ಪಾಕಿಸ್ತಾನ ಮೂಲದ ಸೈಬರ್ ಗುಂಪುಗಳು ಭಾರತದ ರಕ್ಷಣಾ ಸಚಿವಾಲಯದ ವೆಬ್‌ಪೇಜ್‌ಗಳನ್ನು ಹ್ಯಾಕ್ ಮಾಡಿವೆ. ಭಾರತೀಯ ಅಧಿಕಾರಿಗಳು ಪೇಜ್‌ಗಳನ್ನು ಮತ್ತೆ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.
ನವದಹೆಲಿ: ಪಹಲ್ಗಾಂ ಉಗ್ರದಾಳಿಯ ಪ್ರತೀಕಾರಕ್ಕೆ ಭಾರತ ಸಿದ್ಧತೆ ನಡೆಸುತ್ತಿರುವ ಹೊತ್ತಿನಲ್ಲಿ ಪಾಕ್ ಮೂಲದ ಸೈಬರ್ ಗುಂಪುಗಳು ಭಾರತದ ಸೇನಾ ವೆಬ್‌ಸೈಟ್‌ಗಳ ಮೇಲೆ ಸೈಬರ್ ದಾಳಿ ನಡೆಸುವುದನ್ನು ಮುಂದುವರೆಸಿವೆ. ರಕ್ಷಣಾ ಸಚಿವಾಲಯಕ್ಕೆ ಸಂಬಂಧಿಸಿದ ವೆಬ್‌ಪೇಜ್‌ಗಳನ್ನು ಸೋಮವಾರ ಹ್ಯಾಕ್ ಮಾಡಿವೆ. ಆದರೆ ಭಾರತದ ಅಧಿಕಾರಿಗಳು ಇದನ್ನು ಹಿಮ್ಮೆಟ್ಟಿಸಿದ್ದು ಪೇಜ್‌ಗಳನ್ನು ಮತ್ತೆ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.
‘ಪಾಕಿಸ್ತಾನ ಸೈಬರ್ ಫೋರ್ಸ್’ ಎಂಬ ಎಕ್ಸ್ ಖಾತೆಯಲ್ಲಿ, ‘ಪಾಕ್ ಹ್ಯಾಕರ್‌ಗಳು ಮಿಲಿಟರಿ ಎಂಜಿನಿಯರ್ ಸೇವೆ ಮತ್ತು ಮನೋಹರ್ ಪರ್ರಿಕರ್ ರಕ್ಷಣಾ ಅಧ್ಯಯನ ಮತ್ತು ವಿಶ್ಲೇಷಣಾ ಸಂಸ್ಥೆಯ ಸೂಕ್ಷ್ಮ ಮಾಹಿತಿಯನ್ನು ಪಡೆದಿದ್ದಾರೆ. ಅಂತೆಯೇ, ರಕ್ಷಣಾ ಸಚಿವಾಲಯದ ಶಸ್ತ್ರಸಜ್ಜಿತ ವಾಹನ ನಿಗಮ ಲಿ.ಯ ವೆಬ್‌ಪೇಜ್ ನಿಯಂತ್ರಣವನ್ನು ಪಡೆಯಲಾಗಿದೆ. ನಿಮ್ಮ ಭದ್ರತೆ ಕೇವಲ ಭ್ರಮೆ. ಪರ್ರಿಕರ್ ಸಂಸ್ಥೆಯ 1,600 ಬಳೆಕದಾರರ 10 ಜಿಬಿ ಡೇಟಾ ನಮ್ಮ ಕೈಸೇರಿದೆ’ ಎಂದು ಪೋಸ್ಟ್ ಮಾಡಲಾಗಿದೆ. ಇದರೊಂದಿಗೆ, ವೆಬ್‌ಪೇಜ್‌ನಲ್ಲಿದ್ದ ಭಾರತೀಯ ಯುದ್ಧ ಟ್ಯಾಂಕ್‌ಗಳ ಜಾಗದಲ್ಲಿ ಪಾಕಿಸ್ತಾನದ ಟ್ಯಾಂಕ್‌ಗಳು ಇರುವ ಮತ್ತು ಭಾರತೀಯ ರಕ್ಷಣಾ ಸಿಬ್ಬಂದಿಯ ಮಾಹಿತಿಯಿರುವ ಪಟ್ಟಿಯ ಫೋಟೋಗಳನ್ನೂ ಹಂಚಿಕೊಳ್ಳಲಾಗಿದೆ. ಶಸ್ತ್ರಸಜ್ಜಿತ ವಾಹನ ನಿಗಮದ ವೆಬ್‌ಸೈಟ್‌ನಲ್ಲಿ ಪಾಕಿಸ್ತಾನದ ಧ್ವಜವನ್ನು ಪ್ರದರ್ಶಿಸಲಾಗಿದೆ.
ಭಾರತದ ಕ್ರಮವೇನು?
ಮುಂಜಾಗೃತಾ ಕ್ರಮವಾಗಿ ಶಸ್ತ್ರಸಜ್ಜಿತ ವಾಹನ ನಿಗಮ ವೆಬ್‌ಸೈಟ್‌ಅನ್ನು ಆಫ್‌ಲೈನ್ ಮೋಡ್‌ಗೆ ತರಲಾಗಿದ್ದು, ಆಗಿರಬಹುದಾದ ಹಾನಿಯನ್ನು ಪರಿಶೀಲಿಸಲಾಗುತ್ತಿದೆ. ಅತ್ತ, ‘ಸಂಭವನೀಯ ಸೈಬರ್ ದಾಳಿಗಳನ್ನು ಗುರುತಿಸಿ ತಡೆಹಿಡಿಯಲು ಸೈಬರ್ ಭದ್ರತಾ ತಜ್ಞರು ಮತ್ತು ಸಂಸ್ಥೆಗಳು ಇಂತಹ ದಾಳಿಗಳ ಮೇಲೆ ಕಣ್ಣಿಟ್ಟಿವೆ’ ಎಂದು ಭಾರತೀಯ ಸೇನೆ ತಿಳಿಸಿದೆ. ಈ ಮೊದಲೊಮ್ಮೆ ಪಾಕ್‌ನ ಸೈಬರ್ ದಾಳಿಕೋರರು ಜಮ್ಮುವಿನ ಸೈನಿಕ ಶಾಲೆಯ ವೆಬ್‌ಸೈಟ್ ಹ್ಯಾಕಿ ಮಾಡಿ, ಪಹಲ್ಗಾಂ ದಾಳಿಯಲ್ಲಿ ಮಡಿದವರ ಅಪಹಾಸ್ಯವನ್ನು ಮಾಡಿತ್ತು.
ವಿಶ್ವಸಂಸ್ಥೆಯಲ್ಲಿ ಪಾಕ್‌ನ 'ಉಗ್ರ' ಮುಖ ತೆರೆದಿಡಲು ಭಾರತ ಯತ್ನ
ನೀರು, ವ್ಯಾಪಾರ ಸ್ಥಗಿತಗೊಳಿಸಿದ್ದಾಯ್ತು, ವಾಯು ಮಾರ್ಗ ಬಂದ್ ಮಾಡಿದ್ದಾಯ್ತು, ಇದೀಗ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ಬಣ್ಣವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಟ್ಟಿ ಧ್ವನಿಯಲ್ಲಿ ಬಯಲು ಮಾಡಲು ಭಾರತ ಮುಂದಾಗಿದೆ.
ಇದನ್ನೂ ಓದಿ: India Vs Pakistan ದೇಶದ ಮೇಲೆ ಯುದ್ಧದ ಕಾರ್ಮೋಡ, ಮಾಕ್ ಡ್ರಿಲ್ಸ್ ನಡೆಸಲು ರಾಜ್ಯಗಳಿಗೆ ಕೇಂದ್ರ ಸೂಚನೆ!
ಪಹಲ್ಗಾಂ ದಾಳಿ ಬಳಿಕ ಪಾಕಿಸ್ತಾನಕ್ಕೆ ರಾಜತಾಂತ್ರಿಕ ಮಾರ್ಗದಲ್ಲಿ ಏಟು ನೀಡುತ್ತಿರುವ ಭಾರತ ಈಗ ವಿಶ್ವಸಂಸ್ಥೆಯ ಭದ್ರತಾ ಮಂಡಳಿ(ಯುಎನ್‌ಎಸ್‌ಸಿ)ಯಲ್ಲಿ ಗಡಿಯಾಚೆಗಿನ ಭಯೋತ್ಪಾದನೆ ಕುರಿತು ಚರ್ಚೆಯ ಪ್ರಸ್ತಾಪ ಇಟ್ಟಿದೆ. ಪಾಕಿಸ್ತಾನವನ್ನು ಕೇಂದ್ರೀಕರಿಸಿ ಭಾರತ ಇಂಥದ್ದೊಂದು ಪ್ರಸ್ತಾಪವನ್ನು ಯುಎನ್‌ಎಸ್‌ಸಿ ಮುಂದಿಟ್ಟಿದೆ.
ಚೀನಾ ಮತ್ತು ಪಾಕಿಸ್ತಾನವನ್ನು ಹೊರತುಪಡಿಸಿ ಯುಎನ್‌ಎಸ್‌ಸಿಯ 15 ಸದಸ್ಯ ದೇಶಗಳಲ್ಲಿ (5 ಶಾಶ್ವತ ಹಾಗೂ 10 ತಾತ್ಕಾಲಿಕ ಸದಸ್ಯ ದೇಶಗಳು) 13 ದೇಶಗಳ ಬೆಂಬಲವನ್ನು ಭಾರತ ಗಳಿಸಿದೆ. ಒಂದು ವೇಳೆ ಯುಎನ್‌ಎಸ್‌ಸಿಯಲ್ಲಿ ಈ ಚರ್ಚೆ ನಡೆದರೆ, ಪಹಲ್ಗಾಂನಂಥ ಗಡಿಯಾಚೆಗಿನ ಭಯೋತ್ಪಾದನಾ ದಾಳಿ ಹೇಗೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಡೆಯುತ್ತಿದೆ ಎಂಬುದನ್ನು ಭಾರತ ಬಯಲು ಮಾಡಲು ವೇದಿಕೆ ಸಿಗಲಿದೆ.
ಪಾಕ್ ಬೆಂಬಲಿತ ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಗಳ ವಿರುದ್ಧ ಭಾರತವು ಮೊದಲಿನಿಂದಲೂ ಅಂತಾರಾಷ್ಟ್ರೀಯಮಟ್ಟದಲ್ಲಿ ಧ್ವನಿ ಎತ್ತುತ್ತಲೇ ಬಂದಿದೆ. ಇಂಥ ದಾಳಿಗಳನ್ನು ಅಂತಾರಾಷ್ಟ್ರೀಯ ಭಯೋತ್ಪಾದನಾ ಬೆದರಿಕೆಯನ್ನಾಗಿ ಪರಿಗಣಿಸಬೇಕೆಂದು ಭಾರತ ಒತ್ತಾಯಿಸಲಿದೆ.
ಇದನ್ನೂ ಓದಿ: ದೇಶ ವಿರೋಧಿ ಸಾಮಾಜಿಕ ಮಾಧ್ಯಮ, ಇನ್‌ಫ್ಲುಯೆನ್ಸರ್ ನಿಷೇಧಕ್ಕೆ ಸಂಸದೀಯ ಸಮಿತಿ ಆಗ್ರಹ


