ಒಡಿಶಾದ ಮಲ್ಕನ್‌ಗಿರಿಯ ಸರ್ಕಾರಿ ಬಾಲಕಿಯರ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ. ಪರೀಕ್ಷೆ ಮುಗಿಸಿ ಬಂದ ಕೆಲವೇ ಗಂಟೆಗಳಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಮತ್ತು ಜಿಲ್ಲಾಡಳಿತ ತನಿಖೆ ನಡೆಸುತ್ತಿದ್ದಾರೆ.
ಕೊರಪುಟ್: ಪರೀಕ್ಷೆ ಮುಗಿಸಿ ಬಂದ ಹಾಸ್ಟೆಲ್‌ಗೆ ಬಂದ ವಿದ್ಯಾರ್ಥಿಯೊಬ್ಬಳು, ಹಾಸ್ಟೆಲ್‌ನಲ್ಲಿ ಮಗುವಿಗೆ ಜನ್ಮ ನೀಡಿದಂತಹ ಆಘಾತಕಾರಿ ಘಟನೆ ಒಡಿಶಾದ ಮಲ್ಕನ್‌ಗಿರಿಯಲ್ಲಿ ನಡೆದಿದೆ. ಸರ್ಕಾರಿ ಬಾಲಕಿಯರ ಹಾಸ್ಟೆಲ್‌ನಲ್ಲಿ ಸೋವಾರ ರಾತ್ರಿ ಈ ಘಟನೆ ನಡೆದಿದೆ. 10ನೇ ತರಗತಿಯ ಇಂಗೀಷ್ ಪರೀಕ್ಷೆ ಬರೆದು ಹಾಸ್ಟೆಲ್‌ಗೆ ಬಂದ ಬಾಲಕಿ ಕೆಲವೇ ಗಂಟೆಗಳಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಈಗ ಪೊಲೀಸರು ಹಾಗೂ ಜಿಲ್ಲಾಡಳಿತ ಪ್ರತ್ಯೇಕವಾದ ತನಿಖೆಗೆ ಇಳಿದಿದೆ.
ಬಾಲಕಿ ಗರ್ಭಿಣಿಯಾಗುವುದಕ್ಕೆ ಕಾರಣನಾದ ಆರೋಪಿಯನ್ನು ಪೊಲೀಸರು ಗುರುತಿಸಿದ್ದು, ಆತನ ಚಟುವಟಿಕೆಗಳನ್ನು ಹತ್ತಿರದಿಂದ ಗಮನಿಸುತ್ತಿದ್ದಾರೆ. ಈ ಆರೋಪಿ ಹಾಗೂ ಮಗುವಿಗೆ ಜನ್ಮ ನೀಡಿದ ಬಾಲಕಿ ಇಬ್ಬರೂ ಒಂದೇ ಗ್ರಾಮಕ್ಕೆ ಸೇರಿದವರಾಗಿದ್ದು, ಆತನನ್ನು ಕೂಡಲೇ ಬಂಧಿಸಲಾಗುವುದು ಎಂದು ಇನ್ಸ್‌ಪೆಕ್ಟರ್ ಮುಕುಂದ್ ಮೆಲಕಾ ಹೇಳಿದ್ದಾರೆ.
ಬಾಲಕಿಯ ಪೋಷಕರಿಗೆ ರಾತ್ರಿ 9.14ಕ್ಕೆ ಹಾಸ್ಟೆಲ್ ಆಡಳಿತದಿಂದ ಕರೆ ಬಂದಿದ್ದು, ನಿಮ್ಮ ಪುತ್ರಿ ಕಾಣೆಯಾಗಿದ್ದಾಳೆ. ಹೀಗಾಗಿ ಕೂಡಲೇ ಹಾಸ್ಟೆಲ್‌ಗೆ ಬಂದು ಭೇಟಿಯಾಗುವಂತೆ ಅವರಿಗೆ ಸೂಚಿಸಲಾಗಿತ್ತು. ಹಾಸ್ಟೆಲ್‌ಗೆ ಬಂದು ತಲುಪುತ್ತಿದ್ದಂತೆ ಅಲ್ಲಿ ಅವರಿಗೆ ಅವರ ಮಗಳು ಹೆಣ್ಣು ಮಗುವಿಗೆ ಜನ್ಮ ನೀಡಿರುವುದರ ಬಗ್ಗೆ ಮಾಹಿತಿ ನೀಡಲಾಯ್ತು. ನನಗೆ ಈ ವಿಚಾರ ಕೇಳಿ ಆಘಾತವಾಯ್ತು. ನಾನು ಆಕೆಯನ್ನು ಮಧ್ಯಾಹ್ನ 12.45ಕ್ಕೆ ಭೇಟಿಯಾಗಿದ್ದೇನೆ. ಈ ವೇಳೆ ಆಕೆಯಲ್ಲಿ ಗರ್ಭಿಣಿ ಮಹಿಳೆಯ ಯಾವ ಲಕ್ಷಣಗಳು ಇರಲಿಲ್ಲ ಎಂದು ಬಾಲಕಿಯ ತಂದೆ ಹೇಳಿಕೊಂಡಿದ್ದು, ಹಾಸ್ಟೆಲ್ ಆಡಳಿತ ಮಂಡಳಿ ವಿರುದ್ಧ ನಿರ್ಲಕ್ಷ್ಯದ ಆರೋಪ ಮಾಡಿದ್ದಾರೆ. ಅಲ್ಲದೇ ಮಗಳು ಗರ್ಭಕ್ಕೆ ಕಾರಣನಾದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾರೆ.
ಜಿಲ್ಲಾಡಳಿತದಿಂದ ತನಿಖೆ
ಸರ್ಕಾರ ನಡೆಸುವ ಈ ಹಾಸ್ಟೆಲ್‌ನಲ್ಲಿ ಪೋಷಕರು ಮಕ್ಕಳನ್ನು ಭೇಟಿಯಾಗುವುದಕ್ಕೆ ಹಲವು ನಿರ್ಬಂಧಗಳಿವೆ. ಹೀಗಿರುವಾಗ ಶಾಲೆಯ ಆಡಳಿತಕ್ಕೂ ತಿಳಿಯದಂತೆ ನನ್ನ ಮಗಳು ಅದ್ಹೇಗೆ ಗರ್ಭಿಣಿಯಾದಳು? ಅವರ ಕಡೆಯಿಂದ ಈ ವಿಚಾರದಲ್ಲಿ ದೊಡ್ಡ ಲೋಪವಾಗಿದೆ, ಈ ವಿಚಾರದಲ್ಲಿ ನಮಗೆ ನ್ಯಾಯ ಬೇಕು ಎಂದು ಬಾಲಕಿಯ ತಂದೆ ಆಗ್ರಹಿಸಿದ್ದಾರೆ. ಹೇಗೆ ತನ್ನ ಮಗಳು ಈ ಸ್ಥಿತಿಯನ್ನು ಶಾಲೆಯ ಅಧಿಕಾರಿಗಳು ಗಮನಿಸದೆ ಮಗಳು ತರಗತಿಗಳಿಗೆ ಹಾಜರಾಗಿ ಪರೀಕ್ಷೆಗೆ ಹಾಜರಾದಳು ಎಂದು ಅವರು ಪ್ರಶ್ನಿಸಿದರು.
ಘಟನೆ ಕುರಿತು ಜಿಲ್ಲಾಡಳಿತ ಪ್ರತ್ಯೇಕ ತನಿಖೆ ಆರಂಭಿಸಿದೆ. ಹೈಸ್ಕೂಲ್ ಸರ್ಟಿಫಿಕೇಟ್ (HSC) ಪರೀಕ್ಷೆ ಬರೆದ ನಂತರ ಸಂಜೆ ತಡರಾತ್ರಿ ವಿದ್ಯಾರ್ಥಿನಿ ತನ್ನ ಹಾಸ್ಟೆಲ್ ಕೋಣೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಜಿಲ್ಲಾ ಕಲ್ಯಾಣ ಅಧಿಕಾರಿ (ಡಿಡಬ್ಲ್ಯೂಒ) ಶ್ರೀನಿಬಾಸ್ ಆಚಾರಿ ತಿಳಿಸಿದ್ದಾರೆ. ಅವಧಿಪೂರ್ವ ಹೆರಿಗೆಯಾಗಿದ್ದರಿಂದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಆಚಾರಿ ತಿಳಿಸಿದ್ದಾರೆ.
ಅಧಿಕೃತ ವಿಚಾರಣೆಯನ್ನು ಪ್ರಾರಂಭಿಸಲಾಗಿದೆ ಮತ್ತು ತಪ್ಪಿತಸ್ಥರ ವಿರುದ್ಧ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು. ನಾನು ಈ ವಿಷಯವನ್ನು ಖುದ್ದಾಗಿ ತನಿಖೆ ಮಾಡುತ್ತಿದ್ದೇನೆ. ಬಾಲಕಿ ದಸರಾ ರಜೆಯಲ್ಲಿ ಆಕೆಯ ಗ್ರಾಮಕ್ಕೆ ಭೇಟಿ ನೀಡಿದ್ದಳು ಮತ್ತು ಹೀಗಾಗಿ ಎಲ್ಲಾ ಕೋನಗಳಿಂದ ಪರಿಶೀಲಿಸಲಾಗುತ್ತದೆ. ಯಾವುದೇ ಅಧಿಕಾರಿ ತಮ್ಮ ಕರ್ತವ್ಯವನ್ನು ನಿರ್ಲಕ್ಷಿಸಿದರೆ ಅವರನ್ನು ಸುಮ್ಮನೆ ಬಿಡಲಾಗುವುದಿಲ್ಲ ಎಂದು ಅವರು ಹೇಳಿದರು.
