2024ರಲ್ಲೂ ಮೋದಿ ವಿರುದ್ಧ ಕಾಂಗ್ರೆಸ್‌ ಮೈತ್ರಿ ರಚನೆ: ಖರ್ಗೆ; ಸೋನಿಯಾ ರಾಜಕೀಯ ವಿದಾಯ..?

ಸಮಾನ ಮನಸ್ಕ ಪಕ್ಷಗಳ ಜತೆ ಮೈತ್ರಿಗೆ ಸಿದ್ಧ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಅಲ್ಲದೆ, ಜನವಿರೋಧಿ ಬಿಜೆಪಿ ಸೋಲಿಸಲು ಒಂದಾಗಿ ಎಂದು ಕಾಂಗ್ರೆಸ್‌ ಮಹಾಧಿವೇಶನದಲ್ಲಿ ಪಕ್ಷಾಧ್ಯಕ್ಷ ಕರೆ ನೀಡಿದ್ದಾರೆ. 

 

looking forward to aligning with like minded parties to defeat bjp in 2024 mallikarjun kharge ash

ನಯಾ ರಾಯ್‌ಪುರ (ಛತ್ತೀಸ್‌ಗಢ) (ಫೆಬ್ರವರಿ 26, 2023): ‘2024ರ ಲೋಕಸಭೆ ಚುನಾವಣೆಯಲ್ಲಿ ಜನವಿರೋಧಿ ಬಿಜೆಪಿಯನ್ನು ಸೋಲಿಸಲು ಸಮಾನ ಮನಸ್ಕ ಪಕ್ಷಗಳ ಜತೆ ಹೊಂದಾಣಿಕೆಗೆ ಸಿದ್ಧ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. 85ನೇ ಕಾಂಗ್ರೆಸ್‌ ಮಹಾಧಿವೇಶನದಲ್ಲಿ ಶನಿವಾರ ಮಾತನಾಡಿದ ಅವರು, ‘2004ರಿಂದ 2014ರವರೆಗೆ ಕಾಂಗ್ರೆಸ್‌ ಸಮಾನ ಮನಸ್ಕ ಪಕ್ಷಗಳ ಜತೆ ಸೇರಿ ಸಮರ್ಥ ದೇಶ ಸೇವೆ ಮಾಡಿತು. ಈಗಲೂ ಸಮಾನ ಮನಸ್ಕ ಪಕ್ಷಗಳ ಜತೆ ಮೈತ್ರಿ ಮಾಡಿಕೊಂಡು ಜನವಿರೋಧಿ ಬಿಜೆಪಿ ಸೋಲಿಸಲು ಸಿದ್ಧರಿದ್ದೇವೆ’ ಎಂದರು.
ಪ್ರಧಾನಿ ಮೋದಿ (PM Narendra Modi) ಅವರನ್ನೂ ತರಾಟೆಗೆ ತೆಗೆದುಕೊಂಡು, ‘ದಿಲ್ಲಿಯಲ್ಲಿ (Delhi) ಕುಳಿತ ಪ್ರಧಾನ ಸೇವಕರು ತಮ್ಮದೇ ಆದ ಜಾಹೀರಾತನ್ನು ದಿನಪತ್ರಿಕೆಗಳಲ್ಲಿ ಪ್ರಕಟಿಸಿಕೊಳ್ಳುತ್ತಿದ್ದಾರೆ. ಇಂಥವರು ತಮ್ಮ ಸ್ನೇಹಿತನಿಗೆ (Friend) ಮಾತ್ರ ಸಹಾಯ ಮಾಡುತ್ತಾರೆ’ ಎಂದು ಕುಟಕಿದರು.

‘ದಿಲ್ಲಿಯಲ್ಲಿ ಕುಳಿತವರ ಡಿಎನ್‌ಎ ಬಡವರ (Poor) ವಿರೋಧಿ ಆಗಿದೆ. ಪ್ರಜಾಸತ್ತೆಯನ್ನು ನಾಶಪಡಿಸುವುದಾಗಿದೆ. ಪ್ರಸಕ್ತ ಪರಿಸ್ಥಿತಿಯಲ್ಲಿ ಜನಾಂದೋಲನ ಅಗತ್ಯವಾಗಿದೆ’ ಎಂದರು.
‘ಇತ್ತೀಚೆಗೆ ಕಾಂಗ್ರೆಸ್‌ (Congress) ಮುಖಂಡ ರಾಹುಲ್‌ ಗಾಂಧಿ (Rahul Gandhi) ನಡೆಸಿದ ಭಾರತ್‌ ಜೋಡೋ ಯಾತ್ರೆ (Bharat Jodo Yatra) ಅಭೂತಪೂರ್ವವಾಗಿತ್ತು. ಜನರು ಎದುರಿಸುತ್ತಿರುವ ಸವಾಲುಗಳ, ಸಮಸ್ಯೆಗಳ ದನಿಯಾಗಿ ಈ ಯಾತ್ರೆ ಹೊರಹೊಮ್ಮಿದೆ. ದೇಶದಲ್ಲಿ ಸಾಂವಿಧಾನಕ ಮೌಲ್ಯ, ಪ್ರಜಾಸತ್ತೆ ಮೇಲೆ ದೌರ್ಜನ್ಯ ನಡೆದಿದೆ. ಇನ್ನೊಂದು ಕಡೆ ಚೀನಾ ಗಡಿಯಲ್ಲಿ ದೇಶ ಅಭದ್ರತೆ ಎದುರಿಸುತ್ತಿದೆ. ದೇಶದ ಜನರು ಹಣದುಬ್ಬರ, ನಿರುದ್ಯೋಗ, ಆರ್ಥಿಕ ಅಸಮಾನತೆ ಹಾಗೂ ದ್ವೇಷದ ಭಯದಿಂದ ತತ್ತರಿಸಿದ್ದಾರೆ. ಇಂಥ ಸಂದರ್ಭದಲ್ಲಿ ಕಾಂಗ್ರೆಸ್‌ ಮಾತ್ರ ದೇಶದಲ್ಲಿ ಸಮರ್ಥ ಹಾಗೂ ನಿರ್ಣಾಯಕ ನಾಯಕತ್ವ ನೀಡಬಲ್ಲದು’ ಎಂದರು.

ಇದನ್ನು ಓದಿ: ಸಿಡಬ್ಲ್ಯುಸಿಗೆ ಸದಸ್ಯರ ನೇಮಕದ ಪರಮಾಧಿಕಾರ ಖರ್ಗೆ ಹೆಗಲಿಗೆ: ಸೋನಿಯಾ, ರಾಹುಲ್‌ಗೆ ಕಾಯಂ ಸದಸ್ಯತ್ವ

ಇದೇ ವೇಳೆ ‘ಸೇವಾ, ಸಂಘರ್ಷ ಔರ್‌ ಬಲಿದಾನ್‌, ಸಬ್‌ ಸೇ ಪೆಹಲೇ ಹಿಂದುಸ್ತಾನ್‌’ (ಸೇವೆ, ಹೋರಾಟ, ಬಲಿದಾನ: ದೇಶ ಮೊದಲು) ಎಂಬ ಉದ್ಘೋಷ ಕೂಗಿದರು.

ಸೋನಿಯಾ ವಿದಾಯ ಭಾಷಣ?
ಕಳೆದ 25 ವರ್ಷಗಳಿಂದ ಕಾಂಗ್ರೆಸ್ಸಿಗೆ ಬೆನ್ನೆಲುಬಾಗಿದ್ದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಅಧಿಕೃತವಾಗಿ ತೆರೆಯ ಹಿಂದಕ್ಕೆ ಸರಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಛತ್ತೀಸ್‌ಗಢದ ನಯಾ ರಾಯಪುರದಲ್ಲಿ ನಡೆಯುತ್ತಿರುವ ಪಕ್ಷದ 85ನೇ ಮಹಾಧಿವೇಶನದಲ್ಲಿ ಶನಿವಾರ ಭಾಷಣ ಮಾಡಿದ ಅವರು, ರಾಜಕಾರಣಕ್ಕೆ ವಿದಾಯ ಹೇಳುವ ಧಾಟಿಯಲ್ಲಿ ಮಾತುಗಳನ್ನು ಆಡಿರುವುದು ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ಜತೆ ನನ್ನ ಇನ್ನಿಂಗ್ಸ್‌ ಅಂತ್ಯವಾಗ್ಬಹುದು: ರಾಜಕೀಯ ನಿವೃತ್ತಿ ಸುಳಿವು ನೀಡಿದ ಸೋನಿಯಾ..!

2004 ಹಾಗೂ 2009ರಲ್ಲಿ ಪಕ್ಷ ಸಾಧಿಸಿದ ಗೆಲುವುಗಳು, ಡಾ. ಮನಮೋಹನಸಿಂಗ್‌ ಅವರ ಸಮರ್ಥ ನಾಯಕತ್ವ ನನಗೆ ವೈಯಕ್ತಿಕ ತೃಪ್ತಿ ನೀಡಿದೆ. ನನಗೆ ಹೆಚ್ಚು ತೃಪ್ತಿ ನೀಡುವ ಸಂಗತಿ ಯಾವುದೆಂದರೆ, ಕಾಂಗ್ರೆಸ್ಸಿಗೆ ಮಹತ್ತರ ತಿರುವಿನಂತಾಗಿರುವ ಭಾರತ್‌ ಜೋಡೋ ಯಾತ್ರೆಯೊಂದಿಗೆ ನನ್ನ ಇನ್ನಿಂಗ್‌್ಸ ಮುಕ್ತಾಯಗೊಳ್ಳಬಹುದು ಎಂಬ ಸಂಗತಿ ಎಂದು ಹೇಳಿದ್ದಾರೆ.
ಸೋನಿಯಾ ಅವರು ಕಾಂಗ್ರೆಸ್ಸಿಗೆ ನೀಡಿದ ಕೊಡುಗೆಗಳನ್ನು ಕಾರ್ಯಕ್ರಮದಲ್ಲಿ ವಿಡಿಯೋ ಮೂಲಕ ಬಿತ್ತರಿಸಲಾಯಿತು. ಅದನ್ನು ಪ್ರಸ್ತಾಪಿಸಿ ಮಾತನಾಡಿದ ಅವರು, ಈ ವಿಡಿಯೋ ನನಗೆ ಎಷ್ಟು ವಯಸ್ಸಾಗಿ ಬಿಟ್ಟಿದೆ ಎಂಬುದನ್ನು ತೋರಿಸುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದಲ್ಲಿ ಈಗ ಯುವಕರು ಮುಂದೆ ಬರಬೇಕು. 1998ರಲ್ಲಿ ಮೊದಲ ಬಾರಿಗೆ ನಾನು ಪಕ್ಷದ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡೆ. ಈ 25 ವರ್ಷಗಳಲ್ಲಿ ಪಕ್ಷ ಹಲವು ಸಾಧನೆ ಹಾಗೂ ಮುಖಭಂಗಗಳನ್ನು ಅನುಭವಿಸಿದೆ. ಇದಕ್ಕೆಲ್ಲಾ ನಾನು ಕೃತಜ್ಞಳು ಎಂದು ಹೇಳಿದರು.

ಇದೇ ವೇಳೆ, 2024ರ ಚುನಾವಣೆಯಲ್ಲಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದಲ್ಲಿ ಭಾರತೀಯ ಜನತಾ ಪಕ್ಷವನ್ನು ಮಣಿಸುವ ಗುರಿಯನ್ನು ತಲುಪಲು ಕಾಂಗ್ರೆಸ್‌ ಕಾರ್ಯಕರ್ತರು ತಲುಪಬೆಕು ಎಂದು ಕರೆ ನೀಡಿದರು.

ಇದನ್ನೂ ಓದಿ: ಕಾಂಗ್ರೆಸ್‌ ಬೊಕ್ಕಸ ತುಂಬಿಸಲು ಸದಸ್ಯತ್ವ ಶುಲ್ಕ ಹೆಚ್ಚಳಕ್ಕೆ ನಿರ್ಧಾರ; ಭಾರತ್‌ ಜೋಡೋ ಯಾತ್ರೆ ಎಫೆಕ್ಟ್‌..!

ಕೇಂದ್ರದ ವಿರುದ್ಧ ವಾಗ್ದಾಳಿ:
ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಇದೇ ವೇಳೆ ವಾಗ್ದಾಳಿ ನಡೆಸಿದ ಸೋನಿಯಾ ಗಾಂಧಿ, ಕೇಂದ್ರ ಸರ್ಕಾರ ದ್ವೇಷದ ಬೆಂಕಿಗೆ ತುಪ್ಪ ಸುರಿಯುತ್ತಿದೆ. ಅಲ್ಪಸಂಖ್ಯಾತರು, ಮಹಿಳೆಯರು, ದಲಿತರು ಹಾಗೂ ಬುಡಕಟ್ಟು ಜನರನ್ನು ಕರುಣೆ ಇಲ್ಲದೆ ಟಾರ್ಗೆಟ್‌ ಮಾಡುತ್ತಿದೆ. ಹೀಗಾಗಿ ಕಾಂಗ್ರೆಸ್‌ ಕಾರ್ಯಕರ್ತರು ಉತ್ಸಾಹದಿಂದ ಬಿಜೆಪಿ ಸರ್ಕಾರವನ್ನು ಎದುರಿಸಬೇಕು. ಪಕ್ಷದ ಸಂದೇಶವನ್ನು ಜನರ ಬಳಿಗೆ ಒಯ್ಯಬೇಕು. ಕಾಂಗ್ರೆಸ್ಸಿಗೆ ಇದು ಸವಾಲಿನ ಕಾಲ. ಏಕೆಂದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಪ್ರತಿಯೊಂದು ಸಂಸ್ಥೆಯನ್ನೂ ವಶಕ್ಕೆ ತೆಗೆದುಕೊಂಡಿದೆ ಎಂದರು.

ಒಬ್ಬ ನಿರ್ದಿಷ್ಟ ಉದ್ಯಮಿಗೆ ನೆರವಾಗುವ ಮೂಲಕ ಕೇಂದ್ರ ಸರ್ಕಾರ ಆರ್ಥಿಕತೆಯನ್ನು ಹಾಳು ಮಾಡುತ್ತಿದೆ ಎಂದು ಪರೋಕ್ಷವಾಗಿ ಅದಾನಿ ಪ್ರಕರಣವನ್ನು ಪ್ರಸ್ತಾಪಿಸಿದರು.


ಇದನ್ನೂ ಓದಿ: ಕಾಂಗ್ರೆಸ್‌ನಿಂದ ಮಾಜಿ ಪ್ರಧಾನಿ ಪಿವಿ ನರಸಿಂಹರಾವ್‌ಗೆ ನೀಡದ ಸತ್ಕಾರ ಗಾಂಧಿ ಕುಟುಂಬಕ್ಕೆ..!

Latest Videos
Follow Us:
Download App:
  • android
  • ios