Covid Booster Dose India: ಇಂದಿನಿಂದ ‘ಬೂಸ್ಟರ್’ ಡೋಸ್ ಲಸಿಕಾಕರಣ ಶುರು: ಯಾರು ಅರ್ಹ? ಇಲ್ಲಿದೆ ಮಾಹಿತಿ
*60 ವರ್ಷ ಮೇಲ್ಪಟ್ಟವರು, ವೈದ್ಯ, ಮುಂಚೂಣಿ ಸಿಬ್ಬಂದಿ ಲಸಿಕೆಗೆ ಅರ್ಹ
*2ನೇ ಡೋಸ್ ಪಡೆದು 9 ತಿಂಗಳಾದವರು 3ನೇ ಡೋಸ್ ಪಡೆಯಬಹುದು
*ಹಿಂದೆ ಯಾವ ಲಸಿಕೆ ಪಡೆದಿದ್ದರೋ ಅದೇ ಲಸಿಕೆ ಪಡೆಯಬೇಕು
*ಕೋವಿಡ್ 3ನೇ ಅಲೆಗೆ ಅಂಕುಶ ಹಾಕಲು ಮತ್ತೊಂದು ಲಸಿಕಾ ಅಭಿಯಾನ
ನವದೆಹಲಿ (ಜ. 10): ದೇಶದಲ್ಲಿ ಕೊರೋನಾ ವೈರಸ್‌ನ 3ನೇ ಅಲೆ ಎದ್ದಿರುವ ನಡುವೆಯೇ, 60 ವರ್ಷ ದಾಟಿದ ಅನಾರೋಗ್ಯಪೀಡಿತರು, ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಮುಂಜಾಗ್ರತಾ ಡೋಸ್ (ಬೂಸ್ಟರ್ ಡೋಸ್ - Booster Dose) ಲಸಿಕಾ ಅಭಿಯಾನ ಸೋಮವಾರದಿಂದ ದೇಶಾದ್ಯಂತ ಆರಂಭವಾಗಲಿದೆ. ಕಳೆದ ಡಿ.25ರಂದು ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi), 2022ರ ಜ.3ರಿಂದ 15-18ರ ವಯೋಮಾನದ ಮಕ್ಕಳಿಗೆ ಮತ್ತು ಜ.10ರಿಂದ 60 ವರ್ಷ ದಾಟಿದವರು, ಆರೋಗ್ಯ ಕಾರ್ಯಕರ್ತರು (Healthcare workers) ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಮುಂಜಾಗ್ರತಾ ಡೋಸ್ ನೀಡುವುದಾಗಿ ಪ್ರಕಟಿಸಿದ್ದರು.
ಈಗಾಗಲೇ ನಿಗದಿಯಂತೆ ಜ.3ರಂದು ಮಕ್ಕಳಿಗೆ ಲಸಿಕೆ ಅಭಿಯಾನ ಆರಂಭವಾಗಿದ್ದು, ಈಗ ಮುಂಜಾಗ್ರತಾ ಡೋಸ್ ಲಸಿಕಾ ಅಭಿಯಾನಕ್ಕೂ ಚಾಲನೆ ದೊರಕಲಿದೆ. ಅದರಂತೆ ಜ.8ರ ಶನಿವಾರದಿಂದಲೇ ಕೋವಿನ್ ಪೋರ್ಟಲ್‌ನಲ್ಲಿ 3ನೇ ಡೋಸ್ ಲಸಿಕೆ ಪಡೆಯಲು ಬುಕ್ಕಿಂಗ್ ಆರಂಭವಾಗಿದೆ. ಇದರ ಜೊತೆ ಲಸಿಕಾ ಕೇಂದ್ರಗಳಿಗೆ ಅಲ್ಲಿಯೂ ನೇರವಾಗಿ ಬುಕ್ ಮಾಡಿಸಿ ಲಸಿಕೆ ಪಡೆಯಲು ಅವಕಾಶವಿದೆ.
ಯಾರು ಅರ್ಹ?:
ವೈದ್ಯಕೀಯ ಸಿಬ್ಬಂದಿ, 60 ವರ್ಷ ಮೇಲ್ಪಟ್ಟಪೂರ್ವರೋಗಪೀಡಿತರು ಹಾಗೂ ಮುಂಚೂಣಿ ಕಾರ್ಯಕರ್ತರು 2ನೇ ಡೋಸ್ ಲಸಿಕೆ ಪಡೆದು 9 ತಿಂಗಳು ಅಥವಾ 39 ವಾರ ಆಗಿರಬೇಕು. ಅಂಥವರು ಮುಂಜಾಗ್ರತಾ ಡೋಸ್ ಲಸಿಕೆ ಪಡೆಯಲು ಅರ್ಹ.
ಇದನ್ನೂ ಓದಿ: Covid 3rd Wave ಆತಂಕವಿದ್ದರೂ ಆರಂಭವಾಗದ ಆಕ್ಸಿಜನ್ ಘಟಕ
ಯಾವ ಲಸಿಕೆ?:
ಮೊದಲಿನ 2 ಡೋಸ್ ಲಸಿಕೆ ಯಾವ ಕಂಪನಿಯದ್ದಾಗಿರುತ್ತೋ, ಅದೇ ಕಂಪನಿಯ ಲಸಿಕೆಯನ್ನು 3ನೇ ಡೋಸ್ ಆಗಿ ಪಡೆಯಬೇಕು. ಉದಾಹರಣೆಗೆ: ಕೋವ್ಯಾಕ್ಸಿನ್ 2 ಡೋಸ್ ಪಡೆದವರು 3ನೇ ಡೋಸ್ ಆಗಿ ಕೋವ್ಯಾಕ್ಸಿನ್‌ಅನ್ನೇ ಪಡೆಯಬೇಕು. ‘ಲಸಿಕೆ ಮಿಶ್ರಣ’ (ಬೇರೆ ಕಂಪನಿಯ ಲಸಿಕೆ) ಮಾಡುವಂತಿಲ್ಲ.
ಪೂರ್ವರೋಗಪೀಡಿತರು ಅಂದರೆ ಯಾರು?:
ಸಕ್ಕರೆ ಕಾಯಿಲೆ, ರಕ್ತದೊತ್ತಡ, ಕಿಡ್ನಿ ಕಾಯಿಲೆ, ಅಂಗಾಂಶ ಕಸಿಗೆ ಒಳಗಾದವರು, ಕ್ಯಾನ್ಸರ್, ಹೃದಯರೋಗಿಗಳು ಸೇರಿದಂತೆ 20 ಮಾದರಿಯ ವ್ಯಾಧಿ ಉಳ್ಳವರು ಪೂರ್ವರೋಗಪೀಡಿತರು ಎನ್ನಿಸಿಕೊಳ್ಳುತ್ತಾರೆ. ಇವರು 3ನೇ ಡೋಸ್‌ಗೆ ಅರ್ಹ.
ಮುಂಜಾಗ್ರತಾ ಡೋಸ್ ಏಕೆ?:
ಕಾಯಿಲೆಪೀಡಿತರಿಗೆ ಮೊದಲ 2 ಡೋಸ್ ಪಡೆದರೂ ಅವರ ಪೂರ್ವಕಾಯಿಲೆಗಳ ಕಾರಣ ರೋಗನಿರೋಧಕ ಶಕ್ತಿ ಅಷ್ಟಾಗಿ ವೃದ್ಧಿಸದೇ ಇರಬಹುದು. ಹೀಗಾಗಿ ಅವರಿಗೆ 3ನೇ ಡೋಸ್ ನೀಡಲಾಗುತ್ತದೆ. ಇನ್ನು ವೈದ್ಯ ಸಿಬ್ಬಂದಿ ಹಾಗೂ ಮುಂಚೂಣಿ ಕಾರ್ಯಕರ್ತರು ಯಾವಾಗಲೂ ಕರ್ತವ್ಯ ಸ್ಥಳದಲ್ಲಿ ನಿತ್ಯ ಸಾವಿರಾರು ಜನರು, ರೋಗಿಗಳ ಸಂಪರ್ಕಕ್ಕೆ ಬರುತ್ತಿರುತ್ತಾರೆ. ಹೀಗಾಗಿ ಅವರಿಗೆ ಮುಂಜಾಗ್ರತಾ ಡೋಸ್ ನೀಡಲಾಗುತ್ತದೆ.
ಇದನ್ನೂ ಓದಿ: Corona Update ಕರ್ನಾಟಕದಲ್ಲಿ ಕೊರೋನಾ ಸ್ಫೋಟ, 12,000 ಹೊಸ ಕೇಸ್ ಪತ್ತೆ
ಲಸಿಕಾ ಅಭಿಯಾನದ ಹಾದಿ
2020, ಜ.16: ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಿಕೆ ಆರಂಭ
ಫೆ.02: ಮುಂಚೂಣಿ ಕಾರ್ಯಕರ್ತರು
ಮಾ 01: 60 ವರ್ಷ, 45 ವರ್ಷ ಮೇಲ್ಪಟ್ಟಅನಾರೋಗ್ಯ ಪೀಡಿತರು
ಏ. 01: ಎಲ್ಲ 45 ವರ್ಷ ಮೇಲ್ಪಟ್ಟವರು
ಮೇ 01: ಎಲ್ಲ 18 ವರ್ಷ ಮೇಲ್ಪಟ್ಟವರು
2021, ಜ.3: 15ರಿಂದ 18 ವರ್ಷದ ಮಕ್ಕಳು
ಜ.10: ಮುಂಚೂಣಿ ಕಾರ್ಯಕರ್ತರು, 60 ವರ್ಷ ಮೇಲ್ಪಟ್ಟಅನಾರೋಗ್ಯಪೀಡಿತರಿಗೆ 3ನೇ ಡೋಸ್
ಒಂದೇ ದಿನದಲ್ಲಿ ಸೋಂಕು ಶೇ.12ರಷ್ಟು ಏರಿಕೆ
ಕೊರೋನಾ ಅಬ್ಬರ (Covid 19 Spike) ದೇಶದಲ್ಲಿ ಮತ್ತಷ್ಟುಏರಿದೆ. ಭಾನುವಾರ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ 1,59,632 ಪ್ರಕರಣಗಳು ದಾಖಲಾಗಿದ್ದು, ಇದು 224 ದಿನಗಳ (ಏಳೂವರೆ ತಿಂಗಳ) ಗರಿಷ್ಠವಾಗಿದೆ. ಶನಿವಾರ ದೇಶದಲ್ಲಿ 1.41 ಲಕ್ಷ ಪ್ರಕರಣ ದಾಖಲಾಗಿದ್ದವು. ಇದಕ್ಕೆ ಹೋಲಿಸಿದರೆ ಒಂದೇ ದಿನದಲ್ಲಿ ಪ್ರಕರಣಗಳ ಸಂಖ್ಯೆ ಶೇ.12ರಷ್ಟುಏರಿಕೆಯಾದಂತಾಗಿದೆ. ಮೇ 29ರಂದು 1,65,553 ಕೇಸು ದಾಖಲಾಗಿದ್ದವು. ಆ ಬಳಿಕ ಈ ಪ್ರಮಾಣದ ಏಕದಿನದ ಪ್ರಕರಣಗಳು ದಾಖಲಾಗಿರಲಿಲ್ಲ.
ಇದೇ ವೇಳೆ ಸಕ್ರಿಯ ಪ್ರಕರಣಗಳ ಸಂಖ್ಯೆ 4,72,169ದಿಂದ 5,90,611ಕ್ಕೆ ಏರಿಕೆಯಾಗಿದೆ. ಇದು 197 ದಿನ (ಆರೂವರೆ ತಿಂಗಳ) ಗರಿಷ್ಠ. ಅಂದರೆ ಇಂದೇ ದಿನದಲ್ಲಿ 1.18 ಲಕ್ಷ (ಶೇ.25ರಷ್ಟು) ಸಕ್ರಿಯ ಪ್ರಕರಣಗಳು ಜಿಗಿತ ಕಂಡಿವೆ. ಅಲ್ಲದೆ, ಡಿ.28ರಂದು ಸಕ್ರಿಯ ಕೇಸು 75 ಸಾವಿರಕ್ಕೆ ಕುಸಿತ ಕಂಡಿದ್ದವು. ಅದಕ್ಕೆ ಹೋಲಿಸಿದರೆ ಕೇವಲ 13 ದಿನದಲ್ಲಿ ಸಕ್ರಿಯ ಕೇಸುಗಳ ಪ್ರಮಾಣ ಶೇ.682ರಷ್ಟುಭರ್ಜರಿ ಜಿಗಿತ ಕಂಡಂತಾಗಿದೆ. ಸೋಂಕಿಗೆ ಒಂದೇ ದಿನದಲ್ಲಿ 327 ಜನರು ಬಲಿಯಾಗಿದ್ದಾರೆ. ಪಾಸಿಟಿವಿಟಿ ದರ ಶೇ.10.21ಕ್ಕೆ ಏರಿಕೆಯಾಗಿದೆ. ಕೇವಲ 40,863 ಮಂದಿ ಗುಣಮುಖರಾಗಿದ್ದಾರೆ.