ಜಮ್ಮು-ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಅವರು ಪಾಕಿಸ್ತಾನವು ಕಾಶ್ಮೀರಿಗರನ್ನು ರಕ್ಷಿಸುತ್ತಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಭಾರತ ಸರ್ಕಾರದ ಉದ್ದೇಶ ಒಳ್ಳೆಯದಿಲ್ಲ ಎಂದು ಅವರು ಆರೋಪಿಸಿದ್ದಾರೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ, ಫಾರೂಕ್ ಕ್ಷಮೆಯಾಚನೆಗೆ ಆಗ್ರಹ.
ಶ್ರೀನಗರ (ಅ.25):‘ನಮ್ಮ ಕುರಿತು ಭಾರತ ಸರ್ಕಾರದ ಉದ್ದೇಶ ಒಳ್ಳೆಯದಾಗಿಲ್ಲ. ಆದರೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರು ಕಾಶ್ಮೀರ ಸಮಸ್ಯೆ ಬಗೆಹರಿದಿಲ್ಲ ಎಂದು ಎಲ್ಲೆಡೆ ಹೇಳುತ್ತಿದ್ದಾರೆ. ಪಾಕ್ನ ಈ ನಿಲುವು ನಮ್ಮನ್ನು ರಕ್ಷಿಸುತ್ತಿದೆ. ಭಾರತವು ಪಾಕ್ ಹೇಳಿಕೆಗಳಿಂದ ಒತ್ತಡಕ್ಕೆ ಒಳಗಾಗಿ ನಮ್ಮ ಪರ ಕೆಲಸ ಮಾಡುತ್ತಿದೆ’ ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ(National Conference Party President Farooq Abdullah) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನವೇ ನಮ್ಮನ್ನು ರಕ್ಷಿಸುತ್ತಿದೆ ಎಂದ ಫಾರೂಕ್ ಅಬ್ದುಲ್ಲ!
ಬಾರಾಮುಲ್ಲಾದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ನಮ್ಮ ನೆರೆಯವರು ಸದಾ ಅವರ ಬೆನ್ನ ಹಿಂದೆಯೇ ಇರುತ್ತಾರೆ. ಕಾಶ್ಮೀರ ಸಮಸ್ಯೆಯು ಇನ್ನೂ ಬಗೆಹರಿದಿಲ್ಲ ಎಂದು ಅವರು (ಪಾಕ್ ಪ್ರಧಾನಿ ಷರೀಫ್) ಎಲ್ಲೆಡೆ ಹೇಳುತ್ತಾ ಹೋಗುತ್ತಾರೆ. ಹೀಗಾಗಿ ಅವರು ನಮ್ಮನ್ನು ರಕ್ಷಿಸುತ್ತಿದ್ದಾರೆ. ಇಲ್ಲದಿದ್ದರೆ, ಭಾರತದ ಉದ್ದೇಶಗಳು ಒಳ್ಳೆಯದಾಗಿಲ್ಲ. ಜಾಗತಿಕ ಒತ್ತಡದ ಕಾರಣಕ್ಕೆ ಕೇಂದ್ರ ಸರ್ಕಾರ ಮೌನ ವಹಿಸಿದೆ’ ಎಂದರು.
ದೇಶದ ವಿರುದ್ಧ ಜಮ್ಮು ಕಾಶ್ಮೀರ ಯುವಕರನ್ನ ಎತ್ತಿಕಟ್ಟುತ್ತಿದ್ದರಾ ಅಬ್ದುಲ್ಲಾ?
‘ಜಮ್ಮು ಮತ್ತು ಕಾಶ್ಮೀರದ ಜನರು ಸರ್ಕಾರದಿಂದ ನ್ಯಾಯವನ್ನು ನಿರೀಕ್ಷಿಸಬಹುದೇ? ಅವರು ನಿಮಗೆ ನ್ಯಾಯ ಒದಗಿಸಿಕೊಡುತ್ತಾರೆ ಎಂದು ಭಾವಿಸುತ್ತೀರಾ? ಹೋರಾಡುವ ಧೈರ್ಯವನ್ನು ಬೆಳೆಸಿಕೊಳ್ಳಿ. ಇಲ್ಲದಿದ್ದರೆ ನೀವು ನಿರ್ನಾಮವಾಗುತ್ತೀರಿ ಮತ್ತು ನಿಮ್ಮ ಅಸ್ತಿತ್ವವೇ ಕಣ್ಮರೆಯಾಗುತ್ತದೆ’ ಎಂದು ಎಚ್ಚರಿಸಿದರು.
ಫಾರೂಕ್ ಅಬ್ದುಲ್ಲಾ ಹೇಳಿಕೆಗೆ ಬಿಜೆಪಿ ಆಕ್ರೋಶ
ಫಾರೂಕ್ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಘಟಕದ ಅಧ್ಯಕ್ಷ ಸತ್ ಶರ್ಮಾ ಮಾತನಾಡಿ, ‘ಈ ದೇಶದಲ್ಲಿ ತಮಗೆ ಇಷ್ಟವಾದುದನ್ನು ಹೇಳುವ ಸ್ವಾತಂತ್ರ್ಯ ತಮಗಿದೆ ಎಂಬುದನ್ನು ಫಾರೂಕ್ ಅಬ್ದುಲ್ಲಾ ಅರ್ಥಮಾಡಿಕೊಳ್ಳಬೇಕು. ಈ ಸ್ವಾತಂತ್ರ್ಯವಿರುವುದರಿಂದಲೇ ಅವರು ಇಂತಹ ಹೇಳಿಕೆಗಳನ್ನು ನೀಡಲು ಸಾಧ್ಯವಾಗುತ್ತಿದೆ. ಇದೇ ಮಾತುಗಳನ್ನು ನೀವು ಪಾಕಿಸ್ತಾನದಲ್ಲಿ ಆಡಿದ್ದರೆ, ಬಹುಶಃ ನೀವು ಸುರಕ್ಷಿತವಾಗಿರುತ್ತಿರಲಿಲ್ಲ’ ಎಂದಿದ್ದಾರೆ. ಜತೆಗೆ, ಫಾರೂಕ್ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.







