ವದೆಹಲಿ(ಅ. 07) ಪ್ರತಿಭಟನೆ ನಡೆಸುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ  ಆದೇಶವೊಂದನ್ನು ನೀಡಿದೆ. ಯಾವುದೆ ವ್ಯಕ್ತಿ ಅಥವಾ ಸಂಘಟನೆ ಪ್ರತಿಭಟನೆ ಹೆಸರಿನಲ್ಲಿ  ಶಾಹೀನ್ ಬಾಗ್ ನಂತಹ ಸಾರ್ವಜನಿಕ ಸ್ಥಳಗಳನ್ನು ಅನಿರ್ದಿಷ್ಟಾವಧಿಗೆ ಬಳಸಿಕೊಳ್ಳುವ ಹಾಗಿಲ್ಲ ಎಂದು ಹೇಳಿದೆ.

ನಾಗರಿಕ (ತಿದ್ದುಪಡಿ) ಮಸೂದೆ ವಿರೋಧಿಸಿ ಕಳೆದ ವರ್ಷ ಡಿಸೆಂಬರ್ 14ರಂದು ಶಾಹೀನ್ ಬಾಗ್ ನಲ್ಲಿ ತೀವ್ರ ಪ್ರತಿಭಟನೆ ಆರಂಭವಾಗಿತ್ತು. ನಂತರ ಕೋವಿಡ್-19 ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಮಾರ್ಚ್ 24ರಂದು ಘೋಷಣೆಯಾದ ನಂತರ ಪ್ರತಿಭಟನೆ ಹಿಂತೆಗೆದುಕೊಳ್ಳಲಾಗಿತ್ತು. ಡಿಸೆಂಬರ್ ಗಿಂತಲೂ ಮೊದಲೇ ಇಲ್ಲಿ ಪ್ರತಿಭಟನೆ ಆರಂಭವಾಗಿ ಸಾರ್ವಜನಿಕ ಓಡಾಟದ ಸ್ಥಳ ಶಾಹೀನ್ ಬಾಗ್ ನ್ನು ಸಂಚಾರಕ್ಕೆ ನಿರ್ಬಂಧಿಸಲಾಗಿತ್ತು. 

'ಜೈಲಿನಲ್ಲಿಯೆ ಹೆರಿಗೆ ಮಾಡಿಸುತ್ತೇವೆ, ಇದೇನು ವಿಶೇಷ ಪ್ರಕರಣ ಅಲ್ಲ'

ಪ್ರತಿಭಟನಾಕಾರರ ಕ್ರಮ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದು ನಾಗರಿಕರಿಕೆ ತೊಂದರೆ ಆಗುತ್ತಿದೆ ಎಂದು ಹೇಳಲಾಗಿತ್ತು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಸಾರ್ವಜನಿಕ ಸ್ಥಳಗಳು ಮತ್ತು ರಸ್ತೆಗಳನ್ನು ಅನಿರ್ದಿಷ್ಟಾವಧಿಗೆ ಪ್ರತಿಭಟನೆಗೆಂದು ಆಕ್ರಮಿಸಿಕೊಳ್ಳಲು ಸಾಧ್ಯವಿಲ್ಲ. ಪ್ರತಿಭಟನೆಗಳನ್ನು ನಿಗದಿತ ಪ್ರದೇಶಗಳಲ್ಲಿ ಮಾಡಬೇಕು,  ಪ್ರತಿಭಟನೆಗೆ ಮೊದಲೆ ಸಂಬಂಧಿಸಿದ ಆಡಳಿತದಿಂದ ಅನುಮತಿ ಪಡೆದುಕೊಳ್ಳಬೇಕು ಎಂದು ಸ್ಪಷ್ಟವಾಗಿ ತಿಳಿಸಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಕೀಲ ಅಮಿತ್ ಸಾಹ್ನಿ ಸಲ್ಲಿಕೆ ಮಾಡಿದ್ದರು. ನ್ಯಾಯಮೂರ್ತಿ ಎಸ್‌.ಕೆ.ಕೌಲ್ ಪೀಠ ವಿಚಾರಣೆ ನಡೆಸಿ ತೀರ್ಪು ನೀಡಿದೆ. ಪ್ರತಿಭಟನಾಕಾರರನ್ನು ಸಂಬಂಧಿಸಿದ ಆಡಳಿತ ತೆರವು ಮಾಡಬೇಕು ಎಂದು ತಿಳಿಸಿದೆ.