ಖೈಬರ್ ಪಖ್ತುನ್ಖ್ವಾದಲ್ಲಿ ತಾಲಿಬಾನ್ ಪರ ಮಸೀದಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ಐವರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ರಂಜಾನ್ ಹಬ್ಬದ ಮುನ್ನ ನಡೆದ ಈ ದಾಳಿಯ ಹೊಣೆಯನ್ನು ಇದುವರೆಗೆ ಯಾರೂ ಹೊತ್ತಿಲ್ಲ.

ಪವಿತ್ರ ರಂಜಾನ್ ಮಾಸಕ್ಕೂ ಮುನ್ನ ಶುಕ್ರವಾರ (ಫೆಬ್ರವರಿ 28, 2025) ವಾಯುವ್ಯ ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ತಾಲಿಬಾನ್ ಪರ ಮಸೀದಿ ಸ್ಫೋಟಗೊಂಡಿದೆ. ಜಾಮಿಯಾ ಹಕ್ಕಾನಿಯಾ ಮದರಸಾದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಐದು ಜನರು ಸಾವನ್ನಪ್ಪಿ, ಹಲವಾರು ಜನರು ಗಾಯಗೊಂಡಿದ್ದಾರೆ. 

ಅಂಗ್ಲ ಮಾಧ್ಯಮವೊಂದರ ವರದಿ ಪ್ರಕಾರ, ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಅಕ್ಕೋರಾ ಖಟ್ಟಕ್ ಜಿಲ್ಲೆಯ ಮದರಸಾದ ಮುಖ್ಯ ಸಭಾಂಗಣದಲ್ಲಿ ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಸ್ಫೋಟ ಸಂಭವಿಸಿದೆ. ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಅಬ್ದುಲ್ ರಶೀದ್ ತಿಳಿಸಿದ್ದಾರೆ. ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ರಂಜಾನ್ ಹಬ್ಬಕ್ಕೂ ಮುನ್ನ ನಡೆಸಿರುವ ಈ ಭೀಕರ ದಾಳಿಯ ಹೊಣೆಯನ್ನು ಇದುವರೆಗೆ ಯಾವುದೇ ಸಂಘಟನೆ ಹೊತ್ತಿಲ್ಲ. ಇದೊಂದು ಆತ್ಮಹತ್ಯಾ ಸ್ಫೋಟ ಎಂದಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನ್ ಈಗ ‘ಭಿಕಾರಿ’ಸ್ತಾನ್.. ‘ದಿವಾಳಿ’ಸ್ತಾನ್..! ಅದೊಂದು ನಿಯಮದಿಂದ ದಿವಾಳಿ ಅಂಚಿಗೆ ಬಂದ ದೇಶ!

ತುರ್ತು ಪರಿಸ್ಥಿತಿ ಘೋಷಣೆ: 

ಡಾನ್ ವರದಿಯ ಪ್ರಕಾರ, ಬಾಂಬ್ ಸ್ಫೋಟ ನಡೆದ ಪ್ರದೇಶದಲ್ಲಿ ಅಧಿಕಾರಿಗಳು ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ ಎಂದು ಹೇಳಿದೆ. ಸ್ಫೋಟ ನಡೆದ ಜಾಮಿಯಾ ಹಕ್ಕಾನಿಯಾ ಮದರಸಾ ಆವರಣದಲ್ಲಿ ಸುಮಾರು 4,000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅವರಿಗೆ ಉಚಿತ ಆಹಾರ ಮತ್ತು ಶಿಕ್ಷಣ ನೀಡಲಾಗುತ್ತಿದೆ.

ಪಾಕಿಸ್ತಾನ ಸರ್ಕಾರದಿಂದ ತೀವ್ರ ಖಂಡನೆ:

ರಂಜಾನ್ ಮಾಸದಲ್ಲಿ ಈ ಕೃತ್ಯ ನಡೆದಿರುವುದುಕ್ಕೆ ಪಾಕಿಸ್ತಾನ ಸರ್ಕಾರ ತೀವ್ರವಾಗಿ ಖಂಡಿಸಿದೆ. ಈ ಬಗ್ಗೆ ಪಾಕಿಸ್ತಾನ ಸರ್ಕಾರದ ಆಂತರಿಕ ಸಚಿವ, ಮೊಹ್ಸಿನ್ ನಖ್ವಿ ಅವರು x ನಲ್ಲಿ ಪೋಸ್ಟ್ ಮಾಡಿದ್ದು, 'ಪಾಕಿಸ್ತಾನದಲ್ಲಿ ಅಸ್ಥಿರತೆಯನ್ನು ಸೃಷ್ಟಿಸಲು ಶತ್ರು ದೇಶವು ಪಿತೂರಿ ನಡೆಸುತ್ತಿದೆ. ನಾವು ಶತ್ರುಗಳ ಪ್ರತಿಯೊಂದು ಪಿತೂರಿಯನ್ನು ವಿಫಲಗೊಳಿಸುತ್ತೇವೆ. ಮೃತರ ಕುಟುಂಬಗಳೊಂದಿಗೆ ನಾವು ನಿಲ್ಲುತ್ತೇವೆ' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಭಾರತದಂತೆ ಕರೆನ್ಸಿಯಾಗಿ ರೂಪಾಯಿ ಬಳಸುವ ದೇಶಗಳು!

ಇದೊಂದು ಹೇಡಿತನದ ಕೃತ್ಯ: ಪಾಕ್ ಪ್ರಧಾನಿ

ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ನಡೆದ ಬಾಂಬ್ ಸ್ಫೋಟದ ಬಗ್ಗೆ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೇ, ಇದೊಂದು ಹೇಡಿತನದ ಕೃತ್ಯವಾಗಿದೆ. ಇಂಥ ಕೃತ್ಯಗಳಿಂದ ಭಯೋತ್ಪಾದನೆಯ ವಿರುದ್ಧದ ನಮ್ಮ ಸಂಕಲ್ಪವನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.