Monkeypox: ಭಾರತದಲ್ಲಿ 9ನೇ ಪ್ರಕರಣ ಪತ್ತೆ, ದೆಹಲಿಯಲ್ಲಿ 4ನೇ ಕೇಸ್!
ದೆಹಲಿಯಲ್ಲಿ 31 ವರ್ಷದ ಮಹಿಳೆಯೊಬ್ಬರಲ್ಲಿ ಮಂಕಿಪಾಕ್ಸ್ ಇರುವುದು ದೃಢಪಟ್ಟಿದೆ. ಆಕೆಯ ಪ್ರಯಾಣದ ಇತಿಹಾಸದ ಬಗ್ಗೆ ಯಾವುದೇ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ.
ನವದೆಹಲಿ (ಆ.3): 31 ವರ್ಷದ ನೈಜೀರಿಯಾದ ಮಹಿಳೆಯೊಬ್ಬರಲ್ಲಿ ಬುಧವಾರ ಮಂಕಿಪಾಕ್ಸ್ ವೈರಸ್ ಕಾಣಿಸಿಕೊಂಡಿದೆ. ಪರೀಕ್ಷೆ ನಡೆದ ಪ್ರಕಾರ ಅವರ ವರದಿ ಪಾಸಿಟಿವ್ ಆಗಿದೆ. ಅದರೊಂದಿಗೆ ದೆಹಲಿಯು ನಾಲ್ಕನೇ ಮಂಕಿಪಾಕ್ಸ್ ಪ್ರಕರಣವನ್ನು ವರದಿ ಮಾಡಿದೆ. ಭಾರತದಲ್ಲಿ ಇದುವರೆಗೆ ಒಂಬತ್ತು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ. ಜ್ವರ, ಚರ್ಮದ ಗಾಯಗಳು ಮತ್ತು ಊದಿಕೊಂಡ ದುಗ್ಧರಸ ಗ್ರಂಥಿಗಳೊಂದಿಗೆ ಮಹಿಳೆಯಲ್ಲಿ ಮಂಕಿಪಾಕ್ಸ್ ವೈರಸ್ ಇರುವುದು ಸ್ಪಷ್ಟವಾಗಿದೆ. ದೇಶದಲ್ಲಿ ಮಂಕಿಪಾಕ್ಸ್ ಪಾಸಿಟಿವ್ ಎನಿಸಿಕೊಂಡ ಮೊದಲ ಮಹಿಳೆ ಇವರಾಗಿದ್ದಾರೆ. ಮಹಿಳೆಯಲ್ಲಿ ಜ್ವರ ಹಾಗೂ ಚರ್ಮದ ಗಾಯಗಳು ಕಾಣಿಸಿಕೊಂಡಿವೆ. ಆಕೆಯನ್ನು ಲೋಕನಾಯಕ ಜಯಪ್ರಕಾಶ್ ನಾರಾಯಣ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಈ ನಡುವೆ ಆಕೆಯ ವಿದೇಶದ ಪ್ರಯಾಣದ ಯಾವುದೇ ಮಾಹಿತಿ ಈವರೆಗೂ ಲಭ್ಯವಾಗಿಲ್ಲ. ಆಕೆ ವಿದೇಶಕ್ಕೆ ಹೋಗಿರುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ. ದೇಶದಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ಆರೋಗ್ಯ ಸಚಿವಾಲಯವು ರೋಗಕ್ಕೆ ತುತ್ತಾಗುವುದನ್ನು ತಪ್ಪಿಸಲು ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದೆ. ಸೋಂಕಿತ ವ್ಯಕ್ತಿಯೊಂದಿಗೆ ದೀರ್ಘಕಾಲದ ಅಥವಾ ಪುನರಾವರ್ತಿತ ಸಂಪರ್ಕವನ್ನು ಹೊಂದಿದ್ದರೆ, ಯಾರಿಗೆ ಬೇಕಾದರೂ ಈ ವೈರಸ್ ತಗುಲಬಹುದು ಎಂದು ಹೇಳಿದೆ.
ಸೋಂಕು ಹರಡದಂತೆ ಸೋಂಕಿತ ವ್ಯಕ್ತಿಯನ್ನು ಇತರರಿಂದ ಪ್ರತ್ಯೇಕಿಸಲು ಸಚಿವಾಲಯವು ಸಲಹೆ ನೀಡಿದೆ, ಇದರಿಂದ ರೋಗ ಹರಡುವುದಿಲ್ಲ, ಹ್ಯಾಂಡ್ ಸ್ಯಾನಿಟೈಸರ್ ಬಳಕೆ, ಅಥವಾ ಸೋಪು ಮತ್ತು ನೀರಿನಿಂದ ಕೈ ತೊಳೆಯುವುದು, ಬಾಯಿ ಹಾಗೂ ಮೂಗನ್ನು ಮಾಸ್ಕ್‌ನಿಂದ ಮುಚ್ಚುವುದ, ಸೋಂಕುನಿವಾರಕಗಳನ್ನು ಬಳಸುವುದು ಹಾಗೂ ಸುತ್ತಲಿನ ಪರಿಸರವನ್ನು ನೈರ್ಮಲ್ಯಗೊಳಿಸುವುದರಿಂದ ಮಂಕಿಪಾಕ್ಸ್ ವೈರಸ್‌ನಿಂದ ದೂರವಿರಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.