ಕಾಶ್ಮೀರಿ ಉಗ್ರರ ಜೊತೆ ಸೇರಿ ಪನ್ನು ಹೊಸ ಉಗ್ರ ಸಂಘಟನೆ! ಕಾಶ್ಮೀರ್ - ಖಲಿಸ್ತಾನ್ ರೆಫರೆಂಡಮ್ ಫ್ರಂಟ್ ಘೋಷಣೆ
ಹೊಸ ವಿಡಿಯೋದಲ್ಲಿ ಪನ್ನು ಗುರುವಾರ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರು ಐವರು ಸೈನಿಕರನ್ನು ಹತ್ಯೆಗೈದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾನೆ. ಇದು ಕಾಶ್ಮೀರಿಗಳ ವಿರುದ್ಧ ಭಾರತ ನಡೆಸುತ್ತಿರುವ ಹಿಂಸಾಚಾರಕ್ಕೆ ಪ್ರತೀಕಾರ ಎಂದು ಹೇಳಿದ್ದಾನೆ.
ನವದೆಹಲಿ (ಡಿಸೆಂಬರ್ 23, 2023): ಭಾರತ ಹಾಗೂ ಕೆನಡಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣನಾಗಿರುವ ಖಲಿಸ್ತಾನಿ ಉಗ್ರ ಗುರ್‌ಪತ್ವಂತ್ ಸಿಂಗ್ ಪನ್ನು ಇದೀಗ ಕಾಶ್ಮೀರದ ಉಗ್ರರ ಜೊತೆ ಸೇರಿ ಹೊಸ ಭಯೋತ್ಪಾದಕ ಸಂಘಟನೆಯೊಂದನ್ನು ಹುಟ್ಟುಹಾಕಿರುವುದಾಗಿ ಹೇಳಿಕೊಂಡಿದ್ದಾನೆ. ಅದರ ಹೆಸರು ‘ಕಾಶ್ಮೀರ್-ಖಲಿಸ್ತಾನ್ ರೆಫರೆಂಡಮ್ ಫ್ರಂಟ್’ (ಕಾಶ್ಮೀರ-ಖಲಿಸ್ತಾನ ಜನಮತಗಣನೆ ವೇದಿಕೆ) ಎಂದೂ ಅವನೇ ತಿಳಿಸಿದ್ದಾನೆ.
ಈ ಕುರಿತು ಸಿಖ್ ಫಾರ್ ಜಸ್ಟೀಸ್ ಸಂಘಟನೆಯ ಮುಖ್ಯಸ್ಥನೂ ಆಗಿರುವ ಪನ್ನು ವಿಡಿಯೋ ಬಿಡುಗಡೆ ಮಾಡಿದ್ದು, ಅದು ತಮಗೆ ಲಭಿಸಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.
ಅಮೆರಿಕದಲ್ಲಿ ಹಿಂದೂ ದೇವಾಲಯ ವಿರೂಪ: ಖಲಿಸ್ತಾನಿ ಪರ ಘೋಷಣೆಗಳ ಬರೆದ ಕಿಡಿಗೇಡಿಗಳು
ಮೋದಿ, ಜೈಶಂಕರ್, ದೋವಲ್‌ಗೆ ಬೆದರಿಕೆ:
ಹೊಸ ವಿಡಿಯೋದಲ್ಲಿ ಪನ್ನು ಗುರುವಾರ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರು ಐವರು ಸೈನಿಕರನ್ನು ಹತ್ಯೆಗೈದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾನೆ. ‘ಇದು ಕಾಶ್ಮೀರಿಗಳ ವಿರುದ್ಧ ಭಾರತ ನಡೆಸುತ್ತಿರುವ ಹಿಂಸಾಚಾರಕ್ಕೆ ಪ್ರತೀಕಾರ’ ಎಂದು ಹೇಳಿದ್ದಾನೆ. ಅಲ್ಲದೆ, ‘ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಜೈಶಂಕರ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್‌ಗೆ 24/7 ಭದ್ರತೆ ಇರುತ್ತಾ? ಅವರೊಂದು ದುಷ್ಟಕೂಟ. ಪರಿಣಾಮ ಎದುರಿಸಲು ಅವರು ಸಿದ್ಧರಾಗಲಿ’ ಎಂದು ಬಹಿರಂಗ ಬೆದರಿಕೆಯನ್ನೂ ಹಾಕಿದ್ದಾನೆ.
ಕೆನಡಾದಲ್ಲಿ ಹರದೀಪ್ ಸಿಂಗ್ ನಿಜ್ಜರ್‌ನನ್ನು ಹತ್ಯೆಗೈಯುವ ಮೂಲಕ ಭಾರತವೇ ಮೊದಲ ಗುಂಡು ಹಾರಿಸಿದೆ. ನಿಜ್ಜರ್ ಹತ್ಯೆಗೆ 180 ದಿನಗಳು ತುಂಬಿವೆ. ವ್ಯಾಂಕೋವರ್‌ನಲ್ಲಿ ಖಲಿಸ್ತಾನಿಗಳು ಅದಕ್ಕೆ ತಮ್ಮ ಪ್ರತಿಕ್ರಿಯೆಯೇನು ಎಂಬುದನ್ನು ತೋರಿಸಿದ್ದಾರೆ ಎಂದೂ ಅವನು ಹೇಳಿದ್ದಾನೆ.
ಕಾಶ್ಮೀರದಲ್ಲಿ ಜನಮತಗಣನೆ ನಡೆಯಲಿ:
‘ಭಾರತ ಆಕ್ರಮಿತ ಕಾಶ್ಮೀರವು ವಿವಾದಿತ ಸ್ಥಳವೆಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಅಲ್ಲಿ ಭಾರತೀಯ ಸೇನೆ ದಶಕಗಳಿಂದ ನರಮೇಧ ನಡೆಸುತ್ತಿದೆ. ಜನಮತಗಣನೆ ನಡೆದರೆ ಮಾತ್ರ ಈ ವಿವಾದ ಬಗೆಹರಿಯುತ್ತದೆ. ಕಾಶ್ಮೀರಿಗಳ ಬಯಕೆ ಏನಿದೆ ಎಂಬುದನ್ನು ತಿಳಿಯಲು ಅಲ್ಲಿನ ಸ್ವಾತಂತ್ರ್ಯ ಹೋರಾಟಗಾರರು ಜನಮತಗಣನೆ ನಡೆಸಬೇಕು. ಪಂಜಾಬ್‌ನಲ್ಲಿ ಖಲಿಸ್ತಾನ್ ಪ್ರತ್ಯೇಕ ದೇಶಕ್ಕಾಗಿ ನಾವು ಹೇಗೆ ಜನಮತಗಣನೆ ನಡೆಸುತ್ತಿದ್ದೇವೋ ಹಾಗೆಯೇ ಕಾಶ್ಮೀರದಲ್ಲೂ ಜನಮತಗಣನೆ ನಡೆಸಬೇಕು’ ಎಂದು ಪನ್ನು ಹೇಳಿದ್ದಾನೆ.
ಪನ್ನುನ್ ಕೊಲೆ ಯತ್ನ, ಅಮೆರಿಕ ಆರೋಪದ ಬಗ್ಗೆ ಮೊದಲ ಬಾರಿ ಮಾತನಾಡಿದ ಪ್ರಧಾನಿ ಮೋದಿ!
ಪನ್ನುಗೆ ಪಾಕ್ ನಂಟು - ಗುಪ್ತದಳ:
‘ಕಾಶ್ಮೀರಿ ಭಯೋತ್ಪಾದಕರ ಜೊತೆ ಸೇರಿ ಉಗ್ರ ಸಂಘಟನೆಯನ್ನು ಘೋಷಿಸಿರುವ ಪನ್ನುಗೆ ಪಾಕಿಸ್ತಾನದ ನಂಟಿರುವುದು ಈಗ ಸಾಬೀತಾಗಿದೆ. ಈವರೆಗೆ ಆತ ಪಾಕಿಸ್ತಾನದ ಐಎಸ್‌ಐ ಜೊತೆ ಮಾತ್ರ ನಂಟು ಹೊಂದಿರುವ ಶಂಕೆಯಿತ್ತು. ಈಗ ಅಲ್ಲಿನ ಭಯೋತ್ಪಾದಕರ ಜೊತೆಗೂ ನಂಟು ಹೊಂದಿರುವುದು ಆತನ ವಿಡಿಯೋದಿಂದಲೇ ಖಚಿತಗೊಂಡಿದೆ’ ಎಂದು ಭಾರತೀಯ ಗುಪ್ತಚರ ಮೂಲಗಳು ಹೇಳಿರುವುದಾಗಿ ಮಾಧ್ಯಮ ವರದಿಗಳು ಹೇಳಿವೆ.
ಈ ಹಿಂದೆ ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ ಪನ್ನು 2001ರ ಸಂಸತ್ ಭವನದ ಮೇಲಿನ ದಾಳಿಕೋರ ಅಫ್ಜಲ್ ಗುರುವಿನ ಚಿತ್ರ ತೋರಿಸಿ ‘ದಿಲ್ಲಿ ಖಲಿಸ್ತಾನ್ ಆಗಲಿದೆ’ ಎಂದು ಹೇಳಿದ್ದ. ಅಲ್ಲದೆ, ಡಿಸೆಂಬರ್ 13ಕ್ಕೆ ಪಾರ್ಲಿಮೆಂಟ್ ಮೇಲೆ ಮತ್ತೆ ದಾಳಿ ನಡೆಸಿ ತನ್ನ ಹತ್ಯೆಯ ಸಂಚಿಗೆ ಉತ್ತರ ನೀಡುವುದಾಗಿಯೂ ತಿಳಿಸಿದ್ದ. ಅದೇ ದಿನ ಕೆಲ ದುಷ್ಕರ್ಮಿಗಳು ಸಂಸತ್ ಭವನದೊಳಗೆ ನುಗ್ಗಿ ‘ಹೊಗೆ ಬಾಂಬ್’ ದಾಳಿ ನಡೆಸಿದ್ದರು.
ಗೋಮಾಂಸ ತಿನ್ನುವಂತೆ ಬಲವಂತ: ಪನ್ನು ಹತ್ಯೆ ಸಂಚು ಆರೋಪಿ ನಿಖಿಲ್ ಗುಪ್ತಾ ಅಳಲು