ಮೂಲಗಳ ಪ್ರಕಾರ, ರೈಲ್ವೆಯ ಸಿಗ್ನಲಿಂಗ್‌ ಹಾಗೂ ಕಾರ್ಯನಿರ್ವಹಣೆ (ಸಂಚಾರ) ವಿಭಾಗದ ಸಿಬ್ಬಂದಿಯೇ ಈ ದುರಂತಕ್ಕೆ ಹೊಣೆಗಾರರು ಎಂದು ಆಯುಕ್ತರು ಬೊಟ್ಟು ಮಾಡಿದ್ದಾರೆ. ಹೊರಗಿನವರ ಕೈವಾಡದ ಕುರಿತು ಸಿಬಿಐ ತನಿಖೆ ನಡೆಸುತ್ತಿದ್ದರೂ, ಅಂತಹ ಸಾಧ್ಯತೆ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ.

ನವದೆಹಲಿ (ಜುಲೈ 2, 2023): 290 ಪ್ರಯಾಣಿಕರನ್ನು ಬಲಿ ಪಡೆದ ಒಡಿಶಾ ರೈಲು ದುರಂತದಲ್ಲಿ ಹೊರಗಿನವರ ಕೈವಾಡದ ಕುರಿತು ಎದ್ದಿದ್ದ ಅನುಮಾನಗಳನ್ನು ತಳ್ಳಿ ಹಾಕಿರುವ ರೈಲ್ವೆ ಸುರಕ್ಷತಾ ಆಯುಕ್ತರು, ಜೂನ್ 2ರ ಈ ದುರ್ಘಟನೆಗೆ ಎರಡು ಇಲಾಖೆಯ ಸಿಬ್ಬಂದಿಯ ಎಡವಟ್ಟೇ ಕಾರಣ ಎಂದು ದೂಷಿಸಿದ್ದಾರೆ. ರೈಲು ದುರಂತದ ಕುರಿತು ತನಿಖೆ ನಡೆಸಿ ವರದಿಯನ್ನು ಬುಧವಾರ ರೈಲ್ವೆ ಮಂಡಳಿಗೆ ಸುರಕ್ಷತಾ ಆಯುಕ್ತರು ಸಲ್ಲಿಕೆ ಮಾಡಿದ್ದಾರೆ. ಈಗಾಗಲೇ ಸಿಬಿಐ ತನಿಖೆ ನಡೆಯುತ್ತಿರುವ ಕಾರಣ ಈ ವರದಿಯ ಕುರಿತು ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಮೂಲಗಳ ಪ್ರಕಾರ, ರೈಲ್ವೆಯ ಸಿಗ್ನಲಿಂಗ್‌ ಹಾಗೂ ಕಾರ್ಯನಿರ್ವಹಣೆ (ಸಂಚಾರ) ವಿಭಾಗದ ಸಿಬ್ಬಂದಿಯೇ ಈ ದುರಂತಕ್ಕೆ ಹೊಣೆಗಾರರು ಎಂದು ಆಯುಕ್ತರು ಬೊಟ್ಟು ಮಾಡಿದ್ದಾರೆ. ಹೊರಗಿನವರ ಕೈವಾಡದ ಕುರಿತು ಸಿಬಿಐ ತನಿಖೆ ನಡೆಸುತ್ತಿದ್ದರೂ, ಅಂತಹ ಸಾಧ್ಯತೆ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ.

ಇದನ್ನು ಓದಿ: ಒಡಿಶಾ ರೈಲು ಅಪಘಾತವಾಗಿ 27 ದಿನ: ಇನ್ನೂ ಪತ್ತೆ ಆಗದ 81 ಶವಗಳ ಗುರುತು; ಶವಗಳಿಗಾಗಿ ಕಾಯುತ್ತಿರುವ 35 ಕುಟುಂಬಗಳು

ದುರಂತ ಹೇಗಾಯ್ತು?:
ಮಾರ್ಗದಲ್ಲಿ ಕೆಲವೊಂದು ದುರಸ್ತಿ ಕಾರ್ಯವನ್ನು ನಡೆಸುವ ಸಲುವಾಗಿ ನಿಯಮ ಪ್ರಕಾರವಾಗಿ ಸಿಗ್ನಲ್‌ ನಿರ್ವಾಹಕರು ಸಂಪರ್ಕ ಕಡಿತಗೊಳಿಸುವ ಸಂಬಂಧ ಮನವಿಯನ್ನು ಸಲ್ಲಿಕೆ ಮಾಡಿದ್ದರು. ಕಾಮಗಾರಿ ಮುಗಿದ ಬಳಿಕ ಮರುಸಂಪರ್ಕಕ್ಕೆ ಅನುಮತಿಯನ್ನೂ ನೀಡಲಾಗಿತ್ತು. ಆದರೆ ಕಾಮಗಾರಿ ಮುಗಿದ ಬಳಿಕ ರೈಲು ಸಂಚಾರ ಆರಂಭಿಸುವ ಮೊದಲು ಸಿಗ್ನಲಿಂಗ್‌ ವ್ಯವಸ್ಥೆಯ ಪರೀಕ್ಷಾ ಶಿಷ್ಟಾಚಾರವನ್ನು ಪಾಲಿಸಲಾಗಿರಲಿಲ್ಲ. 

ಮರುಸಂಪರ್ಕಕ್ಕೆ ಅನುಮತಿ ನೀಡಿದ ಬಳಿಕವೂ ಸಿಗ್ನಲಿಂಗ್‌ ಸಿಬ್ಬಂದಿ ಕಾಮಗಾರಿಯನ್ನು ಮುಂದುವರಿಸಿದ್ದರು. ಇದಾದ ಬಳಿಕ ಕೋಲ್ಕತಾದ ಶಾಲಿಮಾರ್‌ನಿಂದ ಚೆನ್ನೈಗೆ ತೆರಳುತ್ತಿದ್ದ ಕೋರಮಂಡಲ ಎಕ್ಸ್‌ಪ್ರೆಸ್‌ ರೈಲು ಸಾಗಲು ಹಸಿರು ನಿಶಾನೆ ದೊರೆತಿತ್ತು. ಆದರೆ ಹಳಿಯನ್ನು ಬದಲಿಸಬೇಕಾಗಿದ್ದ ಉಪಕರಣ ಆ ರೈಲನ್ನು ಲೂಪ್‌ ಲೈನ್‌ನತ್ತ ತಿರುಗಿಸಿತ್ತು ಎಂದು ಸುರಕ್ಷತಾ ಆಯುಕ್ತರು ತಿಳಿಸಿದ್ದಾರೆ.

ಇದನ್ನೂ ಓದಿ: ಒಡಿಶಾ ರೈಲು ದುರಂತ: ಗುರುತೇ ಸಿಗದೆ ಅನಾಥವಾದ 83 ಶವ; ಕೃತಕ ಬುದ್ಧಿಮತ್ತೆ ಬಳಸಿ ಮೃತರ ಗುರುತು ಪತ್ತೆಗೆ ಯತ್ನ

ಕೋರಮಂಡಲ ಎಕ್ಸ್‌ಪ್ರೆಸ್‌ ಜೂನ್ 2ರಂದು ಲೂಪ್‌ಲೈನ್‌ನಲ್ಲಿ ನಿಂತಿದ್ದ ಗೂಡ್ಸ್‌ ರೈಲಿಗೆ ಡಿಕ್ಕಿ ಹೊಡೆದು ಹಳಿ ತಪ್ಪಿತ್ತು. ಇದೇ ವೇಳೆ, ಬೆಂಗಳೂರಿನಿಂದ ಕೋಲ್ಕತಾದ ಹೌರಾಕ್ಕೆ ತೆರಳುತ್ತಿದ್ದ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ನ ಕೊನೆಯ ಬೋಗಿಗಳಿಗೆ ಹಳಿ ತಪ್ಪಿದ್ದ ಕೋರಮಂಡಲ ಎಕ್ಸ್‌ಪ್ರೆಸ್‌ನ ಬೋಗಿಗಳು ಡಿಕ್ಕಿಯಾಗಿ ಅಪಘಾತ ಉಂಟಾಗಿತ್ತು.

ಇದನ್ನೂ ಓದಿ: ಒಡಿಶಾದಲ್ಲಿ ಮತ್ತೊಂದು ಅವಘಡ: ಇದ್ದಕ್ಕಿದ್ದಂತೆ ಎಕ್ಸ್‌ಪ್ರೆಸ್‌ ರೈಲಿಗೆ ಹೊತ್ತಿಕೊಂಡ ಬೆಂಕಿ; ಕಂಗಾಲಾದ ಪ್ರಯಾಣಿಕರು