ಗೃಹ ಸಚಿವಾಲಯಕ್ಕೆ ಎನ್‌ಐಎ ನೀಡಿದ ವರದಿಯಲ್ಲಿ ಪಹಲ್ಗಾಮ್ ದಾಳಿಗೂ 4 ತಿಂಗಳ ಮೊದಲು ಹಫೀಜ್ ಸಯೀದ್‌ ತನ್ನ ವಾಸಸ್ಥಾನ ಬದಲಿಸಿದ್ದ ಎಂದು ವರದಿಯಾಗಿದೆ.

ನವದೆಹಲಿ: ಬೈಸರನ್ ಕಣಿವೆಯ ಹುಲ್ಲುಗಾವಲುಗಳಲ್ಲಿ 26 ಪ್ರವಾಸಿಗರ ಹತ್ಯಾಕಾಂಡಕ್ಕೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿಂದೆ ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ ಮತ್ತು ಪಾಕಿಸ್ತಾನಿ ಸೇನೆಯ ಪಾತ್ರವಿದೆ ಎಂಬುದನ್ನು ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ (NIA)ನಡೆಸುತ್ತಿರುವ ವಿಚಾರಣೆಯಿಂದ ಈಗಾಗಲೇ ಖಚಿತವಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವಾಲಯಕ್ಕೆ ಎನ್‌ಐಎ ನೀಡಿದ ವರದಿಯಲ್ಲಿ ಪಹಲ್ಗಾಮ್ ದಾಳಿಗೂ 4 ತಿಂಗಳ ಮೊದಲು ಹಫೀಜ್ ಸಯೀದ್‌ ತನ್ನ ವಾಸಸ್ಥಾನ ಬದಲಿಸಿದ್ದ ಎಂದು ವರದಿಯಾಗಿದೆ. ಈತನನ್ನು ಪಾಕಿಸ್ತಾನ ಹೊಸ ಅಡಗುತಾಣಕ್ಕೆ ಕಳುಹಿಸಿದ ವಿಚಾರವನ್ನು ಸಹ ತನಿಖಾ ಸಂಸ್ಥೆ ಗೃಹಇಲಾಖೆಗೆ ನೀಡಿದ ವರದಿಯಲ್ಲಿ ಉಲ್ಲೇಖಿಸಿದೆ.

ಆದರೆ ಈಗ ಮತ್ತೆ ಪಹಲ್ಗಾಮ್ ದಾಳಿಗೆ ( Pahalgam Terror Attack) ಪ್ರತೀಕಾರವಾಗಿ ಭಾರತವು ರಹಸ್ಯ ಕಾರ್ಯಾಚರಣೆ ನಡೆಸುವ ಸಾಧ್ಯತೆ ಇರುವುದರಿಂದ, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ, ಲಷ್ಕರ್-ಎ-ತೈಬಾ ಮುಖ್ಯಸ್ಥ ಹಫೀಜ್ ಸಯೀದ್‌ನನ್ನು ಲಾಹೋರ್‌ನಲ್ಲಿರುವ ಸುರಕ್ಷಿತವಾದ ಜಾಗಕ್ಕೆ ಸ್ಥಳಾಂತರಿಸಿದೆ ಎಂದು ವರದಿಯಾಗಿದೆ. ಸಯೀದ್‌ನನ್ನು ಲಾಹೋರ್‌ನ ಅತ್ಯಂತ ಸುರಕ್ಷಿತವಾದ ಮಿಯಾನ್ ಮಿರ್ ಕಂಟೋನ್ಮೆಂಟ್ ಪ್ರದೇಶದಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ ಎಂಬ ವಿಶ್ವಾಸಾರ್ಹ ಮಾಹಿತಿ ಏಜೆನ್ಸಿಗಳಿಗೆ ಇದೆ ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ, ಪಹಲ್ಗಾಮ್ ದಾಳಿಗೆ ನಾಲ್ಕು ತಿಂಗಳ ಮೊದಲು ಸಯೀದ್‌ನನ್ನುತನ್ನ ಹೊಸ ಸುರಕ್ಷಿತ ಮನೆಗೆ ಸ್ಥಳಾಂತರಿಸಲಾಗಿದೆ. ಪಹಲ್ಗಾಮ್‌ ದಾಳಿಯೂ 2019 ರ ಪುಲ್ವಾಮಾ ದಾಳಿಯ ನಂತರ ದೇಶದಲ್ಲಿ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿಯಾಗಿದೆ..

ಏಪ್ರಿಲ್ 22 ರ ಭಯೋತ್ಪಾದಕ ದಾಳಿಗೆ ಜಾಗತಿಕ ಅಮೆರಿಕ ಅಧ್ಯಕ್ಷ ಟ್ರಂಪ್, ರಷ್ಯಾ ಅಧ್ಯಕ್ಷ ಪುಟಿನ್, ಆಸ್ಟ್ರೇಲಿಯಾ ಪ್ರಧಾನಿ ಸೇರಿದಂತೆ ಜಗತ್ತಿನ್ನೆಲ್ಲೆಡೆಯ ದೇಶಗಳ ನಾಯಕರು ಖಂಡನೆ ವ್ಯಕ್ತಪಡಿಸಿದ್ದರು. ಲಷ್ಕರ್-ಎ-ತೈಬಾದ ಪ್ರತಿನಿಧಿಯಾದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ಏಪ್ರಿಲ್ 22 ರ ಭಯೋತ್ಪಾದಕ ದಾಳಿಯ ಹೊಣೆ ಹೊತ್ತುಕೊಂಡಿದೆ. ಕೆಲ ದಿನಗಳ ಹಿಂದಷ್ಟೇ ಹಫೀಜ್ ಸಯೀದ್‌ ಭದ್ರತೆಯನ್ನು ಪಾಕಿಸ್ತಾನ 4 ಪಟ್ಟು ಹೆಚ್ಚು ಮಾಡಿದೆ ಎಂದು ವರದಿಯಾಗಿತ್ತು. ಪಾಕಿಸ್ತಾನದ ಸಶಸ್ತ್ರ ಪಡೆಯಿಂದ 24*7 ಭದ್ರತೆ, ಡ್ರೋನ್ ಮೂಲಕ ಕಣ್ಗಾವಲು ಸೇರಿದಂತೆ ಪಾಕಿಸ್ತಾನ ಸೇನೆ, ಐಎಸ್‌ಐ ಮತ್ತು ಲಷ್ಕರ್ ಕಾರ್ಯಕರ್ತರು ಜಂಟಿಯಾಗಿ ಅವರ ರಕ್ಷಣೆಯನ್ನು ನೋಡಿಕೊಳ್ಳುತ್ತಿದ್ದಾರೆ ಅವರ ಮನೆಯ ಕಾಂಪೌಂಡ್‌ನಿಂದ ಸುತ್ತಲೂ ಮೇಲ್ವಿಚಾರಣೆ ಮಾಡಲು ಡ್ರೋನ್ ಹಾರಾಟ ನಿಯೋಜಿಸಲಾಗಿದೆ ಮತ್ತು 4 ಕಿಲೋಮೀಟರ್ ವ್ಯಾಪ್ತಿಯೊಳಗಿನ ರಸ್ತೆಗಳಲ್ಲಿ ಹೆಚ್ಚಿನ ರೆಸಲ್ಯೂಶನ್ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹಫೀಝ್ ಸಯೀದ್ ಮನೆಯ ಬಳಿ ಯಾವುದೇ ನಾಗರಿಕರ ಸಂಚಾರಕ್ಕೆ ಅವಕಾಶವಿಲ್ಲ ಮತ್ತು ಈ ಪ್ರದೇಶದಲ್ಲಿ ಇತರ ಡ್ರೋನ್‌ಗಳನ್ನು ಸಹ ನಿಷೇಧಿಸಲಾಗಿದೆ. ಪಹಲ್ಗಾಮ್ ದಾಳಿಯ ಸ್ವಲ್ಪ ಸಮಯದ ನಂತರ ಈ ಉನ್ನತ ಭದ್ರತಾ ಪ್ರೋಟೋಕಾಲ್ ಅನ್ನು ಜಾರಿಗೆ ತರಲಾಗಿದೆ. ಅಂದಹಾಗೆ ಪಾಕಿಸ್ತಾನ ಇಷ್ಟೊಂದು ಕಾಳಜಿಯಿಂದ ಕಾಯುತ್ತಿರುವ ಹಫೀಜ್ ಸಯೀದ್‌ನನ್ನು ವಿಶ್ವಸಂಸ್ಥೆ ಮತ್ತು ಅಮೆರಿಕವು ಜಾಗತಿಕ ಭಯೋತ್ಪಾದಕ (Global Terrorist) ಎಂದು ಘೋಷಿಸಿದೆ. ಅಮೆರಿಕಾ ಈತನ ತಲೆಗೆ ಮತ್ತು 10 ಮಿಲಿಯನ್ ಯುಎಸ್ ಡಾಲರ್ ಬಹುಮಾನವನ್ನು ಘೋಷಿಸಿದೆ. ಹೀಗಿದ್ದರೂ ಈ ಸಯೀದ್ ಪಾಕಿಸ್ತಾನದಲ್ಲಿ ಬಹಿರಂಗವಾಗಿ ರಾಜಾರೋಷವಾಗಿ ತಿರುಗಾಡುತ್ತಾ ವಾಸಿಸುತ್ತಿದ್ದಾನೆ. ಇದು ಭಯೋತ್ಪಾದನೆಗೆ ಅನ್ನ ನೀರು ಹಾಕುತ್ತಾ ಪೋಷಿಸುತ್ತಿರುವ ಪಾಕಿಸ್ತಾನದ ನಿಜಬಣ್ಣ ಬಯಲು ಮಾಡಿದೆ. 77 ವರ್ಷದ ಹಫೀಜ್ ಸಯೀದ್‌ನನ್ನು ಭಾರತ ಹಾಗೂ ಅಮೆರಿಕಾದ ತನಿಖಾ ಸಂಸ್ಥೆಗಳಿಗೆ ಬೇಕಾಗಿದ್ದಾನೆ.