ಜನವರಿ 22ಕ್ಕೆ ರಾಮನ ವಿಗ್ರಹ ಹೊತ್ತು ಮೋದಿ 500 ಮೀಟರ್ ನಡಿಗೆ? ತಾತ್ಕಾಲಿಕ ಮಂದಿರದಿಂದ ವಿಗ್ರಹ ಒಯ್ಯುವ ಸಾಧ್ಯತೆ
ತಾತ್ಕಾಲಿಕ ಮಂದಿರದಲ್ಲಿ ಶ್ರೀರಾಮಚಂದ್ರನ ‘ಚಲ ಮೂರ್ತಿ’ ಮೂರ್ತಿ ಇದೆ. ಅದನ್ನು ಹೊಸ ಮಂದಿರದ ಗರ್ಭಗುಡಿಗೆ ತೆಗೆದುಕೊಂಡು ಹೋಗುವಂತೆ ಮೋದಿ ಅವರನ್ನು ದೇಗುಲ ಸಮಿತಿ ಸಮಾರಂಭದ ವೇಳೆ ಕೋರಿಕೊಳ್ಳುವ ಸಾಧ್ಯತೆ ಇದೆ.
ಅಯೋಧ್ಯೆ (ನವೆಂಬರ್ 4, 2023): ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಭವ್ಯ ದೇಗುಲ ಜನವರಿ 22ರಂದು ಲೋಕಾರ್ಪಣೆಯಾಗಲಿದ್ದು, ಅಂದು ಪ್ರಧಾನಿ ನರೇಂದ್ರ ಮೋದಿ ಅವರು ತಾತ್ಕಾಲಿಕ ದೇಗುಲದಲ್ಲಿರುವ ಬಾಲರಾಮನ (ರಾಮಲಲ್ಲಾ) ವಿಗ್ರಹವನ್ನು ಹೊಸ ಮಂದಿರಕ್ಕೆ ಒಯ್ಯುವ ಸಾಧ್ಯತೆ ಇದೆ. ಶಿಷ್ಟಾಚಾರವನ್ನು ಬದಿಗೊತ್ತಿ 500 ಮೀಟರ್ ಬರಿಗಾಲಲ್ಲಿ ಕ್ರಮಿಸಿ, ಇಷ್ಟು ವರ್ಷ ಜನರು ಆರಾಧಿಸಿರುವ ರಾಮಲಲ್ಲಾ ವಿಗ್ರಹವನ್ನು ಹೊಸ ಮಂದಿರದ ಗರ್ಭಗುಡಿಗೆ ಮೋದಿ ಅವರು ತೆಗೆದುಕೊಂಡು ಹೋಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ತಾತ್ಕಾಲಿಕ ಮಂದಿರದಲ್ಲಿ ಶ್ರೀರಾಮಚಂದ್ರನ ‘ಚಲ ಮೂರ್ತಿ’ ಮೂರ್ತಿ ಇದೆ. ಅದನ್ನು ಹೊಸ ಮಂದಿರದ ಗರ್ಭಗುಡಿಗೆ ತೆಗೆದುಕೊಂಡು ಹೋಗುವಂತೆ ಮೋದಿ ಅವರನ್ನು ದೇಗುಲ ಸಮಿತಿ ಸಮಾರಂಭದ ವೇಳೆ ಕೋರಿಕೊಳ್ಳುವ ಸಾಧ್ಯತೆ ಇದೆ. ಮೋದಿ ಅವರು ಆ ಜವಾಬ್ದಾರಿ ನಿರ್ವಹಿಸುವ ವೇಳೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತಿತರ ಗಣ್ಯರು ಉಪಸ್ಥಿತರಿರುವ ನಿರೀಕ್ಷೆ ಇದೆ ಎಂದು ವರದಿಗಳು ತಿಳಿಸಿವೆ.
ಇದನ್ನು ಓದಿ: ಛತ್ತೀಸ್‌ಗಢಕ್ಕೆ ಕಾಂಗ್ರೆಸ್ ಬಳಿಕ ‘ಮೋದಿ ಗ್ಯಾರಂಟಿ’: 500 ರೂ.ಗೆ ಸಿಲಿಂಡರ್; ಅಯೋಧ್ಯೆಗೆ ತೆರಳಲು ಭಕ್ತರಿಗೆ ನೆರವು!
ಸಹಸ್ರಾರು ಸ್ವಾಮೀಜಿಗಳಿಗೆ ಆಹ್ವಾನ:
ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಸಮಾರಂಭಕ್ಕೆ ದೇಶದ ಪ್ರಮುಖ ಅರ್ಚಕರು, ವಿವಿಧ ಮಠ, ದೇಗುಲ, ಧಾರ್ಮಿಕ ಸಂಸ್ಥೆಗಳ 3500 ಸಾಧು- ಸಂತರನ್ನು ಆಹ್ವಾನಿಸಲಾಗುತ್ತದೆ. ಇದಲ್ಲದೆ ಪ್ರಸಿದ್ಧ ಉದ್ಯಮಿಗಳು, ವೃತ್ತಿಪರರು (ವೈದ್ಯರು, ವಕೀಲರು, ಎಂಜಿನಿಯರ್‌ಗಳು, ಚಿತ್ರನಟರು ಸೇರಿದಂತೆ), ಪದ್ಮಪ್ರಶಸ್ತಿ ಪುರಸ್ಕೃತರು ಸೇರಿದಂತೆ 4500 ಮಂದಿಗೆ ಆಹ್ವಾನ ನೀಡಲು ಉದ್ದೇಶಿಸಲಾಗಿದೆ.
ಕೆಲವೊಂದು ರಾಜ್ಯ ಹಾಗೂ ದೇಶಗಳ ಮುಖ್ಯಸ್ಥರನ್ನೂ ಆಹ್ವಾನಿಸಲಾಗುತ್ತದೆ. ಅಯೋಧ್ಯೆ ಕರಸೇವೆಯ ವೇಳೆ ಪೊಲೀಸರ ಗುಂಡೇಟಿಗೆ ಬಲಿಯಾದ ಕರಸೇವಕರ ಕುಟುಂಬ ಸದಸ್ಯರನ್ನೂ ಸಮಾರಂಭಕ್ಕೆ ಕರೆಸಲಾಗುತ್ತದೆ.
ಇದನ್ನೂ ಓದಿ: ರಾಮಲಲ್ಲಾ ಪ್ರತಿಷ್ಠಾಪನೆಗೆ 100 ಕ್ವಿಂಟಲ್ ಅಕ್ಷತೆ ಬಳಕೆ, ಪೂಜೆ ಬಳಿಕ ದೇಶಾದ್ಯಂತ ಭಕ್ತರಿಗೆ ವಿತರಣೆ!
ಈಗ ಇರುವ ಬಾಲರಾಮನ ವಿಗ್ರಹ ಏನಾಗುತ್ತೆ?
ತಾತ್ಕಾಲಿಕ ಮಂದಿರದಲ್ಲಿ ಬಾಲರಾಮನ ವಿಗ್ರಹವಿದೆ. ಅದು ಚಲ ವಿಗ್ರಹವಾಗಿದೆ. ಅಂದರೆ ಬೇರೆ ಕಡೆ ಒಯ್ಯಬಹುದು. ಆ ಚಲ ವಿಗ್ರಹವನ್ನು ನೂತನ ದೇಗುಲದ ಒಂದು ಪವಿತ್ರ ಸ್ಥಳದಲ್ಲಿ ಇಡಲಾಗುತ್ತದೆ. ಈ ನಡುವೆ, ಬಾಲರಾಮನ 5 ಅಡಿ ಎತ್ತರದ ಮೂರು ವಿಗ್ರಹಗಳ ಕೆತ್ತನೆ ಕಾರ್ಯ ನಡೆಯುತ್ತಿದೆ. ಆ ಪೈಕಿ ಒಂದನ್ನು ಅಚಲ ಮೂರ್ತಿಯಾಗಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಶುಭ ಸಂದರ್ಭಗಳಲ್ಲಿ ಅಚಲ ಮೂರ್ತಿಯ ಪಕ್ಕದಲ್ಲಿ ಚಲ ಮೂರ್ತಿಯನ್ನು ಇಟ್ಟು ಪೂಜಿಸಲು ಉದ್ದೇಶಿಸಲಾಗಿದೆ.
ಸದ್ಯ ನಿರ್ಮಾಣ ಹಂತದಲ್ಲಿರುವ ಮೂರು ರಾಮಲಲ್ಲಾ ವಿಗ್ರಹಗಳ ಪೈಕಿ ಗರ್ಭಗುಡಿಯಲ್ಲಿ ಯಾವುದನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ ಎಂಬುದರ ಬಗ್ಗೆ ಈವರೆಗೂ ತೀರ್ಮಾನವಾಗಿಲ್ಲ. ಅಯೋಧ್ಯೆ ಮಂದಿರದಲ್ಲಿ ಮೂರು ಮಹಡಿಗಳು ಇರಲಿವೆ. ಕೆಳಭಾಗದಲ್ಲಿರುವ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗುವ ವಿಗ್ರಹವೇ ಮುಖ್ಯ ಮೂರ್ತಿಯಾಗಿರುತ್ತದೆ. ಮೂರರ ಪೈಕಿ ಒಂದನ್ನು ಅಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಉಳಿದ ಎರಡನ್ನು 2 ಹಾಗೂ 3ನೇ ಮಹಡಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.
ಇದನ್ನೂ ಓದಿ: ಈ ಬಾರಿಯ ದೀಪಾವಳಿಯಲ್ಲೂ ಅಯೋಧ್ಯೆಯಲ್ಲಿ ದಾಖಲೆ, ರಾಮನಗರಿಯನ್ನು ಬೆಳಗಲಿದೆ ಇಷ್ಟು ಲಕ್ಷ ದೀಪಗಳು!