ನಿತೀಶ್ ಕುಮಾರ್ ಸೆಕ್ಸ್ ಹೇಳಿಕೆಗೆ ಮೋದಿ ತರಾಟೆ: ಇನ್ನೆಷ್ಟು ಕೆಳಗಿಳಿಯುತ್ತೀರಿ ಎಂದು ಕಿಡಿ
ನಿನ್ನೆ ಇಂಡಿಯಾ ಒಕ್ಕೂಟದ ದೊಡ್ಡ ನಾಯಕರೊಬ್ಬರು ಸದನದಲ್ಲಿ ಕೆಟ್ಟ ಭಾಷೆ ಬಳಸಿ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ಅವರಿಗೆ ಕೊಂಚವೂ ನಾಚಿಕೆಯಾಗಲಿಲ್ಲ. ಅವರು ಇನ್ನೆಷ್ಟು ಕೆಳಕ್ಕೆ ಇಳಿಯುತ್ತಾರೆ ಎಂದು ನಿತೀಶ್ ಕುಮಾರ್ ವಿರುದ್ಧ ಮೋದಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಗುನಾ (ಮಧ್ಯ ಪ್ರದೇಶ) (ನವೆಂಬರ್ 9, 2023): ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿಧಾನಸಭೆಯಲ್ಲಿ ಸೆಕ್ಸ್ ಬಗ್ಗೆ ಆಡಿದ ಮಾತನ್ನು ತೀವ್ರ ತರಾಟೆ ತೆಗೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ’ಇಂಡಿಯಾ ಒಕ್ಕೂಟದವರು ಇನ್ನೆಷ್ಟು ಕೆಳಗಿಳಿಯುತ್ತಾರೆ’ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.
ನಿತೀಶ್ ಕುಮಾರ್ ಅವರ ಹೆಸರು ಹೇಳದೆ ಬುಧವಾರ ಮಧ್ಯಪ್ರದೇಶದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಮೋದಿ, ‘ನಿನ್ನೆ ಇಂಡಿಯಾ ಒಕ್ಕೂಟದ ದೊಡ್ಡ ನಾಯಕರೊಬ್ಬರು ಸದನದಲ್ಲಿ ಕೆಟ್ಟ ಭಾಷೆ ಬಳಸಿ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ಅವರಿಗೆ ಕೊಂಚವೂ ನಾಚಿಕೆಯಾಗಲಿಲ್ಲ. ಇಂಡಿಯಾ ಒಕ್ಕೂಟದ ಒಂದೇ ಒಂದು ಮೈತ್ರಿ ಪಕ್ಷ ಕೂಡ ಆ ಹೇಳಿಕೆಯನ್ನು ಖಂಡಿಸಲಿಲ್ಲ. ಅಂತಹ ದೃಷ್ಟಿಕೋನ ಹೊಂದಿರುವವರು ನಿಮ್ಮ ಗೌರವವನ್ನು ಹೇಗೆ ಕಾಪಾಡುತ್ತಾರೆ? ಅವರು ಇನ್ನೆಷ್ಟು ಕೆಳಕ್ಕೆ ಇಳಿಯುತ್ತಾರೆ? ದೇಶಕ್ಕೆ ಎಂಥಾ ದುರದೃಷ್ಟಕರ ಸ್ಥಿತಿ ಬಂದಿದೆ. ನಿಮ್ಮ ಗೌರವ ಕಾಪಾಡಲು ನಾನು ಗರಿಷ್ಠ ಪ್ರಯತ್ನ ಮಾಡುತ್ತೇನೆ’ ಎಂದು ಹೇಳಿದರು.
ಇದನ್ನು ಓದಿ: ಜನವರಿ 22ಕ್ಕೆ ರಾಮನ ವಿಗ್ರಹ ಹೊತ್ತು ಮೋದಿ 500 ಮೀಟರ್ ನಡಿಗೆ? ತಾತ್ಕಾಲಿಕ ಮಂದಿರದಿಂದ ವಿಗ್ರಹ ಒಯ್ಯುವ ಸಾಧ್ಯತೆ
ಮಂಗಳವಾರ ಬಿಹಾರದ ವಿಧಾನಸಭೆಯಲ್ಲಿ ಜನಸಂಖ್ಯೆ ನಿಯಂತ್ರಣದ ಬಗ್ಗೆ ಮಾತನಾಡುವಾಗ ನಿತೀಶ್ ಕುಮಾರ್ ‘ಹೊಸತಾಗಿ ಮದುವೆಯಾದ ಹುಡುಗರು ಲೈಂಗಿಕ ಕ್ರಿಯೆಗೆ ಹಾತೊರೆಯುತ್ತಾರೆ. ಅವರನ್ನು ತಡೆಯವುದು ಹೇಗೆಂಬುದು ಮಹಿಳೆಯರಿಗೆ ಗೊತ್ತಿರಬೇಕು. ಇಂದಿನ ಮಹಿಳೆಯರು ಸುಶಿಕ್ಷಿತರಾಗಿದ್ದು, ಅವರು ಗಂಡಂದಿರನ್ನು ನಿಯಂತ್ರಿಸುತ್ತಿದ್ದಾರೆ. ಹೀಗಾಗಿಯೇ ಜನಸಂಖ್ಯೆ ಇಳಿಯುತ್ತದೆ’ ಎಂದು ಹೇಳಿದ್ದರು.
ಸೆಕ್ಸ್ ಕುರಿತು ಸದನದಲ್ಲಿ ಆಡಿದ ಮಾತಿಗೆ ನಿತೀಶ್ ಕ್ಷಮೆ
ಪಟನಾ (ನವೆಂಬರ್ 9, 2023): ಜನಸಂಖ್ಯೆ ನಿಯಂತ್ರಣದ ಬಗ್ಗೆ ಮಾತನಾಡುವಾಗ ಮಹಿಳೆಯರ ಲೈಂಗಿಕ ಶಿಕ್ಷಣದ ಬಗ್ಗೆ ತಾವು ಆಡಿದ ‘ಆಕ್ಷೇಪಾರ್ಹ ಮಾತಿಗೆ’ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಬುಧವಾರ ಸದನದ ಹೊರಗೆ ಹಾಗೂ ಒಳಗೆ ಕ್ಷಮೆ ಯಾಚಿಸಿದ್ದಾರೆ. ಬುಧವಾರ ಕಲಾಪಕ್ಕೂ ಮುನ್ನ ಸುದ್ದಿಗಾರರು ಈ ಬಗ್ಗೆ ಪ್ರಶ್ನಿಸಿದಾಗ ನಿತೀಶ್, ‘ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ’ ಎಂದು ಹೇಳಿದರು.
ಇದನ್ನೂ ಓದಿ: ಛತ್ತೀಸ್‌ಗಢಕ್ಕೆ ಕಾಂಗ್ರೆಸ್ ಬಳಿಕ ‘ಮೋದಿ ಗ್ಯಾರಂಟಿ’: 500 ರೂ.ಗೆ ಸಿಲಿಂಡರ್; ಅಯೋಧ್ಯೆಗೆ ತೆರಳಲು ಭಕ್ತರಿಗೆ ನೆರವು!
ಬಳಿಕ ಸದನಕ್ಕೆ ಆಗಮಿಸಿದಾಗ ಬಿಜೆಪಿ ಸದಸ್ಯರು ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಆಗ ಎದ್ದುನಿಂತ ನಿತೀಶ್, ಮತ್ತೊಮ್ಮೆ ತಮ್ಮ ಮಾತಿಗೆ ಕ್ಷಮೆಯಾಚಿಸಿದರು. ಆದರೂ ಗದ್ದಲ ನಿಲ್ಲದೆ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿದಾಗ ಸದನ ಮುಂದೂಡಲಾಯಿತು.
‘ನಾನು ಆಡಿದ ಮಾತನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ. ಮಹಿಳೆಯರ ಶಿಕ್ಷಣದ ಮಟ್ಟಕ್ಕೂ ಅವರು ಹೆರುವ ಮಕ್ಕಳ ಸಂಖ್ಯೆಗೂ ನೇರವಾದ ಸಂಬಂಧವಿರುವುದನ್ನು ನೋಡಿದ ಮೇಲೆಯೇ ನಾನು ಮಹಿಳೆಯರಿಗೆ ಲೈಂಗಿಕತೆಯ ಬಗ್ಗೆ ಇರಬೇಕಾದ ಅರಿವಿನ ಬಗ್ಗೆ ಮಾತನಾಡಿದ್ದೆ’ ಎಂದು ನಿತೀಶ್ ಸ್ಪಷ್ಟನೆ ನೀಡಿದರು.
ಅದಕ್ಕೂ ಮುನ್ನ ನಿತೀಶ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಬಿಜೆಪಿ ಸದಸ್ಯರು, ‘ನಿತೀಶ್ ಕುಮಾರ್ ಮೆಂಟಲ್ ಕೇಸ್ ಆಗಿದ್ದಾರೆ. ಅವರಿಗೆ ರಾಜ್ಯ ಆಳುವ ಶಕ್ತಿಯಿಲ್ಲ. ಅವರು ಕ್ಷಮೆಯಾಚನೆ ಮಾಡಿದ್ದು ಸಾಲದು. ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದ್ದರು.
‘ಮದುವೆಯಾದ ಗಂಡಸರು ಲೈಂಗಿಕ ಕ್ರಿಯೆಗೆ ಹಾತೊರೆಯುತ್ತಾರೆ. ಇದರಿಂದ ಹೆಚ್ಚೆಚ್ಚು ಮಕ್ಕಳು ಹುಟ್ಟುತ್ತಿದ್ದಾರೆ. ಆದರೆ ಶಿಕ್ಷಣ ಪಡೆದ ಮಹಿಳೆಯರಿಗೆ ಗಂಡನನ್ನು ಹೇಗೆ ನಿಯಂತ್ರಿಸಬೇಕೆಂಬುದು ಗೊತ್ತಿರುತ್ತದೆ. ತಾನು ಗರ್ಭ ಧರಿಸಬೇಕೆ ಇಲ್ಲವೆ ಎಂಬುದನ್ನು ಮಹಿಳೆ ನಿರ್ಧರಿಸುತ್ತಾಳೆ. ಆದ್ದರಿಂದಲೇ ಮಹಿಳಾ ಸಾಕ್ಷರತೆ ಹೆಚ್ಚಿದಂತೆಲ್ಲ ಜನನ ಪ್ರಮಾಣ ಕಡಿಮೆಯಾಗುತ್ತಿದೆ’ ಎಂದು ನಿತೀಶ್ ಮಂಗಳವಾರ ಸದನದಲ್ಲಿ ಹೇಳಿದ್ದರು. ಈ ಹೇಳಿಕೆ ಕೀಳು ಅಭಿರುಚಿಯಿಂದ ಕೂಡಿದೆ ಎಂದು ಬಿಜೆಪಿ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗ ಕಿಡಿಕಾರಿದ್ದವು.