ನಿಮ್ ದಮಯ್ಯ ಸಾಲ ಕೊಡಿ: ಐಎಂಎಫ್ ಗೆ ಅಂಗಲಾಚುತ್ತಿದೆ ಪಾಕ್!
ಸಾಲಕ್ಕಾಗಿ ಎಎಂಎಫ್ ಮುಂದೆ ಮಂಡಿಯೂರಿದ ಪಾಕ್! 800 ಕೋಟಿ ಡಾಲರ್ ಸಾಲಕ್ಕಾಗಿ ಐಎಂಎಫ್ ಗೆ ಮನವಿ! ಅಮೆರಿಕದಿಂದ ಬರುತ್ತಿದ್ದ ಸಾಲದ ಪ್ರಮಾಣ ಕಡಿತ! ಚೀನಾದ ಸಾಲ ತೀರಿಸುವ ಅನಿವಾರ್ಯತೆಯಲ್ಲಿ ಸಿಲುಕಿದ ಪಾಕ್! ಸಾಲಕ್ಕಾಗಿ ಐಎಂಎಫ್ ಕದ ತಟ್ಟುತ್ತಿರುವ ಇಮ್ರಾನ್ ಖಾನ್ ಸರ್ಕಾರ
ಇಸ್ಲಾಮಾಬಾದ್(ಅ.12): ದಿವಾಳಿಯ ಅಂಚಿನಲ್ಲಿರುವ ಪಾಕಿಸ್ತಾನ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ 800 ಕೋಟಿ ಡಾಲರ್ (ಅಂದಾಜು 59,000 ಕೋಟಿ ರೂ. ) ಸಾಲ ಪಡೆಯುವ ನಿರೀಕ್ಷೆಯಲ್ಲಿದೆ.
ಅತ್ತ ಅಮೆರಿಕದಿಂದ ಬರುತ್ತಿದ್ದ ಸಾಲದ ಪ್ರಮಾಣ ಕಡಿಮೆಯಾಗಿದ್ದು ಇತ್ತ ಚೀನಾದ ಸಾಲ ತೀರಿಸಬೇಕಾದ ಅನಿವಾರ್ಯತೆಗೆ ಸಿಲುಕಿರುವ ಪಾಕಿಸ್ತಾನ, ಐಎಂಎಫ್ ಮುಂದೆ ಸಾಲಕ್ಕಾಗಿ ಮಂಡಿಯೂರಿ ಕುಳಿತಿದೆ.
ಪಾಕಿಸ್ತಾನದ ಆರ್ಥಿಕ ಸ್ಥಿತಿ ಈಗಾಗಲೇ ಪಾತಾಳ ಕಂಡಿದ್ದು, ದೇಶವನ್ನು ಮುನ್ನಡೆಸಲು ಖಜಾನೆಯಲ್ಲಿ ಹಣ ಇಲ್ಲ ಎಂದು ಈಗಾಗಲೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಘೋಷಿಸಿಯಾಗಿದೆ. ಇದೇ ಹಿನ್ನೆಲೆಯಲ್ಲಿ ಸರ್ಕಾರಿ ವೆಚ್ಚಗಳನ್ನು ಕಡಿಮೆ ಮಾಡಲೂ ಇಮ್ರಾನ್ ಖಾನ್ ಸರ್ಕಾರ ನಿರ್ಧಾರ ಕೈಗೊಂಡಿದೆ.
ಈ ಮಧ್ಯೆ ಐಎಂಎಫ್ ನಿಂದ ಸಾಲದ ನಿರೀಕ್ಷೆಯಲ್ಲಿರುವ ಪಾಕಿಸ್ತಾನ, ಹೇಗಾದರೂ ಮಾಡಿ ಚೀನಾದ ಸಾಲದ ಕಂತು ತುಂಬಿ ಕೊಂಚ ಉಸಿರಾಡುವ ಪ್ರಯತ್ನದಲ್ಲಿದೆ. ಆದರೆ ಐಎಂಎಫ್ ಇದಕ್ಕೆ ಕಠಿಣ ಷರತ್ತುಗಳನ್ನು ಒಡ್ಡುವ ಸಾಧ್ಯತೆ ಕೂಡ ಇದೆ.
ಇನ್ನು ಪಾಕಿಸ್ತಾನದ ಷೇರು ಮಾರುಕಟ್ಟೆ 1,300ಕ್ಕೂ ಹೆಚ್ಚು ಅಂಕ ಪತನ ಕಂಡಿದ್ದು, ಸಂಪೂರ್ಣ ದಿವಾಳಿಯಾಗುವ ದಿನ ದೂರವಿಲ್ಲ ಎನ್ನುತ್ತಾರೆ ಆರ್ಥಿಕ ತಜ್ಞರು.