ಸಿಎಂ ಬಸವರಾಜ ಬೊಮ್ಮಾಯಿಗೆ ಕೋವಿಡ್ ದೃಢ, ದೆಹಲಿ ಪ್ರವಾಸ ರದ್ದು!
ಸಿಎಂ ಬಸವರಾಜ್ ಬೊಮ್ಮಾಯಿಗೆ ಮತ್ತೆ ಕೋವಿಡ್ ದೃಢಪಟ್ಟಿದೆ. ಮೈಲ್ಡ್ ಸಿಂಪ್ಟಮ್ಸ್ ಕಾಣಿಸಿಕೊಂಡಿದ್ದು, ಹೋಮ್ ಐಸೋಲೇಶನ್‌ಗೆ ಒಳಗಾಗಿದ್ದಾರೆ. ಕೋವಿಡ್ ಕಾರಣ ಬೊಮ್ಮಾಯಿ ಕೆಲ ಕಾರ್ಯಕ್ರಮಗಳು ರದ್ದಾಗಿದೆ.
ಬೆಂಗಳೂರು (ಆ.6): ಕರ್ನಾಟಕದಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದೆ. ಜೊತೆಗೆ ಮಂಕಿಪಾಕ್ಸ್ ಆತಂಕವೂ ಕಾಡುತ್ತಿದೆ. ಇದರ ನಡುವೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಮತ್ತೊಮ್ಮೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೊರೊನಾದ ಸೌಮ್ಯ ಲಕ್ಷಣಗಳು ಇರುವುದಾಗಿ ಸ್ವತಃ ಮುಖ್ಯಮಂತ್ರಿಗಳು ಟ್ವೀಟ್ ಮೂಲಕ ಬಹಿರಂಗ ಪಡಿಸಿದ್ದಾರೆ. ಕೋವಿದ್ ದೃಢಪಟ್ಟಿರುವ ಕಾರಣ ಮುಖ್ಯಮಂತ್ರಿಯ ದೆಹಲಿ ಪ್ರವಾಸ ರದ್ದಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಹೋಮ್ ಐಸೋಲೇಶನ್‌ಗೆ ಒಳಗಾಗಿದ್ದಾರೆ. ನನಗೆ ಇಂದು ಕೋವಿಡ್-19 ಸೋಂಕು ದೃಢಪಟ್ಟಿದ್ದು, ಆರೋಗ್ಯವಾಗಿ ಇದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ದಯವಿಟ್ಟು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ. ನನ್ನ ದೆಹಲಿಯ ಪ್ರವಾಸ ರದ್ದಾಗಿರುತ್ತದೆ ಎಂದು ಬೊಮ್ಮಾಯಿ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಮತ್ತು ನೀತಿ ಆಯೋಗದ ಸಭೆಗಳಲ್ಲಿ ಪಾಲ್ಗೊಳ್ಳುವ ಸಲುವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ದೆಹಲಿಗೆ ತೆರಳಬೇಕಿತ್ತು. ಬೆಳಗ್ಗೆ 11.30ಕ್ಕೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದೆಹಲಿಗೆ ತೆರಳಬೇಕಿತ್ತು. ಆದರೆ ಕೋವಿಡ್ ದೃಢಪಟ್ಟ ಕಾರಣ ಬೊಮ್ಮಾಯಿ ದೆಹಲಿ ಪ್ರವಾಸ ರದ್ದಾಗಿದೆ. ಸಂಜೆ 4.30ಕ್ಕೆ ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸ್ವಾತಂತ್ರ್ಯದ ಅಮೃತ ಮಹೋತ್ಸವದ ರಾಷ್ಟ್ರೀಯ ಸಮಿತಿಯ 3ನೇ ಸಭೆಯಲ್ಲಿ ಭಾಗವಹಿಸಬೇಕಿತ್ತು. ನಾಳೆ(ಆ.07) ಬೆಳಗ್ಗೆ 9.45ರಿಂದ ಸಂಜೆವರೆಗೆ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ನೀತಿ ಆಯೋಗದ ಆಡಳಿತ ಪರಿಷತ್ತಿನ 7ನೇ ಸಭೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಕೋವಿಡ್ ಕಾರಣದಿಂದ ಬೊಮ್ಮಾಯಿ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ.
ರಾಜ್ಯದಲ್ಲಿ ಮತ್ತೆ 2,000 ಗಡಿ ದಾಟಿದ ಕೊರೋನಾ: ಬೆಳಗಾವಿಯಲ್ಲಿ 100+
ಈ ವರ್ಷದ ಆರಂಭದಲ್ಲಿ ಅಂದರೆ ಜನವರಿ 10ಕ್ಕೆ ಬಸವರಾಜ್ ಬೊಮ್ಮಾಯಿಗೆ ಕೋವಿಡ್ ದೃಢಪಟ್ಟಿತ್ತು. ಈ ವೇಳೆ ಹೋಮ್ ಐಸೋಲೇಶನ್‌ಗೆ ಒಳಗಾಗಿದ್ದ ಸಿಎಂ ಬೊಮ್ಮಾಯಿ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದರು. ಇದೇ ಸಮಯದಲ್ಲಿ ಕಂದಾಯ ಸಚಿವ ಆರ್ ಅಶೋಕ್ ಹಾಗೂ ಶಿಕ್ಷಣ ಸಚಿವ ಬಿಸಿ ನಾಗೇಶ್‌ಗೆ ಕೋವಿಡ್ ದೃಢಪಟ್ಟಿತ್ತು. ಇದೀಗ ಮತ್ತೊಮ್ಮೆ ಬೊಮ್ಮಾಯಿಗೆ ಕೋವಿಡ್ ದೃಢಪಟ್ಟಿದೆ.
ಬೆಂಗಳೂರಿನಲ್ಲಿ 1,309 ಕೋವಿಡ್ ಕೇಸ್
ಬೆಂಗಳೂರು ನಗರದಲ್ಲಿ ಶುಕ್ರವಾರ 1,309 ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.7.61ರಷ್ಟಿದೆ. 1175 ಮಂದಿ ಗುಣಮುಖರಾಗಿದ್ದಾರೆ. ಸೋಂಕಿನಿಂದ ವೃದ್ಧೆ ಮೃತಪಟ್ಟವರದಿಯಾಗಿದೆ. ಉಸಿರಾಟದ ತೊಂದರೆ ಮತ್ತು ತೀವ್ರ ಜ್ವರದಿಂದ ಜುಲೈ 18ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ 72 ವರ್ಷದ ವೃದ್ಧೆ ಆಗಸ್ಟ್ 3ರಂದು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ನಗರದಲ್ಲಿ ಸದ್ಯ 8,338 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಈ ಪೈಕಿ 66 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 18 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 7302 ಮಂದಿ ಕೋವಿಡ್ ವಿರುದ್ಧ ಲಸಿಕೆ ಪಡೆದು ಕೊಂಡಿದ್ದಾರೆ. ಶುಕ್ರವಾರ ನಗರದಲ್ಲಿ ಹೊಸದಾಗಿ ಕಂಟೈನ್ಮೆಂಟ್ ಪ್ರದೇಶ ಸೃಷ್ಟಿಯಾಗಿಲ್ಲ. ಒಟ್ಟು 21 ಸಕ್ರಿಯ ಕಂಟೈನ್ಮೆಂಟ್ ಪ್ರದೇಶಗಳಿವೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.