ಮಧ್ಯಪ್ರದೇಶದ ಉನ್ನತ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್, ಸಮಾಜ ಸುಧಾರಕ ರಾಜಾ ರಾಮ್ ಮೋಹನ್ ರಾಯ್ ಅವರನ್ನು 'ಬ್ರಿಟಿಷರ ಏಜೆಂಟ್' ಎಂದು ಕರೆದು ವಿವಾದ ಸೃಷ್ಟಿಸಿದ್ದಾರೆ. ಬಿರ್ಸಾ ಮುಂಡಾ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡಿದ್ದು, ತೀವ್ರ ಆಕ್ರೋಶದ ಬಳಿಕ ಕ್ಷಮೆಯಾಚಿಸಿದ್ದಾರೆ.
ಮಧ್ಯಪ್ರದೇಶ (ನ.16): ಸಮಾಜ ಸುಧಾರಕ ರಾಜಾ ರಾಮ್ ಮೋಹನ್ ರಾಯ್ ಅವರನ್ನು 'ಬ್ರಿಟಿಷರ ಏಜೆಂಟ್' ಎಂದು ಕರೆದು ಮಧ್ಯಪ್ರದೇಶದ ಉನ್ನತ ಶಿಕ್ಷಣ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಇಂದರ್ ಸಿಂಗ್ ಪರ್ಮಾರ್ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಅವರ ಹೇಳಿಕೆಗೆ ಸಾರ್ವಜನಿಕ ಆಕ್ರೋಶ ತೀವ್ರಗೊಂಡ ಹಿನ್ನೆಲೆ ಭಾನುವಾರ ವಿಡಿಯೋ ಹೇಳಿಕೆ ನೀಡಿ ಕ್ಷಮೆಯಾಚಿಸಿದ್ದಾರೆ. 'ರಾಜಾ ರಾಮ್ ಮೋಹನ್ ರಾಯ್ ಒಬ್ಬ ಸಮಾಜ ಸುಧಾರಕರಾಗಿದ್ದರು, ಅವರನ್ನು ಗೌರವಿಸಬೇಕು. ಆ ವಾಕ್ಯ ನನ್ನ ಬಾಯಿಂದ ತಪ್ಪಾಗಿ ಬಂದಿದೆ. ನನಗೆ ಅದರ ಬಗ್ಗೆ ತುಂಬಾ ಬೇಸರವಾಗಿದೆ. ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ' ಎಂದಿದ್ದಾರೆ.
ರಾಜಾ ರಾಮ್ ಮೋಹನ್ ರಾಯ್ ಒಬ್ಬ ಬ್ರಿಟಿಷ್ ಏಜೆಂಟ್:
ಬುಡಕಟ್ಟು ಜನಾಂಗದ ಐತಿಹಾಸಿಕ ನಾಯಕ ಬಿರ್ಸಾ ಮುಂಡಾ ಅವರ 150ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ, ಮಧ್ಯಪ್ರದೇಶದ ಅಗರ್ ಮಾಲ್ವಾ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ರಾಜಾ ರಾಮ್ ಮೋಹನ್ ರಾಯ್ ಒಬ್ಬ ಬ್ರಿಟಿಷ್ ಏಜೆಂಟ್ ಆಗಿದ್ದರು. ಅವರು ದೇಶದಲ್ಲಿ ಅವರ 'ದಲಾಲ್' ಆಗಿ ಕೆಲಸ ಮಾಡಿದರು ಮತ್ತು ಧಾರ್ಮಿಕ ಮತಾಂತರದ ವಿಷವರ್ತುಲವನ್ನು ಪ್ರಾರಂಭಿಸಿದರು. ಬ್ರಿಟಿಷರು ಹಲವಾರು ಜನರನ್ನು ನಕಲಿ ಸಮಾಜ ಸುಧಾರಕರು ಎಂದು ಬಿಂಬಿಸಿದ್ದರು. ದೇಶದಲ್ಲಿ ಮತಾಂತರವನ್ನು ಪ್ರೋತ್ಸಾಹಿಸುವವರನ್ನು ಉತ್ತೇಜಿಸಿದ್ದರು ಎಂದು ಹೇಳುವ ಮೂಲಕ ವಿವಾದ ಸೃಷ್ಟಿದರು.
ಬಿರ್ಸಾ ಮುಂಡಾ ಬಗ್ಗೆ ಪ್ರಶಂಶೆ:
ಈ ಸಂದರ್ಭದಲ್ಲಿ ಬಿರ್ಸಾ ಮುಂಡಾ ಅವರನ್ನು ಪ್ರಶಂಸಿಸಿ, 'ಇದನ್ನು ತಡೆಯಲು ಮತ್ತು ಬುಡಕಟ್ಟು ಸಮುದಾಯವನ್ನು ರಕ್ಷಿಸಲು ಯಾರಿಗಾದರೂ ಧೈರ್ಯವಿದ್ದರೆ ಅದು ಬಿರ್ಸಾ ಮುಂಡಾ ಮಾತ್ರ. ಅವರು ಮಿಷನರಿ ಶಿಕ್ಷಣವನ್ನು ತ್ಯಜಿಸಿ, ಸಮುದಾಯ ಹಿತಕ್ಕಾಗಿ ಬ್ರಿಟಿಷ್ ವಿರುದ್ಧ ಹೋರಾಡಿದರು ಎಂದು ಹೇಳಿದ್ದಾರೆ.
ಈ ಹೇಳಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಪರ್ಮಾರ್ ಅವರು ವೀಡಿಯೊ ಹೇಳಿಕೆ ನೀಡಿ, ರಾಜಾ ರಾಮ್ ಮೋಹನ್ ರಾಯ್ ಒಬ್ಬ ಸಮಾಜ ಸುಧಾರಕರಾಗಿದ್ದರು, ಅವರನ್ನು ಗೌರವಿಸಬೇಕು. ಆ ವಾಕ್ಯ ಬಾಯ್ತಪ್ಪಿ ಬಂದಿದೆ. ಯಾವುದೇ ಐತಿಹಾಸಿ ವ್ಯಕ್ತಿಯನ್ನ ಅವಮಾನಿಸುವ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
