ಶಾಂಘೈ ಸಹಕಾರ ಸಂಸ್ಥೆ ಸಭೆಗಾಗಿ ಪಾಕಿಸ್ತಾನದ ಸಚಿವ ಮುಸಾದಿಕ್ ಮಸೂದ್ ಮಲಿಕ್ ದೆಹಲಿಗೆ ಭೇಟಿ ನೀಡುತ್ತಿದ್ದಾರೆ. ಇದೇ ವೇಳೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ 2050ರ ವೇಳೆಗೆ ಪಾಕಿಸ್ತಾನ ವಿಶ್ವದ 6ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಹೇಳಿದ್ದಾರೆ. ತೀವ್ರ ಸಾಲದಲ್ಲಿರುವ ದೇಶದ ಈ ಹೇಳಿಕೆ ಅಚ್ಚರಿ.
ನವದೆಹಲಿ (ನ.15): ಇದೇ ತಿಂಗಳ 20 ರಿಂದ 22ರ ತನಕ ರಾಷ್ಟ್ರ ರಾಜಧಾನಿ ದೆಹಲಿ(Delhi)ಯಲ್ಲಿ ಶಾಂಘೈ ಸಹಕಾರ ಸಂಸ್ಥೆ(SCO) ಸಭೆ ನಡೆಯಲಿದೆ. ಇದರಲ್ಲಿ ಪಾಕಿಸ್ತಾನದ ಹವಾಮಾನ ಸಚಿವ ಮುಸಾದಿಕ್ ಮಸೂದ್ ಮಲಿಕ್(Musadik Masood Malik) ಅವರು ಪಾಕಿಸ್ತಾನವನ್ನು ಪ್ರತಿನಿಧಿಸಿ ಭಾಗಿಯಾಗಲಿದ್ದಾರೆ. ಇದು ಕಳೆದ ಮೂರು ವರ್ಷಗಳ ಬಳಿಕ ಪಾಕಿಸ್ತಾನ ಸಚಿವರು ಭಾರತಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ.
2023ರಲ್ಲಿ ಬಿಲಾವಲ್ ಭುಟ್ಟೋ ಜರ್ದಾರಿ ಭೇಟಿ
ಭಾರತಕ್ಕೆ ಕೊನೆಯದಾಗಿ 2023ರಲ್ಲಿ ಆಗಿನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರು ಎಸ್‌ಸಿಒ ಸಭೆಗಾಗಿ ಗೋವಾಗೆ ಭೇಟಿ ನೀಡಿದ್ದರು.2025ರಲ್ಲಿ ಪಹಲ್ಗಾಂ ದಾಳಿಯ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಪೂರ್ಣ ಹಳಸಿತ್ತು. ಅದರ ಬೆನ್ನಲ್ಲೇ ಇದೀಗ ಪಾಕ್ ಸಚಿವರ ಭೇಟಿ ಕುತೂಹಲ ಕೆರಳಿಸಿದೆ.
2050ಕ್ಕೆ ಪಾಕ್ ವಿಶ್ವದ 6ನೇ ದೊಡ್ಡ ಆರ್ಥಿಕತೆ
ಇಸ್ಲಾಮಾಬಾದ್: ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನ ಐಎಂಎಫ್‌ನಿಂದ ಸಾಲಕ್ಕೆ ಅಂಗಲಾಚುತ್ತಿರುವ ನಡುವೆಯೇ, ‘2050ರ ವೇಳೆಗೆ ಪಾಕ್ ವಿಶ್ವದ 6ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ’ ಎಂದು ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ.
ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘2075ರ ವೇಳೆಗೆ ಪಾಕಿಸ್ತಾನವು ಆರ್ಥಿಕವಾಗಿ ವಿಶ್ವದಲ್ಲಿ 6ನೇ ಸ್ಥಾನದಲ್ಲಿರಲಿದೆ ಎಂದು ಗೋಲ್ಡ್‌ಮನ್ ಸ್ಯಾಚ್ಸ್ 2022ರಲ್ಲಿ ಅಂದಾಜಿಸಿತ್ತು. ಆದರೆ ನಾನು ಅದರಲ್ಲಿ ಸಣ್ಣ ತಿದ್ದುಪಡಿ ಮಾಡುತ್ತಿದ್ದೇನೆ. ಪಾಕಿಸ್ತಾನವು 2050ರ ಮೊದಲೇ ಆ ಸ್ಥಾನವನ್ನು ತಲುಪಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈಗಾಗಲೇ ತೀವ್ರ ಸಾಲದಲ್ಲಿ ಮುಳುಗಿರುವ ಪಾಕ್, ಐಎಂಎಫ್‌ನಿಂದ ಹೊಸದಾಗಿ 12,000 ಕೋಟಿ ರು. (1.2 ಬಿಲಿಯನ್ ಡಾಲರ್) ಸಾಲದ ಅನುಮೋದನೆಗಾಗಿ ಕಾಯುತ್ತಿದೆ. ಅದರ ನಡುವೆಯೇ, ಅಲ್ಲಿನ ಪ್ರಧಾನಿಯಿಂದ ಈ ಹಾಸ್ಯಾಸ್ಪದ ಹೇಳಿಕೆ ಹೊರಬಿದ್ದಿದೆ.














