ಆಪರೇಷನ್ ಸಿಂದೂರ್ ಮುಂದುವರೆದಿದ್ದು, ಭಾರತದ ಡ್ರೋಣ್ ದಾಳಿಗೆ ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂ ಧ್ವಂಸಗೊಂಡಿದೆ

ಆಪರೇಷನ್ ಸಿಂದೂರ್ ಮುಂದುವರೆದಿದ್ದು, ಭಾರತದ ಡ್ರೋಣ್ ದಾಳಿಗೆ ರಾವಲ್ಪಿಂಡಿಯ ಕ್ರಿಕೆಟ್ ಸ್ಟೇಡಿಯಂ ಧ್ವಂಸಗೊಂಡಿದೆ. ಭಾರತದಲ್ಲಿ ಐಪಿಎಲ್‌ ನಡೆಯುವಂತೆಯೇ ಪಾಕಿಸ್ತಾನದಲ್ಲಿ ಕ್ರಿಕೆಟ್ ಸೂಪರ್ ಲೀಗ್‌  ಮ್ಯಾಚ್‌ ನಡೆಯುತ್ತಿದ್ದು, ಈ ಮ್ಯಾಚ್‌ ನಡೆಯುವುದಕ್ಕೆ ಕೆಲವು ಗಂಟೆಗಳ ಮೊದಲು ಭಾರತ ಈ ಡ್ರೋಣ್ ದಾಳಿ ನಡೆಸಿದ್ದು, ಸ್ಟೇಡಿಯಂ ಧ್ವಂಸವಾಗಿದೆ ಎಂದು ವರದಿಯಾಗಿದೆ. ಇಂದು ರಾತ್ರಿ 8 ಗಂಟೆಗೆ ಇಲ್ಲಿ ಪಾಕಿಸ್ತಾನ್‌ ಸೂಪರ್ ಲೀಗ್‌ನ ಪಂದ್ಯಾವಳಿಗಳು ನಡೆಯಬೇಕಿತ್ತು. ಪೇಶಾವರ್‌ ಝಲ್ಮಿ ಹಾಗೂ ಕರಾಚಿ ಕಿಂಗ್ಸ್ ಮಧ್ಯೆ ರಾವಲ್ಪಿಂಡಿ ಸ್ಟೇಡಿಂಯನಲ್ಲಿ ಕ್ರಿಕೆಟ್ ಮ್ಯಾಚ್ ನಿಗದಿಯಾಗಿತ್ತು. ಆದರೆ ಈಗ ಪಾಕಿಸ್ತಾನವೂ ಭಾರತದ ಪ್ರಮುಖ 15 ನಗರಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಪ್ರಯತ್ನವನ್ನು ಧ್ವಂಸಗೊಳಿಸುವ ಭಾರತದ ಕಾರ್ಯಾಚರಣೆ ವೇಳೆ ರಾವಲ್ಪಿಂಡಿ ಸ್ಟೇಡಿಯಂ ಕೂಡ ಧ್ವಂಸಗೊಂಡಿದೆ. 

ತುರ್ತು ಸಭೆ ಕರೆದ ಪಿಸಿಬಿ:

ಇತ್ತ ಭಾರತೀಯ ಸೇನಾ ದಾಳಿಗಳಿಂದ ನಲುಗಿ ಹೋಗಿರುವ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ, ವಿದೇಶಿ ಆಟಗಾರರನ್ನು ಒಳಗೊಂಡ ಪಾಕಿಸ್ತಾನ್ ಸೂಪರ್ ಲೀಗ್ ಅನ್ನು ಸ್ಥಗಿತಗೊಳಿಸಬೇಕೆ ಎಂದು ಚರ್ಚಿಸಲು ತುರ್ತು ಸಭೆ ಕರೆದಿದೆ. ಆರು ಫ್ರಾಂಚೈಸಿಗಳನ್ನು ಒಳಗೊಂಡ ಪಾಕಿಸ್ತಾನ್‌ ಟಿ20 ಲೀಗ್, ಅಂತಿಮ ಹಂತದಲ್ಲಿದ್ದು, ಪ್ರಸ್ತುತ ರಾವಲ್ಪಿಂಡಿಯಲ್ಲಿ ನಡೆಯುತ್ತಿದೆ. ಮೇ 18 ರಂದು ಈ ಲೀಗ್‌ ಲಾಹೋರ್‌ನಲ್ಲಿ ಮುಕ್ತಾಯಗೊಳ್ಳಬೇಕಿದೆ. ಆದರೆ ಈ ಲೀಗ್ ಅನ್ನು ಮುಂದುವರಿಸುವ ಕುರಿತು ಸರ್ಕಾರದ ಸಲಹೆಯನ್ನು ಪಿಸಿಬಿ ಅನುಸರಿಸಲಿದೆ ಹಾಗೂ ಈ ಬಗ್ಗೆ ಇಂದು ತುರ್ತು ಸಭೆ ಕರೆದಿದ್ದು, ಚರ್ಚೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ವರದಿಯಾಗಿದೆ.

ಪ್ರಸ್ತುತ ದೇಶದ ಇಂದಿನ ಸ್ಥಿತಿಯನ್ನು ಸಭೆಯಲ್ಲಿ ಚರ್ಚಿಸುವ ಸಾಧ್ಯತೆ ಇದೆ. ಕ್ರಿಕೆಟಿಗರಿಗೆ ಪಾಕಿಸ್ತಾನ ಸೇನೆಯಿಂದ ಭಾರಿ ಭದ್ರತೆ ಒದಗಿಸಲಾಗಿದೆ ಎಂದು ಪಿಸಿಬಿ ವಕ್ತಾಋ ಅಮಿರ್ ಮಿರ್ ಹೇಳಿದ್ದಾರೆ. ಗಡಿಯ ಎರಡೂ ಕಡೆಗಳಲ್ಲಿ ಸರ್ಜಿಕಲ್ ಸ್ಟ್ರೈಕ್‌ಗಳು ನಡೆದಿವೆ ಆದರೆ ಅದು ಪಿಎಸ್‌ಎಲ್ ಮೇಲೆ ಪರಿಣಾಮ ಬೀರುತ್ತದೆ ಎಂದು ನಾವು ನಿರೀಕ್ಷಿಸುವುದಿಲ್ಲ. ಆದರೆ, ದೇವರು ನಿಷೇಧಿಸಿದರೆ, ವಿಷಯಗಳು ಉಲ್ಬಣಗೊಂಡರೆ, ನಮ್ಮ ಮುಂದಿನ ಹೆಜ್ಜೆಯನ್ನು ನಿರ್ಧರಿಸಲು ನಾವು ಒಟ್ಟಿಗೆ ಸೇರುತ್ತೇವೆ ಎಂದು ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.

ಪಿಎಸ್‌ಎಲ್ ಸಿಇಒ ಸಲ್ಮಾನ್ ನಸೀರ್ ರಾವಲ್ಪಿಂಡಿಯಲ್ಲಿ ವಿದೇಶಿ ಆಟಗಾರರನ್ನು ಭೇಟಿಯಾಗಿ ಪಿಸಿಬಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದು ಚಿಂತಿಸಬೇಕಾಗಿಲ್ಲ ಎಂದು ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ. ಈ ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಕೆಲವು ಫೇಮಸ್‌ ಅಂತರರಾಷ್ಟ್ರೀಯ ಆಟಗಾರರಾದ ಡೇವಿಡ್ ವಾರ್ನರ್ (ಕರಾಚಿ ಕಿಂಗ್ಸ್), ಜೇಸನ್ ಹೋಲ್ಡರ್ (ಇಸ್ಲಾಮಾಬಾದ್ ಯುನೈಟೆಡ್), ಮತ್ತು ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (ಇಸ್ಲಾಮಾಬಾದ್ ಯುನೈಟೆಡ್) ಆಡುತ್ತಿದ್ದಾರೆ.

Scroll to load tweet…

 

ಭಾರತದ ಮಿಲಿಟರಿ ನೆಲೆಗಳ ಮೇಲೆ ದಾಳಿಗೆ ಯತ್ನಿಸಿದ್ದ ಪಾಕ್

ಆಪರೇಷನ್ ಸಿಂದೂರ್ ಬಳಿಕ ಪಾಕಿಸ್ತಾನವೂ ಭಾರತೀಯ ನಾಗರಿಕರನ್ನು ಗುರಿಯಾಗಿಸಿ ಭಾರತ ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ನಡೆಸಿದ ದಾಳಿಯಲ್ಲಿ 15 ಭಾರತೀಯ ನಾಗರಿಕರು ಸಾವನ್ನಪ್ಪಿದ್ದರು. ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ನಂತರ ಪಾಕಿಸ್ತಾನವೂ ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ಗುಜರಾತ್ ಸೇರಿದಂತೆ ದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳ 15 ನಗರಗಳಲ್ಲಿನ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತದ ಮೇಲೆ ದಾಳಿಗೆ ಮುಂದಾಗಿತ್ತು. ಆದರೆ ಈ ದಾಳಿಯನ್ನು ವಿಫಲಗೊಳಿಸಲಾಗಿದೆ ಎಂದು ಭಾರತ ತಿಳಿಸಿದೆ. 

ಶ್ರೀನಗರ, ಪಠಾಣ್‌ಕೋಟ್, ಅಮೃತಸರ, ಲೂಧಿಯಾನ, ಚಂಡೀಗಢ ಮತ್ತು ಇತರ ಸ್ಥಳಗಳಲ್ಲಿರುವ ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಪಾಕಿಸ್ತಾನ ಮಾಡಿದ ಪ್ರಯತ್ನಗಳಿಗೆ ಪ್ರತಿಯಾಗಿ, ಲಾಹೋರ್ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಪಾಕಿಸ್ತಾನದ ವಾಯು ರಕ್ಷಣಾ ರಾಡಾರ್‌ಗಳು ಮತ್ತು ವ್ಯವಸ್ಥೆಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಪಡೆಗಳು ಪ್ರತಿದಾಳಿ ನಡೆಸಿವೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಪಾಕಿಸ್ತಾನ ನಡೆಸಿದ ದಾಳಿಯಂತೆಯೇ ಭಾರತೀಯ ಪಡೆಗಳ ಪ್ರತಿಕ್ರಿಯೆಯೂ ಅದೇ ಸ್ಥಳದಲ್ಲಿ ಅದೇ ತೀವ್ರತೆಯೊಂದಿಗೆ ಇತ್ತುಎಂದು ರಕ್ಷಣಾ ಮೂಲಗಳು ತಿಳಿಸಿವೆ. ಭಾರತದ ಮೇಲೆ ದಾಳಿಗೆ ಪಾಕಿಸ್ತಾನ ಡ್ರೋಣ್‌ಗಳು ಹಾಗೂ ಕ್ಷಿಪಣಿಗಳನ್ನು ಬಳಸಿತ್ತು. ಅವೆಲ್ಲವನ್ನು ಭಾರತದ ವಾಯು ರಕ್ಷಣಾ ವ್ಯವಸ್ಥೆ ಹೊಡೆದು ಹಾಕಿದೆ. ಪಾಕಿಸ್ತಾನದ ವಾಯು ರಕ್ಷಣೆಯನ್ನು ನಾಶಮಾಡಲು ಭಾರತವು ಇಸ್ರೇಲ್ ನಿರ್ಮಿತ ಹಾರ್ಪಿ ಡ್ರೋನ್‌ಗಳನ್ನು ಬಳಸಿದೆ. ಹಾಗೂ ತನ್ನ ನಗರಗಳನ್ನು ಗುರಿಯಾಗಿರಿಸಿಕೊಂಡು ಪಾಕ್‌ ಹಾರಿಸಿದ ಕ್ಷಿಪಣಿಗಳನ್ನು ಹೊಡೆದುರುಳಿಸಲು ರಷ್ಯಾ ನಿರ್ಮಿತ ಎಸ್ -400 ರಕ್ಷಣಾ ವ್ಯವಸ್ಥೆಯನ್ನು ಬಳಸಿದೆ ಎಂದು ವರದಿಯಾಗಿದೆ.

ಇತ್ತ ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಯುದ್ಧದ ಕಾರ್ಮೋಡ ದಟ್ಟವಾಗಿರುವ ಹಿನ್ನೆಲೆಯಲ್ಲಿ ಭಾರತದ ಜಮ್ಮು ಕಾಶ್ಮೀರ ಹಾಗೂ ಪಾಕಿಸ್ತಾನಕ್ಕೆ ಭೇಟಿ ನೀಡದಂತೆ ಹಲವು ದೇಶಗಳು ತಮ್ಮ ನಾಗರಿಕರಿಗೆ ಎಚ್ಚರಿಕೆಯ ಹೊಸ ಸುತ್ತೋಲೆ ಹೊರಡಿಸಿವೆ. ಸಿಂಗಾಪುರ್‌, ಚೀನಾ ಅಮೆರಿಕಾ ದೇಶಗಳು ಈ ದೇಶಗಳಿಂದ ಕೂಡಲೇ ಹೊರಡುವಂತೆ ತಮ್ಮ ನಾಗರಿಕರಿಗೆ ಕರೆ ನೀಡಿವೆ. ಇನ್ನೂ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಪಾಕಿಸ್ತಾನ್ ಸೂಪರ್‌ ಲೀಗ್ ಪಂದ್ಯಾವಳಿಗಳಲ್ಲಿ ಹಲವು ವಿದೇಶಿ ಕ್ರಿಕೆಟಿಗರು ಕೂಡ ಆಟವಾಡುತ್ತಿದ್ದಾರೆ. ಆದರೆ ಯುದ್ಧದ ಭೀತಿಯ ಹಿನ್ನೆಲೆಯಲ್ಲಿ ಪಾಕಿಸ್ತಾನ ತನ್ನ ದೇಶದ ಹಲವು ಏರ್‌ಪೋರ್ಟ್‌ಗಳಲ್ಲಿ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಿರುವುದರಿಂದ ಹಲವು ವಿದೇಶಿಗರು ಆತಂಕದಲ್ಲಿದ್ದಾರೆ.