Booster Dose Updates: 60+ ಬೂಸ್ಟರ್ ಡೋಸ್‌ಗೆ ವೈದ್ಯರ ಪತ್ರ ಬೇಕಾ, ಬೇಡ್ವಾ ? ಗೊಂದಲಕ್ಕೆ ತೆರೆ
- ಹಿರಿಯರು, ಮುಂಚೂಣಿ ಕಾರ‍್ಯಕರ್ತರಿಗೆ ಜ.10ರಿಂದ ಬೂಸ್ಟರ್ ಡೋಸ್
- ಚುನಾವಣಾ ಸಿಬ್ಬಂದಿಗೆ ಮುಂಚೂಣಿ ಕಾರ್ಯಕರ್ತರ ಸ್ಥಾನಮಾನ ನೀಡಿ
- ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚನೆ
ನವದೆಹಲಿ(ಡಿ.29): ನಾನಾ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ 60 ವರ್ಷ ಮೇಲ್ಪಟ್ಟವ್ಯಕ್ತಿಗಳು ಮುಂಜಾಗ್ರತಾ ಲಸಿಕೆ ಪಡೆಯಲು, ವೈದ್ಯರಿಂದ ಪ್ರಮಾಣಪತ್ರ ಪತ್ರ ತರುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ಮೂಲಕ ವಯೋವೃದ್ಧರ ಪ್ರಮಾಣಪತ್ರಕ್ಕಾಗಿ ಆಸ್ಪತ್ರೆಗಳಿಗೆ ಅಲೆಯುವ ಕೆಲಸವನ್ನು ತಪ್ಪಿಸಿದೆ. ಆದರೆ ಮುಂಜಾಗ್ರತಾ ಲಸಿಕೆ ಪಡೆಯುವ ಮುನ್ನ ವೈದ್ಯರ ಸಲಹೆ ಪಡೆಯುವುದು ಸೂಕ್ತ ಎಂದು ಹೇಳಿದೆ.
ಈ ಕುರಿತು ಎಲ್ಲಾ ರಾಜ್ಯಗಳಿಗೆ ಮಾಹಿತಿ ರವಾನಿಸಿರುವ ಕೇಂದ್ರ ಆರೋಗ್ಯ ಸಚಿವಾಲಯ, ಜ.10ರಿಂದ 60 ವರ್ಷ ಮೇಲ್ಪಟ್ಟವರು ಮುಂಜಾಗ್ರತಾ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ. ಹೀಗೆ ಲಸಿಕೆ ಪಡೆಯಲು ಅರ್ಹರಾದವರು, ಲಸಿಕೆ ನೋಂದಣಿ ವೇಳೆ ಅಥವಾ ಲಸಿಕೆ ಪಡೆಯುವ ವೇಳೆ ತಮಗೆ ಯಾವುದೇ ಆರೋಗ್ಯ ಸಮಸ್ಯೆ ಇರುವ ಬಗ್ಗೆ ವೈದ್ಯರಿಂದ ಪ್ರಮಾಣ ಪತ್ರ ಸಲ್ಲಿಸಬೇಕಿಲ್ಲ. ಅದರೆ ಅವರು ತಾವು ಲಸಿಕೆ ಪಡೆಯಬಹುದೇ ಎಂಬುದರ ಕುರಿತು ವೈದ್ಯರೊಂದಿಗೆ ಪೂರ್ವ ಸಮಾಲೋಚನೆ ನಡೆಸುವುದು ಸೂಕ್ತ. ಎಲ್ಲಾ ಅರ್ಹರಿಗೂ ಲಸಿಕೆ ಪಡೆಯುವ ಸಮಯದ ಕುರಿತು ಎಸ್‌ಎಂಎಸ್ ಮೂಲಕ ಮಾಹಿತಿ ರವಾನಿಸಲಾಗುವುದು ಎಂದು ಹೇಳಿದೆ.
ಒಮಿಕ್ರೋನ್ ಸ್ಫೋಟ: ಸೋಮವಾರ ದಾಖಲೆಯ 156 ಹೊಸ ಕೇಸ್!
ಇದೇ ವೇಳೆ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು ಕೂಡಾ ಜ.10ರಿಂದ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ. ಜ.3ರಿಂದ 15-18ರ ವಯೋಮಾನದ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುವುದು. ಇದಕ್ಕೆ ಅಗತ್ಯವಾದ ಹೆಚ್ಚುವರಿ ಲಸಿಕೆಯನ್ನು ಶೀಘ್ರವೇ ರಾಜ್ಯಗಳಿಗೆ ರವಾನಿಸಲಾಗುವುದು ಎಂದು ಸರ್ಕಾರ ಮಾಹಿತಿ ನೀಡಿದೆ.
15-18ರ ವಯೋಮಾನದ ಮಕ್ಕಳಿಗೆ ಲಸಿಕೆ, ಆರೋಗ್ಯ, ಮುಂಚೂಣಿ ಕಾರ್ಯಕರ್ತರು ಮತ್ತು ವಯೋವೃದ್ಧರಿಗೆ ಬೂಸ್ಟರ್ ಡೋಸ್ ಕೋವಿಡ್ ಲಸಿಕೆ ನೀಡುವ ಕೇಂದ್ರದ ನಿರ್ಧಾರದಿಂದಾಗಿ ಹೆಚ್ಚುವರಿ 20 ಕೋಟಿ ಡೋಸ್ ಲಸಿಕೆ ಅಗತ್ಯ ಬೀಳಲಿದೆ.
2011ರ ಜನಗಣತಿಯ ಪ್ರಕಾರ ಭಾರತದಲ್ಲಿ ಒಟ್ಟು 7.4 ಕೋಟಿ 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿದ್ದಾರೆ. 13.79 ಕೋಟಿ 60 ವರ್ಷ ಮೇಲ್ಪಟ್ಟವಯಸ್ಕರಿದ್ದಾರೆ. ಈ ಪೈಕಿ ಶೇ.75ರಷ್ಟುಜನರು ನಾನಾ ರೀತಿಯ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಕೇಂದ್ರ ಕುಟುಂಬ ಹಾಗೂ ಆರೋಗ್ಯ ಕಲ್ಯಾಣ ಸಚಿವಾಲಯದ ವರದಿ ಹೇಳಿದೆ. ಅಂದರೆ 13.79 ಕೋಟಿ ಜನರ ಪೈಕಿ 10 ಕೋಟಿ ಜನರು ಬೂಸ್ಟರ್ ಡೋಸ್ ಪಡೆಯುವ ಅರ್ಹತೆ ಪಡೆಯುತ್ತಾರೆ. ಇವರ ಜೊತೆ 1 ಕೋಟಿ ಆರೋಗ್ಯ ಕಾರ್ಯಕರ್ತರು, 2 ಕೋಟಿ ಮುಂಚೂಣಿ ಕಾರ್ಯಕರ್ತರು ಇದ್ದಾರೆ. ಹೀಗಾಗಿ 20 ಕೋಟಿಗಿಂತ ಹೆಚ್ಚಿನ ಡೋಸ್ ಹೆಚ್ಚುವರಿ ಡೋಸ್ ಲಸಿಕೆ ಬೇಕಾಗಿ ಬರಲಿದೆ.
ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಮತ್ತೆ ತಲೆನೋವು ಕೊಡಲಾರಂಭಿಸಿದೆ. ಒಮಿಕ್ರಾನ್ ಪ್ರಕರಣಗಳ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಿವೆ. ಹೀಗಿರುವಾಗ ಹೊಸ ವರ್ಷಾಚರಣೆ ಮತ್ತೊಂದು ಹೊಸ ಅಲೆಗೆ ಕಾರಣವಾಗುತ್ತಾ ಎಂಬ ಭೀತಿ ಹುಟ್ಟಿಕೊಂಡಿದೆ. ಈಗಾಗಲೇ ಕರ್ನಾಟಕ ಸೇರಿ ಅನೇಕ ರಾಜ್ಯಗಳು ನ್ಯೂ ಇಯರ್ ಆಚರಣೆಗೆ ಬ್ರೇಕ್ ಹಾಕಿವೆ. ಹೀಗಿರುವಾಗ ಪ್ರಧಾನ ಮಂತ್ರಿ ನರೇದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಬೂಸ್ಟರ್ ಡೋಸ್ ಹಾಗೂ ಮಕ್ಕಳಿಗೆ ಲಸಿಕೆ ಆರಂಭಿಸುವ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದಾರೆ.