ಕೋರ್ಟ್‌ ಸಲ್ಲಿಸಿದ ರಿಮ್ಯಾಂಡ್‌ ವರದಿಯಲ್ಲಿ ಎನ್‌ಐಎ ಮಾಹಿತಿ, ಸರ್ಕಾರದ ನೀತಿ ತಪ್ಪಾಗಿ ಬಿಂಬಿಸಿ ದೇಶದ ಬಗ್ಗೆ ದ್ವೇಷ ಬಿತ್ತನೆ

ಕೊಚ್ಚಿ(ಸೆ.25): ಇತ್ತೀಚೆಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ದಾಳಿಯಲ್ಲಿ ಬಂಧಿತರಾದ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸಂಘಟನೆಯ ಮುಖಂಡರು ‘ಅನ್ಯಧರ್ಮ’ದ ದೊಡ್ಡ ದೊಡ್ಡ ನಾಯಕರನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದರು ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಬಂಧಿತರ ಬಳಿ ದೊರೆತ ದಾಖಲೆಗಳು ಹಾಗೂ ಡಿಜಿಟಲ್‌ ಉಪಕರಣಗಳಲ್ಲಿ ಈ ಮಾಹಿತಿ ದೊರೆತಿದೆ ಎಂದು ವಿಶೇಷ ಕೋರ್ಟ್‌ಗೆ ಸಲ್ಲಿಸಿದ ರಿಮ್ಯಾಂಡ್‌ ವರದಿಯಲ್ಲಿ ಎನ್‌ಐಎ ಹೇಳಿದೆ.

ಬಂಧಿತರು ತಮ್ಮ ಸಮುದಾಯದಲ್ಲಿ ಬಹಳ ಪ್ರಭಾವಿ ವ್ಯಕ್ತಿಗಳಾಗಿದ್ದಾರೆ. ಇವರು ಸೂಚನೆ ನೀಡಿದರೆ ಇಡೀ ಸಮುದಾಯ ಸ್ತಬ್ಧವಾಗುತ್ತದೆ. ತಮ್ಮ ಒಂದು ಇಶಾರೆಯಿಂದ ಸಮುದಾಯದ ಪ್ರಗತಿಯನ್ನು ಸ್ಥಗಿತಗೊಳಿಸುವ ಶಕ್ತಿ ಇವರಿಗಿದೆ. ಆ ಪ್ರಭಾವವನ್ನು ಬಳಸಿಕೊಂಡು ಇವರು ನಿರ್ದಿಷ್ಟಧರ್ಮವೊಂದರ ದೊಡ್ಡ ನಾಯಕರನ್ನು ಗುರಿಯಾಗಿಸಿ ಕೆಲಸ ಮಾಡುತ್ತಿದ್ದರು. ಸರ್ಕಾರದ ನೀತಿಗಳನ್ನು ತಪ್ಪಾಗಿ ಬಿಂಬಿಸಿ ತಮ್ಮ ಜನರಿಗೆ ಬೋಧಿಸಿ ದೇಶದ ವಿರುದ್ಧ ಹಾಗೂ ಸರ್ಕಾರದ ವಿರುದ್ಧ ದ್ವೇಷಭಾವನೆ ಮೂಡುವಂತೆ ಮಾಡುತ್ತಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಭಯೋತ್ಪಾದಕರಾಗಲು ಯುವಕರಿಗೆ ಪಿಎಫ್‌ಐ ಪ್ರಚೋದನೆ: ಎನ್‌ಐಎ

ಗುರುವಾರ ದೇಶಾದ್ಯಂತ ನಡೆದ ದಾಳಿಯಲ್ಲಿ ಸುಮಾರು 100 ಮಂದಿ ಪಿಎಫ್‌ಐ ಮುಖಂಡರನ್ನು ಎನ್‌ಐಎ ಬಂಧಿಸಿತ್ತು. ಅವರಲ್ಲಿ 10 ಮಂದಿಯನ್ನು ಕೊಚ್ಚಿಯ ಕೋರ್ಚ್‌ಗೆ ಹಾಜರುಪಡಿಸಿ ತನ್ನ ವಶಕ್ಕೆ ಪಡೆಯಲು ಕೋರಿಕೆ ಸಲ್ಲಿಸುವಾಗ ನೀಡಿದ ರಿಮ್ಯಾಂಡ್‌ ವರದಿಯಲ್ಲಿ ಎನ್‌ಐಎ ಸಾಕಷ್ಟುಆಘಾತಕಾರಿ ಸಂಗತಿ ಬಹಿರಂಗಪಡಿಸಿದೆ. ಪಿಎಫ್‌ಐ ಮುಖಂಡರು ಯುವಕರ ಬ್ರೇನ್‌ವಾಶ್‌ ಮಾಡಿ ಅವರನ್ನು ಐಸಿಸ್‌, ಅಲ್‌ಖೈದಾ, ಲಷ್ಕರ್‌-ಎ-ತೊಯ್ಬಾ ಮುಂತಾದ ಭಯೋತ್ಪಾದಕ ಸಂಘಟನೆಗಳಿಗೆ ಸೇರಲು ಪ್ರಚೋದಿಸುತ್ತಿದ್ದರು. ಭಯೋತ್ಪಾದಕ ದಾಳಿಗಳ ಜಿಹಾದ್‌ ನಡೆಸಿ ಭಾರತದಲ್ಲಿ ಇಸ್ಲಾಮಿಕ್‌ ಆಡಳಿತ ಸ್ಥಾಪನೆ ಮಾಡುವುದು ಇವರ ಗುರಿಯಾಗಿತ್ತು. ಹೀಗಾಗಿ ದೇಶದ ಬಗ್ಗೆ ದ್ವೇಷ ಮೂಡುವಂತೆ ಇವರು ತಮ್ಮ ಹಿಂಬಾಲಕರನ್ನು ಬ್ರೇನ್‌ವಾಶ್‌ ಮಾಡುತ್ತಿದ್ದರು. ತನಿಖೆಯ ವೇಳೆ ಅವರಿಂದ ದೊರೆತ ಸಾಮಗ್ರಿಗಳಲ್ಲಿ ಆರೋಪಿಗಳು ಅಪರಾಧ ಹಾಗೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವುದು ದೃಢಪಟ್ಟಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ವಿದೇಶದಿಂದ ಪಿಎಫ್‌ಐಗೆ 120 ಕೋಟಿ ಹಣ ರವಾನೆ!

ನವದೆಹಲಿ: ದೇಶದಲ್ಲಿ ಭಯೋತ್ಪಾದನೆ ಮತ್ತು ಭಯೋತ್ಪಾದನೆಗೆ ನೆರವು ನೀಡಿದ ಆರೋಪ ಎದುರಿಸುತ್ತಿರುವ ಪಿಎಫ್‌ಐ ಸಂಘಟನೆ, ಕಳೆದ ಕೆಲ ವರ್ಷಗಳಿಂದ ವಿದೇಶಗಳಿಂದ ಅಕ್ರಮವಾಗಿ 120 ಕೋಟಿ ರು. ಹಣ ಸಂಗ್ರಹಿಸಿತ್ತು ಎಂಬ ಸ್ಫೋಟಕ ವಿಷಯವನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಪತ್ತೆ ಮಾಡಿದೆ.

ಪಿಎಫ್‌ಐ ವಿದೇಶಗಳಿಂದ ದೇಣಿಗೆ ಸಂಗ್ರಹಕ್ಕೆ ಅನುಮತಿ ಹೊಂದಿಲ್ಲ. ಜೊತೆಗೆ ಅನುಮತಿ ಹೊಂದಿದ್ದರೂ, ಅದಕ್ಕೆ ಬಂದ ಹಣ ತನಿಖಾ ಸಂಸ್ಥೆಗಳ ನಿಗಾಕ್ಕೆ ಬರುತಿತ್ತು. ಆದರೂ ಪಿಎಫ್‌ಐ, ತನಿಖಾ ಸಂಸ್ಥೆಗಳ ಕಣ್ತಪ್ಪಿಸಿ ದೇಣಿಗೆ ಸಂಗ್ರಹಿಸಿದೆ.

ಸಂಗ್ರಹ ಹೇಗೆ?:

ತನಿಖಾ ಸಂಸ್ಥೆಗಳ ಕಣ್ತಪ್ಪಿಸುವ ಸಲುವಾಗಿ ವಿದೇಶದಲ್ಲಿರುವ ಪಿಎಫ್‌ಐ ಬೆಂಬಲಿಗರು, ಕಾರ್ಯಕರ್ತರು, ಭಾರತದಲ್ಲಿನ ತಮ್ಮ ಅನಿವಾಸಿ ಭಾರತೀಯ (ಎನ್‌ಆರ್‌ಐ) ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾಯಿಸುತ್ತಿದ್ದರು. ಬಳಿಕ ಈ ಹಣವನ್ನು ಪಿಎಫ್‌ಐನ ವಿವಿಧ ಚಟುವಟಿಕೆಗಳಿಗೆ ಬಳಸಲಾಗುತ್ತಿತ್ತು. ಇದಲ್ಲದೇ, ಹವಾಲಾ ಮಾರ್ಗ, ಭೂಗತ ಮಾರ್ಗ, ಇತರೆ ಕಾರ್ಯಕರ್ತರ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಜಾಲವನ್ನೂ ಪಿಎಫ್‌ಐ ಬಳಸಿಕೊಳ್ಳುತ್ತಿತ್ತು. ಈ ರೀತಿ ಹಣ ವರ್ಗಾಯಿಸುವ ಮೂಲಕ ಸಂಘಟನೆ ಸರ್ಕಾರದ ತನಿಖಾ ಸಂಸ್ಥೆಗಳ ಕಣ್ಣು ತಪ್ಪಿಸುವಲ್ಲಿ ಯಶಸ್ವಿಯಾಗಿತ್ತು.

ಎನ್‌ಐಎ ತನಿಖೆಯ ಬಿಗ್‌ ನ್ಯೂಸ್‌, ಪಿಎಫ್‌ಐ ಟಾರ್ಗೆಟ್‌ ಆಗಿತ್ತು ಪ್ರಧಾನಿ ಮೋದಿಯ ಪಾಟ್ನಾ ಸಮಾವೇಶ..!

ಕಳೆದ ಕೆಲ ವರ್ಷಗಳಲ್ಲಿ ಹೀಗೆ ವಿವಿಧ ಮೂಲಗಳಿಂದ (ಪಿಎಫ್‌ಐ ಸ್ಥಾಪನೆ ಆದ ವರ್ಷವಾದ 2006ರಿಂದ ಈಚೆ) ಪಿಎಫ್‌ಐ ಖಾತೆಗೆ ಕನಿಷ್ಠ 120 ಕೋಟಿ ರು. ಹಣ ಜಮೆಯಾಗಿರುವುದು ಪತ್ತೆಯಾಗಿದೆ ಎಂದು ಇ.ಡಿ. ಮೂಲಗಳು ಶುಕ್ರವಾರ ಬಹಿರಂಗಪಡಿಸಿವೆ.

ಪಿಎಫ್‌ಐ ಪ್ರತಿಭಟನೆಯಲ್ಲಿ ‘ಪಾಕಿಸ್ತಾನ್‌ ಜಿಂದಾಬಾದ್‌’ ಘೋಷಣೆ

ಪುಣೆ: ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಮೇಲೆ ಎನ್‌ಐಎ ದಾಳಿಯನ್ನು ಪುಣೆಯಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ‘ಪಾಕಿಸ್ತಾನ್‌ ಜಿಂದಾಬಾದ್‌’ ಘೋಷಣೆಗಳನ್ನು ಕೂಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಬಿಜೆಪಿ ನಾಯಕರು ಘೋಷಣೆಗಳನ್ನು ಕೂಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಪಿಎಫ್‌ಐ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿಯೆದುರು ಶುಕ್ರವಾರ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಕೆಲವರು ಘೋಷಣೆ ಕೂಗಿದ್ದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ನಿತೇಶ್‌ ರಾಣೆ, ‘ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಿದವರೇ, ನಿಮ್ಮನ್ನು ಹುಡುಕಿ ಹೊಡೆಯುತ್ತೇವೆ. ನೆನಪಿರಲಿ’ ಎಂದು ಟ್ವೀಟ್‌ ಮಾಡಿದ್ದಾರೆ. ಶಾಸಕ ರಾಮ್‌ ಸಾತ್ಪುತೆ ಕೂಡಾ ಪೊಲೀಸರು ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ಪಾಲ್ಗೊಂಡ 40 ಜನರನ್ನು ಈಗಾಗಲೇ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಘೋಷಣೆ ಕೂಗಿದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತೇವೆ ಎಂದು ನಗರ ಪೊಲೀಸರು ಹೇಳಿದ್ದಾರೆ.