ಕಾಂಗ್ರೆಸ್ ಸದಸ್ಯರಿಗೆ ಡ್ರಗ್ಸ್ ನಿರ್ಬಂಧ: ಸಿಡಬ್ಲ್ಯುಸಿಯಲ್ಲಿ ಶೇ. 50 ರಷ್ಟು ಮೀಸಲಿಗೆ ಅಸ್ತು
ಕಾಂಗ್ರೆಸ್ ಸದಸ್ಯರಿಗೆ ಡ್ರಗ್ಸ್ ನಿರ್ಬಂಧ ಮಾಡಲಾಗಿದ್ದು, ಪಕ್ಷವನ್ನು ಬಹಿರಂಗವಾಗಿ ಟೀಕಿಸಕೂಡದು ಎಂದೂ ತಾಕೀತು ಮಾಡಿದ್ದಾರಂತೆ. ಅಲ್ಲದೆ, ಘೋರ ಶಿಕ್ಷೆ ಅನುಭವಿಸಿದವರಿಗೆ ಪಕ್ಷದಲ್ಲಿ ಜಾಗವಿಲ್ಲ ಎಂದು ರಾಯ್‌ಪುರ ಮಹಾಧಿವೇಶನದಲ್ಲಿ ಹೊಸ ನಿಯಮ ಅಂಗೀಕಾರ ಮಾಡಲಾಗಿದೆ.
ನಯಾ ರಾಯ್‌ಪುರ (ಫೆಬ್ರವರಿ 26, 2023): ಕಾಂಗ್ರೆಸ್ ಸದಸ್ಯರು ಮಾದಕ ವಸ್ತುಗಳಿಂದ ದೂರ ಇರಬೇಕು ಹಾಗೂ ಪಕ್ಷವನ್ನು ಸಾರ್ವಜನಿಕವಾಗಿ ಟೀಕಿಸಬಾರದು - ಎಂಬ 2 ಹೊಸ ನಿಯಮ ಸೇರಿ ಹಲವು ನಿಯಮಗಳನ್ನು ಛತ್ತೀಸ್‌ಗಢದ ರಾಯ್‌ಪುರದಲ್ಲಿ ನಡೆದಿರುವ 3 ದಿನಗಳ ಕಾಂಗ್ರೆಸ್ ಮಹಾಧಿವೇಶನದಲ್ಲಿ ರೂಪಿಸಲಾಗಿದೆ. ಪಕ್ಷದ ಸಂವಿಧಾನಕ್ಕೆ ಕೆಲವು ಬದಲಾವಣೆಗಳನ್ನು ಅಧಿವೇಶನದಲ್ಲಿ ತರಲಾಗಿದೆ. ಕಾಂಗ್ರೆಸ್ ಸದಸ್ಯರು ಸಮುದಾಯ ಸೇವೆ ಮಾಡುವ ಸ್ವಯಂಸೇವಕರಾಗಿರಬೇಕು. ಘೋರ ಅಪರಾಧ ಎಸಗಿ ಶಿಕ್ಷೆ ಅನುಭವಿಸಿರಕೂಡದು ಎಂಬ ನಿಯಮಗಳು ಹೊಸದಾಗಿ ಸೇರಿಕೊಂಡಿವೆ.
- ಪಕ್ಷದ ಸದಸ್ಯರು (Party Members) ಅಮಲು ಪದಾರ್ಥ (Intoxicants), ನಿಷೇಧಿತ ಡ್ರಗ್ಸ್‌ಗಳಿಂದ (Prohibited Drugs) ದೂರ ಇರಬೇಕು.
- ಬಡವರ ಸೇವೆ (Serve Poor), ಶ್ರಮದಾನಗಳಲ್ಲಿ ತೊಡಗಿರಬೇಕು. ಸಾಮಾಜಿಕ ನ್ಯಾಯ (Social Justice), ಸಮಾನತೆ (Equality) ಹಾಗೂ ಸೌಹಾರ್ದತೆಯನ್ನು (Harmony) ಪ್ರಚುರಪಡಿಸುವಂಥ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರಬೇಕು.
- ನೆಲದ ಕಾನೂನುಗಳನ್ನು ಯಾರೂ ಉಲ್ಲಂಘಿಸಬಾರದು ಹಾಗೂ ಗಂಭೀರ ಅಪರಾಧ ಅಥವಾ ನೈತಿಕ ಅಪರಾಧ ಎಸಗಿ ಶಿಕ್ಷೆ ಅನುಭವಿಸಿರಕೂಡದು.
- ಪಕ್ಷದ ಸದಸ್ಯರು ಜಾತ್ಯತೀತತೆ, ಸಮಾಜವಾದ, ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವದ ತತ್ವಗಳನ್ನು ಎತ್ತಿಹಿಡಿಯಬೇಕು.
- ಆಂತರಿಕವಾಗಿ ಮಾತ್ರ ಏನೇ ಪಕ್ಷದ ವಿಚಾರ ಇದ್ದರೂ ಚರ್ಚಿಸಬೇಕು. ಅದು ಬಿಟ್ಟು ಸಾರ್ವಜನಿಕ ವೇದಿಕೆಗಳಲ್ಲಿ ಪಕ್ಷದ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ, ಬಹಿರಂಗವಾಗಿ ಅಥವಾ ಇತರ ರೀತಿಯಲ್ಲಿ ಟೀಕಿಸಕೂಡದು ಎಂದು ತಾಕೀತು ಮಾಡಲಾಗಿದೆ.
ಇದನ್ನು ಓದಿ: 2024ರಲ್ಲೂ ಮೋದಿ ವಿರುದ್ಧ ಕಾಂಗ್ರೆಸ್ ಮೈತ್ರಿ ರಚನೆ: ಖರ್ಗೆ; ಸೋನಿಯಾ ರಾಜಕೀಯ ವಿದಾಯ..?
ಸಿಡಬ್ಲ್ಯುಸಿಯಲ್ಲಿ ಶೇ.50ರಷ್ಟು ಮೀಸಲಿಗೆ ಅಸ್ತು
ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳೆಯರು, ಅಲ್ಪಸಂಖ್ಯಾತರು, ಯುವಕರು ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಶೇ.50 ರಷ್ಟು ಮೀಸಲಾತಿ ನೀಡಲು ನಿರ್ಧರಿಸಲಾಗಿದೆ. ಈ ಕುರಿತಾಗಿ ಛತ್ತೀಸ್‌ಗಢದ ನಯಾ ರಾಯಪುರದಲ್ಲಿ ನಡೆಯುತ್ತಿರುವ 85ನೇ ಮಹಾಧೀವೇಶನಲ್ಲಿ ಪಕ್ಷದ ಸಂವಿಧಾನಕ್ಕೆ ತಿದ್ದುಪಡಿ ತರಲಾಗಿದೆ.
ಈ ತಿದ್ದುಪಡಿಯ ಪ್ರಕಾರ ಕಾರ್ಯಕಾರಿ ಸಮಿತಿಗೆ ಮಾಜಿ ಪ್ರಧಾನಿಗಳು ಮತ್ತು ಮಾಜಿ ಎಐಸಿಸಿ ಅಧ್ಯಕ್ಷರುಗಳನ್ನು ಸಹ ಸೇರಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಅಲ್ಲದೇ ಸಿಡಬ್ಲ್ಯುಸಿ ಸದಸ್ಯರ ಸಂಖ್ಯೆಯನ್ನು 25ರಿಂದ 35ಕ್ಕೆ ಏರಿಕೆ ಮಾಡಲಾಗಿದೆ. ಎಲ್ಲಾ ಸದಸ್ಯರಿಗೂ ಇನ್ನು ಮುಂದೆ ಕೇವಲ ಡಿಜಿಟಲ್ ಸದಸ್ಯತ್ವ ಮತ್ತು ದಾಖಲೆಗಳನ್ನು ಒದಗಿಸಲಾಗುತ್ತದೆ.
ಪ್ರಿಯಾಂಕಾಗೆ ಗುಲಾಬಿ ಸ್ವಾಗತ
ಛತ್ತೀಸ್‌ಗಢದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ 85ನೇ ಮಹಾಧಿವೇಶನಕ್ಕೆ ಆಗಮಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಅವರಿಗೆ 6 ಸಾವಿರ ಕೇಜಿ ಗುಲಾಬಿ ಹೂವುಗಳನ್ನು ನೆಲಕ್ಕೆ ಹಾಸಿ ಸ್ವಾಗತಿಸಲಾಯಿತು.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ಜತೆ ನನ್ನ ಇನ್ನಿಂಗ್ಸ್ ಅಂತ್ಯವಾಗ್ಬಹುದು: ರಾಜಕೀಯ ನಿವೃತ್ತಿ ಸುಳಿವು ನೀಡಿದ ಸೋನಿಯಾ..!