* ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ವೇಳೆ ಆರೋಪ* ರಷ್ಯಾ ಭೇಟಿ ನೀಡದಂತೆ ಸಲಹೆ ನೀಡಿದ್ದ ಅಮೆರಿಕ* ಧಿಕ್ಕರಿಸಿ ರಷ್ಯಾಗೆ ಭೇಟಿ ನೀಡಿದ್ದ ಇಮ್ರಾನ್ ಖಾನ್*- ಇದರಿಂದ ಸರ್ಕಾರ ಉರುಳಿಸಲು ಸಂಚು: ಖುರೇಶಿ
ಇಸ್ಲಾಮಾಬಾದ್:ಪಾಕಿಸ್ತಾನದಲ್ಲಿ ಆಡಳಿತಾರೂಢ ಸರ್ಕಾರದ ವಿರುದ್ಧ ವಿಪಕ್ಷಗಳು ಅವಿಶ್ವಾಸ ನಿರ್ಣಯ ಘೋಷಿಸುವಲ್ಲಿ ವಿದೇಶಿ ಸಂಚಿದೆ ಎಂಬ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಪವನ್ನು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮ್ಮದ್ ಖುರೇಶಿ ಸಮರ್ಥಿಸಿಕೊಂಡಿದ್ದಾರೆ.
ಶನಿವಾರ ನ್ಯಾಷನಲ್ ಅಸೆಂಬ್ಲಿಯಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಅವರು, ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರರು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರರಿಗೆ ಕರೆ ಮಾಡಿ ಇಮ್ರಾನ್ ಖಾನ್ ರಷ್ಯಾಗೆ ತೆರಳದಂತೆ ಸೂಚಿಸಿದ್ದರು. ಆದಾಗ್ಯೂ ಪಾಕಿಸ್ತಾನ ಸಾರ್ವಭೌಮ ದೇಶವಾದ್ದರಿಂದ ಅಮೆರಿಕದ ಸಲಹೆಯನ್ನು ಧಿಕ್ಕರಿಸಿ ಉಕ್ರೇನ್ -ರಷ್ಯಾ ಯುದ್ಧ ಆರಂಭದ ಮುನ್ನಾ ದಿನ ಇಮ್ರಾನ್ ಖಾನ್ ರಷ್ಯಾಗೆ ಭೇಟಿ ನೀಡಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಇದೇ ಕಾರಣದಿಂದ ಇಮ್ರಾನ್ ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ಅಮೆರಿಕ ಸಂಚು ರೂಪಿಸಿದೆ ಎಂದು ಹೇಳಿದರು.
ಸಂಚು ರೂಪಿಸಿಲ್ಲ: ಅಮೆರಿಕ
ಇಮ್ರಾನ್‌ಪದಚ್ಯುತಗೊಳಿಸಲು ಅಮೆರಿಕ ಸಂಚು ರೂಪಿಸಿದೆ ಎಂಬ ಆರೋಪವನ್ನು ಅಮೆರಿಕ ಸಾರಾಸಗಟಾಗಿ ಅಲ್ಲಗಳೆದಿದೆ. ‘ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ವಿಪಕ್ಷಗಳನ್ನು ಎತ್ತಿಕಟ್ಟಿಸರ್ಕಾರವನ್ನು ಉರುಳಿಸಲು ಅಮೆರಿಕ ವಿದೇಶಿ ಸಂಚು ರೂಪಿಸಿದೆ ಎಂಬುದು ಶುದ್ಧ ಸುಳ್ಳು. ಪಾಕಿಸ್ತಾನದ ಬೆಳವಣಿಗೆಯನ್ನು ಗಮನಿಸುತ್ತಿದ್ದೇವೆ. ನಾವು ಪಾಕಿಸ್ತಾನದ ಸಾಂವಿಧಾನಿಕ ಪ್ರಕ್ರಿಯೆ ಮತ್ತು ಕಾನೂನಿನ ನಿಯಮವನ್ನು ಗೌರವಿಸುತ್ತೇವೆ ಮತ್ತು ಬೆಂಬಲಿಸುತ್ತೇವೆ. ಆದರೆ ನಮ್ಮ ಮೇಲಿನ ವಿದೇಶಿ ಸಂಚಿನ ಆರೋಪ ನಿಜವಲ್ಲ’ ಎಂದು ಅಮೆರಿಕದ ವಕ್ತಾರರು ತಿಳಿಸಿದ್ದಾರೆ.
