Turkey Earthquake ಪರಿಹಾರ ಸಾಮಾಗ್ರಿ ಹೊತ್ತ ಭಾರತದ ವಿಮಾನಕ್ಕೆ ವಾಯುಪ್ರದೇಶ ನಿರಾಕರಿಸಿದ ಪಾಕಿಸ್ತಾನ!
ಟರ್ಕಿ ಹಾಗೂ ಸಿರಿಯಾದಲ್ಲಿನ ಸಂಭವಿಸಿದ ಭೂಕಂಪಕ್ಕೆ 5 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ ಭಾರತ ಟರ್ಕಿಗೆ ಸಹಾಯ ಹಸ್ತಚಾಚಿದೆ. ಪರಿಹಾರ ಸಾಮಾಗ್ರಿ, ರಕ್ಷಣಾ ತಂಡವನ್ನು ಹೊತ್ತ ಭಾರತೀಯ ಸೇನಾ ವಿಮಾನಕ್ಕೆ ಪಾಕಿಸ್ತಾನ ವಾಯುಪ್ರದೇಶ ಪ್ರವೇಶಿಸಿದಂತೆ ಸೂಚಿಸಿದೆ.
ನವದೆಹಲಿ(ಫೆ.07): ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ ಭೂಕಂಪ ಇಡೀ ವಿಶ್ವವನ್ನೇ ದುಃಖ ಸಾಗರದಲ್ಲಿ ಮುಳುಗಿಸಿದೆ. ಭೂಕಂಪ ಸ್ಥಳದ ಫೋಟೋ ವಿಡಿಯೋಗಳು ಪ್ರತಿಯೊಬ್ಬರ ಕಣ್ಣಲ್ಲಿ ನೀರು ಜಿನುಗಿಸುತ್ತಿದೆ. 5,000ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರಕ್ಷಣಾ ಕಾರ್ಯಗಳು ನಿರಂತರವಾಗಿ ನಡೆಯುತ್ತಿದೆ. ಇದರ ಬೆನ್ನಲ್ಲೇ ಟರ್ಕಿಗೆ ಭಾರತ ಸಹಾಯಹಸ್ತ ಚಾಚಿದೆ. ಭಾರತದ ನಿರ್ಧಾರದ ಬೆನ್ನಲ್ಲೇ ಪರಿಹಾರ ಸಾಮಾಗ್ರಿ, ಔಷಧಿಗಳು, NDRF ರಕ್ಷಣಾ ತಂಡ, ಡ್ರಿಲ್ಲಿಂಗ್ ಮಿಶನ್ ಸೇರಿದಂತೆ ಹಲವು ವಸ್ತುಗಳನ್ನು ಹೊತ್ತ ಭಾರತೀಯ ವಾಯುಸೇನಾ ವಿಮಾನ ಟರ್ಕಿಗೆ ಪ್ರಯಾಣ ಬೆಳೆಸಿದೆ. ಆದರೆ ಟರ್ಕಿಗೆ ಹೊರಟ ಭಾರತೀಯ ವಾಯುಸೇನಾ ವಿಮಾನಕ್ಕೆ ಪಾಕಿಸ್ತಾನ ವಾಯುಪ್ರದೇಶ ಬಳಸದಂತೆ ತಾಕೀತು ಮಾಡಿದ ಘಟನೆ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಭಾರತದ ಅತೀ ದೊಡ್ಡ ಕಾರ್ಗೋ ವಿಮಾನ(Indian Airforce C-17) ಬೋಯಿಂಗ್ C-17 ಗ್ಲೋಬ್‌ಮಾಸ್ಟರ್ ವಿಮಾನಕ್ಕೆ ಪಾಕಿಸ್ತಾನ(Pakistan Airspance) ಪ್ರವೇಶ ನಿರ್ಬಂಧಿಸಿದ ಘಟನೆ ನಡೆದಿದೆ. ಪಾಕಿಸ್ತಾನ ವಾಯಪ್ರದೇಶ ಬಳಕೆಗೆ ಅನುಮತಿ ನೀಡಿಲ್ಲ. ಇದರ ಪರಿಣಾಮ ಭಾರತ ಪರಿಹಾರ(India Relief Plane) ವಿಮಾನ ಸುತ್ತಿಬಳಸಿ ಪ್ರಯಾಣ ಮಾಡಬೇಕಾಗಿ ಬಂದಿದೆ. ಭಾರತೀಯ ವಾಯುಸೇನಾ ವಿಮಾನ ಟರ್ಕಿಯ(Turkey) ಅಡಾನ ವಿಮಾನ ನಿಲ್ದಾಣದಲ್ಲಿ ಇಳಿದಿದೆ. ಭೂಕಂಪ(Turkey Earthquake) ಸಂಭವಿಸಿದ ಪ್ರದೇಶದಲ್ಲಿದ್ದ ಬಹುತೇಕ ವಿಮಾನ ನಿಲ್ದಾಣಗಳು ನೆಲಸಮಗೊಂಡಿದೆ. ಹೀಗಾಗಿ ಹತ್ತಿರದ ಅಡಾನ ವಿಮಾನ ನಿಲ್ದಾಣದಲ್ಲಿ ಭಾರತದ ವಿಮಾನ ಲ್ಯಾಂಡ್ ಆಗಿದೆ.
ಟರ್ಕಿ ಭೂಕಂಪ: ಭಾರತದಿಂದ ಸಹಾಯಹಸ್ತ; ದೋಸ್ತ್ ಎಂದು ಧನ್ಯವಾದ ಹೇಳಿದ ಟರ್ಕಿ ಸರ್ಕಾರ
ಮಾನವೀಯ ನೆಲೆಗಟ್ಟಿನಲ್ಲಿ(humanitarian relief) ಭಾರತ ಯಾವುದೇ ದೇಶಕ್ಕೆ ಸಹಾಯ ಹಸ್ತ ಚಾಚಿದಾಗ ಪಾಕಿಸ್ತಾನ ವಾಯುಪ್ರದೇಶ ನಿರಾಕರಿಸಿದ ಘಟನೆ ಸಾಕಷ್ಟಿವೆ. ಯೂರೋಪಿಯನ್ ರಾಷ್ಟ್ರಗಳು, ಟರ್ಕಿ, ಉಕ್ರೇನ್‌ಗೆ ತೆರಳಲು ಭಾರತಕ್ಕಿರುವ ನೇರ ಮಾರ್ಗ ಪಾಕಿಸ್ತಾನ ದಾಟಿ ಸಾಗುವುದು. ಆದರೆ ಉಕ್ರೇನ್, ಇದೀಗ ಟರ್ಕಿ ಸೇರಿದಂತೆ ಈ ಹಿಂದಿನ ಹಲವು ಘಟನೆಗಳಲ್ಲಿ ಪಾಕಿಸ್ತಾನ ಸರ್ಕಾರ ಭಾರತಕ್ಕೆ ವಾಯುಪ್ರದೇಶ ಬಳಕೆಯನ್ನು ನಿಷೇಧಿಸಿದೆ. ಭಾರತೀಯ ವಾಯು ಸೇನೆಗೆ ಪಾಕಿಸ್ತಾನ ಅನುಮತಿ ನಿರಾಕರಿಸಿದ ಕಾರಣ ಸುತ್ತಿಬಳಸಿ ಟರ್ಕಿ ತಲಪಿದೆ. ಇಷ್ಟೇ ಅಲ್ಲ ಈಗಾಗಲೇ ರಕ್ಷಣಾ ಕಾರ್ಯದಲ್ಲಿ ತೊಡಗಿದೆ.
ಭೂಕಂಪ ಪೀಡಿತ ಟರ್ಕಿ ದೇಶಕ್ಕೆ ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ಭಾರತ ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಸೂಚನೆ ಮೇರೆಗೆ ಟರ್ಕಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ವೈದ್ಯಕೀಯ ತಂಡಗಳು, ರಕ್ಷಣಾ ಹಾಗೂ ಶೋಧ ಪಡೆಗಳ ನಿಯೋಗಗಳು ಮತ್ತು ಪರಿಹಾರ ಸಾಮಗ್ರಿಗಳನ್ನು ಭಾರತ ಕಳುಹಿಸಿಕೊಟ್ಟಿದೆ.
ಭೂಕಂಪ ಪೀಡಿತ ಟರ್ಕಿಗೆ ಭಾರತ ಸಹಾಯ ಹಸ್ತ: ಟರ್ಕಿಯತ್ತ ಹೊರಟ ರಕ್ಷಣಾ ತಂಡ
ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮಾಡಲು 100 ಸದಸ್ಯರ 2 ಎನ್‌ಡಿಆರ್‌ಎಫ್ ಸಿಬ್ಬಂದಿ ಪಡೆಗಳನ್ನು ವಿಶೇಷ ತರಬೇತಿ ಪಡೆದ ಶ್ವಾನ ಪಡೆಗಳು, ಅಗತ್ಯ ಸಾಮಗ್ರಿಗಳು ಹಾಗೂ ನುರಿತ ವೈದ್ಯರುಗಳು, ಅರೆ ವೈದ್ಯಕೀಯ ತಂಡಗಳು ಹಾಗೂ ಅಗತ್ಯ ಔಷಧಗಳೊಂದಿಗೆ ವೈದ್ಯಕೀಯ ತಂಡಗಳ ಭಾರತೀಯ ವಾಯುಸೇನಾ ವಿಮಾನದಲ್ಲಿ ಟರ್ಕಿ ತಲುಪಿದೆ. ಅಂಕಾರಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ಇಸ್ತಾಂಬುಲ್‌ನಲ್ಲಿರುವ ರಾಯಭಾರ ಜನರಲ್ ಕಚೇರಿಗಳ ಸಹಯೋಗದಲ್ಲಿ ಅಗತ್ಯ ಸಾಮಗ್ರಿಗಳನ್ನು ರವಾನಿಸಲಾಗುವುದು ಎಂದು ಮೋದಿ ಅವರ ಪ್ರಧಾನ ಕಾರ್ಯದರ್ಶಿ ಪಿ.ಕೆ ಮಿಶ್ರಾ, ಸಂಪುಟ ಕಾರ್ಯದರ್ಶಿ ಹಾಗೂ ವಿವಿಧ ಸಚಿವಾಲಯಗಳ ಪ್ರತಿನಿಧಿಗಳು ಮತ್ತು ಎನ್‌ಡಿಆರ್‌ಎಂ ಹಾಗೂ ಎನ್‌ಡಿಆರ್‌ಎಫ್ ಪ್ರಮುಖರ ಸಹಯೋಗದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.