ಭೂಕಂಪ ಪೀಡಿತ ಟರ್ಕಿಗೆ ಭಾರತ ಸಹಾಯ ಹಸ್ತ: ಟರ್ಕಿಯತ್ತ ಹೊರಟ ರಕ್ಷಣಾ ತಂಡ
ಭೂಕಂಪನದಿಂದ ನಲುಗಿದ ಈ ಟರ್ಕಿ ದೇಶಕ್ಕೆ ನೆರವು ನೀಡಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದು, ಈ ಬಗ್ಗೆ ಪ್ರಧಾನಿ ಸಚಿವಾಲಯ ಸಭೆ ನಡೆಸಿದ್ದು, ರಕ್ಷಣಾ ತಂಡ ಕಳುಹಿಸಲು ನಿರ್ಧರಿಸಲಾಗಿದೆ.
ನವದೆಹಲಿ: ಮಧ್ಯ ಪ್ರಾಚ್ಯ ದೇಶಗಳಾದ ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪನಕ್ಕೆ ಸಿಲುಕಿ ಮಡಿದವರ ಸಂಖ್ಯೆ 500 ದಾಟಿದೆ. ಇಂದು ನಸುಕಿನ ಜಾವ ಸಂಭವಿಸಿದ ಭೀಕರ ಭೂಕಂಪನದ ರೌದ್ರತೆಗೆ ಸಿಲುಕಿ ಹಲವು ಬಹುಮಹಡಿ ಕಟ್ಟಡಗಳು ನೆಲಕ್ಕುರುಳಿದ ಪರಿಣಾಮ 500 ಕ್ಕೂ ಹೆಚ್ಚು ಜನ ಮಡಿದಿದ್ದು, ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಹೋಗುತ್ತಿದೆ. ಭೂಕಂಪನದಿಂದ ನಲುಗಿದ ಈ ಟರ್ಕಿ ದೇಶಕ್ಕೆ ನೆರವು ನೀಡಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದು, ಈ ಬಗ್ಗೆ ಪ್ರಧಾನಿ ಸಚಿವಾಲಯ ಸಭೆ ನಡೆಸಿದೆ.
ಟರ್ಕಿಯಲ್ಲಿ ಸಂಭವಿಸಿದ ಭೂಕಂಪವನ್ನು ನಿಭಾಯಿಸಲು ಸಾಧ್ಯವಿರುವ ಎಲ್ಲ ನೆರವನ್ನು ನೀಡಲು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ ಹಿನ್ನೆಲೆಯಲ್ಲಿ ತಕ್ಷಣದ ಪರಿಹಾರ ಕ್ರಮಗಳ ಕುರಿತು ಚರ್ಚಿಸಲು ಪ್ರಧಾನಿ ಸಚಿವಾಲಯದಲ್ಲಿ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಟರ್ಕಿ ಗಣರಾಜ್ಯದ ಸರ್ಕಾರದೊಂದಿಗೆ ಚರ್ಚೆ ನಡೆಸಿ ತಕ್ಷಣದ ತುರ್ತು ಅಗತ್ಯದ, ರಕ್ಷಣಾ ಕಾರ್ಯಾಚರಣಾ ತಂಡಗಳು ಹಾಗೂ ವೈದ್ಯಕೀಯ ತಂಡಗಳು, ವೈದ್ಯಕೀಯ ಪರಿಹಾರ ಸಾಮಾಗ್ರಿಗಳನ್ನು ಟರ್ಕಿಗೆ ಕಳುಹಿಸಲಾಗುತ್ತಿದೆ.
ಇಂದು ಟರ್ಕಿಯಲ್ಲಿ ಸಂಭವಿಸಿದ ಭೂಕಂಪನ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಿರುವ ಎಲ್ಲ ನೆರವು ನೀಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ.ಮಿಶ್ರಾ ( Dr. P. K. Mishra) ಅವರು ತಕ್ಷಣದ ಪರಿಹಾರ ಕ್ರಮಗಳ ಕುರಿತು ಚರ್ಚಿಸಲು ಸೌತ್ ಬ್ಲಾಕ್‌ನಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ಎನ್‌ಡಿಆರ್‌ಎಫ್ ತಂಡ, ವೈದ್ಯಕೀಯ ತಂಡ, ರಕ್ಷಣಾ ಕಾರ್ಯಾಚರಣೆ ತಂಡವನ್ನು ತುರ್ತು ಘಟನಾ ಸ್ಥಳಕ್ಕೆ ಕಳುಹಿಸಲು ನಿರ್ಧರಿಸಲಾಯಿತು.
ಟರ್ಕಿ, ಸಿರಿಯಾದಲ್ಲಿ ಭೀಕರ ಭೂಕಂಪ: ಮಲಗಿದ್ದಲ್ಲಿಯೇ ಚಿರನಿದ್ರೆಗೆ ಜಾರಿದ 180 ಮಂದಿ
ಅದರಂತೆ ವಿಶೇಷ ತರಬೇತಿ ಪಡೆದ ಶ್ವಾನದಳಗಳು ಮತ್ತು ಅಗತ್ಯ ಉಪಕರಣಗಳೊಂದಿಗೆ 100 ಸಿಬ್ಬಂದಿಗಳನ್ನು ಒಳಗೊಂಡಿರುವ ಎನ್‌ಡಿಆರ್‌ಎಫ್‌ನ (NDRF)ಎರಡು ತಂಡಗಳು ಭೂಕಂಪ ಪೀಡಿತ ಪ್ರದೇಶಕ್ಕೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಹೋಗಲು ಸಿದ್ಧವಾಗಿವೆ. ಅಗತ್ಯ ಔಷಧಗಳೊಂದಿಗೆ ತರಬೇತಿ ಪಡೆದ ವೈದ್ಯರು ಮತ್ತು ಅರೆವೈದ್ಯರೊಂದಿಗೆ ವೈದ್ಯಕೀಯ ತಂಡಗಳನ್ನು ಸಹ ಸಿದ್ಧಗೊಳಿಸಲಾಗುತ್ತಿದೆ. ಜೊತೆಗೆ ರಿಪಬ್ಲಿಕ್ ಆಫ್ ಟರ್ಕಿಯ ಸರ್ಕಾರ ಮತ್ತು ಅಂಕಾರಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಇಸ್ತಾಂಬುಲ್‌ನಲ್ಲಿರುವ (Istanbul) ಕಾನ್ಸುಲೇಟ್ ಜನರಲ್ ಕಚೇರಿ ಜೊತೆ ಸಮನ್ವಯದೊಂದಿಗೆ ಪರಿಹಾರ ಸಾಮಗ್ರಿಗಳನ್ನು ಕೂಡ ರವಾನಿಸಲಾಗುತ್ತದೆ.
ಇನ್ನು ಪ್ರಧಾನಿ ಸಚಿವಾಲಯದಲ್ಲಿ ನಡೆದ ಈ ಸಭೆಯಲ್ಲಿ ಸಂಪುಟ ಕಾರ್ಯದರ್ಶಿ , ಗೃಹ ವ್ಯವಹಾರಗಳು, ಎನ್‌ಡಿಎಂಎ, ಎನ್‌ಡಿಆರ್‌ಎಫ್, ರಕ್ಷಣಾ ಅಧಿಕಾರಿಗಳು (Defence), ಎಂಇಎ (MEA), ನಾಗರಿಕ ವಿಮಾನಯಾನ (Civil Aviation) ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಟರ್ಕಿ ಮತ್ತು ಸಿರಿಯಾದಲ್ಲಿ ಇಂದು ನಸುಕಿನ ಜಾವ ಸಂಭವಿಸಿದ 7.8 ತೀವ್ರತೆಯ ಪ್ರಬಲ ಭೂಕಂಪಕ್ಕೆ ಸುಮಾರು 500 ಜನ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ಅನೇಕರು ಮುಂಜಾನೆಯ ಸಿಹಿ ನಿದ್ದೆಯಲ್ಲಿದ್ದಾಗಲೇ ಭೂಕಂಪ ಸಂಭವಿಸಿದ್ದು, ಭೂಕಂಪನದ ತೀವ್ರತೆಗೆ ದೊಡ್ಡ ದೊಡ್ಡ ಕಾಂಕ್ರೀಟ್ ಕಟ್ಟಡಗಳು ಕುಸಿದ ಪರಿಣಾಮ ಅಂದಾಜು 200 ಜನ ಸಜೀವ ಸಮಾಧಿಯಾಗಿದ್ದಾರೆ. ಸೈಪ್ರಸ್ ದ್ವೀಪ ಹಾಗೂ ಈಜಿಪ್ಟ್‌ನಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ.
ವಿಜಯಪುರ ಜಿಲ್ಲೆ, ಮಹಾರಾಷ್ಟ್ರ ಗಡಿ ಭಾಗದಲ್ಲಿ ಲಘು ಭೂಕಂಪನ
ಈ ಭೂಕಂಪನದ ತೀವ್ರತೆ ಎಷ್ಟು ಭೀಕರವಾಗಿತ್ತು ಎಂದರೆ, ಇದು ಒಂದು ದಶಕಕ್ಕೂ ಹೆಚ್ಚು ಕಾಲ ಹಿಂಸಾಚಾರದಿಂದ ನಲುಗಿದ, ಲಕ್ಷಾಂತರ ಜನರ ಸಾವಿಗೆ ಕಾರಣವಾದ ಹಾಗೂ ಲಕ್ಷಾಂತರ ಜನರು ಜೀವ ಉಳಿಸಿಕೊಳ್ಳಲು ಪಲಾಯನ ಮಾಡುವಂತೆ ಮಾಡಿದ ಸಿರಿಯಾದ ಪ್ರಮುಖ ನಗರಗಳಾದ್ಯಂತ ಡಜನ್‌ಗೂ ಹೆಚ್ಚು ಕಟ್ಟಡಗಳನ್ನು ನೆಲಕ್ಕುರುಳುವಂತೆ ಮಾಡಿದೆ. ಟರ್ಕಿಯ ಟಿವಿ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ (social media) ಭೂಕಂಪದಿಂದ ಪೀಡಿತವಾದ ಕಹ್ರಮನ್ಮರಸ್ (Kahramanmaras)ಮತ್ತು ನೆರೆಯ ಗಜಿಯಾಂಟೆಪ್ ನಗರದಲ್ಲಿ (Gaziantep) ನೆಲಸಮವಾದ ಕಟ್ಟಡಗಳ ಅವಶೇಷಗಳಡಿಯಿಂದ ಜನರನ್ನು ರಕ್ಷಿಸಲು ರಕ್ಷಣಾ ತಂಡ ಅವಶೇಷಗಳನ್ನು ತೆರವು ಮಾಡುತ್ತಿರುವ ದೃಶ್ಯಗಳು ಫೋಟೋಗಳು ಕಂಡು ಬರುತ್ತಿವೆ.