ಸ್ಥಳೀಯ ಮಟ್ಟದಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುವಲ್ಲಿ ಶಾಸಕರ ಪಾತ್ರ, ಕೌಶಲ್ಯಾಭಿವೃದ್ಧಿ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಸಂಸದರು ಹಾಗೂ ಶಾಸಕರಿಗೆ ಕಾರ್ಯಾಗರ ನಡೆದಿದೆ.

ನವದೆಹಲಿ (ಸೆ.30): ಸಂಸದರು ಹಾಗೂ ಶಾಸಕರಿಗೆ ಉದ್ಯೋಗವಕಾಶ, ಕೌಶಲ್ಯಾಭಿವೃದ್ಧಿ ಸೇರಿದಂತೆ ಹಲವು ಉತ್ಪದನಾ ನೀತಿಗಳ ಕುರಿತು ಮಹತ್ವದ ಕಾರ್ಯಾಗಾರ ನಡೆದಿದೆ. ನೇಷನ್ ಫಸ್ಟ್ ಪಾಲಿಸಿ ರಿಸರ್ಚ್ ಆ್ಯಂಡ್ ಚೇಂಜ್ ಫೌಂಡೇಶನ್ (NFPRC) ವತಿಯಿಂದ ನವದೆಹಲಿಯ ಇಂಡಿಯಾ ಹ್ಯಾಬಿಟಾಟ್ ಸೆಂಟರ್‌ನ ಗುಲ್ಮೊಹರ್ ಹಾಲ್‌ನಲ್ಲಿ ವಿಕಸಿತ ಭಾರತ@2047’ ಗುರಿಗೆ ಅನುಗುಣವಾಗಿ ಭಾರತದ ಉದ್ಯೋಗ ವ್ಯವಸ್ಥೆಯನ್ನು ಬಲಪಡಿಸುವ ಕುರಿತು ಕಾರ್ಯಾಗಾರ ನಡೆಯಿತು. ದೇಶದ ವಿವಿಧ ರಾಜ್ಯಗಳ ಲೋಕಸಭೆ, ರಾಜ್ಯಸಭೆ ಹಾಗೂ ವಿಧಾನಸಭೆಗಳ ಸುಮಾರು 40 ಜನಪ್ರತಿನಿಧಿಗಳು ಭಾಗವಹಿಸಿದ ಕಾರ್ಯಾಗಾರದಲ್ಲಿ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಕೈಗಾರಿಕೆ, ಹೂಡಿಕೆ, ಉದ್ಯೋಗ ಸೃಷ್ಟಿ ಹಾಗೂ ಡಿಜಿಟಲ್ ಸಂವಹನ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು.

ಉದ್ಯೋಗವಕಾಶ ಹೆಚ್ಚಿಸುವಲ್ಲಿ ಶಾಸಕರ ಪಾತ್ರ

ಸ್ಥಳೀಯ ಮಟ್ಟದಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುವಲ್ಲಿ ಶಾಸಕರ ಪಾತ್ರ ಮಹತ್ವದ್ದಾಗಿದೆ ಎಂದು ಎನ್‌ಎಫ್‌ಪಿಆರ್‌ಸಿ ಫೌಂಡೇಶನ್‌ನ ಮಂಡಳಿ ಸದಸ್ಯ ಅಭಿನವ್ ಪ್ರಕಾಶ್ ಹೇಳಿದ್ದಾರೆ . ಇದೇ ವೇಳೆ ಮಾತನಾಡಿದ ರಾಜಸ್ಥಾನ ವಿಧಾನಸಭೆಯ ಸಭಾಧ್ಯಕ್ಷ ವಾಸುದೇವ್ ದೇವನಾನಿ , ಸ್ಥಳೀಯ ಯುವಕರ ಕೌಶಲ್ಯ ಮತ್ತು ಆಸಕ್ತಿಗಳನ್ನು ಉದ್ಯೋಗಾವಕಾಶಗಳೊಂದಿಗೆ ಜೋಡಿಸುವುದು, ಶಿಕ್ಷಣ–ಕೌಶಲ್ಯ–ಕೈಗಾರಿಕಾ ಸಂಪರ್ಕ ಬಲಪಡಿಸುವುದು ಹಾಗೂ ಸರ್ಕಾರದ ಯೋಜನೆಗಳ ಪ್ರಯೋಜನ ಅರ್ಹರಿಗೆ ತಲುಪಿಸುವ ಅಗತ್ಯವನ್ನು ಒತ್ತಿಹೇಳಿದರು.

ಉದ್ಯಮಶೀಲತೆ, ಉತ್ಪಾದನೆ

ಟಿಯರ್-2 ಮತ್ತು ಟಿಯರ್-3 ಜಿಲ್ಲೆಗಳಲ್ಲಿ ಉದ್ಯಮಶೀಲತೆ, ಉತ್ಪಾದನೆ, ಕೃಷಿ ಸಂಸ್ಕರಣೆ ಹಾಗೂ ಪ್ರವಾಸೋದ್ಯಮದ ಮೂಲಕ ಉದ್ಯೋಗ ಸೃಷ್ಟಿಯ ಅವಕಾಶಗಳ ಕುರಿತು ಸಂಸದ ಶಶಾಂಕ್ ಮಣಿ ವಿವರಿಸಿದ್ದಾರೆ. ಫೌಂಡೇಶನ್ ಫಾರ್ ಎಕನಾಮಿಕ್ ಡೆವಲಪ್‌ಮೆಂಟ್‌ನ ನಿರ್ದೇಶಕ ರಾಹುಲ್ ಅಹ್ಲುವಾಲಿಯಾ ಅವರು ಹೂಡಿಕೆ, ರಫ್ತು ಆಧಾರಿತ ಬೆಳವಣಿಗೆ, ಉತ್ಪಾದನಾ ವಲಯ ಮತ್ತು ಸುಗಮ ವ್ಯವಹಾರ ವಾತಾವರಣದ ಮೂಲಕ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಕುರಿತು ಮಾತನಾಡಿದರು. ಸಂವಹನ ತಜ್ಞ ಡಾ. ರೋಹಿತ್ ಉಪಾಧ್ಯಾಯ ಅವರು ಶಾಸಕರಿಗಾಗಿ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ಸಂವಹನ, ನಾಗರಿಕರೊಂದಿಗೆ ತೊಡಗಿಸಿಕೊಳ್ಳುವಿಕೆ, ವಿಶ್ಲೇಷಣೆ, ತಪ್ಪುಮಾಹಿತಿ ನಿಯಂತ್ರಣ ಹಾಗೂ ಜವಾಬ್ದಾರಿಯುತ AI ಬಳಕೆಯ ಕುರಿತು ತರಬೇತಿ ನೀಡಿದರು. ಕಾರ್ಯಾಗಾರವು ಸಾಕ್ಷ್ಯಾಧಾರಿತ ನೀತಿ ರೂಪಣೆ, ಉತ್ತಮ ಆಡಳಿತ, ಶಾಸಕರ ಸಾಮರ್ಥ್ಯವರ್ಧನೆ ಮತ್ತು ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಹಾಗೂ ಆರ್ಥಿಕ ಅವಕಾಶಗಳನ್ನು ಹೆಚ್ಚಿಸಲು ನೀತಿ ಸಂಶೋಧನೆ ಮತ್ತು ಪ್ರಾಯೋಗಿಕ ಆಡಳಿತದ ನಡುವಿನ ಸಂಪರ್ಕವನ್ನು ಬಲಪಡಿಸುವ ಅಗತ್ಯವನ್ನು ಒತ್ತಿಹೇಳಿತು.