- Home
- News
- India News
- ದೆವ್ವಗಳಿಗೂ ಶಿಕ್ಷೆ ನೀಡಲು ಇದೆ ದೇಗುಲ.. ಪ್ರೇತಾತ್ಮಗಳಿಗೆ ಮುಕ್ತಿ ಕಲ್ಪಿಸುವ ಇಲ್ಲಿನ ನಿಯಮಗಳೇ ವಿಚಿತ್ರ
ದೆವ್ವಗಳಿಗೂ ಶಿಕ್ಷೆ ನೀಡಲು ಇದೆ ದೇಗುಲ.. ಪ್ರೇತಾತ್ಮಗಳಿಗೆ ಮುಕ್ತಿ ಕಲ್ಪಿಸುವ ಇಲ್ಲಿನ ನಿಯಮಗಳೇ ವಿಚಿತ್ರ
ದೆವ್ವ, ಭೂತ, ಪ್ರೇತಗಳ ಕಾಟ ಅನ್ನೋದೆಲ್ಲ ಮೂಢನಂಬಿಕೆ ಅನ್ನೋದು ಹಲವರ ವಾದ. ಆದರೆ ಇಲ್ಲೊಂದು ದೇಗುಲ ಇದೆ. ಅದು ದೆವ್ವಗಳ ಬಿಡಿಸೋದಕ್ಕೇ ಫೇಮಸ್. ಭಾರತದಲ್ಲಿರುವ ಪ್ರಸಿದ್ಧ ದೇಗುಲದ ವಿಶೇಷತೆ ಈ ಸ್ಟೋರಿಯಲ್ಲಿದೆ..

ಮೆಹಂದೀಪುರ ಬಾಲಾಜಿ ದೇವಾಲಯ
ಭಾರತವು ಅನೇಕ ಪುರಾತನ ಮತ್ತು ಪವಾಡ ದೇವಾಲಯಗಳ ತವರೂರು. ಕೆಲವು ದೇವಾಲಯಗಳು ಅವುಗಳ ವಾಸ್ತುಶಿಲ್ಪಕ್ಕೆ ಹೆಸರಾಗಿದ್ದರೆ, ಇನ್ನು ಕೆಲವು ಅಲ್ಲಿ ನಡೆಯುವ ಅಚ್ಚರಿಗಳಿಗೆ ಪ್ರಸಿದ್ಧವಾಗಿವೆ. ಅಂತಹ ಅತ್ಯಂತ ರಹಸ್ಯಮಯ ಮತ್ತು ಚರ್ಚೆಗೀಡಾಗುವ ಪುಣ್ಯಕ್ಷೇತ್ರಗಳಲ್ಲಿ ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿರುವ 'ಮೆಹಂದೀಪುರ ಬಾಲಾಜಿ ದೇವಾಲಯ' ಪ್ರಮುಖವಾದದ್ದು!
ಇಲ್ಲಿ ಹನುಮಂತನು ಬಾಲ ರೂಪದಲ್ಲಿ ನೆಲೆಸಿದ್ದಾನೆ ಎಂಬುದು ಭಕ್ತರ ಗಾಢ ನಂಬಿಕೆ. ಈ ದೇವಾಲಯದ ವಿಶೇಷತೆ ಮತ್ತು ಅಲ್ಲಿನ ನಿಗೂಢ ಸಂಪ್ರದಾಯಗಳ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ದುಷ್ಟಶಕ್ತಿಗಳಿಂದ ಮುಕ್ತಿ..!
ಸಾಮಾನ್ಯವಾಗಿ ಜನರು ಶಾಂತಿಗಾಗಿ ದೇವಸ್ಥಾನಕ್ಕೆ ಹೋಗುತ್ತಾರೆ. ಆದರೆ ಮೆಹಂದೀಪುರ ಬಾಲಾಜಿಗೆ ಬರುವವರ ಉದ್ದೇಶವೇ ಬೇರೆಯಾಗಿರುತ್ತದೆ. ದುಷ್ಟಶಕ್ತಿಗಳ ಬಾಧೆ, ಪ್ರೇತಾತ್ಮಗಳ ಕಾಟ ಅಥವಾ ನಕಾರಾತ್ಮಕ ಪ್ರಭಾವಗಳಿಂದ ಬಳಲುತ್ತಿರುವವರು ಅದರಿಂದ ಮುಕ್ತಿ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ. ಇಲ್ಲಿನ ಬಾಲಾಜಿಯ ದರ್ಶನ ಪಡೆದರೆ ಎಂತಹ ಕೆಟ್ಟ ಶಕ್ತಿಗಳೂ ದೂರವಾಗುತ್ತವೆ ಎಂಬ ನಂಬಿಕೆ ಜನರಲ್ಲಿದೆ.
ದೈವಿಕ ಶಕ್ತಿ vs ದುಷ್ಟ ಶಕ್ತಿ
ಈ ದೇವಾಲಯದ ವಾತಾವರಣವು ಇತರ ಸಾಮಾನ್ಯ ದೇವಸ್ಥಾನಗಳಿಗಿಂತ ಸಂಪೂರ್ಣ ಭಿನ್ನ.ದೇವಸ್ಥಾನದ ಆವರಣಕ್ಕೆ ಕಾಲಿಡುತ್ತಿದ್ದಂತೆಯೇ ಒಂದು ರೀತಿಯ ವಿಭಿನ್ನ ಅನುಭವ ಆಗುತ್ತದೆ. ಇಲ್ಲಿ ಕೆಲವರು ಜೋರಾಗಿ ಕೂಗುವುದು, ಅಳುವುದು ಅಥವಾ ವಿಚಿತ್ರವಾಗಿ ವರ್ತಿಸುವುದು ಕಂಡುಬರುತ್ತದೆ. ಇದನ್ನು ಸ್ಥಳೀಯವಾಗಿ ದೈವಿಕ ಶಕ್ತಿ ಮತ್ತು ದುಷ್ಟಶಕ್ತಿಗಳ ನಡುವಿನ ಹೋರಾಟ ಎಂದು ನಂಬುತ್ತಾರೆ.
ಪ್ರೇತರಾಜ ಸರ್ಕಾರ್ ನ್ಯಾಯಾಲಯ..!
ಈ ಕ್ಷೇತ್ರದಲ್ಲಿ ಕೇವಲ ಬಾಲಾಜಿ ಮಾತ್ರವಲ್ಲದೆ ಭೈರವ ಬಾಬಾ ಮತ್ತು ಪ್ರೇತರಾಜ ಸರ್ಕಾರ್ ಕೂಡ ನೆಲೆಸಿದ್ದಾರೆ. ಸ್ಥಳೀಯ ನಂಬಿಕೆಯ ಪ್ರಕಾರ ಪ್ರೇತರಾಜ ಸರ್ಕಾರ್ ದುಷ್ಟಶಕ್ತಿಗಳ ಮೇಲೆ ತೀರ್ಪು ನೀಡುವ ನ್ಯಾಯಾಧೀಶರಂತೆ ಕಾರ್ಯನಿರ್ವಹಿಸುತ್ತಾರೆ. ಈ ಕಾರಣಕ್ಕಾಗಿಯೇ ಈ ದೇವಾಲಯವನ್ನು ದುಷ್ಟಶಕ್ತಿಗಳ ವಿಚಾರಣೆ ನಡೆಯುವ ಸ್ಥಳ ಎಂದು ಕರೆಯಲಾಗುತ್ತದೆ.
ಇಲ್ಲಿನ ಕಠಿಣ ನಿಯಮಗಳು..
- ದೇಗುಲದಲ್ಲಿ ನೀಡಲಾಗುವ ಪ್ರಸಾದವನ್ನು ಅಥವಾ ಯಾವುದೇ ತಿಂಡಿ-ತಿನಿಸುಗಳನ್ನು ಮನೆಗೆ ತೆಗೆದುಕೊಂಡು ಹೋಗುವಂತಿಲ್ಲ.''
- ದೇಗುಲದಲ್ಲೇ ಸೇವಿಸಬೇಕು ಅಥವಾ ಅಲ್ಲಿನ ಪ್ರಾಣಿ-ಪಕ್ಷಿಗಳಿಗೆ ಹಾಕಬೇಕು
- ದೇವಸ್ಥಾನದ ದರ್ಶನ ಮುಗಿಸಿ ಹೊರಬಂದ ನಂತರ ಯಾವುದೇ ಕಾರಣಕ್ಕೂ ಹಿಂದೆ ತಿರುಗಿ ನೋಡಬಾರದು
- ಹಾಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿಗಳು ನಿಮ್ಮನ್ನು ಬೆಂಬತ್ತುತ್ತವೆ ಎಂಬ ಭಯ ಭಕ್ತರಲ್ಲಿದೆ
- ಇಲ್ಲಿಗೆ ಬರುವವರು ಈರುಳ್ಳಿ, ಬೆಳ್ಳುಳ್ಳಿ ಹಾಗೂ ಮಾಂಸಾಹಾರವನ್ನು ತ್ಯಜಿಸಿ ಬರಬೇಕು
ಅವರರವ ಭಕ್ತಿ, ಭಾವ ಅಷ್ಟೇ
ಕೆಲವೊಮ್ಮೆ ತೀವ್ರವಾದ ಮಾನಸಿಕ ಅಥವಾ ಅತೀಂದ್ರಿಯ ಬಾಧೆಗೊಳಗಾದವರನ್ನು ನಿಯಂತ್ರಿಸಲು ಕಬ್ಬಿಣದ ಸರಪಳಿಗಳಿಂದ ಬಂಧಿಸಿರುವುದನ್ನು ಇಲ್ಲಿ ಕಾಣಬಹುದು. ಬಾಲಾಜಿಯ ನಾಮಸ್ಮರಣೆ ಮತ್ತು ಪವಿತ್ರ ಭಸ್ಮದ ಮೂಲಕ ಇಂತಹ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬುದು ಭಕ್ತರ ನಂಬಿಕೆ. ದೆವ್ವ, ಭೂತ, ಆರಾಧನೆ, ಸಂಪ್ರದಾಯ ಇವೆಲ್ಲ ಮೂಢನಂಬಿಕೆ ಅನ್ನೋದು ಹಲವರ ವಾದ. ಆದರೆ ಈ ರೀತಿಯ ನಂಬಿಕೆ, ಆಚರಣೆಗಳು ತಲತಲಾಂತರಗಳಿಂದ ನಡೆದುಕೊಂಡು ಬಂದಿವೆ. ಇದು ಅವರರವ ಭಕ್ತಿ, ಭಾವ ಅಷ್ಟೇ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

