ಫಾರೂಕ್ ಅಬ್ದುಲ್ಲಾ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭಾರತದಲ್ಲಿ ಎಲ್ಲ ಧರ್ಮ, ಭಾಷೆ, ಪ್ರದೇಶದ ಜನರು ಪರಸ್ಪರ ಪ್ರೀತಿಸುವಂತಾಗಬೇಕು ಎಂದು ಹೇಳಿದ್ದಾರೆ. ಕಾಶ್ಮೀರದಿಂದ 370ನೇ ವಿಧಿಯನ್ನು ರದ್ದುಗೊಳಿಸಿದ ಕ್ರಮವನ್ನು ಟೀಕಿಸಿದ್ದಾರೆ.
ನವದೆಹಲಿ, (ಜುಲೈ.23): 'ಇದು ನನ್ನ ಭಾರತವಲ್ಲ, ಇದನ್ನು ನಾನು ಸ್ವೀಕರಿಸುವುದಿಲ್ಲ. ಎಲ್ಲಾ ಧರ್ಮ, ಭಾಷೆ, ಪ್ರದೇಶದ ಜನರು ಪರಸ್ಪರ ಪ್ರೀತಿಸುವ ಭಾರತವನ್ನು ನಾನು ಬಯಸುತ್ತೇನೆ' ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ
ದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 370 ಆಗಿರಲಿ ಅಥವಾ ರಾಜ್ಯತ್ವವಾಗಿರಲಿ, ಮೂಲಭೂತ ವಿಷಯವೆಂದರೆ ದೆಹಲಿ ಮತ್ತು ಕಾಶ್ಮೀರದ ನಡುವಿನ ಅಂತರ ಎಂದಿಗೂ ಕಡಿಮೆಯಾಗಿಲ್ಲ. ಭಾರತದ ಭಾಗವಾದಾಗಿನಿಂದ ಈ ಅಂತರ ಹೆಚ್ಚಿದೆಯೇ ಹೊರತು ಕಡಿಮೆಯಾಗಿಲ್ಲ. ಮುಸ್ಲಿಮರಲ್ಲಿ ನಂಬಿಕೆ ಇಲ್ಲ, ಇದು ಸತ್ಯ ಎಂದಿದ್ದಾರೆ.
ನಾನು ಭಾರತೀಯ ಮುಸ್ಲಿಂ, ಪಾಕಿಸ್ತಾನಿ ಅಲ್ಲ:ಫಾರೂಕ್ ಅಬ್ದುಲ್ಲಾ
ನಾನು ಮುಸ್ಲಿಂ, ಮುಸ್ಲಿಂ ಆಗಿಯೇ ಇರುತ್ತೇನೆ, ಮುಸ್ಲಿಂ ಆಗಿಯೇ ಸಾಯುತ್ತೇನೆ. ಆದರೆ ನಾನು ಭಾರತೀಯ ಮುಸ್ಲಿಂ. ಪಾಕಿಸ್ತಾನಿ ಅಥವಾ ಚೀನೀ ಮುಸ್ಲಿಂ ಅಲ್ಲ. ಭಾರತದ ಮುಸ್ಲಿಮರನ್ನು ನೀವು ಯಾವಾಗ ನಂಬುತ್ತೀರಿ? ಎಂದು ಪ್ರಶ್ನಿಸಿದರು. ಮುಂದುವರಿದು, ನೀವು ನಮ್ಮನ್ನು ಯಾವಾಗ ಮನುಷ್ಯರೆಂದು ಪರಿಗಣಿಸುತ್ತೀರಿ? ನಾವು ಭಾರತೀಯರು ಎಂದು ಯಾವಾಗ ಅರ್ಥಮಾಡಿಕೊಳ್ಳುತ್ತೀರಿ? ಫಾರೂಕ್ ಅಬ್ದುಲ್ಲಾ ತಮ್ಮ ಭಾಷಣದಲ್ಲಿ ಭಾವುಕರಾಗಿ ಕೇಂದ್ರ ಸರ್ಕಾರವನ್ನು ತೀವ್ರವಾಗಿ ಟೀಕಿಸಿದರು.
ಇದು ನನ್ನ ಭಾರತವಲ್ಲ ಎಂದ ಫಾರೂಕ್ ಅಬ್ದುಲ್ಲಾ!
'ಇದು ನನ್ನ ಭಾರತವಲ್ಲ, ಇದನ್ನು ನಾನು ಸ್ವೀಕರಿಸುವುದಿಲ್ಲ. ಎಲ್ಲಾ ಧರ್ಮ, ಭಾಷೆ, ಪ್ರದೇಶದ ಜನರು ಪರಸ್ಪರ ಪ್ರೀತಿಸುವ ಭಾರತವನ್ನು ನಾನು ಬಯಸುತ್ತೇನೆ. ಅಧಿಕಾರದಲ್ಲಿರುವವರು ತಮ್ಮ ಮುಂದೆ ತಲೆಬಾಗಲು ಬಯಸುತ್ತಾರೆ ಎಂದು ಆರೋಪಿಸಿದ ಅವರು ಆದರೆ ನಾವು ತಲೆಬಾಗಲು ಇಲ್ಲಿಲ್ಲ, ಭಿಕ್ಷೆ ಬೇಡಲು ಇಲ್ಲ. ರಾಜ್ಯತ್ವ ಕಿತ್ತುಕೊಂಡಿದ್ದು ಕಾನೂನುಬಾಹಿರ. ನಮ್ಮ ರಾಜ್ಯತ್ವವನ್ನು ಪುನಃಸ್ಥಾಪಿಸಿ. ಇದಕ್ಕೆ ನಿಮಗೆ ಯಾರು ಹಕ್ಕು ಕೊಟ್ಟರು? ನಮ್ಮನ್ನು ಕೇಳಿದ್ದೀರಾ? ಎಂದು ಕೇಂದ್ರವನ್ನು ಪ್ರಶ್ನಿಸಿದರು.
ಫಾರೂಕ್ ಅಬ್ದುಲ್ಲಾ ಅವರ ಈ ಹೇಳಿಕೆಗಳು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಕಾಶ್ಮೀರದ ರಾಜಕೀಯ ಸನ್ನಿವೇಶವನ್ನು ಮತ್ತಷ್ಟು ತೀವ್ರಗೊಳಿಸಿವೆ.
