ತಮಿಳುನಾಡಿನ ಮನೆಯೊಂದಕ್ಕೆ ನುಗ್ಗಿದ ಕಳ್ಳ, ಸಿಸಿಟಿವಿ ಇದ್ದರೂ ಹಣ ಸಿಗದಿದ್ದಕ್ಕೆ ನಿರಾಶೆಗೊಂಡಿದ್ದಾನೆ. ಮನೆಯಲ್ಲಿ ಹಣವಿಲ್ಲದ ಮೇಲೆ ಸಿಸಿಟಿವಿ ಯಾಕೆ ಎಂದು ಮಾಲೀಕನಿಗೆ ಪತ್ರ ಬರೆದು, 2 ಸಾವಿರ ರೂ. ಹಾಗೂ ಸಿಸಿಟಿವಿ ಹಾರ್ಡ್ ಡಿಸ್ಕ್ ಕದ್ದೊಯ್ದಿದ್ದಾನೆ.
ಮನೆಯಲ್ಲಿ ಅಥವಾ ಅಂಗಡಿಗಳಲ್ಲಿ ಸಿಸಿಟಿವಿ ಇದ್ದರೂ, ಕಳ್ಳತನ, ದರೋಡೆ ಅಂತೂ ನಿಂತಿಲ್ಲ ಬಿಡಿ. ಮಾಲೀಕರು ಚಾಪೆ ಕೆಳಗೆ ನುಸುಳಿದರೆ, ಖದೀಮರು ರಂಗೋಲಿ ಕೆಳಗೇ ನುಸುಳುತ್ತಾರೆ. ಎಷ್ಟೋ ಕಡೆಗಳಲ್ಲಿ ಸಿಸಿಟಿವಿಗಳು ಇದ್ದರೂ ವರ್ಕ್ ಆಗಲ್ಲ, ವರ್ಕ್ ಆದರೂ ಕಳ್ಳರನ್ನು ಹಿಡಿಯೋದು ಅಷ್ಟು ಸುಲಭವಲ್ಲ ಎಂದೆಲ್ಲಾ ಅರಿತಿರುವ ಕಳ್ಳಕಾರರು ತಮ್ಮ ಕೆಲಸವನ್ನು ನಿರಾಯಾಸವಾಗಿ ಮುಂದುವರೆಸಿಕೊಂಡು ಬಂದೇ ಇದ್ದಾರೆ.
ಕಳ್ಳನಿಂದ ಪತ್ರ
ಆದರೆ ಇಲ್ಲೊಂದು ಅಪರೂಪದ ಪ್ರಕರಣದಲ್ಲಿ, ಕಳ್ಳನೊಬ್ಬ ಮನೆ ಮಾಲೀಕನಿಗೆ ಸಿಸಿಟಿವಿ ಕುರಿತಾಗಿ ಪತ್ರ ಬರೆದಿಟ್ಟು ಹೋಗಿದ್ದಾನೆ. ಆತ ಬರೆದಿರುವುದು ಸಿಸಿಟಿವಿ ವರ್ಕ್ ಆಗ್ತಿಲ್ಲ ಎನ್ನುವ ಕಾರಣಕ್ಕೆ ಅಲ್ಲ, ಬದಲಿಗೆ ಸಿಸಿಟಿವಿ ಹಾಕಿರುವ ಉದ್ದೇಶ ಯಾಕೆ ಎನ್ನುವುದಕ್ಕಾಗಿ ಪತ್ರ ಬರೆದು ಅಸಮಾಧಾನ ಹೊರಹಾಕಿದ್ದಾನೆ. ಅಷ್ಟಕ್ಕೂ ಆಗಿದ್ದು ಏಕೆಂದರೆ, ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ, ಪಲಯಪೆಟ್ಟೈ ಪ್ರದೇಶದ ಮನೆಯೊಂದಕ್ಕೆ ನುಗ್ಗಿದ ಕಳ್ಳನೊಬ್ಬ, ಅಲ್ಲಿ ಸಿಸಿಟಿವಿ ಇರುವುದನ್ನು ನೋಡಿದ್ದಾನೆ. ಸಿಸಿಟಿವಿ ಇದ್ದ ಬಳಿಕ, ಈ ಮನೆಯಲ್ಲಿ ಭಾರಿ ಬೆಲೆಬಾಳುವ ವಸ್ತು ಇದ್ದಿರಬೇಕು, ಅದನ್ನೆಲ್ಲಾ ಕದ್ದರೆ ಅಬ್ಬಾ ಜೀವನ ಸಾರ್ಥಕ ಎಂದುಕೊಂಡು ಕನಸು ಕಾಣುತ್ತಾ ಎಲ್ಲಾ ಕಡೆ ತಡಕಾಡಿದ್ದಾನೆ.
ಬಿಡಿಗಾಸೂ ಸಿಗಲಿಲ್ಲ!
ಚಿನ್ನಾಭರಣಗಳು ದೂರದ ಮಾತು, ಆ ಮನೆಯಲ್ಲಿ ಅವನಿಗೆ ಬಿಡಿಗಾಸು ಕೂಡ ಸಿಗಲಿಲ್ಲ! ಇದರಿಂದ ಆತ ರೊಚ್ಚಿಗೆದ್ದಿದ್ದಾನೆ. ಅಲ್ಲಿ ಇಲ್ಲಿ ತಡಕಾಡಿದ ಬಳಿಕ 2 ಸಾವಿರ ರೂಪಾಯಿ ಮಾತ್ರ ಅವನಿಗೆ ಸಿಕ್ಕಿದೆ. ಸಿಸಿಟಿವಿಯನ್ನು ನಂಬಿ ಬಂದ ಕಳ್ಳನಿಗೆ ನಿರಾಶೆಯಾಗಿದೆ.
ಮುಂದಿನ ಸಲವಾದ್ರೂ...
ಆದ್ದರಿಂದ ಆತ 2ಸಾವಿರ ರೂಪಾಯಿ ದೋಚಿಕೊಂಡು ಪತ್ರ ಬರೆದಿಟ್ಟು ಹೋಗಿದ್ದಾನೆ. "ಒಂದು ರೂಪಾಯಿ ಕೂಡ" ಮನೆಯಲ್ಲಿ ಇಲ್ಲ ಹಾಗಿದ್ದ ಮೇಲೆ ಸಿಸಿಟಿವಿ ಯಾವ ಪುರುಷಾರ್ಥಕ್ಕೆ ಎಂದು ಬೈದಿರೋ ಕಳ್ಳ, ಮುಂದಿನ ಬಾರಿ ಯಾರಾದರೂ ಕದಿಯಲು ಯಾರಾದರೂ ಬಂದರೆ, ಅವರು ಮೋಸ ಹೋಗದಂತೆ ಹಣವನ್ನು ಇಟ್ಟುಕೊಳ್ಳಿ ಎಂದು ಬರೆದಿದ್ದಾನೆ! ಹೋಗುವಾಗ ಸಿಸಿಟಿವಿ ಕ್ಯಾಮೆರಾದ ಹಾರ್ಡ್ ಡಿಸ್ಕ್ ಅನ್ನು ಕದ್ದುಕೊಂಡೂ ಹೋಗಿದ್ದಾನೆ ಕಳ್ಳ. ಕಳ್ಳತನದಿಂದ ಮನೆ ಮಾಲೀಕರು ದಿಗಿಲಾಗಿದ್ದರೆ, ಆತನ ಪತ್ರ ನೋಡಿದವರು ಇದನ್ನು ತಮಾಷೆಯಾಗಿ ಚರ್ಚಿಸುತ್ತಿದ್ದಾರೆ.


