ವ್ಯಕ್ತಿಯೊಬ್ಬರು ತಮಗೆ ಯಾರೂ ಇಲ್ಲ ಎಂಬ ಕಾರಣಕ್ಕೆ ಜೀವಂತವಾಗಿರುವಾಗಲೇ ತಮ್ಮದೇ ತಿಥಿ ಕಾರ್ಯವನ್ನು ನೆರವೇರಿಸಿದ್ದಾರೆ. ಸಾವಿನ ನಂತರ ಮೋಕ್ಷಕ್ಕಾಗಿ ಅಗತ್ಯವಿರುವ ಈ ಕಾರ್ಯವನ್ನು ಮಾಡಲು ಮುಂದಿನ ಪೀಳಿಗೆ ಇಲ್ಲದ ಕಾರಣ, ಊರಿನ 1900 ಜನರಿಗೆ ಭೋಜನ ಏರ್ಪಡಿಸಿ ಗಮನ ಸೆಳೆದಿದ್ದಾರೆ.

ಯಾರೂ ಇಲ್ಲದ ನೋವು: ಜೀವಂತವಾಗಿರುವಾಗಲೇ ತಿಥಿ ಊಟ ಹಾಕಿಸಿದ ವ್ಯಕ್ತಿ

ಸಾವಿನ ನಂತರದ ಅಂತ್ಯಕ್ರಿಯೆಗಳು ಧಾರ್ಮಿಕ ವಿಧಿ ವಿಧಾನಗಳು ಹಾಗೂ ನಂತರದ ಬದುಕಿನ ಬಗ್ಗೆ ವಿಶೇಷವಾಗಿ ಹಿಂದೂ ಸಮಾಜದಲ್ಲಿ ಹಲವು ನಂಬಿಕೆಗಳಿವೆ. ಸಾವಿನ ನಂತರ ಅಂತ್ಯಕ್ರಿಯೆ ಹಾಗೂ 11 ಹಾಗೂ 16ನೇ ದಿನ ಮಾಡುವ ಶ್ರದ್ಧಾದ ಮಾಡಿದರಷ್ಟೇ ವ್ಯಕ್ತಿಗೆ ಮೋಕ್ಷ ಸಿಗುತ್ತದೆ. ಆತನ ಸಾವಿನ ನಂತರದ ಪಯಣ ಸುಗಮವಾಗಿರುತ್ತದೆ ಎಂಬ ಅಭಿಪ್ರಾಯ ನಮ್ಮಲ್ಲಿದೆ. ಇದನ್ನು ನಡೆಸುವುದಕ್ಕೆ ಮನುಷ್ಯನೋರ್ವನಿಗೆ ಆತನ ಮುಂದಿನ ಪೀಳಿಗೆಯ ಜನರು ಇರಲೇಬೇಕು ಹಾಗೂ ಅವರೇ ಇದನ್ನು ನೆರವೇರಿಸಬೇಕು ಎಂಬ ನಂಬಿಕೆ ಇದೆ. ಇದೇ ಕಾರಣಕ್ಕೆ ಅನೇಕರು ಗಂಡು ಸಂತಾನಕ್ಕಾಗಿ ಹಾತೊರೆಯುತ್ತಾರೆ. ಬಹುಶಃ ಇದೇ ಕಾರಣಕ್ಕೆ ಯಾರು ಇಲ್ಲದ ವ್ಯಕ್ತಿಯೊಬ್ಬರು ತಾವು ಜೀವಂತವಾಗಿರುವಾಗಲೇ ತಮ್ಮ ತಿಥಿ ಮಾಡಿ ಊರಿಗೆಲ್ಲಾ ಊಟ ಹಾಕಿಸಿದ್ದಾರೆ. ವ್ಯಕ್ತಿಯ ಸಾವಿನ ನಂತರ 11ನೇ ದಿನ ಮಾಡುವ ಶ್ರದ್ಧಾ ಹಾಗೂ ನಂತರ ಊರವರಿಗೆ ಊಟ ಹಾಕಿಸುವ ಮೂಲಕ ದೇಶದೆಲ್ಲೆಡೆ ಗಮನ ಸೆಳೆದಿದ್ದಾರೆ.

ಉತ್ತರ ಪ್ರದೇಶದ ಅವೌರಿಯಾದಲ್ಲಿ ಈ ವಿಲಕ್ಷಣ ಘಟನೆ

ಇಂತಹದೊಂದು ವಿಲಕ್ಷಣವೆನಿಸುವ ಘಟನೆ ನಡೆದಿರೋದು ಉತ್ತರ ಪ್ರದೇಶದ ಅವೌರಿಯಾದಲ್ಲಿ ಇಲ್ಲಿನ ನಿವಾಸಿಯಾಗಿರುವ 65 ವರ್ಷದ ರಾಕೇಶ್ ಯಾದವ್ ಎಂಬುವವರೇ ಹೀಗೆ ತಾವು ಜೀವಂತವಾಗಿರುವಾಗಲೇ ತಮ್ಮದೇ ತಿಥಿ ಮಾಡಿಸಿ ಇಡೀ ಊರಿಗೆ ಊಟ ಹಾಕಿಸಿದವರು. ಸಾವಿಗೂ ಮೊದಲು ಇವರು ಆಯೋಜಿಸಿದ ಈ ತಿಥಿ ಕಾರ್ಯಕ್ರಮದಲ್ಲಿ 1,900 ಜನರು ಭಾಗವಹಿಸಿದ್ದಾರೆ. ಇದಕ್ಕಾಗಿ ಅವರು ಶ್ರದ್ಧಾದ ಆಹ್ವಾನ ಪತ್ರಿಕೆಯನ್ನು ಮುದ್ರಿಸಿದ್ದಾರೆ. ನನಗೆ ಜೀವಂತವಾಗಿರುವಾಗಲೇ ನನ್ನ ತಿಥಿ ಊಟ ಹಾಕಿಸುವ ಅವಕಾಶ ಸಿಕ್ಕಿದೆ. ನನಗೆ ಯಾರೂ ಇಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಈ ಕಾರ್ಯಕ್ರಮಕ್ಕೆ ಜನರು ಸಹಜ ಎಂಬಂತೆ ಆಗಮಿಸಿದ್ದು, ಅವರ ತಿಥಿ ಕಾರ್ಯಗಳಲ್ಲಿ ಭಾಗವಹಿಸಿ ಭರ್ಜರಿ ಭೋಜನ ಸೇವಿಸಿದ್ದಾರೆ.

ರಾಕೇಶ್ ಯಾದವ್ ಅವರ ಇಂತಹ ನೋವಿನ ನಿರ್ಧಾರದ ಹಿಂದೆ ದುಃಖಕರವಾದ ಹಿನ್ನೆಲೆ ಇದೆ. ರಾಕೇಶ್ ಅವರು ಅವಿವಾಹಿತರಾಗಿದ್ದು, ಅವರಿಗೆ ಇಬ್ಬರು ಕಿರಿಯ ಸೋದರರಿದ್ದರು. ಅವರಲ್ಲೊಬ್ಬರು ಅನಾರೋಗ್ಯದಿಂದ ತೀರಿಕೊಂಡರೆ ಇನ್ನೊಬ್ಬರನ್ನು ಇತರರು ಗಲಾಟೆಯೊಂದರಲ್ಲಿ ಕೊಲೆ ಮಾಡಿದ್ದರು. ರಾಕೇಶ್ ಅವರಿಗೆ ಒಬ್ಬರು ಸೋದರಿಯೂ ಇದ್ದು ಅವರು ಕೂಡ ಅವಿವಾಹಿತರಾಗಿದ್ದಾರೆ.

ನನ್ನ ಸಾವಿನ ನಂತರ ನನಗೆ ಅಂತ್ಯಕ್ರಿಯೆ ನಡೆಸಲು ಯಾರೊಬ್ಬರೂ ಇಲ್ಲ:

ಇತ್ತ ರಾಕೇಶ್ ಅವರಲ್ಲಿ ಸಾವಿನ ನಂತರ ಅವರ ಕುಟುಂಬದವರು ಆಯೋಜಿಸಬೇಕಾದ ಈ ಕಾರ್ಯಕ್ರಮವನ್ನು ಜೀವಂತವಾಗಿರುವಾಗಲೇ ನೀವೇ ಆಯೋಜಿಸಿದ್ದು ಏಕೆ ಎಂದು ಕೇಳಿದಾಗ ದುಃಖದಿಂದಲೇ ಪ್ರತಿಕ್ರಿಯಿಸಿದ ಅವರು, ನನ್ನ ಸಾವಿನ ನಂತರ ನನಗೆ ಅಂತ್ಯಕ್ರಿಯೆ ನಡೆಸಲು ಯಾರೊಬ್ಬರೂ ಇಲ್ಲ ಹೀಗಾಗಿ ಜೀವಂತವಾಗಿರುವಾಗಲೇ ನಾನು ಇದನ್ನು ಮಾಡಿದ್ದೇನೆ ಎಂದು ಹೇಳಿದ್ದಾರೆ. ಯಾಕೆ ನೀವು ಮದುವೆಯಾಗಿಲ್ಲ ಎಂದು ಕೇಳಿದ ಪ್ರಶ್ನೆಗ ಪ್ರತಿಕ್ರಿಯಿಸಿದ ಅವರು ನನಗೆ ಭೂಮಿ ಇರಲಿಲ್ಲ, ಭೂಮಿ ಇಲ್ಲದವರಿಗೆ ಹೆಣ್ಣು ಯಾರೂ ಕೊಡುತ್ತಾರೆ ನಾನು ಹೇಗೆ ಮದುವೆಯಾಗುವುದಕ್ಕೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಬಿಗ್ಬಾಸ್ ವಿನ್ನರ್ ನಟಿಗೆ ಗೋಮಾಂಸ ತಿನ್ನುವಂತೆ ಒತ್ತಾಯಿಸಿದ ನಟ: ವೀಡಿಯೋ ವೈರಲ್ ಆಗ್ತಿದ್ದಂತೆ ತೀವ್ರ ಆಕ್ರೋಶ

ರಾಕೇಶ್ ಯಾದವ್ ಅವರ ನೆರೆಹೊರೆಯ ಮನೆಯವರ ಪ್ರಕಾರ, ರಾಕೇಶ್ ಯಾದವ್ ಅವರು ತಮ್ಮ ಪೂರ್ವಜರ ಮನೆಯನ್ನು ಸಂಬಂಧಿಗಳಿಗೆ ನೀಡಿದ್ದು, ಈಗ ಆಶ್ರಮವೊಂದರಲ್ಲಿ ವಾಸ ಮಾಡುತ್ತಿದ್ದಾರೆ. ಅವರು ಧಾರ್ಮಿಕವಾಗಿ ಒಲವು ಹೊಂದಿದ್ದಾರೆ ಎಂದು ವರದಿಯಾಗಿದೆ. ಆದರೆ ಅವರು ಜೀವಂತವಾಗಿ ಇದ್ದಾಗಲೇ ತಮಗಾಗಿ ಅಂತ್ಯಕ್ರಿಯೆ ಮಾಡಿದ ವಿಚಾರ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ಬೀದಿ ಕಾಳಗದ ವೇಳೆ ಅಪ್ಪನ ರಕ್ಷಣೆಗೆ ಗನ್ ಹೊರತೆಗೆದ ಮಗಳು: ವೀಡಿಯೋ ಭಾರಿ ವೈರಲ್