ನೌಕರರ ಭವಿಷ್ಯ ನಿಧಿ (EPF) ಬಾಕಿಯನ್ನು ಸಕಾಲದಲ್ಲಿ ಜಮೆ ಮಾಡದಿರುವುದು ಗಂಭೀರ ಅಪರಾಧ ಎಂದು ಒರಿಸ್ಸಾ ಹೈಕೋರ್ಟ್ ತೀರ್ಪು ನೀಡಿದೆ. ಬಾಕಿ ಹಣವನ್ನು ನಂತರ ಪಾವತಿಸಿದರೂ, ಕ್ರಿಮಿನಲ್ ಮೊಕದ್ದಮೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಕಟಕ್ (ಏ.21): ಉದ್ಯೋಗಿಗಳ ಭವಿಷ್ಯ ನಿಧಿ (EPF) ಬಾಕಿ ಮೊತ್ತವನ್ನು ನಿಗದಿತ ಅವಧಿಯೊಳಗೆ ಜಮೆ ಮಾಡದಿರುವುದು ಗಂಭೀರ ಅಪರಾಧ ಎಂದು ಒರಿಸ್ಸಾ ಹೈಕೋರ್ಟ್ ಹೇಳಿದೆ. ಒಂದು ಬಾರಿ ಪಾವತಿಯಲ್ಲಿ ವಿಳಂಬ ಮಾಡಿ ಅಪರಾಧ ಎಸಗಿದ ಮೇಲೆ, ನಂತರದ ದಿನಗಳಲ್ಲಿ ಬಾಕಿ ಹಣವನ್ನು ಪಾವತಿಸಲಾಗಿದೆ ಎಂಬ ಕಾರಣ ನೀಡಿ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಕಾಸ್‌ಬೋರ್ಡ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್‌ನ ಮಾಜಿ ನಿರ್ದೇಶಕ ಅನಿಲ್ ಕುಮಾರ್ ಗಿಲ್ರಾ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕ್ರಿಯೆಗಳನ್ನು ರದ್ದುಗೊಳಿಸಲು ನ್ಯಾಯಮೂರ್ತಿ ಡಾ. ಸಂಜೀಬ್ ಕುಮಾರ್ ಪಾಣಿಗ್ರಾಹಿ ಅವರ ಏಕಸದಸ್ಯ ಪೀಠವು ನಿರಾಕರಿಸಿದೆ.

ದೂರಿನ ಪ್ರಕಾರ, ಗಿಲ್ರಾ ಅವರು ಕಂಪನಿಯ ನೌಕರರ ವೇತನದಿಂದ ಭವಿಷ್ಯ ನಿಧಿಯ ಪಾಲನ್ನು ಕಡಿತಗೊಳಿಸಿದ್ದರು. ಆದರೆ, ಆ ಮೊತ್ತವನ್ನು ಶಾಸನಬದ್ಧ ಪ್ರಾಧಿಕಾರಕ್ಕೆ ಜಮೆ ಮಾಡಿರಲಿಲ್ಲ. 2012ರ ಮಾರ್ಚ್‌ನಿಂದ 2013ರ ಜುಲೈವರೆಗಿನ ಅವಧಿಯಲ್ಲಿ ಸುಮಾರು 15,14,533 ರೂಪಾಯಿ ಮೊತ್ತದ ಇಪಿಎಫ್ ಬಾಕಿಯನ್ನು ಉಳಿಸಿಕೊಂಡಿದ್ದರು. ಈ ಸಂಬಂಧ ಇಪಿಎಫ್ ಇನ್ಸ್‌ಪೆಕ್ಟರ್ ಅವರು 'ಕ್ರಿಮಿನಲ್ ನಂಬಿಕೆ ದ್ರೋಹ'ದ ಅಡಿಯಲ್ಲಿ (IPC ಸೆಕ್ಷನ್ 406 ಮತ್ತು 409) ಎಫ್‌ಐಆರ್ ದಾಖಲಿಸಿದ್ದರು.

ಹೈಕೋರ್ಟ್‌ನಲ್ಲಿ ನಡೆದ ವಾದ-ಪ್ರತಿವಾದ

ಕಂಪನಿಯು ದಿವಾಳಿ ಪ್ರಕ್ರಿಯೆಗೆ (Insolvency) ಒಳಪಟ್ಟಿತ್ತು ಮತ್ತು 2022ರಲ್ಲಿ ಎನ್‌ಸಿಎಲ್‌ಟಿ (NCLT) ಮೂಲಕ ಹೊಸ ಮಾಲೀಕರು ಕಂಪನಿಯನ್ನು ವಹಿಸಿಕೊಂಡಿದ್ದಾರೆ. ಅಲ್ಲದೆ, 2014 ಮತ್ತು 2015ರ ನಡುವೆ ಸಂಪೂರ್ಣ ಬಾಕಿ ಹಣವನ್ನು ಪಾವತಿಸಲಾಗಿದೆ. ಹಾಗಾಗಿ ಕ್ರಿಮಿನಲ್ ಕೇಸ್ ರದ್ದುಗೊಳಿಸಬೇಕು ಎಂದು ಗಿಲ್ರಾ ವಾದಿಸಿದ್ದರು.

ಪ್ರತಿ ತಿಂಗಳ ಇಪಿಎಫ್ ಹಣವನ್ನು ಮುಂದಿನ ತಿಂಗಳ 15 ದಿನಗಳ ಒಳಗೆ ಜಮೆ ಮಾಡಬೇಕು. ಈ ಅವಧಿಯಲ್ಲಿ ಪಾವತಿಸದಿದ್ದರೆ ಅದು ದಂಡಾರ್ಹ ಅಪರಾಧವಾಗುತ್ತದೆ. ನಂತರ ಹಣ ಕಟ್ಟಿದ್ದು ಅಪರಾಧದ ಹೊಣೆಗಾರಿಕೆಯನ್ನು ಇಲ್ಲವಾಗಿಸುವುದಿಲ್ಲ ಎಂದು ವಾದಿಸಲಾಯಿತು. ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಪಾಣಿಗ್ರಾಹಿ ಪ್ರಮುಖ ವಿಚಾರಗಳನ್ನು ಉಲ್ಲೇಖಿಸಿದ್ದಾರೆ.

ಅರ್ಜಿದಾರರು ಎಸಗಿರುವ ಅಪರಾಧವು ಗಂಭೀರ ಸ್ವರೂಪದ್ದಾಗಿದೆ. ಇದು ಉದ್ಯೋಗಿಗಳ ಪಿಂಚಣಿ ಹಕ್ಕು ಮತ್ತು ಜೀವನದ ಹಕ್ಕನ್ನು (Right to Life) ಅಪಾಯಕ್ಕೆ ತಳ್ಳುತ್ತದೆ. ಆದ್ದರಿಂದ ಕ್ರಿಮಿನಲ್ ಪ್ರಕ್ರಿಯೆಯನ್ನು ರದ್ದುಗೊಳಿಸಲು ಯಾವುದೇ ಆಧಾರವಿಲ್ಲ. ಇಪಿಎಫ್ ಬಾಕಿ ಮತ್ತು ಅದಕ್ಕೆ ಸಂಬಂಧಿಸಿದ ಹೊಣೆಗಾರಿಕೆಗಳನ್ನು ಮನ್ನಾ ಮಾಡಲು ಎನ್‌ಸಿಎಲ್‌ಟಿಗೆ ಅಧಿಕಾರವಿಲ್ಲ. ಇಪಿಎಫ್ ಕಾಯ್ದೆಯು ದಿವಾಳಿ ಸಂಹಿತೆ (IBC) ಅಡಿ ಬರುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಇಂತಹ ಗಂಭೀರ ಅಪರಾಧಿಗಳು ಕಾನೂನಿನಿಂದ ತಪ್ಪಿಸಿಕೊಳ್ಳಲು ಬಿಟ್ಟರೆ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ ಮತ್ತು ಕಾನೂನಿನ ಆಡಳಿತದ ಮೇಲಿನ ಜನರ ವಿಶ್ವಾಸ ಕುಸಿಯುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಒಟ್ಟಿನಲ್ಲಿ, ಕಂಪನಿಗಳ ಮಾಲೀಕರು ನೌಕರರ ಇಪಿಎಫ್ ಹಣವನ್ನು ಸಕಾಲದಲ್ಲಿ ಪಾವತಿಸದಿದ್ದರೆ, ನಂತರ ಹಣ ಕಟ್ಟಿದರೂ ಜೈಲು ಶಿಕ್ಷೆ ಅಥವಾ ನ್ಯಾಯಾಲಯದ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಈ ತೀರ್ಪಿನ ಸಾರಾಂಶವಾಗಿದೆ.