Covid Booster Dose India: ಕೇವಲ 8 ದಿನದಲ್ಲಿ 50 ಲಕ್ಷ ಜನರಿಗೆ 3ನೇ ಡೋಸ್
ಜ.10ರಿಂದ ಬೂಸ್ಟರ್ (ಮುನ್ನೆಚ್ಚರಿಕೆ ಡೋಸ್) ಡೋಸ್ ನೀಡಲು ಆರಂಭಿಸಿದ ಕೇವಲ 8 ದಿನದಲ್ಲಿ ಆರೋಗ್ಯ, ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷ ಮೇಲ್ಪಟ್ಟವರು ಸೇರಿದಂತೆ 50 ಲಕ್ಷ ಜನರಿಗೆ ಬೂಸ್ಟರ್ ಡೋಸ್ ನೀಡಲಾಗಿದೆ.
ನವದೆಹಲಿ (ಜ.19): ಜ.10ರಿಂದ ಬೂಸ್ಟರ್ (ಮುನ್ನೆಚ್ಚರಿಕೆ ಡೋಸ್) ಡೋಸ್ (Booster Dose) ನೀಡಲು ಆರಂಭಿಸಿದ ಕೇವಲ 8 ದಿನದಲ್ಲಿ ಆರೋಗ್ಯ, ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷ ಮೇಲ್ಪಟ್ಟವರು ಸೇರಿದಂತೆ 50 ಲಕ್ಷ ಜನರಿಗೆ ಬೂಸ್ಟರ್ ಡೋಸ್ ನೀಡಲಾಗಿದೆ.
‘ಮತ್ತೊಂದು ದಿನ, ಮತ್ತೊಂದು ಮೈಲುಗಲ್ಲು. ಜ.10ರಿಂದ ಈವರೆಗೆ 50 ಲಕ್ಷಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕೆಲಸಗಾರರು ಮತ್ತು 60ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮುನ್ನೆಚ್ಚರಿಕೆ ಡೋಸ್ ಪಡೆದುಕೊಂಡಿದ್ದಾರೆ. ಮುನ್ನೆಚ್ಚರಿಕೆ ಡೋಸ್ ಪಡೆದುಕೊಳ್ಳುವ ಅರ್ಹತೆ ಹೊಂದಿರುವವರೆಲ್ಲಾ ಲಸಿಕೆ ಪಡೆದುಕೊಳ್ಳಲು ಮನವಿ ಮಾಡುತ್ತೇನೆ’ ಎಂದು ಎಂದು ಕೇಂದ್ರ ಆರೋಗ್ಯ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ (Mansukh Mandaviya) ತಿಳಿಸಿದ್ದಾರೆ.
ದೇಶದಲ್ಲಿ ಒಮಿಕ್ರೋನ್ (Omicron) ರೂಪಾಂತರಿ ಕಾಣಿಸಿಕೊಂಡ ನಂತರ ಆರೋಗ್ಯ, ಮುಂಚೂಣಿ ಕಾರ್ಯಕರ್ತರು, ಪಂಚರಾಜ್ಯ ಚುನಾವಣಾ ಕರ್ತವದಲ್ಲಿ ಭಾಗಿಯಾಗುವವರು ಮತ್ತು ಆರೋಗ್ಯ ಸಮಸ್ಯೆ ಇರುವ 60ವರ್ಷ ಮೇಲ್ಪಟ್ಟ ನಾಗರಿಕರಿಗೆ ಜ.10ರಿಂದ ಬೂಸ್ಟರ್ ಡೋಸ್ ನೀಡಲು ಸರ್ಕಾರ ಆರಂಭಿಸಿದೆ. ಕಳೆದ 24 ಗಂಟೆಯಲ್ಲಿ 80 ಲಕ್ಷ ಡೋಸ್ ಲಸಿಕೆ ನೀಡುವ ಮೂಲಕ ದೇಶದ ಒಟ್ಟು ಲಸಿಕಾಕರಣ 158.04 ಕೋಟಿ ಡೋಸ್ ತಲುಪಿದೆ.
‘ಬೂಸ್ಟರ್’ ಡೋಸ್ ಲಸಿಕಾಕರಣ ಶುರು: ಯಾರು ಅರ್ಹ? ಇಲ್ಲಿದೆ ಮಾಹಿತಿ
3ನೇ ಡೋಸ್ ಪಡೆಯಲು ನೀವು ಅರ್ಹರೇ?: ಮುನ್ನೆಚ್ಚರಿಕೆ ಡೋಸ್ (Booster Dose) ಪಡೆಯಲು ಅರ್ಹರಾಗಿರುವ ಬಗ್ಗೆ ಹಾಗೂ ಲಸಿಕೆ (Vaccine) ಪಡೆಯಲು ಎಷ್ಟು ದಿನ ಕಾಯಬೇಕು ಎಂಬ ಬಗ್ಗೆ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಪಡೆಯುವ ಸೌಲಭ್ಯವನ್ನು ಸರ್ಕಾರ ಕಲ್ಪಿಸಿದೆ. selfregistration.cowin.gov.in/ ಈ ಕೊಂಡಿಗೆ ಹೋಗಿ ನೀವು ಮೊದಲೆರಡು ಡೋಸ್ ಲಸಿಕೆ ಪಡೆಯುವಾಗ ನೀಡಿದ್ದ ದೂರವಾಣಿ ಸಂಖ್ಯೆಯನ್ನು (Mobile Number) ನೀಡಿದರೆ ಮುನ್ನೆಚ್ಚರಿಕೆ ಡೋಸ್ ಪಡೆಯಲು ನೀವು ಅರ್ಹರೇ ಮತ್ತು ಲಸಿಕೆ ಪಡೆಯಲು ಇನ್ನೆಷ್ಟು ದಿನ ಕಾಯಬೇಕು ಎಂಬ ಮಾಹಿತಿ ಲಭಿಸುತ್ತದೆ.
ಯಾರು ಅರ್ಹ?: ವೈದ್ಯಕೀಯ ಸಿಬ್ಬಂದಿ, 60 ವರ್ಷ ಮೇಲ್ಪಟ್ಟ ಪೂರ್ವರೋಗಪೀಡಿತರು ಹಾಗೂ ಮುಂಚೂಣಿ ಕಾರ್ಯಕರ್ತರು 2ನೇ ಡೋಸ್ ಲಸಿಕೆ ಪಡೆದು 9 ತಿಂಗಳು ಅಥವಾ 39 ವಾರ ಆಗಿರಬೇಕು. ಅಂಥವರು ಮುಂಜಾಗ್ರತಾ ಡೋಸ್ ಲಸಿಕೆ ಪಡೆಯಲು ಅರ್ಹ.
ಯಾವ ಲಸಿಕೆ?: ಮೊದಲಿನ 2 ಡೋಸ್ ಲಸಿಕೆ ಯಾವ ಕಂಪನಿಯದ್ದಾಗಿರುತ್ತೋ, ಅದೇ ಕಂಪನಿಯ ಲಸಿಕೆಯನ್ನು 3ನೇ ಡೋಸ್ ಆಗಿ ಪಡೆಯಬೇಕು. ಉದಾಹರಣೆಗೆ: ಕೋವ್ಯಾಕ್ಸಿನ್ 2 ಡೋಸ್ ಪಡೆದವರು 3ನೇ ಡೋಸ್ ಆಗಿ ಕೋವ್ಯಾಕ್ಸಿನ್‌ಅನ್ನೇ ಪಡೆಯಬೇಕು. ‘ಲಸಿಕೆ ಮಿಶ್ರಣ’ (ಬೇರೆ ಕಂಪನಿಯ ಲಸಿಕೆ) ಮಾಡುವಂತಿಲ್ಲ.
60+ ಬೂಸ್ಟರ್ ಡೋಸ್‌ಗೆ ವೈದ್ಯರ ಪತ್ರ ಬೇಕಾ, ಬೇಡ್ವಾ ? ಗೊಂದಲಕ್ಕೆ ತೆರೆ
ಪೂರ್ವರೋಗ ಪೀಡಿತರು ಅಂದರೆ ಯಾರು?: ಸಕ್ಕರೆ ಕಾಯಿಲೆ, ರಕ್ತದೊತ್ತಡ, ಕಿಡ್ನಿ ಕಾಯಿಲೆ, ಅಂಗಾಂಶ ಕಸಿಗೆ ಒಳಗಾದವರು, ಕ್ಯಾನ್ಸರ್, ಹೃದಯರೋಗಿಗಳು ಸೇರಿದಂತೆ 20 ಮಾದರಿಯ ವ್ಯಾಧಿ ಉಳ್ಳವರು ಪೂರ್ವರೋಗಪೀಡಿತರು ಎನ್ನಿಸಿಕೊಳ್ಳುತ್ತಾರೆ. ಇವರು 3ನೇ ಡೋಸ್‌ಗೆ ಅರ್ಹ.