ಎನ್‌ಡಿಎ ಮೈತ್ರಿಕೂಟ ತೊರೆದು ನಿನ್ನೆಯಷ್ಟೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಿತೀಶ್‌ ಕುಮಾರ್‌, ಇಂದು ಮತ್ತೆ ಬಿಹಾರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಾರೆ. ಆರ್‌ಜೆಡಿ, ಕಾಂಗ್ರೆಸ್‌ ಸೇರಿ ಇತರೆ ಪಕ್ಷಗಳ ಬೆಂಬಲದ ಈ ಸರ್ಕಾರದ ಉಪಮುಖ್ಯಮಂತ್ರಿಯಾಗಿ ತೇಜಸ್ವಿ ಯಾದವ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 

ನಿನ್ನೆಯಷ್ಟೇ ಬಿಜೆಪಿ ಸಖ್ಯ ತೊರೆದು ಬಿಹಾರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಿತೀಶ್‌ ಕುಮಾರ್‌ ಇಂದು ಮತ್ತೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆರ್‌ಜೆಡಿ, ಇತರ ಪಕ್ಷಗಳ ಜತೆಗಿನ ಮಹಾಘಟಬಂಧನದ ನಾಯಕರಾಗಿ ಆಯ್ಕೆಯಾಗಿರುವ ನಿತೀಶ್‌ ಕುಮಾರ್‌ ದಾಖಲೆಯ 8ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಲಿದ್ದಾರೆ. ಇನ್ನು, ಆರ್‌ಜೆಡಿ ಪಕ್ಷದ ನಾಯಕ ತೇಜಸ್ವಿ ಯಾದವ್‌ ಎರಡನೇ ಬಾರಿಗೆ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಬಿಹಾರ ರಾಜಧಾನಿ ಪಾಟ್ನಾದ ರಾಜಭವನದಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ಮಧ್ಯಾಹ್ನ 2 ಗಂಟೆಗೆ ನಿತೀಶ್‌ ಕುಮಾರ್‌ ಅವರಿಗೆ ರಾಜ್ಯಪಾಲ ಫಾಗು ಚೌಹಾಣ್‌ ಪ್ರಮಾಣ ವಚನ ಬೋಧಿಸಲಿದ್ದಾರೆ. ನಿತೀಶ್‌ ಕುಮಾರ್ ಹಾಗೂ ತೇಜಸ್ವಿ ಯಾದವ್‌ ಇಬ್ಬರು ಮಾತ್ರ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅವರಿಬ್ಬರ ಜತೆಗೆ 3 - 5 ಸಚಿವರು ಕೂಡ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮಹಾಘಟಬಂಧನ ಸರ್ಕಾರದ ಮೂಲಗಳು ತಿಳಿಸಿವೆ. 

ನೀತಿ ಆಯೋಗ ಸಭೆಗೆ ಗೈರಾಗಲಿರುವ ನಿತೀಶ್‌ ಕುಮಾರ್‌, ಕೆಸಿಆರ್‌: ಕೇಂದ್ರದ ವಿರುದ್ಧ ತೆಲಂಗಾಣ ಸಿಎಂ ಪತ್ರ ಬರೆದು ಆಕ್ರೋಶ

ಜೆಡಿಯು ಹಾಗೂ ಆರ್‌ಜೆಡಿ ಜತೆಗೆ ಕಾಂಗ್ರೆಸ್‌ಗೆ ಸಹ ಇಂದು ಈ ನೂತನ ಕ್ಯಾಬಿನೆಟ್‌ನಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ. ಈ ಮಧ್ಯೆ, ಸಿಪಿಐಎಂಎಲ್‌ (ಎಲ್‌), ಸಿಪಿಐ ಹಾಗೂ ಸಿಪಿಐ(ಎಂ) ಮಹಾಘಟಬಂಧನ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡುವ ಬಗ್ಗೆ ಸುಳಿವು ನೀಡಿದೆ. ಮಂಗಳವಾರವಷ್ಟೇ ಬಿಜೆಪಿ ಜತೆಗಿನ ಮೈತ್ರಿ ತೊರೆದಿದ್ದ ನಿತೀಶ್‌ ಕುಮಾರ್‌, ಕೇಸರಿ ಪಕ್ಷವನ್ನು ವಿಪಕ್ಷ ಸ್ಥಾನದಲ್ಲಿ ಕೂರಿಸುತ್ತಿದ್ದಾದ್ದು, ಮತ್ತೊಮ್ಮೆ ಮಹಾಘಟಬಂಧನ ಸರ್ಕಾರದಲ್ಲಿ ಸಿಎಂ ಆಗುತ್ತಿದ್ದಾರೆ.

71 ವರ್ಷದ ಜೆಡಿಯು ನಾಯಕ 2000 ರಲ್ಲಿ ಮೊದಲ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದರು. ಆದರೆ, ಎನ್‌ಡಿಎ ನೇತೃತ್ವದ ಆ ಸರ್ಕಾರ ಕೇವಲ ಒಂದು ವಾರ ಮಾತ್ರ ಅಧಿಕಾರದಲ್ಲಿತ್ತು. ನಂತರ, 2005 ರ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿಕೂಟಕ್ಕೆ ಅಭೂತಪೂರ್ವ ಗೆಲುವು ದೊರೆತು ಮತ್ತೆ ಸಿಎಂ ಆದರು. ಮತ್ತೆ 2010ರಲ್ಲೂ ಎನ್‌ಡಿಎ ಗೆಲುವು ಸಾಧಿಸಿದ ಬಳಿಕ ಮೂರನೇ ಬಾರಿಗೆ ಸಿಎಂ ಆಗಿದ್ದರು.

ಬಿಹಾರ ಬಿಜೆಪಿ ಮೈತ್ರಿಗೆ ಸಿಎಂ ನಿತೀಶ್‌ ಗುಡ್‌ಬೈ! - ನಿರೀಕ್ಷೆಯಂತೆ ಲಾಲು ಪುತ್ರನ ಜೊತೆ ದೋಸ್ತಿ!

ಆದರೆ, 2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಜೆಡಿಯು ಹೀನಾಯ ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡಿದ್ದ ಅವರು, ಮತ್ತೆ 2015 ರಲ್ಲಿ 4ನೇ ಬಾರಿಗೆ ಸಿಎಂ ಆಗಿದ್ದರು. ಆದರೆ, ಈ ಬಾರಿ ಅವರು ಆರ್‌ಜೆಡಿ ಹಾಗೂ ಕಾಂಗ್ರೆಸ್‌ ಬೆಂಬಲದ ಮಹಾಘಟಬಂಧನದಲ್ಲ ಸಿಎಂ ಆಗಿದ್ದರು. ಆದರೆ, 2017ರಲ್ಲಿ ಮಹಾಘಟಬಂಧನ ಸರ್ಕಾರಕ್ಕೆ ರಾಜೀನಾಮೆ ನೀಡಿ ಮತ್ತೆ ಒಂದೇ ದಿನದೊಳಗೆ ಬಿಜೆಪಿ ಬೆಂಬಲದೊಂದಿಗೆ ಮತ್ತೆ ಸಿಎಂ ಆಗಿದ್ದರು. ಮತ್ತೆ ನವೆಂಬರ್ 2020 ರಲ್ಲಿ ನಡೆದ ಚುನಾವಣೆಯಲ್ಲಿ ಎನ್‌ಡಿಎ ಅಧಿಕಾರಕ್ಕೆ ಮರಳಿದ ನಂತರ ನಿತೀಶ್‌ ಕುಮಾರ್ 7ನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದರು. ಈ ಚುನಾವಣೆಯಲ್ಲಿ ಜೆಡಿಯುಗಿಂತ ಬಿಜೆಪಿಗೇ ಹೆಚ್ಚು ಸ್ಥಾನ ಲಭಿಸಿದ್ದರೂ ನಿತೀಶ್‌ರನ್ನು ಸಿಎಂ ಮಾಡಲು ಬಿಜೆಪಿ ಮುಂದಾಗಿತ್ತು.

ಆದರೆ 2 ವರ್ಷದೊಳಗೆ ಮತ್ತೆ ಬಿಜೆಪಿ ತಮ್ಮ ಪಕ್ಷವನ್ನು ಹಾಳು ಮಾಡುತ್ತಿದೆ. ಜೆಡಿಯು ಪಕ್ಷದ ಶಾಸಕರು ಹಾಗೂ ಸಂಸದರ ಮನವಿ ಹಿನ್ನೆಲೆ ಎನ್‌ಡಿಎ ಸರ್ಕಾರ ತೊರೆಯುತ್ತಿರುವುದಾಗಿ ನಿತೀಶ್‌ ಕುಮಾರ್ ಹೇಳಿದ್ದು, ಈಗ ಮತ್ತೆ ಬಿಹಾರ ಸಿಎಂ ಆಗುತ್ತಿದ್ದಾರೆ. ಅದೂ ದಾಖಲೆಯ 8ನೇ ಬಾರಿ. ಈ ಬಾರಿ ಮತ್ತೆ ಮಹಾಘಟಬಂಧನ ಸರ್ಕಾರದ ಬೆಂಬಲದೊಂದಿಗೆ ಬಿಹಾರ ಮುಖ್ಯಮಂತ್ರಿಯಾಗುತ್ತಿದ್ದಾರೆ.