೂರ್‌ ಬಳಿಕ ಪಾಕ್‌ನಿಂದ 15 ಲಕ್ಷ ಸೈಬರ್ ದಾಳಿಗೆ ಯತ್ನ

ಪುಣೆ: ಪಾಕಿಸ್ತಾನದ ಮೇಲೆ ಭಾರತೀಯ ಸೇನೆ ಆಪರೇಷನ್ ಸಿಂದೂರ್ ಕಾರ್ಯಾಚರಣೆ ಆರಂಭಿಸಿದ ಬಳಿಕ ಪಾಕಿಸ್ತಾನದ ಹ್ಯಾಕರ್‌ಗಳು, ಭಾರತವನ್ನು ಗುರಿಯಾಗಿಸಿ 15 ಲಕ್ಷಕ್ಕೂ ಹೆಚ್ಚು ಸೈಬ‌ರ್ ದಾಳಿ ನಡೆಸಿದ್ದಾರೆ. ಆದರೆ ಇವುಗಳಲ್ಲಿ ಕೇವಲ 150 ದಾಳಿಗಳು ಮಾತ್ರ ಯಶಸ್ವಿಯಾಗಿವೆ ಎಂದು ಮಹಾರಾಷ್ಟ್ರ ರಾಜ್ಯ ಸೈಬರ್ ಅಪರಾಧ ವಿಭಾಗ ಮಾಹಿತಿ ನೀಡಿದೆ. 

ಭಾರತದ ಸೇನೆ, ಆಡಳಿತ, ಸರ್ಕಾರ ಸೇರಿ ಇನ್ನಿತರ ವೆಬ್‌ಸೈಟ್‌ಗಳನ್ನು ಗುರಿಯಾಗಿಸಿಕೊಂಡು 15 ಲಕ್ಷಕ್ಕೂ ಹೆಚ್ಚು ಸೈಬರ್‌ದಾಳಿಗಳನ್ನು ನಡೆಸಲಾಗಿದೆ. 'ರೋಡ್ ಆಫ್ ಸಿಂದೂರ' ಹೆಸರಲ್ಲಿ ರಾಜ್ಯದ ನೋಡಲ್ ಸೈಬರ್ ಏಜೆನ್ಸಿ ಈ ಕುರಿತು ವರದಿ ಸಿದ್ದಪಡಿಸಿ, ಕಾನೂನು ಜಾರಿ ಸಂಸ್ಥೆಗಳಿಗೆ ಸಲ್ಲಿಸಿದೆ. 

ಪಾಕಿಸ್ತಾನ, ಬಾಂಗ್ಲಾದೇಶ, ಇಂಡೋನೇಷ್ಯಾ, ಮೊರಾಕ್ಕೊ ಮತ್ತು ಮಧ್ಯಪ್ರಾಚ್ಯ ದೇಶಗಳಿಂದ ಈ ದಾಳಿಗಳು ನಡೆಯುತ್ತಿವೆ. ಪಾಕಿಸ್ತಾನದ ಎಪಿಟಿ 36, ಪಾಕಿಸ್ತಾನ ಸೈಬರ್‌ ಫೋರ್ಸ್, ಟೀಮ್ ಇನ್ಸೆನ್ ಪಿಕೆ, ಮಿಸ್ಟೀರಿಯಸ್ ಬಾಂಗ್ಲಾದೇಶ, ಇಂಡೋ ಹ್ಯಾಕ್ಸ್ ಸೆಕ್, ಸೈರ್ಬ ಗ್ರೂಪ್ ಎಡ್ಒಎಎಕ್ಸ್ 1337, ನ್ಯಾಷನಲ್ ಸೈರ್ನ ಕ್ರೂ ಹ್ಯಾಕಿಂಗ್ ಗುಂಪುಗಳು ಒಟ್ಟಾಗಿ ಭಾರತದ ವೆಬ್‌ಸೈಟ್ ಗಳನ್ನು ಗುರಿಯಾಗಿಸಿ 15 ಲಕ್ಷಕ್ಕೂ ಅಧಿಕ ದಾಳಿಗಳನ್ನು ನಡೆಸಿವೆ. ಇವು150 ಸೈಬರ್ ದಾಳಿಗಳಲ್ಲಿ ಯಶ ಕಂಡಿದ್ದಾರೆ ಎಂದು ಮಹಾ ಮಹಾರಾಷ್ಟ್ರ ಸೈಬರ್ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಯಶಸ್ವಿ ಯಾದವ್ ತಿಳಿಸಿದ್ದಾರೆ.

ಆಪರೇಷನ್ ಸಿಂದೂರದ ಬಗ್ಗೆ 70 ದೇಶಕ್ಕೆ ಮಾಹಿತಿ 
ನವದೆಹಲಿ: ಪಹಲ್ಲಾಂ ನರಮೇಧಕ್ಕೆ ಪ್ರತೀಕಾರವಾಗಿ ಭಾರತದ 'ಆಪರೇಷನ್ ಸಿಂದೂರ' ಕಾರ್ಯಾಚರಣೆಯ ಬಗ್ಗೆ ಸೇನೆಯ ಉನ್ನತ ಅಧಿಕಾರಿಗಳು 70 ದೇಶಗಳ ರಾಯಭಾರ ಸಿಬ್ಬಂದಿಗೆ ಮಂಗಳವಾರ ಮಾಹಿತಿ ನೀಡಿದ್ದಾರೆ. ದೆಹಲಿ ಕಂಟೋನ್ಮೆಂಟ್ ಮಾಣಿಕ್ ಶಾ ಕೇಂದ್ರದಲ್ಲಿ ರಕ್ಷಣಾ ಗುಪ್ತಚರ ಸಂಸ್ಥೆಯ ಮಹಾ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ಡಿ.ಎಸ್ ರಾಣಾ,ಆಪರೇಷನ್ ಸಿಂದೂರದ ಬಗ್ಗೆ ಸ್ವೀಡನ್, ನೇಪಾಳ, ಈಜಿಪ್ಟ್, ಫಿಲಿಫೈನ್ಸ್ ಸೇರಿದಂತೆ ಹಲವು ದೇಶಗಳಿಗೆ ವಿವರಣೆ ನೀಡಿದರು. ಈ ಬಗ್ಗೆ ರಕ್ಷಣಾ ಸಂಸ್ಥೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, 70 ರಾಷ್ಟ್ರಗಳಿಗೆ ಆಪರೇಷನ್ ಸಿಂದೂರ್ ಯಶಸ್ಸಿನ ಬಗ್ಗೆ ವಿವರಿಸಲಾಗಿದೆ ಎಂದಿದೆ.

ಭಾರತ- ಪಾಕ್ ನಡುವೆ ರಾಯಭಾರಿ ವಜಾಸಮರ 
ನವದೆಹಲಿ: ಭಾರತ ಮತ್ತು ಪಾಕ್ ನಡುವಿನ ಉದ್ವಿಗ್ನತೆ ಬೆನ್ನಲ್ಲೇ, ನವದೆಹಲಿಯ ಪಾಕಿಸ್ತಾನದ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಯೊಬ್ಬರನ್ನು ಗೂಢಚಾರ ಚಟುವಟಿಕೆ ನಡೆಸಿದ ಕಾರಣಕ್ಕೆ ದೇಶ ಬಿಡುವಂತೆ ಭಾರತ ಸೂಚಿಸಿದೆ. ವಿದೇಶಾಂಗ ಸಚಿವಾಲಯವು ಅಧಿಕಾರಿಗೆ ಭಾರತವನ್ನು ತೊರೆಯಲು 24 ಗಂಟೆಗಳ ಕಾಲಾವಕಾಶ ನೀಡಿದೆ. ಅಧಿಕಾರಿಯ ಚಟುವಟಿಕೆಗಳ ಕುರಿತು ನವದೆಹಲಿಯಲ್ಲಿರುವ ಪಾಕಿಸ್ತಾನಿ ರಾಯಭಾರಿಗೆ ಮಾಹಿತಿ ಕೊಡಲಾಗಿದೆ. ಈ ನಡುವೆ ಭಾರತದ ವಿರುದ್ಧ ಸೇಡಿಗೆ ಮುಂದಾಗಿರುವ ಪಾಕಿಸ್ತಾನವೂ ಭಾರತೀಯ ದೂತಾವಾಸ ಸಿಬ್ಬಂದಿ ವಿರುದ್ಧ ಇದೇ ರೀತಿ ಆರೋಪ ಹೊರಿಸಿ ದೇಶ ತೊರೆಯಲು 24 ಗಂಟೆ ಗಡುವು ನೀಡಿದೆ.

ಇನ್ನಷ್ಟು ಎಸ್-400 ಕ್ಷಿಪಣಿ ವ್ಯವಸ್ಥೆಗೆ ಬೇಡಿಕೆ 
ನವದೆಹಲಿ: 'ಆಪರೇಷನ್ ಸಿಂದೂರ' ಯಶಸ್ಸಿನ ಬೆನ್ನಲ್ಲೆ, ಹೆಚ್ಚುವರಿ ಎಸ್-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಒದಗಿಸುವಂತೆ ರಷ್ಯಾಕ್ಕೆ ಭಾರತ ಮನವಿ ಮಾಡಿದೆ. ಭಾರತದ ಮನವಿಯನ್ನು ರಷ್ಯಾ ಶೀಘ್ರವೇ ಪೂರೈಸುವ ಸಾಧ್ಯತೆಯಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಎಸ್‌-400 ವಾಯು ರಕ್ಷಣಾ ವ್ಯವಸ್ಥೆಯು ಪಾಕಿಸ್ತಾನ ನಡೆಸಿದ ಡ್ರೋನ್ ಮತ್ತು ಕ್ಷಿಪಣಿ ದಾಳಿ ಯತ್ನವನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿತ್ತು. 'ಸುದರ್ಶನ ಚಕ್ರ' ಎಂದೇ ಕರೆಯಲಾಗುವ ಈ ರಕ್ಷಣಾ ವ್ಯವಸ್ಥೆಯನ್ನು ಅಮೆರಿಕವನ್ನು ಎದುರು ಹಾಕಿಕೊಂಡು ರಷ್ಯಾದಿಂದ ಭಾರತ ಖರೀದಿ ಮಾಡಿತ್ತು. ಇದೀಗ ಮತ್ತೆ ಖರೀದಿಗೆ ಬೇಡಿಕೆ ಸಲ್ಲಿಸಿದೆ ಎಂದು ತಿಳಿದು ಬಂದಿದೆ.