- Home
- News
- India News
- ಬೀದಿ ವ್ಯಾಪಾರಿಗಳಿಗೆ ಬಡ್ಡಿಗೆ ಸಾಲ ಕೊಡ್ತಾನೆ ಈ ಭಿಕ್ಷುಕ, 3 ಮನೆ, ಕಾರು ಆಟೋರಿಕ್ಷಾ: ಈತನ ಐಷಾರಾಮ ನೋಡಿ ಅಧಿಕಾರಿಗಳೇ ಶಾಕ್
ಬೀದಿ ವ್ಯಾಪಾರಿಗಳಿಗೆ ಬಡ್ಡಿಗೆ ಸಾಲ ಕೊಡ್ತಾನೆ ಈ ಭಿಕ್ಷುಕ, 3 ಮನೆ, ಕಾರು ಆಟೋರಿಕ್ಷಾ: ಈತನ ಐಷಾರಾಮ ನೋಡಿ ಅಧಿಕಾರಿಗಳೇ ಶಾಕ್
ಮಧ್ಯಪ್ರದೇಶದ ಇಂದೋರ್‌ನಲ್ಲಿ ಭಿಕ್ಷಾಟನೆ ನಿರ್ಮೂಲನಾ ಅಭಿಯಾನದ ವೇಳೆ ಮಂಗೀಲಾಲ್ ಎಂಬ ಭಿಕ್ಷುಕ ಕೋಟ್ಯಾಧಿಪತಿ ಎಂಬ ಸತ್ಯ ಬಯಲಾಗಿದೆ. ಹಲವು ಮನೆ, ವಾಹನಗಳನ್ನು ಹೊಂದಿರುವ ಈತ, ಬಡ್ಡಿಗೆ ಸಾಲ ನೀಡುವ ವ್ಯವಹಾರವನ್ನೂ ನಡೆಸುತ್ತಿದ್ದು, ಈತನ ಶ್ರೀಮಂತಿಕೆ ಕಂಡು ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.

ಭಿಕ್ಷುಕನ ಶ್ರೀಮಂತಿಕೆ ನೋಡಿ ಅಧಿಕಾರಿಗಳೇ ಶಾಕ್
ಮಧ್ಯಪ್ರದೇಶ ಸರ್ಕಾರವೂ ಇತ್ತೀಚೆಗೆ ಭಿಕ್ಷುಕರ ನಿರ್ಮೂಲನೆಗಾಗಿ ಆರಂಭಿಸಿದ ಭಿಕ್ಷಾಟನೆ ನಿರ್ಮೂಲನ ಅಂದೋಲನವೂ ಭಿಕ್ಷಕುಕರೊಬ್ಬರ ಅಗಾಧ ಶ್ರೀಮಂತಿಕೆಯನ್ನು ಪ್ರಪಂಚದ ಮುಂದೆ ತೆರೆದಿಟ್ಟಿದ್ದು, ಸ್ವತಃ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಕುಷ್ಠರೋಗದಿಂದ ಬಳಲುತ್ತಿದ್ದ ಹಿರಿಯ ನಾಗರಿಕನೋರ್ವ ಹಲವಾರು ವರ್ಷಗಳಿಂದ ಇಂದೋರ್‌ನ ಪ್ರತಿಷ್ಠಿತ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಾ ಬೇಡುತ್ತಾ ಕೋಟ್ಯಾಧಿಪತಿಯೇ ಆಗಿದ್ದಾನೆ. ಈತ ಹಲವು ಮನೆಗಳನ್ನು ವಾಹನಗಳನ್ನು ಹೊಂದಿದ್ದಲ್ಲದೇ ಒಂದು ಯಶಸ್ವಿ ಸಾಲ ನೀಡುವ ವ್ಯವಹಾರವನ್ನು ನಡೆಸುತ್ತಿದ್ದಾನೆ. ಭಿಕ್ಷುಕನೋರ್ವನ ಈ ರೀತಿಯ ಶ್ರೀಮಂತಿಕೆ ನೋಡಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ.
3 ಅಂತಸ್ಥಿನ ಮನೆ, ಸ್ವಿಫ್ಟ್ ಡಿಜೈರ್ ಕಾರು
ಹೌದು ಆತನ ಹೆಸರು ಮಂಗಿಲಾಲ್ , ಜನದಟ್ಟಣೆಯ ರಸ್ತೆಯಲ್ಲಿ ಕೈಯಿಂದ ತಳ್ಳುವ ಮರದ ಹಲಗೆಯ ಬಂಡಿಯಲ್ಲಿ ಸಂಚರಿಸುವ ಈ ಮಂಗೀಲಾಲ್ ಬಳಿ ಮೂರು ಅಂತಸ್ತಿನ ಕಟ್ಟಡ, ಸ್ವಿಫ್ಟ್ ಡಿಜೈರ್ ಕಾರು ಮತ್ತು ಬಾಡಿಗೆಗೆ ಕೊಟ್ಟಿರುವ ಮೂರು ಆಟೋರಿಕ್ಷಾಗಳು ಸೇರಿದಂತೆ ಮೂರು ಮನೆಗಳಿವೆ ಎಂದು ವರದಿಯಾಗಿದೆ. ಈತನ ಶ್ರೀಮಂತಿಕೆ ಇಷ್ಟಕ್ಕೆ ಮುಗಿದಿಲ್ಲ, ಭಿಕ್ಷಾಟನೆ ಮತ್ತು ವಾಹನ ಬಾಡಿಗೆಗಳಿಂದ ಬಂದ ಹಣವನ್ನು ಅವನು ಸಣ್ಣ ವ್ಯಾಪಾರಿಗಳು ಮತ್ತು ರಸ್ತೆಬದಿಯ ವ್ಯಾಪಾರಿಗಳಿಗೆ ಸಾಲ ನೀಡಲು ಬಳಸುತ್ತಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಿಕ್ಷಾಟನೆ ನಿಷೇಧಿಸಿರುವ ಸರ್ಕಾರ
ಹೇಳಿಕೇಳಿ ಇಂದೋರ್ ದೇಶದ ಅತ್ಯಂತ ಸ್ವಚ್ಛ ನಗರ ಎನಿಸಿದೆ. ಆದರೆ ಭಿಕ್ಷಾಟನೆ ನಗರದ ಸೌಂದರ್ಯ ಹಾಗೂ ಹೆಸರಿಗೆ ಕಳಂಕ ತರುತ್ತಿದೆ. ಈ ಹಿನ್ನೆಲೆಯಲ್ಲಿ ಇಂದೋರ್‌ನಲ್ಲಿ ಜನವರಿ 1ರಿಂದಲೇ ಭಿಕ್ಷಾಟನೆಯನ್ನು ನಿಷೇಧಿಸಲಾಗಿದೆ. ಹಾಗೂ ಭಿಕ್ಷುಕರ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದವರಿಗೆ 1,000 ರೂ.ಗಳ ಬಹುಮಾನವನ್ನು ಘೋಷಿಸಲಾಗಿದೆ. ಹೀಗಾಗಿ ಯಾರೋ ಈ ಮಂಗೀಲಾಲ್ ಬಗ್ಗೆಯೂ ಮಾಹಿತಿ ನೀಡಿದ್ದು, ಈತನ ಪೂರ್ವಪರ ತಿಳಿಯಲು ಹೋದ ಅಧಿಕಾರಿಗಳು ಈತನ ಶ್ರೀಮಂತಿಕೆ ನೋಡಿ ಶಾಕ್ ಆಗಿದ್ದಾರೆ.
ಅಧಿಕಾರಿಗಳ ತನಿಖೆಯಿಂದ ಆಘಾತಕಾರಿ ವಿಚಾರ ಬಯಲು
ಈ ಮಂಗೀಲಾಲ್ ಸರಫಾ ಚೌಪತಿ ನಿವಾಸಿಯಾಗಿದ್ದಾನೆ. ಮಂಗೀಲಾಲ್ ಬಗ್ಗೆ ಸಿಕ್ಕ ಮಾಹಿತಿಯ ಮೇರೆಗೆ ಭಿಕ್ಷುಕರ ನಿರ್ಮೂಲನೆ ಮಾಡಿ ಅವರಿಗೆ ಪುನರ್ವಸತಿ ನೀಡುವುದಕ್ಕೆ ಕಾರ್ಯಾಚರಿಸುವ ತಂಡವು ಶನಿವಾರ ರಾತ್ರಿ ಸರಾಫಾಗೆ ಹೋದಾಗ ಅಲ್ಲಿಇಬ್ಬರು ಮಕ್ಕಳು ಬಲೂನ್‌ಗಳನ್ನು ಮಾರುತ್ತಿರುವುದು ಕಂಡುಬಂದಿತು, ನಂತರ ಕೈಯಿಂದ ತಳ್ಳಲ್ಪಡುವ ಟ್ರಾಲಿ ಬಂಡಿಯಲ್ಲಿ ಜನದಟ್ಟಣೆಯ ಪ್ರದೇಶದಲ್ಲಿ ಚಲಿಸುತ್ತಿದ್ದ ಮಂಗಿಲಾಲ್ ಅವರನ್ನು ಕೂಡ ಈ ತಂಡ ಗಮನಿಸಿತ್ತು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನಾ ಅಧಿಕಾರಿ ದಿನೇಶ್ ಮಿಶ್ರಾ ತಿಳಿಸಿದ್ದಾರೆ. ನಾವು ಈ ಹಿಂದೆಯೂ ಅವನನ್ನು ಹುಡುಕುತ್ತಾ ಅಲ್ಲಿಗೆ ಹೋಗಿದ್ದೆವು, ಆದರೆ ಅವನು ಅಲ್ಲಿಂದ ಪರಾರಿಯಾಗಿದ್ದ ಅವನನ್ನು ಪತ್ತೆ ಮಾಡಿ ಪ್ರಶ್ನಿಸಿದಾಗ ಇಡೀ ಆಘಾತಕಾರಿ ವಿಷಯ ಬೆಳಕಿಗೆ ಬಂದಿತು ಎಂದು ಅವರು ಹೇಳಿದರು.
ಈತನಿಗಿದೆ ಒಟ್ಟು 3 ಮನೆ
ನಮ್ಮ ತಂಡ ಅವನ ಬಳಿ ಪ್ರಶ್ನಿಸಿದಾಗ ಹಲವು ವಿಚಾರಗಳು ಬೆಳಕಿಗೆ ಬಂತು, ಮಂಗೀಲಾಲ್ ಅವರದ್ದು 60 ರಿಂದ 65 ವರ್ಷ ವಯಸ್ಸು, ಆತ , ನಗರದ ಅಲ್ವಾಸ ಪ್ರದೇಶದ ಕುಷ್ಠ ರೋಗಿ ಆಶ್ರಮದ ಬಳಿ ಅಧಿಕಾರಿಗಳು ದೈಹಿಕವಾಗಿ ವಿಶೇಷ ಚೇತನರಾದ ಕುಷ್ಠರೋಗ ಪೀಡಿತ ವ್ಯಕ್ತಿಗೆ ಎಂದು ಮಂಜೂರು ಮಾಡಿದ ಮನೆಯಲ್ಲಿ ಪೋಷಕರೊಂದಿಗೆ ವಾಸಿಸುತ್ತಿದ್ದಾರೆ. ಇದಲ್ಲದೇ ಅವರಿಗೆ ಇನ್ನೂ ಎರಡು ಮನೆಗಳಿವೆ, ಅವುಗಳಲ್ಲಿ ಒಂದು ಮೂರು ಅಂತಸ್ತಿನದ್ದಾಗಿದ್ದರೆ, ಇನ್ನೊಂದು ಮನೆ ಒಂದೇ ಅಂತಸ್ತಿನದ್ದಾಗಿದೆ, ಎರಡೂ ನಗರದ ಪ್ರಮುಖ ಪ್ರದೇಶಗಳಲ್ಲಿವೆ ಎಂದು ಇಂದೋರ್‌ನ ಭಿಕ್ಷಾಟನೆ ನಿರ್ಮೂಲನಾ ಅಭಿಯಾನದ ನೋಡಲ್ ಅಧಿಕಾರಿ ಮಿಶ್ರಾ ಹೇಳಿದ್ದಾರೆ. ಇದರ ಜೊತೆಗೆ ಆತ ಮೂರು ಆಟೋ ರಿಕ್ಷಾಗಳನ್ನು ಹೊಂದಿದ್ದಾನೆ. ಅದನ್ನು ಬಾಡಿಗೆಗೆ ನಿರ್ವಹಿಸುತ್ತಿದ್ದಾನೆ. ಇದಲ್ಲದೇ ಆತ ಒಂದು ಸ್ವಿಫ್ಟ್ ಡಿಜೈರ್ ಕಾರನ್ನು ಕೂಡ ಹೊಂದಿದ್ದಾನೆ. ಪ್ರಮಾಣಪತ್ರವನ್ನು ಹೊಂದಿರುವ ದೈಹಿಕ ವಿಶೇಷ ಚೇತನನಾಗಿರುವ ಈತ ಬಡ್ಡಿಗೆ ಸಾಲ ನೀಡುವ ವ್ಯವಹಾರವನ್ನು ನಡೆಸುತ್ತಿದ್ದಾನೆ.
ದಿನಕ್ಕೆ ಈತ ಗಳಿಸುವ ಬಡ್ಡಿ ಹಣವೇ 1000ದಿಂದ 2000
ತಾನು ಭಿಕ್ಷೆ ಬೇಡಿ ಬಂದ ಹಣ ಹಾಗೂ ಆಟೋದಿಂದ ಬಂದ ಬಾಡಿಗೆ ಹಣವನ್ನು ಅವನು ರಸ್ತೆ ಬದಿ ಸಣ್ಣ ವ್ಯಾಪಾರಸ್ಥರಿಗೆ ಸಾಲ ನೀಡುವ ಮೂಲಕ ಅದರಿಂದಲೂ ಅವನು ಹಣ ಗಳಿಕೆ ಮಾಡ್ತಿದ್ದಾನೆ. ಇವನು ಸಾಲ ನೀಡಿದ ಹಣದಿಂದಲೇ ದಿನಕ್ಕೆ 1000 ದಿಂದ 2000 ರೂಪಾಯಿ ಬಡ್ಡಿ ಹಣವನ್ನು ಗಳಿಸುತ್ತಿದ್ದಾನೆ. ಈತ ಅ ಸುಮಾರು 4 ರಿಂದ 5 ಲಕ್ಷ ರೂಪಾಯಿ ಸಾಲವನ್ನು ಹೀಗೆ ಸಣ್ಣ ವ್ಯಾಪಾರಿಗಳಿಗೆ ನೀಡಿದ್ದಾನೆ. ಮತ್ತೊಂದೆಡೆ ಭಿಕ್ಷಾಟನೆ ಮಾಡ್ತಾ 400ರಿಂದ 500 ರೂಪಾಯಿ ಗಳಿಕೆ ಮಾಡ್ತಾ ಇದ್ದಾನೆ. ಇಷ್ಟೆಲ್ಲಾ ಇದ್ದು ಈತ ಏನು ಇಲ್ಲದವನಂತೆ ಭಿಕ್ಷಾಟನೆ ಮಾಡ್ತಿದ್ದಾನೆ. ಇವನ ದಯಾನೀಯವಾದ ವೇಷ ನೋಡಿ ಇಲ್ಲಿನ ಬೀದಿಗಳಿಗೆ ಆಹಾರ ಸೇವಿಸಲು ಬರುವ ನೂರಾರು ಜನ ಈತನಿಗೆ ಹಣ ನೀಡುತ್ತಾರೆ. ಆತನನ್ನು ನಾವು ಈಗ ಭಿಕ್ಷುಕರ ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದೇವೆ ಹಾಗೂ ಈತನ ಬಗ್ಗೆ ಇಂದೋರ್ ಜಿಲ್ಲಾ ಕಲೆಕ್ಟರ್‌ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರಾಷ್ಟ್ರಗೀತೆಗೆ ತಮಿಳುನಾಡು ಕಲಾಪದಲ್ಲಿ ಅವಮಾನದ ಆರೋಪ: ಭಾಷಣ ಮಾಡದೇ ಹೊರ ನಡೆದ ರಾಜ್ಯಪಾಲರು
ಭಿಕ್ಷಾಟಣೆಗೆ ಮನೆಯಿಂದ ಕಾರಿನಲ್ಲಿ ಬಂದು ಬಳಿಕ ವೇಷ ಹಾಕುವ ಮಂಗೀಲಾಲ್
ಕೆಲವು ತನಿಖಾಧಿಕಾರಿಗಳ ಪ್ರಕಾರ ಈತ ಕಾರಿನಲ್ಲಿ ಸುತ್ತಾಡುತ್ತಾನೆ. ತನ್ನ ಕಾರನ್ನು ಆತ ಸರಫಾ ಪ್ರದೇಶದಿಂದ ಸುರಕ್ಷಿತ ಅಂತರದಲ್ಲಿ ಪಾರ್ಕ್ ಮಾಡ್ತಾನೆ. ನಂತರ ತನ್ನ ಈ ಕೈಯಲ್ಲಿ ತಳ್ಳುವ ಮರದ ಚೇರ್‌ನೊಂದಿಗೆ ಈ ಸರಫಾ ಪ್ರದೇಶಕ್ಕೆ ಬರುತ್ತಾನೆ. ಈ ಪ್ರದೇಶದಲ್ಲಿ ಆಹಾರಪ್ರಿಯರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಅವರು ಈತನ ವೇಷ ನೋಡಿ ಆತನಿಗೆ ಹಣ ನೀಡುತ್ತಾರೆ. ಆದರೆ ಈ ಭಿಕ್ಷಾಟಣೆಯ ಬಗ್ಗೆ ಕೇಳಿದಾಗ ಆತ ತನ್ನ ವಿರುದ್ಧದ ಆರೋಪವನ್ನು ಆತ ನಿರಾಕರಿಸಿದ್ದಾನೆ. ನಾನು ಅಲ್ಲಿಗೆ ಹೋಗುತ್ತೇನೆ ಆದರೆ ಭಿಕ್ಷೆ ಬೇಡುವುದಿಲ್ಲ. ಆದರೆ ಅಲ್ಲಿನ ಜನರೇ ನನ್ನನ್ನು ನೋಡಿ ನನ್ನ ಜೇಬಿನೊಳಗೆ ಹಣ ಹಾಕುತ್ತಾರೆ. ಆದರೆ ಇಂದಿನಿಂದ ನಾನು ಅಲ್ಲಿಗೆ ಹೋಗುವುದಿಲ್ಲ ಎಂದು ಆತ ಹೇಳಿದ್ದಾರೆ. ಮಂಗೀಲಾಲ್ ಪ್ರಕಾರ ಆತ 2021ರಿಂದ ಅಲ್ಲಿಗೆ ಭಿಕ್ಷಾಟಣೆಗೆ ಹೋಗ್ತಾ ಇದ್ದಾನೆ. ಆದರೆ ಕಳೆದ 7ರಿಂದ 8 ವರ್ಷಗಳಿಂದಲೂ ಅವನು ಅಲ್ಲಿ ಭಿಕ್ಷಾಟನೆ ಮಾಡ್ತಾನೆ ಎಂಬುದು ತನಿಖೆಯಿಂದ ಸಾಬೀತಾಗಿದೆ.
ಇದನ್ನೂ ಓದಿ: ಮಗಳ ಮದುವೆಗೆ 25 ಲಕ್ಷ ಮೌಲ್ಯದ ಬೆಳ್ಳಿಯ ಆಮಂತ್ರಣ ಸಿದ್ಧಪಡಿಸಿದ ಉದ್ಯಮಿ: ಏನಿದರ ವಿಶೇಷತೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

