ಸಿಂಧೂ ನದಿ ನೀರು ಒಪ್ಪಂದ ಮುರಿದ ಭಾರತದ ನಿರ್ಧಾರದಿಂದ ದಿಗ್ಭ್ರಮೆಗೊಂಡಿರುವ ಪಾಕಿಸ್ತಾನ 1972ರ ಶಿಮ್ಲಾ ಒಪ್ಪಂದ ಮುರಿಯಲು ಚಿಂತನೆ ನಡೆಸುತ್ತಿದೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಈ ಒಪ್ಪಂದ ಮುರಿಯವ ಬಗ್ಗೆ ಘೋಷಣೆ ಮಾಡುವಂತೆ ಪಾಕಿಸ್ತಾನ ಪ್ರಧಾನಿ ಶಹಬಾಝ್ ಷರೀಫ್‌ಗೆ ತೀವ್ರ ಒತ್ತಡ ಕೇಳಿ ಬರುತ್ತಿದೆ ಎಂದು ವರದಿಯಾಗಿದೆ.

ನವದೆಹಲಿ: ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರ ಬಲಿ ಪಡೆದ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನಕ್ಕೆ ಪಾಠ ಕಲಿಸಲು ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವೂ ಸೇರಿದಂತೆ ಪಾಕಿಸ್ತಾನದ ಜೊತೆಗಿನ ಬಹುತೇಕ ಎಲ್ಲಾ ಸಂಬಂಧಗಳನ್ನು ಭಾರತ ಕಡಿತಗೊಳಿಸಿದೆ. ಆದರೆ ಈ ಸಿಂಧೂ ನದಿ ನೀರು ಒಪ್ಪಂದ ಮುರಿದ ಭಾರತದ ನಿರ್ಧಾರದಿಂದ ದಿಗ್ಭ್ರಮೆಗೊಂಡಿರುವ ಪಾಕಿಸ್ತಾನ 1972ರ ಶಿಮ್ಲಾ ಒಪ್ಪಂದ ಮುರಿಯಲು ಚಿಂತನೆ ನಡೆಸುತ್ತಿದೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಈ ಒಪ್ಪಂದ ಮುರಿಯವ ಬಗ್ಗೆ ಘೋಷಣೆ ಮಾಡುವಂತೆ ಪಾಕಿಸ್ತಾನ ಪ್ರಧಾನಿ ಶಹಬಾಝ್ ಷರೀಫ್‌ಗೆ ತೀವ್ರ ಒತ್ತಡ ಕೇಳಿ ಬರುತ್ತಿದೆ ಎಂದು ವರದಿಯಾಗಿದೆ. ಪಾಕಿಸ್ತಾನದ ಬಹುತೇಕ ಕೃಷಿ ಈ ಸಿಂಧೂ ನದಿ ನೀರನ್ನು ಅವಲಂಬಿಸಿದೆ. ಹೀಗಾಗಿ ಭಾರತ ಈ ಒಪ್ಪಂದ ಮುರಿದಿರುವುದರಿಂದ ಪಾಕಿಸ್ತಾನದ ಕೃಷಿಭೂಮಿ ಬಹುತೇಕ ಒಣಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಪಾಕಿಸ್ತಾನಕ್ಕೆ ಬುದ್ಧಿ ಕಲಿಸುವುದಕ್ಕಾಗಿ ಭಾರತ ಈ ಸಿಂಧೂ ನದಿ ನೀರಿನ ಒಪ್ಪಂದವನ್ನೇ ಮುರಿಯುವ ಮೂಲಕ ದೊಡ್ಡ ಹೊಡೆತ ನೀಡಲು ಮುಂದಾಗಿದೆ.

1972ರ ಶಿಮ್ಲಾ ಒಪ್ಪಂದದಲ್ಲಿ ಏನಿದೆ. 
ಆದರೆ ಈ ಹೊಡೆತದಿಂದ ತೀವ್ರ ಆಘಾತಕ್ಕೊಳಗಾಗಿರುವ ಪಾಕಿಸ್ತಾನ 1972 ಶಿಮ್ಲಾ ಒಪ್ಪಂದ ಮುರಿಯುವ ಸಾಧ್ಯತೆ ಇದೆ ಎಂಬ ಈ ಬಗ್ಗೆ ಪಾಕಿಸ್ತಾನದಲ್ಲಿ ಚರ್ಚೆ ನಡೆಯುತ್ತಿದೆ ಎಂಬ ಮಾಹಿತಿ ಇದೆ. ಹಾಗಿದ್ದರೆ 1972 ಶಿಮ್ಲಾ ಒಪ್ಪಂದದಲ್ಲಿ ಏನಿದೆ ಎಂಬ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ. ಭಾರತ ಮತ್ತು ಪಾಕಿಸ್ತಾನ ಜುಲೈ 2ರ 1972 ರಂದು ಈ ಶಿಮ್ಲಾ ಒಪ್ಪಂದಕ್ಕೆ ಸಹಿ ಹಾಕಿದವು. 1972ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಪಾಕಿಸ್ತಾನಿ ಸೇನೆಯು ಹೀನಾಯವಾಗಿ ಸೋಲನುಭವಿಸಿದ ನಂತರ ಈ ಒಪ್ಪಂದಕ್ಕೆ ಬರಲಾಯಿತು. ಈ ಒಪ್ಪಂದವು ಎರಡೂ ದೇಶಗಳ ನಡುವಿನ ಗಡಿ ವಿವಾದಗಳನ್ನು ಶಾಂತಿಯುತವಾಗಿ ಪರಿಹಾರಿಸಲು ವೇದಿಕೆ ಒದಗಿಸಿತು. ಒಪ್ಪಂದದ ಪ್ರಕಾರ ಎರಡೂ ದೇಶಗಳು ತಮ್ಮ ವಿವಾದಗಳನ್ನು ವಾಸ್ತವಿಕ ನಿಯಂತ್ರಣ ರೇಖೆಯನ್ನು (LOC) ದಾಟದೆ ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕು ಎಂಬುದು ಈ ಶಿಮ್ಲಾ ಒಪ್ಪಂದದ ಪ್ರಮುಖ ನಿಯಮಗಳಲ್ಲಿ ಒಂದಾಗಿದೆ. ಹೀಗಾಗಿ ಇಷ್ಟುದಿನ ಶಾಂತವಾಗಿದ್ದ ಭಾರತ ಪಾಕಿಸ್ತಾನ ಗಡಿಯಲ್ಲಿ ಇನ್ನು ಮುಂದೆ ಗುಂಡಿನ ಕಾಳಗ ತೀವ್ರವಾಗಲಿದೆಯೇ ಎಂಬ ಅನುಮಾನ ಆತಂಕ ಮೂಡಿದೆ. 

ಇದನ್ನೂ ಓದಿ: ಓರ್ವ ಮುಸ್ಲಿಂ ಆಗಿ ನಾಚಿಕೆಯಾಗುತ್ತಿದೆ, ಪಹಲ್ಗಾಮ್ ದಾಳಿ ಖಂಡಿಸಿ ಭಾವುಕರಾದ ಗಾಯಕ ಸಲೀಮ್

ಭಾರತ ಹಾಗೂ ಪಾಕಿಸ್ತಾನ ಎರಡೂ ಕೂಡ ದಕ್ಷಿಣ ಏಷ್ಯಾದಲ್ಲಿ ಪರಮಾಣು ಹೊಂದಿರುವ ನೆರೆಹೊರೆಯ ರಾಷ್ಟ್ರಗಳಾಗಿದ್ದು, ಈಗ ಗಡಿಯ ಅತ್ತ ಹಾಗೂ ಇತ್ತ ಉದ್ವಿಗ್ನತೆ ನಿರಂತರವಾಗಿ ಹೆಚ್ಚುತ್ತಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತವು ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಮುಂದಾಗಿದ್ದು,ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಯನ್ನು ಪರಿಣಾಮಕಾರಿಯಾಗಿ ನಿಗ್ರಹಿಸುವವರೆಗೆ ಸಿಂಧೂ ಜಲ ಒಪ್ಪಂದವನ್ನು ಮುಂದುವರಿಸುವುದಿಲ್ಲ ಎಂದು ಘೋಷಿಸಿದೆ. ಈ ನಿರ್ಧಾರದಿಂದ, ಪಾಕಿಸ್ತಾನದ ನಾಶ ನಿಶ್ಚಿತವೆಂದು ಹೇಳಲಾಗುತ್ತಿದೆ ಏಕೆಂದರೆ ಒಪ್ಪಂದದ ಅಡಿಯಲ್ಲಿ ಅದು ಭಾರತದಿಂದ ನೀರನ್ನು ಪಡೆಯುತ್ತದೆ. ಆದರೆ ಈ ಒಪ್ಪಂದವನ್ನು ಮುರಿದಿರುವುದರಿಂದ ಪಾಕಿಸ್ತಾನವು ತಕ್ಕ ಪ್ರತಿಕ್ರಿಯೆ ನೀಡಲು ಯೋಜನೆ ರೂಪಿಸುತ್ತಿದೆ ಎಂದು ವರದಿಯಾಗಿದ್ದು, ಯುದ್ಧದ ಭೀತಿ ಎದುರಾಗಿದೆ. 

ಶಿಮ್ಲಾ ಒಪ್ಪಂದದಿಂದ ಪಾಕಿಸ್ತಾನ ಹಿಂದೆ ಸರಿಯುವ ಬಗ್ಗೆಅಲ್ಲಿನ ಕಾರ್ಯತಂತ್ರದ ವಲಯಗಳಲ್ಲಿ ಚರ್ಚೆ ತೀವ್ರಗೊಂಡಿದೆ. ಈ ಬಗ್ಗೆ ಶಹಬಾಜ್ ಷರೀಫ್ ಮೇಲೆ ಭಾರಿ ಒತ್ತಡ ಹೇರಲಾಗುತ್ತಿದೆ ಎಂದು ವರದಿಯಾಗಿದೆ. ಪಾಕಿಸ್ತಾನದ ಹಿರಿಯ ಪತ್ರಕರ್ತ ಹಮೀದ್ ಮಿರ್ ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು,' ಪಾಕಿಸ್ತಾನದಲ್ಲಿ ಹೊಸ ಚರ್ಚೆ ವಿಶ್ವಬ್ಯಾಂಕ್ ಮಧ್ಯಸ್ಥಿಕೆ ವಹಿಸಿದ್ದ ಸಿಂಧೂ ಜಲ ಒಪ್ಪಂದಕ್ಕೆ ಭಾರತ ವಿದಾಯ ಹೇಳುವುದಾಗಿ ಹಠ ಹಿಡಿದಿದ್ದರೆ, ಯಾವುದೇ ಅಂತರರಾಷ್ಟ್ರೀಯ ಸಂಸ್ಥೆಯ ಮಧ್ಯಸ್ಥಿಕೆ ವಹಿಸದ ಶಿಮ್ಲಾ ಒಪ್ಪಂದದಿಂದ ಹಿಂದೆ ಸರಿಯುವ ಹಕ್ಕು ಪಾಕಿಸ್ತಾನಕ್ಕೂ ಇದೆ' ಎಂದು ಅವರು ಬರೆದುಕೊಂಡಿದ್ದಾರೆ. 

ಇದನ್ನೂ ಓದಿ: Indus Water Treaty: ಬಾಂಬ್‌ಗೂ ಮುನ್ನ ಪಾಕಿಸ್ತಾನದ ಮೇಲೆ ಬಿತ್ತು ಜಲಬಾಂಬ್‌, ಯಾಕಂದ್ರೆ ಇಂಡಸ್‌ ಇಲ್ಲದೆ ಪಾಕ್‌ ಇಲ್ಲ!

ನಿನ್ನೆ ಭಾರತವು ಪಾಕಿಸ್ತಾನದೊಂದಿಗಿನ ಸಿಂಧೂ ನದಿ ನೀರು ಒಪ್ಪಂದವನ್ನು ತಕ್ಷಣವೇ ಸ್ಥಗಿತಗೊಳಿಸಲು ನಿರ್ಧರಿಸಿತ್ತು. ಸಿಂಧೂ ಜಲ ಒಪ್ಪಂದವನ್ನು (1960) ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕ್ರಮ್ ಮಿಶ್ರಿ ಘೋಷಿಸಿದರು. ಪಾಕಿಸ್ತಾನ ಗಡಿಯಾಚೆಗಿನ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸಿದಾಗ ಮಾತ್ರ ಈ ಒಪ್ಪಂದವನ್ನು ಪುನಃಸ್ಥಾಪಿಸಲಾಗುತ್ತದೆ. ಇದಲ್ಲದೆ, ಅಟ್ಟಾರಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ ಅನ್ನು ಕೂಡ ತಕ್ಷಣದಿಂದ ಜಾರಿಗೆ ಬರುವಂತೆ ಮುಚ್ಚಲಾಗುತ್ತಿದೆ, ಈ ಮಾರ್ಗದ ಮೂಲಕ ಸರಿಯಾದ ದಾಖಲೆಗಳೊಂದಿಗೆ ಭಾರತಕ್ಕೆ ಬಂದವರು ಮೇ 1 ರ ಮೊದಲು ಇದೇ ಮಾರ್ಗವಾಗಿ ಹಿಂತಿರುಗಬೇಕು. ಹಾಗೆಯೇ ಇನ್ನು ಮುಂದೆ ಸಾರ್ಕ್ ವೀಸಾ ವಿನಾಯಿತಿ ಯೋಜನೆ (SVES)ಅಡಿಯಲ್ಲಿ ಪಾಕಿಸ್ತಾನಿ ನಾಗರಿಕರಿಗೆ ಭಾರತಕ್ಕೆ ಪ್ರಯಾಣಿಸಲು ಅವಕಾಶವಿರುವುದಿಲ್ಲ ಪಾಕಿಸ್ತಾನಿ ಪ್ರಜೆಗಳಿಗೆ ಈ ಹಿಂದೆ ನೀಡಲಾದ ಯಾವುದೇ SVES ವೀಸಾಗಳನ್ನು ರದ್ದುಗೊಳಿಸಲಾಗುತ್ತದೆ . SVES ವೀಸಾದಡಿಯಲ್ಲಿ ಈಗಾಗಲೇ ಭಾರತದಲ್ಲಿ ಇರುವ ಎಲ್ಲಾ ಪಾಕಿಸ್ತಾನಿ ಪ್ರಜೆಗಳು 48 ಗಂಟೆಗಳ ಒಳಗೆ ಭಾರತವನ್ನು ತೊರೆಯಬೇಕು ಎಂದು ಅವರು ಘೋಷಿಸಿದ್ದರು.