ದಿವಾಳಿ ಪಟ್ಟದಿಂದ ಪಾಕಿಸ್ತಾನ ಜಸ್ಟ್ ಮಿಸ್: ಕೊನೆಕ್ಷಣದಲ್ಲಿ 8100 ಕೋಟಿ ಪಾವತಿ
ಆರ್ಥಿಕ ಪರಿಸ್ಥಿತಿ ಹದಗೆಟ್ಟು ತೀವ್ರ ಆತಂಕ ಎದುರಿಸುತ್ತಿರುವ ಪಾಕಿಸ್ತಾನ, ಸುಸ್ತಿದಾರ (ದಿವಾಳಿ) ಆಗುವುದನ್ನು ತಪ್ಪಿಸಿಕೊಳ್ಳಲು 8100 ಕೋಟಿ ರು. (100 ಕೋಟಿ ಡಾಲರ್) ಹಣವನ್ನು ಗಡುವಿಗಿಂತ 3 ದಿನ ಮುಂಚೆಯೇ ಕಟ್ಟಿ ಭಾರಿ ಗಂಡಾಂತರದಿಂದ ಪಾರಾಗಿದೆ.
ಇಸ್ಲಾಮಾಬಾದ್: ಆರ್ಥಿಕ ಪರಿಸ್ಥಿತಿ ಹದಗೆಟ್ಟು ತೀವ್ರ ಆತಂಕ ಎದುರಿಸುತ್ತಿರುವ ಪಾಕಿಸ್ತಾನ, ಸುಸ್ತಿದಾರ (ದಿವಾಳಿ) ಆಗುವುದನ್ನು ತಪ್ಪಿಸಿಕೊಳ್ಳಲು 8100 ಕೋಟಿ ರು. (100 ಕೋಟಿ ಡಾಲರ್) ಹಣವನ್ನು ಗಡುವಿಗಿಂತ 3 ದಿನ ಮುಂಚೆಯೇ ಕಟ್ಟಿ ಭಾರಿ ಗಂಡಾಂತರದಿಂದ ಪಾರಾಗಿದೆ. ಶರಿಯಾ ಆಧರಿತ ‘ಸುಕುಕ್’ ಎಂಬ ಬಾಂಡ್‌ನಿಂದ ಪಾಕಿಸ್ತಾನ ಸಾಲ ಪಡೆದಿತ್ತು. ಸಾಲ ಮರುಪಾವತಿಸಲು ಸೋಮವಾರ ಕೊನೆಯ ದಿನಾಂಕ ಇತ್ತು. ಪಾಕಿಸ್ತಾನ ಈಗಾಗಲೇ ವಿಶ್ವದ ವಿವಿಧ ದೇಶಗಳು ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಸಾಲ ಪಡೆದಿದ್ದು, ಕಟ್ಟಲಾಗದೇ ಪರದಾಡುತ್ತಿದೆ. ಇಂಥದ್ದರಲ್ಲಿ ‘ಸುಕುಕ್’ಗೆ ಗಡುವಿನ ಮೊದಲೇ ಸಾಲ ಮರುಪಾವತಿಸಬಲ್ಲದೇ ಎಂಬ ಆತಂಕ ದೇಶದಲ್ಲಿ ಮನೆ ಮಾಡಿತ್ತು. ಒಂದೊಮ್ಮೆ ಸಾಲ ಮರುಪಾವತಿಸದೇ ಇದ್ದರೆ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಸಾಲವು ಮುಂದಿನ ದಿನಗಳಲ್ಲಿ ಸಿಗುವುದು ಅನುಮಾನವಿತ್ತು.
ಆದರೆ ಈ ಆತಂಕ ದೂರ ಮಾಡಿರುವ ಶಹಬಾಜ್ ಷರೀಫ್ ಸರ್ಕಾರ (Shahbaz Sharif government) 8100 ಕೋಟಿ ರು.ಗಳನ್ನು ಶುಕ್ರವಾರವೇ ಮರುಪಾವತಿಸಿದೆ. ಈ ಮೂಲಕ ದೊಡ್ಡ ಆತಂಕದಿಂದ ಪಾರಾಗಿದೆ. ‘ಸಾಲ ಮರುಪಾವತಿಸಿದ್ದೇವೆ. ಸಿಟಿ ಗ್ರೂಪ್ ಮೂಲಕ ಸಾಲ ಕೊಟ್ಟವರಿಗೆ ಹಣ ಮರುಪಾವತಿ ಆಗಲಿದೆ’ ಎಂದು ಪಾಕಿಸ್ತಾನ ಸ್ಟೇಟ್ ಬ್ಯಾಂಕ್ (State Bank of Pakistan) ಹೇಳಿದೆ.
ಸಾರ್ವಕಾಲಿಕ ದಾಖಲೆ:
ಪಾಕಿಸ್ತಾನದ ಸಾಲ ಮರುಪಾವತಿ ವೈಫಲ್ಯ ಪ್ರಮಾಣ ಕಳೆದ ತಿಂಗಳು ಸಾರ್ವಕಾಲಿಕ ದಾಖಲೆಯ ಶೇ.123ಕ್ಕೆ ಹೆಚ್ಚಳವಾಗಿತ್ತು. ಜತೆಗೆ ವಿದೇಶಿ ವಿನಿಮಯ (foreign exchange) ಸಂಗ್ರಹ ಕೂಡ ಕುಸಿದಿತ್ತು. ಹೀಗಾಗಿ ಪಾಕಿಸ್ತಾನ ಸಾಲ ಮರುಪಾವತಿಗೆ ಹಣ ಹೊಂದಿಸುವುದು ಕಷ್ಟವಾಗಬಹುದು, ತನ್ಮೂಲಕ ದೊಡ್ಡ ಬಿಕ್ಕಟ್ಟಿಗೆ ಸಿಲುಕಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು.
ಶ್ರೀಲಂಕಾದಷ್ಟುಆತಂಕವಿಲ್ಲ:
ಶ್ರೀಲಂಕಾ ಕೂಡ ಇದೇ ರೀತಿ ಅಂತಾರಾಷ್ಟ್ರೀಯ ಬಾಂಡ್‌ಗಳಿಂದ (international bonds) ಸಾಲ ಪಡೆದಿತ್ತು. ಶ್ರೀಲಂಕಾದ ಒಟ್ಟಾರೆ ವಿದೇಶಿ ಸಾಲದಲ್ಲಿ ಬಾಂಡ್ ಸಾಲಿನ ಪಾಲು ಅರ್ಧ ಮೀರಿತ್ತು. ಹಾಗಾಗಿ ಪಾಕಿಸ್ತಾನವು (Pakistan) ಶ್ರೀಲಂಕಾ ರೀತಿ ಸಾಲ ಕಟ್ಟದೆ ದಿವಾಳಿ ಆಗಬಹುದು ಎಂದು ಕೆಲವರು ಅಂದಾಜಿಸಿದ್ದರು. ಆದರೆ, ಒಟ್ಟಾರೆ ವಿದೇಶಿ ಸಾಲದಲ್ಲಿ ಸುಕುಕ್ (Sukuk) ಹಾಗೂ ಯುರೋಬಾಂಡ್‌ನಂಥ ಬಾಂಡ್‌ಗಳ ಮೂಲಕ ಪಾಕಿಸ್ತಾನ ಪಡೆದ ಸಾಲದ ಪ್ರಮಾಣ ಕೇವಲ ಶೇ.7ರಿಂದ 8ರಷ್ಟಿದೆ. ಹೀಗಾಗಿ ಪಾಕಿಸ್ತಾನಕ್ಕೆ ಶ್ರೀಲಂಕಾದಷ್ಟುಆತಂಕವಿಲ್ಲ ಎಂದು ಹೇಳಲಾಗಿದೆ.
ಚೀನಾದಿಂದ ಪೀಕಿದ್ದೆಷ್ಟು ಹೇಳ್ರಿ: ಸಾಲ ಕೇಳಿದ ಪಾಕ್’ಗೆ ಐಎಂಎಫ್ ಗುದ್ದು!
ಪಾಕಿಸ್ತಾನ ಇನ್ನುಳಿದ ವಿದೇಶಿ ಸಾಲವನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ (International Monetary Fund) ಸೇರಿ ವಿವಿಧ ಸಂಸ್ಥೆಗಳು ಹಾಗೂ ಸೌದಿ ಅರೇಬಿಯಾ (Saudi Arabia), ಅಮೆರಿಕ (United States) ಸೇರಿ ವಿವಿಧ ದೇಶಗಳಿಂದ ಪಡೆದುಕೊಂಡಿದೆ. ಆಯಾ ಸಂಸ್ಥೆಗಳು ಹಾಗೂ ದೇಶಗಳು ನೀಡಿದ ಗಡುವಿನೊಳಗೆ ಹಣ ಮರುಪಾವತಿಸಬೇಕಿದೆ.
ನಿಮ್ ದಮಯ್ಯ ಸಾಲ ಕೊಡಿ: ಐಎಂಎಫ್ ಗೆ ಅಂಗಲಾಚುತ್ತಿದೆ ಪಾಕ್!