ಪಾಕಿಸ್ತಾನದ ವಶದಲ್ಲಿರುವ ಭಾರತೀಯ ಯೋಧ ಪಿ.ಕೆ. ಶಾ ಅವರ ಬಿಡುಗಡೆಗಾಗಿ ನಡೆದ ಮೂರು ಧ್ವಜ ಸಭೆಗಳು ವಿಫಲವಾಗಿವೆ. ಏಪ್ರಿಲ್ 23 ರಂದು ಆಕಸ್ಮಿಕವಾಗಿ ಗಡಿ ದಾಟಿದ್ದ ಶಾ ಅವರನ್ನು ಪಾಕಿಸ್ತಾನ ಮಾನವ ಗುರಾಣಿಯಾಗಿ ಬಳಸಿಕೊಳ್ಳುತ್ತಿದೆ ಎಂದು ವಿಶ್ಲೇಷಿಸಲಾಗಿದೆ.

ಶ್ರೀನಗರ: ಆಕಸ್ಮಿಕವಾಗಿ ಗಡಿ ದಾಟಿ ಪ್ರಸ್ತುತ ಪಾಕಿಸ್ತಾನಿ ಸೇನೆಯ ವಶದಲ್ಲಿರುವ ಭಾರತೀಯ ಯೋಧ ಪಿ.ಕೆ. ಶಾ ಅವರ ಬಿಡುಗಡೆಗಾಗಿ ನಡೆದ ಮೂರೂ ಧ್ವಜ ಸಭೆಗಳು ವಿಫಲವಾಗಿವೆ ಎಂದು ಬಿಎಸ್‌ಎಫ್ ಮಹಾನಿರ್ದೇಶಕ ದಲ್ಜಿತ್ ಚೌಧರಿ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ. ಏ.23ರಂದು ಬಿಎಸ್‌ಎಫ್‌ನ ಯೋಧ ಶಾ ಫಿರೋಜ್‌ಪುರದಲ್ಲಿ ಆಕಸ್ಮಿಕವಾಗಿ ಗಡಿ ದಾಟಿದ್ದರು. ಪಾಕ್ ವಶದಲ್ಲಿರುವ ಅವರ ಬಿಡುಗಡೆಗಾಗಿ ಸೇನಾಧಿಕಾರಿಗಳ ಜತೆ ಕಳೆದ 48 ಗಂಟೆಗಳಲ್ಲಿ 3 ಧ್ವಜ ಸಭೆಗಳನ್ನು ನಡೆಸಿದ್ದೇವೆ. ಆದರೆ ಪ್ರಯತ್ನ ಫಲ ಕೊಟ್ಟಿಲ್ಲ ಎಂದು ಚೌಧರಿ ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ ಮೋಹನ್ ಅವರಿಗೆ ತಿಳಿಸಿದ್ದಾರೆ. ಭಾರತದ ಪ್ರತಿದಾಳಿಗಳಿಂದ ಭೀತಗೊಂಡಿರುವ ಪಾಕಿಸ್ತಾನ ಭಾರತೀಯ ಯೋಧನನ್ನು ಹಿಡಿದಿಟ್ಟುಕೊಳ್ಳುವ ಮೂಲಕ ರಕ್ಷಣಾತ್ಮಕ ತಂತ್ರ ಪ್ರಯೋಗಿಸಿದೆ. ಅವರನ್ನು ಮಾನವ ಗುರಾಣಿಯಾಗಿ ಬಳಸಿಕೊಳ್ಳುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಪೈಶಾಚಿಕ ಕೃತ್ಯದ ಬೆನ್ನಲ್ಲಿಯೇ ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ನಡುವೆ ಪಂಜಾಬ್‌ನ ಗಡಿ ಭಾಗದಲ್ಲಿ ಆಕಸ್ಮಿಕವಾಗಿ ಪಾಕ್‌ ಗಡಿಗೆ ಹೋಗಿದ್ದ ಬಿಎಸ್‌ಎಫ್‌ ಯೋಧನನ್ನು ಏಪ್ರಿಲ್ 23ರಂದು ಪಾಕಿಸ್ತಾನದ ಗಡಿ ಭದ್ರತಾ ಪಡೆ ಆಗಿರುವ ಪಾಕ್‌ ರೇಂಜರ್ಸ್‌ ಬಂಧಿಸಿತ್ತು. ಭಾರತದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧ ಪಿ.ಕೆ. ಶಾ ಆಕಸ್ಮಿಕವಾಗಿ ಬಿಎಸ್‌ಎಫ್ ಪೋಸ್ಟ್ ಜಲೋಕೆ ಡೋನಾ ಬಳಿ ಶೂನ್ಯ ರೇಖೆಯನ್ನು ದಾಟಿ ಪಾಕಿಸ್ತಾನ ಪ್ರದೇಶವನ್ನು ಪ್ರವೇಶಿಸಿದರು. ಈ ವೇಳೆ ಗಡಿಯಲ್ಲಿ ಪಾಕ್ ರೇಂಜರ್‌ಗಳು ಅವರನ್ನು ಬಂಧಿಸಿದ್ದರು. ಪಾಕಿಸ್ತಾನಿ ಮಾಧ್ಯಮಗಳು ಸೈನಿಕನನ್ನು ಬಂಧಿಸಿರುವ ಫೋಟೋಗಳನ್ನು ಬಿಡುಗಡೆ ಮಾಡಿದ್ದವು. ಇದರ ನಡುವೆ ಸೈನಿಕನನ್ನು ಬಿಡುಗಡೆ ಮಾಡುವಂತೆ ಬಿಎಸ್‌ಎಫ್‌ ಹಾಗೂ ಪಾಕ್‌ ರೇಂಜರ್ಸ್‌ ಅಧಿಕಾರಿಗಳ ನಡುವೆ ಹಲವು ಸುತ್ತಿನ ಮಾತುಕತೆ ನಡೆದರು ಫಲ ಕೊಟ್ಟಿಲ್ಲ. 

ಪಾಕ್ ವಾಯುಮಾರ್ಗ ಬಂದ್: ಭಾರತದ ಏರ್‌ಲೈನ್‌ಗಳಿಗೆ ಮಾರ್ಗಸೂಚಿ ಬಿಡುಗಡೆ
ಪಾಕ್ ವಾಯುಮಾರ್ಗ ಬಂದ್ ಆದ ಹಿನ್ನೆಲೆಯಲ್ಲಿ ವಿಮಾನಯಾನ ಸಚಿವಾಲಯವು ವಿಮಾನ ಕಂಪನಿಗಳಿಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಪ್ರಯಾಣಿಕರಿಗೆ ಮಾರ್ಗ ಬದಲಾವಣೆಗಳ ಬಗ್ಗೆ ಸರಿಯಾಗಿ ತಿಳಿಸಬೇಕು ಎಂಬುದು ಇಲ್ಲಿನ ಪ್ರಮುಖ ನಿರ್ದೇಶನ. ಇದಲ್ಲದೆ, ಮಾರ್ಗ ಬದಲಾವಣೆಯಿಂದಾಗಿ ಎಲ್ಲಿ ಲ್ಯಾಂಡ್ ಆಗುತ್ತದೆ ಎಂಬುದರ ಬಗ್ಗೆಯೂ ಮುಂಚಿತವಾಗಿ ಮಾಹಿತಿ ನೀಡಬೇಕು. ಪ್ರಯಾಣಿಕರಿಗೆ ವೈದ್ಯಕೀಯ ನೆರವು ಖಚಿತಪಡಿಸಿಕೊಳ್ಳಬೇಕು ಮತ್ತು ಸಾಕಷ್ಟು ಆಹಾರ ಮತ್ತು ನೀರು ಒದಗಿಸಬೇಕು ಎಂದು ಸಚಿವಾಲಯ ಸೂಚಿಸಿದೆ. ಆದರೆ ವಿಮಾನ ಟಿಕೆಟ್ ದರ ಏರಿಕೆಯಾದರೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಇದನ್ನೂ ಓದಿ: 'ಮಕ್ಕಳಿಗೆ ಅಪ್ಪ ಜೈಲಲ್ಲಿದ್ದಾರೆ ಅಂತಾ ಹೇಳು..' ಪಾಕಿಸ್ತಾನದ ಜೈಲಿನಿಂದಲೇ ಪತ್ನಿಗೆ ಫೋನ್‌ ಮಾಡಿ ತಿಳಿಸಿದ್ರು ಅಭಿನಂದನ್‌!

ವಾಯುಮಾರ್ಗ ಬಂದ್ ಆದ ಹಿನ್ನೆಲೆಯಲ್ಲಿ ಮಾರ್ಗ ಬದಲಾವಣೆಯಿಂದಾಗಿ ಹೆಚ್ಚುವರಿ ಇಂಧನ ವೆಚ್ಚದ ಹೆಸರಿನಲ್ಲಿ ಅಂತರರಾಷ್ಟ್ರೀಯ ಪ್ರಯಾಣದಲ್ಲಿ ಟಿಕೆಟ್ ದರ ಏರಿಕೆಯಾಗುವ ಸಾಧ್ಯತೆಯಿದೆ. ಏಪ್ರಿಲ್ 26ರಂದು ಕೇಂದ್ರ ವಿಮಾನಯಾನ ಸಚಿವಾಲಯವು ವಿವರವಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹೊಸ ಮಾರ್ಗದಲ್ಲಿ ಎಷ್ಟು ಸಮಯದಲ್ಲಿ ತಲುಪುತ್ತದೆ ಎಂಬುದನ್ನೂ ಪ್ರಯಾಣಿಕರಿಗೆ ತಿಳಿಸಬೇಕು. ವೈದ್ಯಕೀಯ ಕಿಟ್‌ಗಳನ್ನು ಸೇರಿದಂತೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಬೇಕು. ತುರ್ತು ಅಗತ್ಯಗಳಿಗಾಗಿ ಲ್ಯಾಂಡ್ ಆಗುವ ವಿಮಾನ ನಿಲ್ದಾಣಗಳಲ್ಲಿ ಅಗತ್ಯ ಮಾಹಿತಿ ನೀಡಬೇಕು ಎಂಬ ನಿರ್ದೇಶನವೂ ಇದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜತಾಂತ್ರಿಕ ಸಂಬಂಧದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಭಾರತ ಕೈಗೊಂಡ ಕಠಿಣ ಕ್ರಮಗಳ ನಂತರ ಪಾಕ್ ವಾಯುಮಾರ್ಗದಲ್ಲಿ ಭಾರತದಿಂದ ಮತ್ತು ಭಾರತಕ್ಕೆ ವಿಮಾನಗಳಿಗೆ ನಿಷೇಧ ಹೇರಲಾಗಿದೆ. ಇದರಿಂದಾಗಿ ಅಂತರರಾಷ್ಟ್ರೀಯ ವಿಮಾನ ಸೇವೆಗಳು ಸೇರಿದಂತೆ ಮಾರ್ಗ ಬದಲಾಯಿಸಲಾಗುತ್ತಿದೆ.

ಇದನ್ನೂ ಓದಿ: ಭಾರತದ ಭಾಗವಾಗ್ಬೇಕಿತ್ತು ಲಾಹೋರ್,ಕೊನೆ ಕ್ಷಣದಲ್ಲಿ ಬದಲಾಗಿದ್ದು ಹೇಗೆ?