No Insurance No Fuel: ದೇಶದಲ್ಲಿ ವಿಮೆ ಇಲ್ಲದೆ ಸಂಚರಿಸುತ್ತಿರುವ ಶೇ.56ರಷ್ಟು ವಾಹನಗಳನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ನಿರಾಕರಿಸುವ ಪ್ರಾಯೋಗಿಕ ಯೋಜನೆ ರೂಪಿಸಲು ಕೇಂದ್ರಕ್ಕೆ ನಿರ್ದೇಶಿಸಿದೆ.
ನವದೆಹಲಿ (ಆ.5): ದೇಶದಲ್ಲಿ ಶೇ.56ರಷ್ಟು ವಾಹನಗಳು ವಿಮೆ ಇಲ್ಲದೆಯೇ ಸಂಚರಿಸುತ್ತಿರುವ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಮಾನ್ಯವಾದ ವಿಮೆ ಹೊಂದುವವರೆಗೆ ಬಂಕ್‌ಗಳಲ್ಲಿ ವಾಹನಗಳಿಗೆ ಇಂಧನ ನಿರಾಕರಿಸುವಂತಹ ಪ್ರಾಯೋಗಿಕ ಯೋಜನೆಯನ್ನು ಸಿದ್ಧಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಮಂಗಳವಾರ ಮಹತ್ವದ ನಿರ್ದೇಶನ ನೀಡಿದೆ.
ಪ್ರತಿಯೊಂದು ವಾಹನಕ್ಕೂ ಥರ್ಡ್ ಪಾರ್ಟಿ ವಿಮೆ ಕಡ್ಡಾಯ
ಮೋಟಾರು ವಾಹನ ಕಾಯ್ದೆಯಡಿ ಪ್ರತಿಯೊಂದು ವಾಹನಕ್ಕೂ ಥರ್ಡ್ ಪಾರ್ಟಿ ವಿಮೆ ಕಡ್ಡಾಯವಾಗಿದ್ದರೂ ಅದರ ಉಲ್ಲಂಘನೆಯಾಗುತ್ತಿರುವುದನ್ನು ಎತ್ತಿ ತೋರಿಸಿದ ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ಪೀಠ, ‘ದೇಶದಲ್ಲಿರುವ ಒಟ್ಟು 30.48 ಕೋಟಿ ವಾಹನಗಳಲ್ಲಿ 16.54 ಕೋಟಿ ವಾಹನಗಳು ವಿಮೆ ಹೊಂದಿಲ್ಲ. ಭಾರತೀಯ ರಸ್ತೆಗಳಲ್ಲಿ ಸಂಚರಿಸುವ ಶೇ.56ರಷ್ಟು ವಾಹನಗಳು ವಿಮೆ ಹೊಂದಿಲ್ಲದಿರುವುದು ದಿಗ್ಭ್ರಮೆ ಹುಟ್ಟಿಸುವಂತಿದೆ’ ಎಂದಿದೆ.
‘ವಿಮೆ ಇಲ್ಲದಿರುವುದರಿಂದಾಗಿ ಅಪಘಾತದ ಸಂತ್ರಸ್ತರಿಗೆ ಪರಿಹಾರ ವಿಳಂಬವಾಗುತ್ತಿದೆ ಅಥವಾ ಸಿಗುತ್ತಲೇ ಇಲ್ಲ. ವಿಮೆ ಕಡ್ಡಾಯಗೊಳಿಸಿರುವುದರ ಉದ್ದೇಶ ಸಂತ್ರಸ್ತರಿಗೆ ಕೇವಲ ಪರಿಹಾರ ಒದಗಿಸುವುದಷ್ಟೇ ಅಲ್ಲ, ಅವರು ದೀರ್ಘಕಾಲದ ಕಾನೂನು ಹೋರಾಟದಲ್ಲಿ ಸಿಲುಕಿಕೊಳ್ಳಬಾರದು ಎಂಬುದೂ ಆಗಿದೆ. ಭಾರತದ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎ) ಮತ್ತು ಹೆದ್ದಾರಿ ಸಚಿವಾಲಯದ ಜೊತೆ ಸಮಾಲೋಚಿಸಿ, ವಾಹನದ ವಿಮೆಯ ಸ್ಥಿತಿಯನ್ನು ಇಂಧನ ಪೂರೈಕೆಗೆ ಲಿಂಕ್ ಮಾಡುವ ಪ್ರಾಯೋಗಿಕ ಯೋಜನೆಯನ್ನು ರೂಪಿಸಬೇಕು. ವಿಮೆ ಇಲ್ಲದ ವಾಹನಗಳಿಗೆ, ವಿಮೆ ಪಡೆಯುವವರೆಗೆ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನವನ್ನು ನಿರಾಕರಿಸಬೇಕು’ ಎಂದು ಪೀಠ ಸ್ಪಷ್ಟಪಡಿಸಿದೆ.
ಪತ್ತೆಗೆ ಸ್ವಯಂಚಾಲಿತ ವ್ಯವಸ್ಥೆ:
ಇದೇ ವೇಳೆ ವಿಮೆ ಹೊಂದಿಲ್ಲದ ವಾಹನಗಳ ಪತ್ತೆಗೆ, ಅವುಗಳ ನಂಬರ್‌ಪ್ಲೇಟ್ ಬಳಸಿಕೊಂಡು ಸ್ವಯಂಚಾಲಿತವಾಗಿ ಪತ್ತೆ ಮಾಡುವ ವ್ಯವಸ್ಥೆಯನ್ನು ಕೆಲವೊಂದು ಕಾರಿಡಾರ್‌ಗಳಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಲೂ ನ್ಯಾಯಾಲಯ ಸೂಚಿಸಿತು.
ಹೊಸ ವಾಹನ ವಿಮೆ ಅವಧಿ ವಿಸ್ತರಣೆ:
ಮೋಟಾರು ವಾಹನ ಕಾಯ್ದೆಯ ಪಾಲನೆಯನ್ನು ಸುಧಾರಿಸುವ ಮತ್ತು ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ, ಹೊಸ ವಾಹನಗಳಿಗೆ ಕಡ್ಡಾಯವಾದ ಮೂರನೇ ವ್ಯಕ್ತಿ ವಿಮೆ ಅವಧಿಯನ್ನು 1 ವರ್ಷ ಹೆಚ್ಚಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರ್ದೇಶಿಸಿದೆ. ಅದರಂತೆ, ಇನ್ನು ಮುಂದೆ ವಾಹನ ಖರೀದಿಯ ಸಮಯದಲ್ಲಿ ಹೊಸ ಕಾರುಗಳಿಗೆ 4 ವರ್ಷ ಮತ್ತು ಹೊಸ ದ್ವಿಚಕ್ರ ವಾಹನಗಳಿಗೆ 6 ವರ್ಷಗಳ ಅವಧಿಗೆ ವಿಮೆ ರಕ್ಷಣೆ ಹೊಂದುವುದನ್ನು ಕಡ್ಡಾಯಗೊಳಿಸಿದೆ.


