ನಿಫಾ ವೈರಸ್‌ಗೆ ಭಾರತದಲ್ಲಿ 110 ಮಂದಿ ಕ್ವಾರಂಟೈನ್, ಏಷ್ಯಾದಲ್ಲೂ ತೀವ್ರವಾಗಿ ವೈರಸ್ ಹರಡುತ್ತಿದ್ದು, ಕ್ವಾರಂಟೈನ್ ಸಂಖ್ಯೆ ಏರಿಕೆಯಾಗುತ್ತಿದೆ. ಇದರ ಬೆನ್ನಲ್ಲೇ ಭಾರತದ 2 ರಾಜ್ಯಗಳನ್ನು ಎಂಡೆಮಿಕ್ ಝೋನ್ ಎಂದು ಘೋಷಣೆ ಮಾಡಲಾಗಿದೆ. 

ನವದೆಹಲಿ (ಜ.27) ಕೊರೋನಾ ವೈರಸ್‌ ಆತಂಕ ದೂರವಾಗಿದೆ. ನಡು ನಡುವೆ ರೂಪಾಂತರಗೊಂಡ ವೈರಸ್ ಕಾಣಿಸಿಕೊಂಡರೂ ಆತಂಕ ಎದುರಾಗಲಿಲ್ಲ. ಆದರೆ ಇದೀಗ ಭಾರತಕ್ಕೆ ನಿಫಾ ವೈರಸ್ ಭೂತ ಕಾಡುತ್ತಿದೆ. ಕೇವಲ ಭಾರತ ಮಾತ್ರವಲ್ಲ ಏಷ್ಯಾದಲ್ಲೇ ನಿಫಾ ವೈರಸ್ ತೀವ್ರವಾಗಿ ಏರಿಕೆಯಾಗುತ್ತಿದೆ. ಪಶ್ಚಿಮ ಬಂಗಾಳ ಹಾಗೂ ಕೇರಳದಲ್ಲಿ ನಿಫಾ ವೈರಸ್ ಪ್ರಕರಣ ಸಂಖ್ಯೆ ಏರಿಕೆಯಾಗಿದೆ. ಪರಿಣಾಮ ಪಶ್ಚಿಮ ಬಂಗಾಳ ಹಾಗೂ ಕೇರಳ ರಾಜ್ಯಗಳನ್ನು ಎಂಡೆಮಿಕ್ ಝೋನ್ ಎಂದು ಘೋಷಿಸಲಾಗಿದೆ. ಏಷ್ಯಾದ ಹಲವು ದೇಶಗಳಲ್ಲಿ ನಿಫಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಆರಂಭಗೊಂಡಿದೆ.

110 ಮಂದಿ ಕ್ವಾರಂಟೈನ್

ಪಶ್ಚಿಮ ಬಂಗಾಳದಲ್ಲಿ ನಿಫಾ ವೈರಸ್ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕಟ್ಟು ನಿಟ್ಟಿನ ಕ್ರಮಗಳು ಜಾರಿಗೊಂಡಿದೆ. ಆಸ್ಪತ್ರೆಗಳಿಗೆ ಕಠಿಣ ಸೂಚನೆ ನೀಡಲಾಗಿದೆ. ಎರಡು ರಾಜ್ಯದ ಸರ್ಕಾರಗಳು ಆರೋಗ್ಯ ಕೇಂದ್ರಗಳಿಗೆ ಮಾರ್ಗಸೂಚಿ ನೀಡಿದೆ. ನಿಫಾ ವೈರಸ್ ಸೋಂಕಿತರ ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲು ಸೂಚಿಸಲಾಗಿದೆ. ಭಾರತದಲ್ಲಿ ಈಗಾಗಲೇ 110 ಮಂದಿ ಕ್ವಾರಂಟೈನ್ ಮಾಡಲಾಗಿದೆ. 200ಕ್ಕೂ ಹೆಚ್ಚು ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದೆ.

ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಈ ವೈರಸನ್ನು ಝೋನೋಟಿಕ್ ವೈರಸ್ ಎಂದು ಕರೆಯುತ್ತಾರೆ. ವೈರಸ್ ಸೋಂಕಿತರ ಸಾವಿನ ಸಾಧ್ಯತೆ ಶೇಕಡಾ 40 ರಿಂದ ಶೇಕಡಾ 70 ರಷ್ಟಿದೆ. ಕೊರೋನಾಗಿಂತ ನಿಫಾ ಡೆಡ್ಲಿ ವೈರಸ್ ಆಗಿದೆ. ಕೊರೋನಾ ಹರಡುವಿಕೆ ಪ್ರಮಾಣ ಅತ್ಯಂತ ವೇಗವಾಗಿದೆ. ಕೊರೋನಾಗೆ ಈಗಾಗಲೇ ಲಸಿಕೆ ಇದೆ. ಆದರೆ ನಿಫಾ ವೈರಸ್‌ಗೆ ಲಸಿಕೆಗಳಿಲ್ಲ. ರೋಗನಿರೋಧ ಲಸಿಕೆಗಳು ಕಾರ್ಯನಿರ್ವಹಿಸುವುದಿಲ್ಲ. ಸೀಮಿತ ಔಷಧಿಗಳಿಂದಲೇ ಗುಣಮುಖರಾಗಬೇಕು.ಹೀಗಾಗಿ ಅತೀವ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ವೈದ್ಯರು ಸೂಚಿಸಿದ್ದಾರೆ. ಪಶ್ಚಿಮ ಬಂಗಾಳದ ಆರೋಗ್ಯ ಕಾರ್ಯಕರ್ತರು, ಸಿಬ್ಬಂದಿಗಳಲ್ಲಿ ಮೊದಲು ಕಾಣಿಸಿಕೊಂಡಿತ್ತು. ಬಳಿಕ ಕೇರಳದಲ್ಲೂ ಪತ್ತೆಯಾಗಿತ್ತು.

ನಿಫಾ ವೈರಸ್ ಹರಡುವುದು ಹೇಗೆ?

ಬಾವಲಿ ಹಾಗೂ ಹಂದಿಯಿಂದ ನಿಫಾ ವೈರಸ್ ಹೆಚ್ಚಾಗಿ ಹರಡುತ್ತದೆ. ಬಾವಲಿಗಳು ಕಚ್ಚಿದ ಹಣ್ಣುಗಳು, ತರಕಾರಿಗಳು ತಿನ್ನುವದರಿಂದ, ಈ ಪ್ರಾಣಿಗಳ ಹತ್ತಿರ ಸಂಪರ್ಕಗಳಿಂದ ನಿಫಾ ವೈರಸ್ ಹರಡುತ್ತದೆ. ಹೀಗಾಗಿ ಹಣ್ಣು, ತರಕಾರಿ ಹಾಗೂ ಮಾಂಸಗಳ ತಿನ್ನುವಾಗ ಅತೀವ ಮುಂಜಾಗ್ರತೆ ವಹಿಸುವುದು ಅತ್ಯಗತ್ಯ

ಆರಂಭಿಕ ಲಕ್ಷಣಗಳನು?

ನಿಫಾ ವೈರಸ್ ಸೋಂಕಿತರಲ್ಲಿ ಆರಂಭದಲ್ಲಿ ಜ್ವರ ಕಾಣಿಸಿಕೊಳ್ಳಲಿದೆ. ಜ್ವರದ ಜೊತೆಗೆ ತಲೆನೋವು, ವಾಂತಿ ಲಕ್ಷಣಗಳು ಕಾಣಿಸಿಕೊಳ್ಳಲಿದೆ. ಇದೇ ವೇಳೆ ನ್ಯೂಮೋನಿಯಾ ಕೂಡ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಉಸಿರಾಟದ ಸಮಸ್ಯೆ, ಮೆದಳು ಇನ್‌ಫೆಕ್ಷನ್ ಸೇರಿದಂತೆ ಇತರ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳಲಿದೆ.

2018ರಲ್ಲಿ ಕೇರಳದಲ್ಲಿ 17 ಮಂದಿ ನಿಫಾ ವೈರಸ್‌ಗೆ ಬಲಿ

ವಿಶ್ವದಲ್ಲೇ 1998ರಿಂದ ನಿಫಾ ವೈರಸ್ ಆತಂಕ ಎದುರಾಗಿದೆ. 1998ರಿಂದ ಇಲ್ಲೀವೆರೆಗೆ ನಿಫಾ ವೈರಸ್‌ಗೆ ಹಲವರು ಬಲಿಯಾಗಿದ್ದಾರೆ. ಮೆಲೇಷಿಯಾದಲ್ಲಿ 100ಕ್ಕೂ ಹೆಚ್ಚು, ಬಾಂಗ್ಲಾದೇಶದಲ್ಲಿ 100ಕ್ಕೂ ಹೆಚ್ಚು ಮಂದಿ ನಿಫಾ ವೈರಸ್‌ಗೆ ಬಲಿಯಾಗಿದ್ದಾರೆ. 2018ರಲ್ಲಿ ಅಂದರೆ ಕೊರೋನಾಗೂ ಮೊದಲು ಕೇರಳದಲ್ಲಿ ನಿಫಾ ವೈರಸ್ ಆತಂಕ ಸೃಷ್ಟಿಸಿತ್ತು. 19 ಮಂದಿಯಲ್ಲಿ ನಿಫಾ ವೈರಸ್ ಕಾಣಿಸಿಕೊಂಡು ಆಸ್ಪತ್ರೆ ದಾಖಲಾಗಿದ್ದು. ಈ ಪೈಕಿ 17 ಮಂದಿ ಮೃತಪಟ್ಟಿದ್ದಾರೆ.