ಭಾರತದಲ್ಲಿದೆ ಡೈನೋಸಾರ್‌ಗಿಂತ ಹಳೇ ಪರ್ವತ, ಅಚ್ಚರಿ ವಿಡಿಯೋ ಹಂಚಿದ ಆನಂದ್ ಮಹೀಂದ್ರ, ನಮ್ಮಲ್ಲೇ ಈ ಅದ್ಭುತ ತಾಣವಿದೆ ಅನ್ನೋದು ಹಲವರಿಗೆ ಗೊತ್ತಿಲ್ಲ ಎಂದಿರುವ ಉದ್ಯಮಿ, ನೀವು ಜಗತ್ತಿನ ಸೃಷ್ಟಿಯನ್ನು ನೋಡಿಕೊಂಡು ಬನ್ನಿ ಎಂದಿದ್ದಾರೆ. 

ಮುಂಬೈ (ಮಾ.23) ಭಾರತದಲ್ಲಿನ ಹಲವು ಅಚ್ಚರಿಗಳು ಮಣ್ಣಲ್ಲಿ ಹುದುಗಿ ಹೋಗಿದೆ. ಮತ್ತೆ ಕೆಲವು ಪ್ರತ್ಯಕ್ಷ ಕಂಡರೂ ಹಲವರಿಗೆ ಗೊತ್ತೇ ಇಲ್ಲ. ಇಂತಹ ತಾಣಗಳನ್ನು ಸಂರಕ್ಷಿಸುವ ಕೆಲಸವನ್ನೂ ಅತೀ ಉತ್ಸಾಹದಿಂದ ಯಾವ ಸರ್ಕಾರಗಳು ಮಾಡಿಲ್ಲ. ಇದೀಗ ಭಾರತದಲ್ಲೇ ಡೈನಾಸಾರ್‌ಗಿಂತ ಹಳೇ ಅಂದರೆ ಸುಮಾರು 65 ರಿಂದ 66 ಮಿಲಿಯನ್ ವರ್ಷಗಳ ಹಿಂದೆ ಜ್ವಾಲಾಮುಖಿಯ ಲಾವಾದಿಂದ ಸೃಷ್ಟಿಯಾದ ಪರ್ವತ ಒಂದು ಇದೆ. ಆದರೆ ಇದರ ಪಕ್ಕದಲ್ಲೇ ಪ್ರತಿ ದಿನ ಓಡಾಡತ್ತಿದ್ದರೂ ಇದು ಅದ್ಭುತ ತಾಣ ಅನ್ನೋದು ಬಹುತೇಕರಿಗೆ ಗೊತ್ತೇ ಇಲ್ಲ. ಇದೀಗ ಉದ್ಯಮಿ ಆನಂದ್ ಮಹೀಂದ್ರ ಕೂಡ ತನಗೂ ಈ ಮಾಹಿತಿ ಗೊತ್ತೇ ಇರಲಿಲ್ಲ ಎಂದಿದ್ದಾರೆ.

ಗಿಲ್‌ಬರ್ಟ್ ಹಿಲ್

ಗಿಲ್‌ಬರ್ಟ್ ಹಿಲ್ ಹೆಸರನ್ನು ಬಹುತೇಕರು ಕೇಳಿಲ್ಲ. ಕೇಳಿದರೂ ಇದರಲ್ಲೇನು ವಿಶೇಷ ಎಂದು ಮುಂದೆ ಸಾಗಿದವರೇ ಹೆಚ್ಚು. ಈ ಪರ್ವ ಮುಂಬೈನಲ್ಲಿದೆ. ಕಪ್ಪು ಬಣ್ಣದ ಬರೋಬ್ಬರಿ 200 ಅಡಿ ಎತ್ತರದ ಏಕಶಿಲಾ ಪರ್ವತ ಇದು. ಇದು ಪ್ರಾಕೃತಿಕವಾಗಿ ನಿರ್ಮಾಣಗೊಂಡ ಅದ್ಭುತ. ಬರೋಬ್ಬರಿ 6.5 ಕೋಟಿ ಯಿಂದ 6.6 ಕೋಟಿ ವರ್ಷಗಳಷ್ಟು ಹಳೇ ಪರ್ವತ. ಮಧ್ಯ ಭಾರತದಲ್ಲಿ 6.6 ಕೋಟಿ ವರ್ಷಗಳ ಹಿಂದೆ ಜ್ವಾಲಾಮುಖಿ ಲಾವ ರಸದಿಂದ ಸೃಷ್ಟಿಯಾದ ಪರ್ವತ ಇದು. ಈ ಕುರಿತು ಆನಂದ್ ಮಹೀಂದ್ರ ವಿಡಿಯೋ ಹಂಚಿಕೊಂಡಿದ್ದಾರೆ.

ಆನಂದ್ ಮಹೀಂದ್ರ ಹೇಳಿದ್ದೇನು?

ನಿಮ್ಮ ಮನೆ ಪಕ್ಕದಲ್ಲೇ ಇರುವ ಜಗತ್ತಿನ ಸೃಷ್ಟಿಯ ಆರಂಭಿಕ ದಿನಗಳ ಅದ್ಭುತ ತಾಣ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಇರಲಿ. ಅದ್ಭುತ ಎಂದರೆ ಹೀಗೆ ಲಾವಾ ರಸದಿಂದ ಸೃಷ್ಟಿಯಾದ ಅತೀ ಎತ್ತರದ ಪರ್ವತಗಳು ಜಗತ್ತಿನಲ್ಲಿ ಮೂರು ಇದೆ. ಅದರಲ್ಲಿ ಮುಂಬೈನ ಗಿಲ್‌ಬರ್ಟ್ ಹಿಲ್ ಕೂಡ ಒಂದು. ಮುಂಬೈನಲ್ಲೇ ಇದ್ದರೂ ನನಗೆ ಇದರ ಮಾಹಿತಿಯೇ ಇರಲಿಲ್ಲ. ಇದನ್ನು ಹೇಗೆ ನಾವು ಪ್ರವಾಸಿ ತಾಣವಾಗಿ ಮಾಡಬಹುದು ಎಂದು ಆನಂದ್ ಮಹೀಂದ್ರ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ಬೃಹತ್ ಏಕಶಿಲಾ ಸ್ತಂಭ

ವಿಶ್ವದಲ್ಲಿ ಈ ರೀತಿ ಜ್ವಾಲಾಮುಖಿ ಲಾವಾ ರಸದಿಂದ ಸೃಷ್ಟಿಯಾದ ಹಲವು ಅದ್ಭುತ ತಾಣಗಳಿವೆ. ಆದರೆ ಜಗತ್ತಿನಲ್ಲಿ ಕೇವಲ ಮೂರೇ ಮೂರು ಅತೀ ಎತ್ತರದ ಏಕಶಿಲಾ ಸ್ತಂಭಗಳಿವೆ. ಅಮೆರಿಕದ ವ್ಯೋಮಿಂಗ್‌ನಲ್ಲಿರುವ ಡೇವಿಲ್ ಟವರ್, ಕ್ಯಾಲಿಫೋರ್ನಿಯಾದಲ್ಲಿರುವ ಡೆವಿಲ್ ಪೋಸ್ಟ್‌ಪೈಲ್ ಹಾಗೂ ಮುಂಬೈನಲ್ಲಿರುವ ಗಿಲ್‌ಬರ್ಟ್ ಹಿಲ್. ಗಿಲ್‌ಬರ್ಟ್ ಹಿಲ್ ಮುಂಬೈನ ಅಂಧೇರಿ ವೆಸ್ಟ್‌ನಲ್ಲಿದೆ.

Scroll to load tweet…