ದೆಹಲಿಯ ಮೆಟ್ರೋ ನಿಲ್ದಾಣವೊಂದರಲ್ಲಿ ವ್ಯಕ್ತಿಯೊಬ್ಬ ಅನಾಗರಿಕನಂತೆ ವರ್ತಿಸಿದ್ದು, ಈ ಕೃತ್ಯದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆಯ ನಂತರ, ದೆಹಲಿ ಮೆಟ್ರೋ ನಿಗಮವು ಪ್ರಕಟಣೆ ಹೊರಡಿಸಿದೆ.
ನಮ್ಮ ಜನ ಎಷ್ಟೇ ವಿದ್ಯಾವಂತರಾಗಿರಲಿ ನಾಗರಿಕ ಪ್ರಜ್ಞೆಯ ವಿಚಾರ ಬಂದಾಗ ಬಹುತೇಕರ ಕೊಡುಗೆ ಬರೀ ಶೂನ್ಯ. ಪಾನ್ ಮಸಾಲ ಜಗಿದು ಉಗಿದ ಬಸ್ ನಿಲ್ದಾಣಗಳು ಬಸ್ ಕಿಟಕಿ ಗಾಜುಗಳು, ಕಸದ ರಾಶಿ ತುಂಬಿರುವ ಬಸ್ ನಿಲ್ದಾಣಗಳು, ಸಾರ್ವಜನಿಕ ರಸ್ತೆಗಳು ಇದಕ್ಕೆ ಸಾಕ್ಷಿಯಾಗಿವೆ. ಎಷ್ಟೇ ಕಠಿಣ ಕಾನೂನು ಕ್ರಮಗಳು ಬಂದರೂ ಕೆಲ ವಿಕೃತ ಮನಸ್ಥಿತಿಗಳು ಬದಲಾಗುವುದೇ ಇಲ್ಲ. ಇಂತಹವರಿಂದಲೇ ಸೊಗಸಾಗಿರಬೇಕಾದ ಬಸ್ ನಿಲ್ದಾಣಗಳು, ಸಾರ್ವಜನಿಕ ಆಸ್ತಿಗಳು ಯಾರಿಗೂ ಬೇಡದಂತಹ ಸ್ಥಿತಿ ತಲುಪಿರುತ್ತವೆ. ಅದೇ ರೀತಿ ಇಲ್ಲೊಬ್ಬರು ಸಾರ್ವಜನಿಕ ಸ್ಥಳವೆನಿಸಿದ ಮೆಟ್ರೋ ನಿಲ್ದಾಣದೊಳಗೆಯೇ ಮೂತ್ರ ವಿಸರ್ಜನೆ ಮಾಡಿದ್ದು, ಆ ವ್ಯಕ್ತಿಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದ್ದು, ಭಾರಿ ಆಕ್ರೋಶ ಕೇಳಿ ಬಂದಿದೆ.
ವೈರಲ್ ಆದ ವೀಡಿಯೋದಲ್ಲಿ ಕಾಣುವಂತೆ ಮೆಟ್ರೋ ನಿಲ್ದಾಣದಲ್ಲಿ ಸ್ವಚ್ಛವಾಗಿರುವ ನೆಲದ ಮೇಲೆಯೇ ವ್ಯಕ್ತಿಯೊಬ್ಬ ತನ್ನ ಪ್ಯಾಂಟ್ ಬಿಚ್ಚಿ ಮೂತ್ರ ವಿಸರ್ಜನೆ ಮಾಡಿದ್ದಾನೆ. ಕೂಡಲೇ ಆತನಿಗೆ ಯಾರೋ ನನ್ನನ್ನು ವೀಡಿಯೋ ಮಾಡ್ತಿದ್ದಾರೆ ಎಂಬುದು ಗಮನಕ್ಕೆ ಬಂದಿದ್ದು, ಕೂಡಲೇ ಆತ ಪಕ್ಕಕ್ಕೆ ತಿರುಗಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ದೆಹಲಿ ಮೆಟ್ರೋದ ನರೈನಾ ವಿಹಾರ್ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ವೀಡಿಯೋ ನೋಡಿದ ಅನೇಕರು ಆ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಮೆಟ್ರೋ ಕಾರ್ಯಾನಿರ್ವಹಿಸುತ್ತಿದ್ದ ಸಮಯದಲ್ಲೇ ಜನರಿದ್ದಾಗಲೇ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಆದರೆ ಆತ ತನ್ನನ್ನು ವೀಡಿಯೋ ಮಾಡಲಾಗ್ತಿದೆ ಎಂಬ ವಿಚಾರ ಗೊತ್ತಾಗ್ತಿದ್ದಂಗೆ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.
ತರುಣ್ ಗೌತಮ್ ಎಂಬುವವರು ಈ ವೀಡಿಯೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಈತ ಮೆಟ್ರೋ ನಿಲ್ದಾಣದ ಒಳಭಾಗದಲ್ಲೇ ಮೂತ್ರ ವಿಸರ್ಜನೆ ಮಾಡುತ್ತಿದ್ದಾನೆ. ಈತ ಖಂಡಿತವಾಗಿಯೂ ಪಾನಮತ್ತನಾಗಿರುವಂತೆ ಕಾಣುತ್ತಿದೆ. ನಮ್ಮ ದೇಶದಲ್ಲಿ ಮೆಟ್ರೋ ರೈಲು ನಿಲ್ದಾಣಗಳು ಮಾತ್ರ ಉತ್ತಮ ಸ್ವಚ್ಛತೆಗೆ ಮಹಿಳಾ ಸುರಕ್ಷತೆಗೆ ಹೆಸರಾಗಿರುವ ಜಾಗ. ಈತ ಅಲ್ಲಿಯೂ ಮೂತ್ರ ವಿಸರ್ಜನೆ ಮಾಡ್ತಿದ್ದಾನೆ ಎಂದು ಅವರು ಬರೆದುಕೊಂಡಿದ್ದಾರೆ.
5 ರಿಂದ 10 ರೂಪಾಯಿ ನೀಡಿದರೆ ಸಾರ್ವಜನಿಕ ಶೌಚಾಲಯಗಳಿವೆ. ಮೆಟ್ರೋ ನಿಲ್ದಾಣದ ಒಳಗೂ ಶೌಚಾಲಯಗಳಿವೆ. ಹೀಗಿದ್ದರೂ ಈತ ಏಕೆ ಇಲ್ಲಿ ಮೂತ್ರ ವಿಸರ್ಜನೆ ಮಾಡ್ತಿದ್ದಾನೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಆತ ಹಣ ಉಳಿಸುವುದಕ್ಕೆ ಈ ರೀತಿ ಮಾಡಿರಬಹುದು ಎಂದು ಇನ್ನೂ ಕೆಲವರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಪತ್ನಿಗೆ ಜೀವನಾಂಶ ಕೊಡ್ಬೇಕಾಗುತ್ತೆ ಅಂತ ಸಿಂಗಾಪುರದ ಕೋಟ್ಯಾಂತರ ರೂ ವೇತನದ ಕೆಲಸ ಬಿಟ್ಟಿದ್ದ ಪತಿಗೆ ಶಾಕ್: 4 ಕೋಟಿ ನೀಡಲು ಆದೇಶ
ಈ ವೀಡಿಯೋ ವೈರಲ್ ಆದ ಬಳಿಕ ದೆಹಲಿ ಮೆಟ್ರೋ ನಿಗಮವೂ ಸಾರ್ವಜನಿಕರು ಹಾಗೂ ಪ್ರಯಾಣಿಕರಲ್ಲಿ ಮನವಿ ಮಾಡಿದೆ. ಎಲ್ಲಾ ಮೆಟ್ರೋ ನಿಲ್ದಾಣದ ಆವರಣದಲ್ಲಿ ಸ್ವಚ್ಛತೆ ಕಾಪಾಡುವಂತೆ ನಿಗಮವು ಎಲ್ಲಾ ಪ್ರಯಾಣಿಕರಿಗೆ ಮನವಿ ಮಾಡುತ್ತದೆ. ಯಾರಾದರು ಪ್ರಯಾಣಿಕರು ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಕಂಡು ಬಂದರೆ ಸಹ ಪ್ರಯಾಣಿಕರು ಕೂಡಲೇ ಅಂತಹ ವಿಚಾರವನ್ನು ಕೂಡಲೇ ಡಿಎಂಆರ್‌ಸಿ ಗಮನಕ್ಕೆ ತರುವಂತೆ ಮೆಟ್ರೋ ನಿಗಮವು ಹೇಳಿದೆ.
ಇದನ್ನೂ ಓದಿ: ಬೀದಿ ವ್ಯಾಪಾರಿಗಳಿಗೆ ಬಡ್ಡಿಗೆ ಸಾಲ ಕೊಡ್ತಾನೆ ಈ ಭಿಕ್ಷುಕ, 3 ಮನೆ, ಕಾರು ಆಟೋರಿಕ್ಷಾ: ಈತನ ಐಷಾರಾಮ ನೋಡಿ ಅಧಿಕಾರಿಗಳೇ ಶಾಕ್

