ಭಾರತದೊಳಗೆ ಉಗ್ರರ ನುಸುಳಿಸಲು ತನ್ನದೇ ಪೋಸ್ಟ್‌ಗೆ ಬೆಂಕಿ ಹಚ್ಚಿ ನಾಟಕವಾಡಿದ ಪಾಕ್!
ಜಮ್ಮು ಮತ್ತು ಕಾಶ್ಮೀರದೊಳಗೆ ಹಾಗೂ ಗಡಿಯಲ್ಲಿ ಉಗ್ರರ ದಾಳಿಗಳು ಹೆಚ್ಚಾಗುತ್ತಿದೆ. ಪೂಂಚ್ ಬಳಿ ನಡೆದ ಭೀಕರ ದಾಳಿಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಪಾಕಿಸ್ತಾನ ಸೇನೆ ಭಾರಿ ಕುತಂತ್ರ ನಡೆಸಿರುವುದು ಬಹಿರಂಗವಾಗಿದೆ. ತನ್ನದೇ ಪೋಸ್ಟ್ ಹಾಗೂ ಭಾರತದ ಗಡಿಗೆ ತಾಗಿಕೊಂಡಿರುವ ಕಾಡಿಗೆ ಬೆಂಕಿ ಹಚ್ಚಿದೆ. ಗಮನ ಬೇರೆಡೆ ಸೆಳೆದು ಉಗ್ರರನ್ನು ಭಾರತದೊಳಗೆ ಕಳುಹಿಸುವ ಪಾಕಿಸ್ತಾನ ಪ್ಲಾನ್‌ನ್ನು ಭಾರತ ಬಹಿರಂಗಗೊಳಿಸಿದೆ.
ಶ್ರೀನಗರ(ಡಿ.23) ಜಮ್ಮು ಮತ್ತು ಕಾಶ್ಮೀರದದ ಆರ್ಟಿಕಲ್ 370 ರದ್ದು ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದ ಬೆನ್ನಲ್ಲೇ ಪಾಕಿಸ್ತಾನ ಕೆರಳಿದೆ. ಪಾಕಿಸ್ತಾನ ಪೋಷಿತ ಉಗ್ರರು, ಸಂಘಟನೆಗಳು ಈ ನಿರ್ಧಾರದಿಂದ ಬಡವಾಗಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಕಾಶ್ಮೀರದ ಮೇಲೆ ಮತ್ತೆ ಮತ್ತೆ ದಾಳಿ ಯತ್ನಗಳು ನಡೆಯುತ್ತಿದೆ. ಪೂಂಚ್‌ನಲ್ಲಿ ಇತ್ತೀಚೆಗೆ ನಡೆದ ಭೀಕರ ದಾಳಿಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಇದರ ಬೆನ್ನಲ್ಲೇ ಅಂಖೂರ್ ಸೆಕ್ಟರ್‌ನಲ್ಲಿ ಭಾರತದೊಳಗೆ ನುಸುಳಲು ಯತ್ನಿಸಿದ ಉಗ್ರರ ಪ್ರಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಉಗ್ರರಿಗೆ ಪಾಕಿಸ್ತಾನ ಸೇನೆ ಭರ್ಜರಿ ನೆರವು ನೀಡಿತ್ತು. ತನ್ನದೇ ಪೋಸ್ಟ್ ಹಾಗೂ ಗಡಿ ಪ್ರದೇಶದ ಕಾಡಿಗೆ ಬೆಂಕಿ ಹಚ್ಚಿ ಭಾರತೀಯ ಸೇನೆಯ ಗಮನ ಬೇರೆಡೆ ಸೆಳೆಯಲು ಯತ್ನಿಸಿತ್ತು. ಆದರೆ ಪಾಕ್ ಸೇನೆ ಯೋಜನೆ ವಿಫಲಗೊಂಡಿದೆ.
ಅಂಖೂರ್ ಬಳಿಯ ಇರುವ ಪಾಕಿಸ್ತಾನ ಬಂಕರ್ ಹಾಗೂ ಪೋಸ್ಟ್‌ಗಳಿಗೆ ಬೆಂಕಿ ಹಚ್ಚಿದ ಪಾಕಿಸ್ತಾನ ಸೇನೆ,ಗಡಿಗೆ ತಾಗಿಕೊಂಡಿರುವ ಕಾಡಿಗೂ ಬೆಂಕಿ ಹಚ್ಚಿದೆ. ಈ ಮೂಲಕ ಭಾರತೀಯ ಸೇನೆ ಗಮನವನ್ನು ಬೆಂಕಿಯತ್ತ ಇರುವಂತೆ ನೋಡಿಕೊಳ್ಳುವ ಉದ್ದೇಶ ಪಾಕಿಸ್ತಾನ ಸೇನೆಯದ್ದಾಗಿತ್ತು. ಇದೇ ವೇಳೆ ಅಂಖೂರ್ ಗಡಿ ಬಳಿಯಿಂದ ನಾಲ್ವರು ಉಗ್ರರನ್ನು ಭಾರತದೊಳಗೆ ನುಸುಳಿಸುವ ಪ್ರಯತ್ನ ಮಾಡಿತ್ತು.
ಪೂಂಚ್ ಸೆಕ್ಟರ್‌ನಲ್ಲಿ ಭೀಕರ ಭಯೋತ್ಪಾದಕ ದಾಳಿ, ಭಾರತೀಯ ಸೇನಾ ಮೇಲೆ ಗುಂಡಿನ ಸುರಿಮಳೆ!
ಭಾರತೀಯ ಸೇನೆಯ 16 ಕಾರ್ಪ್ಸ್( ವೈಟ್ ನೈಟ್ ಕಾರ್ಪ್ಸ್) ಗಡಿಯಲ್ಲಿ ಹದ್ದಿನ ಕಣ್ಣಿಟ್ಟಿತು. ಒಂದು ಕಡೆ ಬೆಂಕಿಯ ಕೆನ್ನಾಲಗೆ ತೀವ್ರವಾಗಿ ಹರಡುತ್ತಿದ್ದರೆ, ಮತ್ತೊಂದೆಡೆ ನಾಲ್ವರು ಉಗ್ರರು ಭಾರತದ ಗಡಿಯೊಳಕ್ಕೆ ನುಗ್ಗುವ ಪ್ರಯತ್ನ ಮಾಡುತ್ತಿರುವುದು ಟ್ರಾಕ್ ಡಿಟೆಕ್ಷನ್‌ನಲ್ಲಿ ಪತ್ತೆಯಾಗಿದೆ. ಇಬ್ಬರು ಟಾರ್ಗೆಟ್ ಏರಿಯಾದೊಳಗೆ ಬರುತ್ತಿದ್ದಂತೆ ಭಾರತೀಯ ಸೇನೆ ಹೊಡೆದುರಳಿಸಿದೆ. ಇದರ ಬೆನ್ನಲ್ಲೇ ಹಿಂಭಾಗದಲ್ಲಿದ್ದ ಇಬ್ಬರು ಉಗ್ರರು ಭಾರತದ ಗಡಿಯೊಳಕ್ಕೆ ನುಗ್ಗುವ ಪ್ರಯತ್ನ ಕೈಬಿಟ್ಟು ಮರಳಿ ಓಡಿದ್ದಾರೆ.
ಪೂಂಚ್ ದಾಳಿ:
ಭಯೋತ್ಪಾದಕರ ಶೋಧ ಕಾರ್ಯಾಚರಣೆಗೆ ತೆರಳಿದ್ದ ಸೇನಾ ವಾಹನದ ಮೇಲೆ ಉಗ್ರರು ನಡೆಸಿದ ಭೀಕರ ಗುಂಡಿನ ದಾಳಿಯಲ್ಲಿ ನಾಲ್ವರು ಯೋಧರು ಸಾವನ್ನಪ್ಪಿ, ಇತರೆ ನಾಲ್ವರು ಗಾಯಗೊಂಡ ಘಟನೆ ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.ಕಡಿದಾದ ತಿರುವಿನ ಪ್ರದೇಶದಲ್ಲಿ ಯೋಧರು ಮತ್ತು ಉಗ್ರರ ನಡುವೆ ಭೀಕರ ಸೆಣಸಾಟ ನಡೆದಿದ್ದಕ್ಕೆ ಸಾಕ್ಷ್ಯವೆಂಬಂತೆ ಘಟನಾ ಸ್ಥಳದಲ್ಲಿ ರಕ್ತದ ಕಲೆಗಳು, ಒಡೆದು ಹೋದ ಹೆಲ್ಮೆಟ್‌ಗಳು, ಸೇನಾ ವಾಹನದ ಗಾಜು ಒಡೆದು ಹೋಗಿರುವುದು ಕಂಡುಬಂದಿದೆ. ಜೊತೆಗೆ ಈ ದೃಶ್ಯಗಳು ಉಗ್ರರು ಮತ್ತು ಯೋಧರು ಪರಸ್ಪರ ಕೈ ಕೈ ಮಿಲಾಯಿಸಿರುವ ಸಾಧ್ಯತೆಯನ್ನೂ ಮುಂದಿಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಶ್ಮೀರಿ ಉಗ್ರರ ಜೊತೆ ಸೇರಿ ಪನ್ನು ಹೊಸ ಉಗ್ರ ಸಂಘಟನೆ! ಕಾಶ್ಮೀರ್ - ಖಲಿಸ್ತಾನ್ ರೆಫರೆಂಡಮ್ ಫ್ರಂಟ್ ಘೋಷಣೆ