ನೀತಿ ಆಯೋಗ ಸಭೆಗೆ ಗೈರಾಗಲಿರುವ ನಿತೀಶ್ ಕುಮಾರ್, ಕೆಸಿಆರ್: ಕೇಂದ್ರದ ವಿರುದ್ಧ ತೆಲಂಗಾಣ ಸಿಎಂ ಪತ್ರ ಬರೆದು ಆಕ್ರೋಶ
ನಾಳೆ ದೆಹಲಿಯಲ್ಲಿ ಪ್ರಧಾನಿ ಮೊದಿ ನೇತೃತ್ವದಲ್ಲಿ ನೀತಿ ಆಯೋಗದ ಸಭೆ ನಡೆಯುತ್ತಿದ್ದು, ಈ ಸಭೆಗೆ ಗೈರಾಗುವುದಾಗಿ ತೆಲಂಗಾಣ ಸಿಎಂ ಪತ್ರ ಬರೆದಿದ್ದಾರೆ. ಅಲ್ಲದೆ, ಬಿಹಾರ ಸಿಎಂ ನಿತೀಶ್ ಕುಮಾರ್ ಸಹ ಗೈರಾಗಲಿದ್ದಾರೆ ಎಂದು ತಿಳಿದುಬಂದಿದೆ.
ಆಗಸ್ಟ್ 7 ರಂದು ನಡೆಯಲಿರುವ ನೀತಿ ಆಯೋಗದ ಸಭೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ಹಾಗೂ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಗೈರಾಗುವುದಾಗಿ ತಿಳಿದುಬಂದಿದೆ. ಕೇಂದ್ರ ಸರ್ಕಾರದ ಮಲತಾಯಿ ಧೋರಣೆಗೆ ವಿರೋಧಿಸಿ ನೀತಿ ಆಯೋಗದ 7ನೇ ಆಡಳಿತ ಮಂಡಳಿ ಸಭೆಗೆ ಗೈರಾಗುತ್ತಿರುವುದಾಗಿ ತೆಲಂಗಾಣ ಸಿಎಂ ಪತ್ರ ಬರೆದಿದ್ದಾರೆ. ಕೇಂದ್ರ ಸರ್ಕಾರ ಒಂದೊಂದು ರಾಜ್ಯಗಳನ್ನು ಒಂದೊಂದು ರೀತಿ ನೋಡುತ್ತದೆ ಎಂದು ಪತ್ರದ ಮೂಲಕ ತಮ್ಮ ಖಂಡನೆ ವ್ಯಕ್ತಪಡಿಸಿದ್ದು, ತಮ್ಮ ಪ್ರತಿಭಟನಾ ಕ್ರಮದ ಹಿನ್ನೆಲೆ ಸಭೆಗೆ ಗೈರಾಗುವುದಾಗಿ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಶನಿವಾರ ಮಾಹಿತಿ ನೀಡಿದ್ದಾರೆ.
ರಾಜ್ಯಗಳು ಅಭಿವೃದ್ಧಿ ಹೊಂದಿದ ಬಳಿಕವೇ ಭಾರತ ಅಭಿವೃದ್ಧಿ ಹೊಂದಲು ಹಾಗೂ ಬಲವಾದ ರಾಷ್ಟ್ರವಾಗಲು ಸಾಧ್ಯ. ಬಲವಾದ ಹಾಗೂ ಆರ್ಥಿಕವಾಗಿ ಉತ್ತಮವಾಗಿರುವ ರಾಜ್ಯಗಳು ಮಾತ್ರ ಭಾರತವನ್ನು ಬಲವಾದ ರಾಷ್ಟ್ರವನ್ನಾಗಿ ಮಾಡುತ್ತದೆ ಎಂದೂ ಅವರು ಹೇಳಿದರು. ಈ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು 2022ರ ಆಗಸ್ಟ್ 7ರಂದು ನಡೆಯಲಿರುವ ನೀತಿ ಆಯೋಗದ 7ನೇ ಆಡಳಿತ ಮಂಡಳಿ ಸಭೆಗೆ ಹಾಜರಾಗುವುದು ನನಗೆ ಉಪಯುಕ್ತವಾಗುತ್ತಿಲ್ಲ ಮತ್ತು ಕೇಂದ್ರ ಸರ್ಕಾರದ ಈಗಿನ ಧೋರಣೆ ವಿರುದ್ಧ ತೀವ್ರ ಪ್ರತಿಭಟನೆಯ ಸಂಕೇತವಾಗಿ ನಾನು ಅದರಿಂದ ದೂರ ಉಳಿಯುತ್ತಿದ್ದೇನೆ ಎಂದಿದ್ದಾರೆ. ಭಾರತವನ್ನು ಬಲಿಷ್ಠ ಮತ್ತು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ನಮ್ಮ ಸಾಮೂಹಿಕ ಪ್ರಯತ್ನದಲ್ಲಿ ರಾಜ್ಯಗಳ ವಿರುದ್ಧ ತಾರತಮ್ಯ ಮತ್ತು ಸಮಾನ ಪಾಲುದಾರರಾಗಿ ಪರಿಗಣಿಸುವುದಿಲ್ಲ ಎಂದು ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅವರು ಪತ್ರದಲ್ಲಿ ಸಭೆಯನ್ನು ಬಹಿಷ್ಕರಿಸಲು ಕಾರಣಗಳನ್ನು ವಿವರಿಸಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿಗೆ ಕೋವಿಡ್ ದೃಢ, ದೆಹಲಿ ಪ್ರವಾಸ ರದ್ದು!
ಬಿಹಾರ ಸಿಎಂ ನಿತೀಶ್ ಕುಮಾರ್‌ರಿಂದಲೂ ಗೈರು..!
ಇನ್ನೊಂದೆಡೆ, ಬಿಹಾರ ಸಿಎಂ ನಿತೀಶ್ ಕುಮಾರ್ ಸಹ ಭಾನುವಾರ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಭಾಗಿಯಾಗುವುದಿಲ್ಲ ಎಂದು ತಿಳಿದುಬಂದಿದೆ. ಅಲ್ಲದೆ, ಕಳೆದ ಒಂದು ತಿಂಗಳಲ್ಲಿ ನಿತೀಶ್ ಕುಮಾರ್ ಮೂರು ಬಿಜೆಪಿ ಕಾರ್ಯಕ್ರಮಗಳನ್ನು ತಪ್ಪಿಸಿಕೊಂಡಿದ್ದು, ಈಪೈಕಿ ಒಮುದ ಪ್ರಧಾನಿ ಮೋದಿಯ ಕಾರ್ಯಕ್ರಮದಲ್ಲೂ ಗೈರಾಗಿದ್ದರು. ಈಗ ಮತ್ತೊಮ್ಮೆ ಪ್ರಧಾನಿ ಮೋದಿಯ ನೀತಿ ಆಯೋಗ ಸಭೆಗೆ ಗೈರಾಗಲಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಬಿಜೆಪಿ - ಜೆಡಿಯು ನಡುವೆ ಸಂಬಂಧ ಹಳಸುತ್ತಿದೆ ಎಂಬ ಮಾತುಗಳು ಸಹ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಬಿಹಾರದ ಪರವಾಗಿ ನೀತಿ ಆಯೋಗದ ಸಭೆಯಲ್ಲಿ ಯಾರೂ ಭಾಗಿಯಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಬಿಹಾರ ಸಿಎಂ ಇತ್ತೀಚೆಗಷ್ಟೇ ಕೋವಿಡ್ - 19ನಿಂದ ಚೇತರಿಸಿಕೊಂಡಿದ್ದು, ಅವರ ಬದಲು ಉಪ ಮುಖ್ಯಮಂತ್ರಿಯನ್ನು ಸಭೆಗೆ ಕಳಿಸಲು ನಿರ್ಧರಿಸಲಾಗಿತ್ತು. ಆದರೆ, ಈ ಕಾರ್ಯಕ್ರಮದಲ್ಲಿ ಕೇವಲ ಸಿಎಂಗಳು ಮಾತ್ರ ಭಾಗಿಯಾಗಬೇಕು ಎಂದ ಬಳಿಕ ಅವರೂ ಭಾಗಿಯಾಗುತ್ತಿಲ್ಲ ಎಂದು ತಿಳಿದುಬಂದಿದೆ. ಇನ್ನೊಂದೆಡೆ, ಸೋಮವಾರ ನಡೆಯಲಿರುವ ಜನತಾ ದರ್ಬಾರ್ ಕಾರ್ಯಕ್ರಮದಲ್ಲಿ ಬಿಹಾರ ಸಿಎಂ ಭಾಗಿಯಾಗಲಿದ್ದಾರೆ ಎಂದೂ ಮೂಲಗಳು ತಿಳಿಸಿವೆ.
ನಾವೀನ್ಯತೆ: ಸತತ 3ನೇ ವರ್ಷ ಕರ್ನಾಟಕ ದೇಶಕ್ಕೇ ನಂಬರ್ 1
ಈ ಮಧ್ಯೆ, ಕೋವಿಡ್ - 19 ನಿಂದ ಬಳಲುತ್ತಿರುವುದಾಗಿ ಕರ್ನಾಟಕ ಸಿಎಂ ಬಸವರಾಜ್ ಬೊಮ್ಮಾಯಿ ಶನಿವಾರ ಬೆಳಗ್ಗೆ ಮಾಹಿತಿ ನೀಡಿದ್ದು, ತಮ್ಮ ದೆಹಲಿ ಪ್ರವಾಸವನ್ನು ರದ್ದುಗೊಳಿಸಿರುವ ಬಗ್ಗೆಯೂ ಟ್ವೀಟ್ ಮಾಡಿದ್ದಾರೆ. ಈ ಹಿನ್ನೆಲೆ ಆಗಸ್ಟ್ 7 ರಂದು ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ನೀತಿ ಆಯೋಗದ ಸಭೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಸಹ ಗೈರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.