ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ ಜಾರಿ ಮಾಡಲಾಗುತ್ತಿದೆ. ವಾಯು ಮಾಲಿನ್ಯ ತಗ್ಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಮಾಲೀಕರಿಗೆ ಕೇವಲ ಒಂದೇ ದಿನ ಸಮಯ ನೀಡಲಾಗಿದೆ.

ನವದೆಹಲಿ (ಡಿ.16) ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತ್ತ ವಾಯು ಮಾಲಿನ್ಯವೂ ವಿಪರೀತವಾಗುತ್ತದೆ. ಭಾರತದ ಹಲವು ನಗರಗಳು ವಾಯು ಮಾಲಿನ್ಯದಿಂದ ಉಸಿರಾಡುವುದೇ ಕಷ್ಟವಾಗಿದೆ. ಹೀಗಾಗಿ ಡಿಸೆಂಬರ್ 18 ರಿಂದ ಹೊಸ ನಿಯಮ ಜಾರಿಯಾಗುತ್ತಿದೆ. ವಾಹನಗಳಿಗೆ ಪಿಯುಸಿ ಟೆಸ್ಟ್ ಪ್ರಮಾಣಪತ್ರ ಇದ್ದರೆ ಮಾತ್ರ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ನೀಡಲಾಗುತ್ತದೆ. ಹೊಸ ನಿಯಮ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಡಿಸೆಂಬರ್ 18 ರಿಂದ ಜಾರಿಯಾಗುತ್ತಿದೆ.

ಎಮಿಶನ್‌ ಟೆಸ್ಟ್‌ಗೆ ಒಂದೇ ದಿನ ಸಮಯ

ದೆಹಲಿಯಲ್ಲಿ ವಾಯು ಮಾಲಿನ್ಯ ವಿಪರೀತವಾಗುತ್ತಿರುವ ಕಾರಣ ಪ್ರತಿ ವಾಹನಗಳು ಪರಿಸರ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಹೊಂದಿರಬೇಕು. ಪಿಯುಸಿ ಮಾನದಂಡಗಳಿಗೆ ವಾಹನ ಇಲ್ಲದಿದ್ದರೆ ಪ್ರಮಾಣ ಪತ್ರ ಸಿಗುವುದಿಲ್ಲ, ಪ್ರಮಾಣಪತ್ರ ಇಲ್ಲದಿದ್ದರೆ ಇಂಧನವೂ ಸಿಗುವುದಿಲ್ಲ. ದೆಹಲಿ ಮಾಲಿನ್ಯ ಗಂಭೀರ ಸಮಸ್ಯೆ ಸೃಷ್ಟಿಸುತ್ತಿರುವ ಬೆನ್ನಲ್ಲೇ ದೆಹಲಿ ಪರಿಸರ ಸಚಿವ ಮನ್ಜಿಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ. ಡಿಸೆಂಬರ್ 18 ರಿಂದಲೇ ಜಾರಿಯಾಗುತ್ತಿರುವ ಕಾರಣ ವಾಹನ ಮಾಲೀಕರಿಗೆ ಒಂದು ದಿನ ಗುಡುವು ನೀಡಲಾಗಿದೆ. ಯಾರ ವಾಹನಗಳು ಪಿಯುಸಿ ಪ್ರಮಾಣ ಹೊಂದಿಲ್ಲವೋ, ಒಂದು ದಿನದೊಳಗೆ ಪಿಯುಸಿ ಪ್ರಮಾಣಪತ್ರ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಲಾಗಿದೆ.

ದೆಹಲಿ ವಾಯು ಮಾಲಿನ್ಯ ಕುರಿತು ಸುದ್ದಿಗೋಷ್ಠಿ ನಡೆಸಿದ ಪರಿಸರ ಸಚಿವ ಸಿರ್ಸಾ, ದಹೆಲಿ ಮಾಲಿನ್ಯ ಏಕಾಏಕಿ ಕಡಿಮೆಯಾಗುವುದಿಲ್ಲ. ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಪೈಕಿ ವಾಹನಗಳು ಸೂಕ್ತ ಪಿಯುಸಿ ಪ್ರಮಾಣಪತ್ರ ಹೊಂದಿರಬೇಕು. ಇದ್ದರೆ ಮಾತ್ರ ಪೆಟ್ರೋಲ್ ನೀಡಲಾಗುತ್ತದೆ. ಈ ನಿಯಮ ಎಲ್ಲರು ಪಾಲನೇ ಮಾಡಲೇಬೇಕು ಎಂದು ಸಿರ್ಸಾ ಹೇಳಿದ್ದಾರೆ. ಕಳೆದ ವರ್ಷದ ಇದೇ ಸಮಯಕ್ಕೆ ಹೋಲಿಸಿದರೆ ಈ ವರ್ಷ ಸುಧಾರಣೆ ಕಂಡಿದೆ. ಉತ್ತಮ ವಾಯುವಿಗಾಗಿ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. ಕಟ್ಟಡ ತ್ಯಾಜ್ಯ ಸೇರಿದಂತೆ ಇತರ ಘನ ವಾಹನಗಳ ಮೇಲೆ ಹೆಚ್ಚಿನ ದಂಡ ವಿಧಿಸಲಾಗುತ್ತದೆ. ಇನ್ನು ದೆಹಲಿ ಹೊರಗಿನ ವಾಹನಗಳು ದೆಹಲಿ ಪ್ರವೇಶಿಸುವಾಗಲು ಕೆಲ ನಿರ್ಬಂಧ ವಿಧಿಸಲಾಗಿದೆ . ದೆಹಲಿ ಹೊರಗಿನ ವಾಹನಗಳು ಬಿಎಸ್6 ಎಮಿಶನ್ ಎಂಜಿನ್ ಆಗಿದ್ದರೆ ಮಾತ್ರ ದೆಹಳಿ ಒಳಗೆ ಪ್ರವೇಶಕ್ಕೆ ಅನುಮತಿಸಲಾಗುತ್ತದೆ. ಬಿಎಸ್6 ಎಮಿಶನ್ ಅಲ್ಲದ ವಾಹನಗಳಿಗೆ ದೆಹಲಿ ಪ್ರವೇಶಕ್ಕೂ ಅನುಮತಿ ಇರುವುದಿಲ್ಲ.

13 ಸ್ಥಳ ಗುರಿತಿಸಲಾಗಿದೆ

ದೆಹಲಿಯಲ್ಲಿ ವಿಪರೀತ ವಾಯು ಮಾಲಿನ್ಯವಾಗುತ್ತಿರುವ 13 ಸ್ಥಳಗಳನ್ನು ಗುರುತಿಸಲಾಗಿದೆ. ಇಲ್ಲಿ ವಾಯು ಗುಣಮಟ್ಟ ಹೆಚ್ಚಿಸಲು ಖಾಸಗಿ ಸಂಸ್ಥೆಗಳು, ತಜ್ಞರ ಸಮಿತಿ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ 13 ಸ್ಥಳಗಳಲ್ಲಿ ವಾಯು ಮಾಲಿನ್ಯ ಹಿಂದೆಂದು ಕಾಣದ ಪರಿಸ್ಥಿತಿಗೆ ತಲುಪಿದೆ.

ದೆಹಲಿಯಲ್ಲಿ 7,500 ಎಲೆಕ್ಟ್ರಿಕ್ ಬಸ್ ಪ್ಲಾನ್ ಮಾಡಲಾಗಿದೆ. ಇಂಧನ ವಾಹನಗಳಿಂದ ಸಂಪೂರ್ಣವಾಗಿ ಎಲೆಕ್ಟ್ರಿಕ್ ವಾಹನ ಬಳಕೆಗೆ ಉತ್ತೇಜನ ನೀಡಲಾಗುತ್ತದೆ. ವಾಹನದಿಂದ ಆಗುತ್ತಿರುವ, ಕಾರ್ಖಾನೆಗಳಿಂದ ಆಗುತ್ತಿರುವ ಮಾಲಿನ್ಯ ತಗ್ಗಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದಿ ಸಿರ್ಸಾ ಹೇಳಿದ್ದಾರೆ.