Asianet Suvarna News Asianet Suvarna News

ಟರ್ಕಿ ಭೂಕಂಪ: ಭಾರತದಿಂದ ಸಹಾಯಹಸ್ತ; ದೋಸ್ತ್‌ ಎಂದು ಧನ್ಯವಾದ ಹೇಳಿದ ಟರ್ಕಿ ಸರ್ಕಾರ

ಪ್ರಧಾನಮಂತ್ರಿ ಕಾರ್ಯಾಲಯದಿಂದ ಘೋಷಣೆಯಾದ ಕೆಲವೇ ಗಂಟೆಗಳ ನಂತರ, ಭಾರತವು ಭಾರತೀಯ ವಾಯುಪಡೆಯ ವಿಮಾನದಲ್ಲಿ ಭೂಕಂಪ ಪರಿಹಾರ ಸಾಮಗ್ರಿಗಳ ಮೊದಲ ಬ್ಯಾಚ್ ಅನ್ನು ಟರ್ಕಿಗೆ ರವಾನಿಸಿದೆ.

india sends first consignment of relief material to earthquake hit turkey government thanks dost india ash
Author
First Published Feb 7, 2023, 12:14 PM IST

ನವದೆಹಲಿ / ಇಸ್ತಾನ್‌ಬುಲ್‌ (ಫೆಬ್ರವರಿ 7, 2023): ಟರ್ಕಿ ಹಾಗೂ ಸಿರಿಯಾದಲ್ಲಿ ಭೀಕರ ಪ್ರಮಾಣದ ತ್ರಿವಳಿ ಭೂಕಂಪ ಸಂಭವಿಸಿದ್ದು, ಸಾವಿರಾರು ಜನರು ಬಲಿಯಾಗಿದ್ದಾರೆ. ಸಾವಿನ ಸಂಖ್ಯೆ ಕ್ಷಣ ಕ್ಷಣಕ್ಕೂ ಏರುತ್ತಲೇ ಇದ್ದು, ಈವರೆಗೆ ಬಲಿಯಾಗಿರುವವರ ಸಂಖ್ಯೆ 4,300 ಕ್ಕೂ ಅಧಿಕ ಎಂದು ವರದಿಗಳು ಹೇಳುತ್ತಿವೆ. ಅಲ್ಲದೆ, ಹತ್ತಾರು ಸಾವಿರ ಜನರು ಗಾಯಗೊಂಡಿದ್ದು, ಈ ಹಿನ್ನೆಲೆ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಭೀತಿ ಇದೆ. ಈ ಮಧ್ಯೆ, ಭಾರತವು ಭೂಕಂಪ-ಪೀಡಿತ ಟರ್ಕಿಯ ನೆರವಿಗೆ ಮುಂದಾಗಿದ್ದು, ಪರಿಹಾರ ಸಾಮಗ್ರಿಯ ಮೊದಲ ವಿಮಾನ ಟರ್ಕಿಯನ್ನು ಪ್ರವೇಶಿಸಿದೆ. ಪ್ರಧಾನಮಂತ್ರಿ ಕಾರ್ಯಾಲಯದಿಂದ ಘೋಷಣೆಯಾದ ಕೆಲವೇ ಗಂಟೆಗಳ ನಂತರ, ಭಾರತವು ಭಾರತೀಯ ವಾಯುಪಡೆಯ ವಿಮಾನದಲ್ಲಿ ಭೂಕಂಪ ಪರಿಹಾರ ಸಾಮಗ್ರಿಗಳ ಮೊದಲ ಬ್ಯಾಚ್ ಅನ್ನು ಟರ್ಕಿಗೆ ರವಾನಿಸಿದೆ.

ಈ ಮೊದಲ ಬ್ಯಾಚ್‌ನಲ್ಲಿ ಪರಿಣಿತ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯ ಪುರುಷ ಮತ್ತು ಮಹಿಳಾ ಸಿಬ್ಬಂದಿ, ನುರಿತ ಶ್ವಾನದಳಗಳು, ವೈದ್ಯಕೀಯ ಸಾಮಗ್ರಿಗಳ ಒಂದು ಶ್ರೇಣಿ, ಸುಧಾರಿತ ಡ್ರಿಲ್ಲಿಂಗ್ ಉಪಕರಣಗಳು ಮತ್ತು ಸಹಾಯದ ಪ್ರಯತ್ನಗಳಿಗೆ ಅಗತ್ಯವಿರುವ ಇತರ ನಿರ್ಣಾಯಕ ಸಾಧನಗಳನ್ನು ಒಳಗೊಂಡಂತೆ ಶೋಧ ಮತ್ತು ಪಾರುಗಾಣಿಕಾ ತಂಡವನ್ನು ಈ ಸಾಗಣೆಯು ಒಳಗೊಂಡಿದೆ.

ಮಹಾ ಭೂಕಂಪಕ್ಕೆ ಟರ್ಕಿ & ಸಿರಿಯಾ ತತ್ತರ: 4 ಸಾವಿರ ಜನರು ಬಲಿ

"ಭಾರತದ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (HADR) ಸಾಮರ್ಥ್ಯಗಳು ಕಾರ್ಯನಿರ್ವಹಿಸುತ್ತಿವೆ. NDRF ಹುಡುಕಾಟ ಮತ್ತು ಪಾರುಗಾಣಿಕಾ ತಂಡಗಳು, ವಿಶೇಷವಾಗಿ ತರಬೇತಿ ಪಡೆದ ಶ್ವಾನದಳಗಳು, ವೈದ್ಯಕೀಯ ಸರಬರಾಜುಗಳು, ಡ್ರಿಲ್ಲಿಂಗ್‌ ಯಂತ್ರಗಳು ಮತ್ತು ಇತರ ಅಗತ್ಯ ಉಪಕರಣಗಳೊಂದಿಗೆ ಭೂಕಂಪ ಪರಿಹಾರ ಸಾಮಗ್ರಿಗಳ 1 ನೇ ಬ್ಯಾಚ್ ಟರ್ಕಿಗೆ ಹೊರಟಿದೆ’’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.

ಇನ್ನು, ಪರಿಹಾರ ಸಾಮಗ್ರಿಗಳು ಟರ್ಕಿ ತಲುಪುವ ಮುನ್ನ, ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ (MoS) ವಿ. ಮುರಳೀಧರನ್ ಅವರು ಟರ್ಕಿಯ ರಾಯಭಾರ ಕಚೇರಿಗೆ ಭೇಟಿ ನೀಡಿ ಸಂತಾಪ ಸೂಚಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ಸಹಾನುಭೂತಿ ಮತ್ತು ಮಾನವೀಯ ಬೆಂಬಲವನ್ನೂ ಅವರು ತಿಳಿಸಿದ್ದಾರೆ. ಭಾರತವು ಟರ್ಕಿಗೆ ರಕ್ಷಣಾ ಮತ್ತು ವೈದ್ಯಕೀಯ ತಂಡಗಳನ್ನು ಕಳುಹಿಸುತ್ತಿರುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: ಭೂಕಂಪ ಪೀಡಿತ ಟರ್ಕಿಗೆ ಭಾರತ ಸಹಾಯ ಹಸ್ತ: ಟರ್ಕಿಯತ್ತ ಹೊರಟ ರಕ್ಷಣಾ ತಂಡ

ಟರ್ಕಿ ಭೂಕಂಪ ಸುದ್ದಿ ತಿಳಿದುಬರುತ್ತಿದ್ದಂತೆ, ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬಗಳಿಗೆ ಹೃತ್ಪೂರ್ವಕ ಸಂತಾಪ ಸೂಚಿಸಿದ್ದು, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಕನಿಷ್ಠ 4,300 ಜನರ ಸಾವಿಗೆ ಕಾರಣವಾದ ಭೂಕಂಪದ ನಂತರದ ಪರಿಣಾಮಗಳನ್ನು ನಿಭಾಯಿಸಲು ಸಾಧ್ಯವಿರುವ ಎಲ್ಲ ನೆರವು ನೀಡುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಭಾರತಕ್ಕೆ ಧನ್ಯವಾದ ಹೇಳಿದ ಟರ್ಕಿ
24 ಗಂಟೆಗಳಲ್ಲಿ ಟರ್ಕಿಯಲ್ಲಿ ಮೂರು ವಿನಾಶಕಾರಿ ಭೂಕಂಪಗಳು ಸಂಭವಿಸಿದ ನಂತರ ದೇಶಕ್ಕೆ ನೆರವು ಒದಗಿಸಿದ ಉದಾರತೆಗಾಗಿ ಭಾರತವನ್ನು "ದೋಸ್ತ್" ಎಂದು ಕರೆಯುತ್ತಾ, ಟರ್ಕಿಯ ರಾಯಭಾರಿ ಫಿರತ್ ಸುನೆಲ್ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಮತ್ತು  "ಅಗತ್ಯವಿರುವ ಸ್ನೇಹಿತ ನಿಜವಾಗಿಯೂ ಸ್ನೇಹಿತ" (Friend in need is a friend indeed) ಎಂದು ಹೊಗಳಿದ್ದಾರೆ.

ಇದನ್ನೂ ಓದಿ: ಟರ್ಕಿ, ಸಿರಿಯಾದಲ್ಲಿ ಭೀಕರ ಭೂಕಂಪ: ಮೃತರ ಸಂಖ್ಯೆ 500ಕ್ಕೆ ಏರಿಕೆ

ಈ ಸಂಬಂಧ ಟ್ವೀಟ್‌ ಮಾಡಿದ ಫಿರಟ್‌ ಸುನೆಲ್, "ದೋಸ್ತ್" ಎಂಬುದು ಟರ್ಕಿಶ್ ಮತ್ತು ಹಿಂದಿಯಲ್ಲಿ ಸಾಮಾನ್ಯ ಪದವಾಗಿದೆ. ನಮ್ಮಲ್ಲಿ ಟರ್ಕಿಶ್ ಗಾದೆಯಿದೆ: "ದೋಸ್ತ್ ಕರ ಗುಂಡೆ ಬೆಳ್ಳಿ ಓಲುರ್" (ಅಗತ್ಯವಿರುವ ಸ್ನೇಹಿತ ನಿಜವಾಗಿಯೂ ಸ್ನೇಹಿತ). ಭಾರತಕ್ಕೆ ತುಂಬಾ ಧನ್ಯವಾದಗಳು." ಎಂದು ಪೋಸ್ಟ್‌ ಮಾಡಿದ್ದಾರೆ. 

ಟರ್ಕಿ, ಸಿರಿಯಾ ಭೂಕಂಪದಲ್ಲಿ ಈವರೆಗೆ 4,300 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.  

Follow Us:
Download App:
  • android
  • ios