ಖಲಿಸ್ತಾನಿ ಭಯೋತ್ಪಾದಕ ಅಮೃತ್‌ಪಾಲ್ ಸಿಂಗ್‌ನನ್ನು ಬಂಧಿಸುವ ಪ್ರಯತ್ನ ಈವರೆಗೂ ಯಶಸ್ವಿಯಾಗಿಲ್ಲ. ಇದರ ನಡುವೆ ಪಂಜಾಬ್ ಹಾಗಗೂ ಹರಿಯಾಣ ಹೈಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ನಡೆಸಿ ಪೊಲೀಸರಿಗೆ ಛೀಮಾರಿ ಹಾಕಿದೆ. ಇಷ್ಟು ದಿನಗಳಾದರೂ ಆತನನ್ನು ಬಂಧಿಸದೇ ಇರೋದಕ್ಕೆ ಕಾರಣವೇನು ಎಂದು ಕೇಳಿದೆ.
ನವದೆಹಲಿ (ಮಾ.21): ಆಪರೇಷನ್ ಅಮೃತ್‌ಪಾಲ್ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಆದರೆ, ಖಲಿಸ್ತಾನಿ ಭಯೋತ್ಪಾದಕನ ಸುಳಿವೇ ಇಲ್ಲ. ಇನ್ನೊಂದೆಡೆ ಭಾರತದಲ್ಲಿ ಅಮೃತ್ ಪಾಲ್ ಸಿಂಗ್ ಬಗ್ಗೆ ಕಾನೂನು ಕ್ರಮ ತೀವ್ರವಾದ ಬೆನ್ನಲ್ಲಿಯೇ ಅಮೆರಿಕ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾದಲ್ಲಿರುವ ಭಾರತೀಯ ದೂತವಾಸದ ಕಚೇರಿಯ ಮೇಲೆ ಖಲಿಸ್ತಾನಿ ಹೋರಾಟಗಾರರಿಂದ ದಾಳಿಯಾಗಿದೆ. ಮಂಗಳವಾರ ಪಂಜಾಬ್ ಪೊಲೀಸ್ ಹಾಗೂ ಹರಿಯಾಣ ಹೈಕೋರ್ಟ್ ಆಪರೇಷನ್ ಅಮೃತ್‌ಪಾಲ್ ಕುರಿತಾಗಿ ವಿಚಾರಣೆ ನಡೆಸಿದ್ದು ಮಾತ್ರವಲ್ಲದೆ, ಪಂಜಾಬ್ ಸರ್ಕಾರ ಹಾಗೂ ಪೊಲೀಸರಿಗೆ ಛೀಮಾರಿ ಹಾಕಿದೆ. ಆತನನ್ನು ಬಂಧಿಸುವ ಆಪರೇಷನ್ ಇಷ್ಟು ದಿನಗಳಿಂದ ನಡೆಯುತ್ತಿದೆ. ಇಲ್ಲಿಯವರೆಗೂ ಏನ್ ಮಾಡ್ತಾ ಇದ್ರಿ? ಪಂಜಾಬ್ ಪೊಲೀಸ್‌ನಲ್ಲಿ 80 ಸಾವಿರ ಸಿಬ್ಬಂದಿಗಳಿದ್ದಾರೆ. ಇಷ್ಟು ದೊಡ್ಡ ಪ್ರಮಾಣದ ಸಿಬ್ಬಂದಿ ಇದ್ದರೂ ಆಪರೇಷನ್ ಇನ್ನೂ ಯಶಸ್ವಿಯಾಗಿಲ್ಲ. ಆತ ಇನ್ನೂ ನಾಪತ್ತೆಯಾಗಿರುವುದರ ಕಾರಣವೇನು ಎಂದು ಛೀಮಾರಿ ಹಾಕಿದೆ. ಒಟ್ಟಾರೆ ಇಡೀ ಪಂಜಾಬ್ ಪೊಲೀಸ್‌ನ ಗುಪ್ತಚರ ವೈಫಲ್ಯವನ್ನು ಇದು ತೋರಿಸುತ್ತದೆ. ಇದೊಂದು ಪ್ರಕರಣದಿಂದ ನಿಮ್ಮ ಗುಪ್ತಚರ ವ್ಯವಸ್ಥೆ ಎಷ್ಟು ಗಟ್ಟಿಯಾಗಿದೆ ಎಂದು ತೋರಿಸುತ್ತದೆ ಎಂದು ಟೀಕೆ ಮಾಡಿದೆ. ಇನ್ನು ನಾಲ್ಕು ದಿನಗಳ ಬಳಿಕ ಇದೇ ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಸುತ್ತೇವೆ. ಈ ಪ್ರಕರಣದ ಕುರಿತಾಗಿ ಪಂಜಾಬ್ ಪೊಲೀಸ್ ಸ್ಟೇಟಸ್ ರಿಪೋರ್ಟ್ ಸಲ್ಲಿಸಬೇಕು ಎಂದು ಸೂಚಿಸಿದೆ.
ವಾರಿಸ್ ಪಂಜಾಬ್ ಡಿ ಸಂಘಟನೆಯ ಮುಖ್ಯಸ್ಥ ಮತ್ತು ಖಲಿಸ್ತಾನ್ ಪರ ಬೆಂಬಲಿಗ ಅಮೃತಪಾಲ್ ಸಿಂಗ್ ಅವರನ್ನು ಕಳೆದ ನಾಲ್ಕು ದಿನಗಳಿಂದ ಪೊಲೀಸರು ಹುಡುಕುತ್ತಿದ್ದಾರೆ. ಅಮೃತಪಾಲ್ ಎಲ್ಲಿದ್ದಾನೆ ಎನ್ನುವ ಬಗ್ಗೆ ಯಾರಲ್ಲೂ ಮಾಹಿತಿಯಿಲ್ಲ. ಆದರೆ, ಅಮೃತ್‌ಪಾಲ್‌ನ ತಂದೆ, ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿ ಮಗನನ್ನು ಜೈಲಿನಲ್ಲಿರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದರೆ. ಪೊಲೀಸರು ಮಾತ್ರ, ಅಮೃತಪಾಲ್ ಸ್ವತಂತ್ರ ಸಿಖ್ ದೇಶವನ್ನು ನಿರ್ಮಿಸಲು ಬಯಸಿದ್ದ ಎಂದು ಆರೋಪಿಸಿದ್ದಾರೆ. ಇದೀಗ ಅಮೃತಪಾಲ್ ಅವರ ಎನ್‌ಆರ್‌ಐ ಪತ್ನಿ ಕಿರಣ್‌ದೀಪ್ ಕೌರ್ ಮತ್ತು ಕುಟುಂಬದವರ ಬ್ಯಾಂಕ್ ಖಾತೆಗಳು, ಚಲನವಲನಗಳು ಮತ್ತು ಸಂಬಂಧಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಅಮೃತಪಾಲ್ ಅವರ 500 ಆಪ್ತ ಸ್ನೇಹಿತರ ಪಟ್ಟಿಯನ್ನೂ ತನಿಖೆಗೆ ಸಿದ್ಧಪಡಿಸಲಾಗಿದೆ.
ಇನ್ನೊಂದೆಡೆ ಪಂಜಾಬ್ ಸಿಎಂ ಭಗವಂತ್ ಮಾನ್ ಈ ಬಗ್ಗೆ ಮೊದಲ ಬಾರಿಗೆ ಹೇಳಿಕೆ ನೀಡಿದ್ದಾರೆ. ಪಂಜಾಬ್‌ನ ಶಾಂತಿಯ ವಿಚಾರವಾಗಿ ಯಾವುದೇ ರಾಜಿ ಇಲ್ಲ. ಆಮ್ ಆದ್ಮಿ ಪಕ್ಷ ದೇಶಪ್ರೇಮಿಗಳ ಪಕ್ಷ ಎಂದು ಹೇಳಿದ್ದಾರೆ.
ಖಲಿಸ್ತಾನ ದಾಳಿಗೆ ಬೆದರಿದ ಪಂಜಾಬ್ ಸರ್ಕಾರ, ಅಮೃತಪಾಲ್ ಸಿಂಗ್ ಆಪ್ತ ಜೈಲಿನಿಂದ ಬಿಡುಗಡೆ!
ಎನ್‌ಎಸ್‌ಎ ಬಲೆ: ಇನ್ನು ಅಮೃತ್‌ಪಾಲ್ ಸಿಂಗ್‌ನ್ನು ಬಂಧಿಸುವ ಬಗ್ಗೆ ಇದೇ ಮೊದಲ ಬಾರಿಗೆ ಎನ್‌ಎಸ್‌ಎ ಕಣಕ್ಕಿಳಿದಿದೆ. ಪಂಜಾಬ್ ಸರ್ಕಾರದ ವಕೀಲ ಈ ಕುರಿತಾಗಿ ಕೋರ್ಟ್‌ಗೆ ಮಾಹಿತಿಯನ್ನು ನೀಡಿದ್ದಾರೆ. ಅಮೃತ್‌ಪಾಲ್ ಸಿಂಗ್ ವಿಚಾರದಲ್ಲಿ ಎನ್‌ಎಸ್‌ಎ ಕಣಕ್ಕಿಳಿದೆ. ಕೆಲವೊಂದು ಮಾಹಿತಿಯನ್ನು ಕೋರ್ಟ್‌ನಲ್ಲಿ ಮುಕ್ತವಾಗಿ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಇನ್ನೊಂದೆಡೆ ಅರ್ಧ ಪಂಜಾಬ್‌ನಲ್ಲಿ ಮಧ್ಯಾಹ್ನ 12 ಗಂಟೆಯಿಂದ ಇಂಟರ್ನೆಟ್ ಸೇವೆ ಬಂದ್ ಮಾಡಲಾಗಿದೆ. ತರ್ನ್ ತರನ್, ಫಿರೋಜ್‌ಪುರ, ಮೋಗಾ, ಸಂಗ್ರೂರ್, ಅಮೃತ್‌ಸರದಲ್ಲಿ ಮಾರ್ಚ್ 23ರ ಮಧ್ಯಾಹ್ನ 12 ಗಂಟೆಯ ವರೆಗೆ ಇಂಟರ್ನೆಟ್ ಹಾಗೂ ಎಸ್‌ಎಂಎಸ್ ಸೇವೆ ಕಟ್ ಮಾಡಲಾಗಿದೆ.
ಗನ್, ಖಡ್ಗ, ಆಯುಧ ಹಿಡಿದು ಖಲಿಸ್ತಾನಿ ಬೆಂಬಲಿಗರ ದಾಂಧಲೆ: ಅಮೃತಸರದಲ್ಲಿ ಠಾಣೆ ಮೇಲೆ ದಾಳಿ
ಜಾರ್ಜಿಯಾದಲ್ಲಿ ತರಬೇತಿ ಪಡೆದಿದ್ದ ಅಮೃತ್‌ಪಾಲ್ ಸಿಂಗ್: ಒಂದೆಡೆ ಅಮೃತ್‌ಪಾಲ್ ಸಿಂಗ್‌ನ ಬಂಧನಕ್ಕೆ ಇಡೀ ಪಂಜಾಬ್‌ನಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದರೆ, ಗುಪ್ತಚರ ಇಲಾಖೆ ಈತನ ಬಗ್ಗೆ ಮಾಹಿತಿ ಕಲೆಹಾಕುತ್ತಿದೆ. ಶಸ್ತ್ರಾಸ್ತ್ರಗಳನ್ನು ಹೇಗೆ ಬಳಸುವುದು ಎನ್ನುವ ಬಗ್‌ಗೆ ಅಮೃತ್‌ಪಾಲ್ ಜಾರ್ಜಿಯಾದಲ್ಲಿ ತರಬೇತಿ ಪಡೆದಿದ್ದ ಇದರಲ್ಲಿ ಪಾಕಿಸ್ತಾನದ ಐಎಸ್‌ಐ ಕೈವಾಡವಿದೆ ಎಂದು ಹೇಳಲಾಗಿದೆ. ಭಾರತದಲ್ಲಿ ಹಾಗೂ ಪಂಜಾಬ್‌ನಲ್ಲಿ ಶಾಂತಿ ಕದಡುವ ಬಗ್ಗೆ ಜಾರ್ಜಿಯಾದಲ್ಲಿ ದೊಡ್ಡ ಮಟ್ಟದ ತರಬೇತಿ ಪಡೆದುಕೊಂಡಿದ್ದ ಎನ್ನುವ ಮಾಹಿತಿ ಹೊರಬಿದ್ದಿದೆ.
