8ನೇ ಬಾರಿಗೆ ಬಿಹಾರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಿತೀಶ್ ಕುಮಾರ್, ಡಿಸಿಎಂ ಆದ ಲಾಲೂ ಪುತ್ರ ತೇಜಸ್ವಿ ಯಾದವ್
ಬಿಹಾರದಲ್ಲಿ ಮತ್ತೆ ಮಹಾಘಟಬಂಧನ ಸರ್ಕಾರ ರಚನೆಗೆ ಬಂದಿದೆ. ಸಿಎಂ ಆಗಿ ನಿತೀಶ್ ಕುಮಾರ್ ಅಧಿಕಾರ ಸ್ವೀಕರಿಸಿದರೆ, ಡಿಸಿಎಂ ಆಗಿ ತೇಜಸ್ವಿ ಯಾದವ್ ಪ್ರಮಾಣ ವಚನ ಸ್ವೀಕರಿಸಿದರು.
ಬಿಜೆಪಿ ಸಖ್ಯ ತೊರೆದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಿತೀಶ್ ಕುಮಾರ್ ಒಂದೇ ದಿನದಲ್ಲಿ ಮತ್ತೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ದಾಖಲೆಯ 8ನೇ ಬಾರಿ ನಿತೀಶ್ ಬಿಹಾರದ ಸಿಎಂ ಆಗಿದ್ದಾರೆ. ಇನ್ನೊಂದೆಡೆ, ಮಹಾಘಟಬಂಧನದ ಪ್ರಮುಖ ಪಕ್ಷವಾದ ಆರ್‌ಜೆಡಿಯ ತೇಜಸ್ವಿ ಯಾದವ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಆರ್‌ಜೆಡಿ, ಕಾಂಗ್ರೆಸ್, ಎಡ ಪಕ್ಷಗಳ ಬೆಂಬಲದೊಂದಿಗೆ ಮಹಾಘಟಬಂಧನದ ನಾಯಕರಾಗಿ ಆಯ್ಕೆಯಾಗಿರುವ ನಿತೀಶ್ ಕುಮಾರ್ ದಾಖಲೆಯ 8ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇನ್ನು, ಆರ್‌ಜೆಡಿ ಪಕ್ಷದ ನಾಯಕ ತೇಜಸ್ವಿ ಯಾದವ್ ಎರಡನೇ ಬಾರಿಗೆ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಿಹಾರ ರಾಜಧಾನಿ ಪಾಟ್ನಾದ ರಾಜಭವನದಲ್ಲಿ ಬುಧವಾರ ಮಧ್ಯಾಹ್ನ ನಡೆದ ಸರಳ ಸಮಾರಂಭದಲ್ಲಿ ಬಿಹಾರ ರಾಜ್ಯಪಾಲ ಫಾಗು ಚೌಹಾಣ್ ಪ್ರಮಾಣ ವಚನ ಬೋಧಿಸಿದರು.
ದಾಖಲೆಯ 8ನೇ ಬಾರಿಗೆ ಬಿಹಾರ ಸಿಎಂ ಆಗಿ ಇಂದು ಪ್ರಮಾಣ ವಚನ ಸ್ವೀಕರಿಸಲಿರುವ ನಿತೀಶ್ ಕುಮಾರ್
ಪ್ರಮಾಣ ವಚನ ಸಮಾರಂಭದ ವೇಳೆ ಆರ್‌ಜೆಡಿ ಮುಖ್ಯಸ್ಥರಾಗಿದ್ದ ಲಾಲೂ ಪ್ರಸಾದ್ ಯಾದವ್ ಅವರ ಪತ್ನಿ ರಾಬ್ರಿ ದೇವಿ, ಅವರ ಮೊದಲನೆಯ ಪುತ್ರ ಹಾಗೂ ಆರ್‌ಜೆಡಿ ನಾಯಕ ತೇಜ್ ಪ್ರತಾಪ್ ಯಾದವ್ ಹಾಗೂ ತೇಜಸ್ವಿ ಯಾದವ್ ಪತ್ನಿ ರಾಜ್‌ಶ್ರೀ ಸಹ ಭಾಗಿಯಾಗಿದ್ದರು. ಇನ್ನು, ಪ್ರಮಾಣ ವಚನ ಸ್ವೀಕಾರ ಬಳಿಕ ನೂತನ ಮೂಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಪರಸ್ಪರ ಹಸ್ತಲಾಘವ ಮಾಡಿಕೊಂಡಿದ್ದಾರೆ.
ಈ ಮಧ್ಯೆ ಪ್ರಮಾಣ ವಚನ ಸ್ವೀಕಾರ ಬಳಿಕ ಮಾತನಾಡಿದ ಬಿಹಾರ ಸಿಎಂ, ‘’2014ರಲ್ಲಿ ಅಧಿಕಾರಕ್ಕೆ ಬಂದ ಪಕ್ಷ 2024ರಲ್ಲೂ ಗೆಲುವು ಸಾಧಿಸಲಿದ್ದಾರೆಯೇ..? ಎಲ್ಲ ವಿಪಕ್ಷಗಳು 2024ರ ಚುನಾವಣೆಗಾಗಿ ಒಟ್ಟಾಗಿರಬೇಕೆಂದು ನಾನು ಬಯಸುತ್ತೇನೆ. ನಾನು ಅಂತಹ ಯಾವುದೇ ಹುದ್ದೆಗೆ ಆಕಾಂಕ್ಷಿ ಅಲ್ಲ’’ ಎನ್ನುವ ಮೂಲಕ ನಿತೀಶ್ ಕುಮಾರ್ ತಾನು ಪ್ರಧಾನಿ ಆಕಾಂಕ್ಷಿ ಎನ್ನುವುದನ್ನು ತಳ್ಳಿ ಹಾಕಿದ್ದಾರೆ.
ಇನ್ನು, ನಾವು ಕೆಲಸ ಮಾಡಲು ಅಧಿಕಾರಕ್ಕೆ ಬಂದಿದ್ದೇವೆ ಎಂದು ಆರ್‌ಜೆಡಿ ನಾಯಕ ತೇಜ್ ಪ್ರತಾಪ್ ಯಾದವ್ ಹೇಳಿದ್ದಾರೆ. ಇನ್ನೊಂದೆಡೆ, ನಾನು ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ತಮ್ಮ ಪತಿ ತೇಜಸ್ವಿ ಯಾದವ್ ಉಪ ಮುಖ್ಯಮಂತ್ರಿಯಾದ ಬಳಿಕ ಅವರ ಪತ್ನಿ ರಾಜ್‌ಶ್ರೀ ಹರ್ಷ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇದು ಬಿಹಾರದ ಜನತೆಗೆ ಒಳ್ಳೆಯದು. ನಾನು ಅವರಿಗೆ ಧನ್ಯವಾದ ಹೇಳುತ್ತೇನೆ. ಎಲ್ಲರೂ ಖುಷಿಯಾಗಿದ್ದಾರೆ ಎಂದು ತೇಜಸ್ವಿ ಯಾದವ್ ತಾಯಿ ಹಾಗೂ ಬಿಹಾರದ ಮಾಜಿ ಸಿಎಂ ರಾಬ್ರಿ ದೇವಿ ತಿಳಿಸಿದ್ದಾರೆ.
ನೀತಿ ಆಯೋಗ ಸಭೆಗೆ ಗೈರಾಗಲಿರುವ ನಿತೀಶ್ ಕುಮಾರ್, ಕೆಸಿಆರ್: ಕೇಂದ್ರದ ವಿರುದ್ಧ ತೆಲಂಗಾಣ ಸಿಎಂ ಪತ್ರ ಬರೆದು ಆಕ್ರೋಶ
7 ಪಕ್ಷಗಳ ಬೆಂಬಲದೊಂದಿಗೆ 164 ಜನ ಶಾಸಕರು ಹಾಗೂ ಒಬ್ಬರು ಸ್ವತಂತ್ರ ಶಾಸಕರ ಬೆಂಬಲದೊಂದಿಗೆ ಮಹಾಘಟಬಂಧನ ಸರ್ಕಾರ ರಚನೆಯಾಗುತ್ತಿದೆ ಎಂದು ನಿತೀಶ್ ಕುಮಾರ್ ಮಂಗಳವಾರ ತಿಳಿಸಿದ್ದರು.