ದೆಹಲಿಯಲ್ಲಿ ತನ್ನದೇ ಮದುವೆ ಆರತಕ್ಷತೆ ಮುಗಿಸಿ ವಾಪಸಾಗುತ್ತಿದ್ದ ವರನೋರ್ವ ಮರ್ಸಿಡಿಸ್ ಕಾರನ್ನುಅತಿವೇಗದಿಂದ ಚಲಾಯಿಸಿ,  ಆಟೋಗಾಗಿ ಕಾಯುತ್ತಿದ್ದ ಮೂವರು ಹೊಟೇಲ್ ಬಾಣಸಿಗರಿಗೆ ಡಿಕ್ಕಿ ಹೊಡೆದಿದ್ದು, ಈ ಅವಘಡದಲ್ಲಿ 23 ಹರೆಯದ ಬಾಣಸಿಗ ಮೃತಪಟ್ಟಿದ್ದಾನೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮದುಮಗನ ಅವಾಂತರಕ್ಕೆ ಮುಗ್ಧ ಜೀವಗಳು ಬಲಿ: 

ಮರ್ಸಿಡಿಸ್ ಕಾರು ಸವಾರನೋರ್ವನ ಮಧ್ಯರಾತ್ರಿಯ ಅವಾಂತರಕ್ಕೆ ಮುಗ್ಧ ಜೀವವೊಂದು ಬಲಿಯಾಗಿದ್ದ, ಇನ್ನಿಬ್ಬರು ಯುವಕರ ಸ್ಥಿತಿ ಗಂಭೀರವಾಗಿದೆ. ಹೌದು ಆ ಮೂವರು ಹುಡುಗರು ಕುಟುಂಬದ ತುತ್ತಿನ ಚೀಲ ತುಂಬುವುದಕ್ಕಾಗಿ ತಮ್ಮೂರು, ರಾಜ್ಯ ಬಿಟ್ಟು ದೂರದ ದೆಹಲಿಗೆ ಬಂದಿದ್ದರು. ಹೊಟೇಲೊಂದರಲ್ಲಿ ಮೂವರು ಅಡುಗೆಯವರಾಗಿ ಕೆಲಸ ಮಾಡುತ್ತಿದ್ದರು. ದೆಹಲಿಯಂತಹ ಮಹಾನಗರಿಯಲ್ಲಿ ಹೊಟೇಲ್‌ನಲ್ಲಿ ಕೆಲಸ ಮಾಡುವುದು ಎಂದರೆ ವಿರಾಮ ಎಂಬುದು ನಡುರಾತ್ರಿಯ ನಂತರವೇ. ಅದೇ ರೀರಿ ಈ ಯುವಕರು ತಮ್ಮ ಕೆಲಸ ಮುಗಿಸಿ ಮಧ್ಯರಾತ್ರಿ 2 ಗಂಟೆಯ ಸುಮಾರಿಗೆ ತಾವು ವಾಸವಿದ್ದ ಮನೆಯತ್ತ ಹೋಗುವುದಕ್ಕೆ ಆಟೋಗಾಗಿ ಕಾಯುತ್ತಿದ್ದಾಗ ಯಮನಂತೆ ಬಂದ ಮರ್ಸಿಡಿಸ್‌ ಇ-63 ಕಾರಿನ ಚಾಲಕನೋರ್ವ ವೇಗದ ಜೊತೆಗೆ ಜಿಗ್‌ಜಾಗ್‌ ಆಗಿ ವಾಹನ ಚಲಾಯಿಸಿ ಇವರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ 23ರ ಹರೆಯದ ರೋಹಿತ್ ಸ್ಥಳದಲ್ಲೇ ಸಾವನ್ನಪ್ಪಿದ್ರೆ, 35 ವರ್ಷದ ಲಲಿತ್ ಹಾಗೂ 23 ವರ್ಷದ ಕಪಿಲ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಮರ್ಸಿಡಿಸ್ ಇ-63 ವಾಹನದ ಚಾಲಕ ತನ್ನ ಮದುವೆ ರಿಸೆಪ್ಷನ್ ಮುಗಿಸಿ ವಾಪಸ್ ಬರುತ್ತಿದ್ದ ಎಂದು ವರದಿಯಾಗಿದೆ.

ಮರ್ಸಿಡಿಸ್ ಜಿಗ್‌ಜಾಗ್ ಚಲಾಯಿಸಿ ಅಟೋಗಾಗಿ ಕಾಯ್ತಿದ್ದವರಿಗೆ ಡಿಕ್ಕಿ

ಮೃತ ರೋಹಿತ್ ಹಾಗೂ ಗಾಯಾಳುಗಳಾ ಕಪಿಲ್ ಹಾಗೂ ಲಲಿತ್, ಮೂವರೂ ಉತ್ತರಾಖಂಡ್‌ನವರಾಗಿದ್ದು, ಕೆಲಸದ ಕಾರಣಕ್ಕೆ ನೈಋತ್ಯ ದೆಹಲಿಯ ಮುನಿರ್ಕಾದಲ್ಲಿ ವಾಸಿಸುತ್ತಿದ್ದರು. ಮೂವರು ವಸಂತ್ ಕುಂಜ್‌ನಲ್ಲಿರುವ ರೆಸ್ಟೋರೆಂಟ್‌ನಲ್ಲಿ ಅಡುಗೆಯವರಾಗಿ ಕೆಲಸ ಮಾಡುತ್ತಿದ್ದರು. ನೈಋತ್ಯ ದೆಹಲಿಯ ವಸಂತ್ ಕುಂಜ್‌ನ ನೆಲ್ಸನ್ ಮಂಡೇಲಾ ಮಾರ್ಗ್ ಬಳಿ ಈ ದುರಂತ ನಡೆದಿದೆ.

ಕೆಲಸ ಮುಗಿಸಿ ಮಧ್ಯರಾತ್ರಿ ಮನೆಗೆ ಹೊರಟಿದ್ದಾಗ ದುರಂತ: ಮೂವರು ಸಾವು:

ಅಪಘಾತದ ಬಗ್ಗೆ ಬೆಳಗಿನ ಜಾವ 2.30 ರ ಸುಮಾರಿಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ ಸ್ಥಳಕ್ಕೆ ಹೋಗಿ ನೋಡಿದಾಗ ಅಲ್ಲಿ ಮರ್ಸಿಡಿಸ್ ಜಿ -63 ಕಾರು ಮುಂಭಾಗ ಮತ್ತು ಹಿಂಭಾಗದ ಸೀಟುಗಳಲ್ಲಿ ಏರ್‌ಬ್ಯಾಗ್‌ಗಳು ತೆರೆದುಕೊಂಡು ಪಲ್ಟಿಯಾಗಿ ಬಿದ್ದಿತ್ತು ಅದು ಗುದ್ದಿದ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ. ಮೂವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ರೋಹಿತ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಲಲಿತ್ ಮತ್ತು ಕಪಿಲ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದ್ದು, ಅದರಂತೆ ಮೂವರು ತಮ್ಮ ಕರ್ತವ್ಯ ಮುಗಿಸಿ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಮನೆಗೆ ತೆರಳುತ್ತಿದ್ದರು. ಅವರು ನೆಲ್ಸನ್ ಮಂಡೇಲಾ ಮಾರ್ಗದಲ್ಲಿರುವ ಬಸ್ ನಿಲ್ದಾಣವನ್ನು ತಲುಪುವ ಹೊತ್ತಿಗೆ, ಬೆಳಗಿನ ಜಾವ 2.15 ರ ಸುಮಾರಿಗೆ, ಅತಿ ವೇಗದ ಜೊತೆ ಅಜಾಗರೂಕತೆಯಿಂದ ಬರುತ್ತಿದ್ದ ಕಪ್ಪು ಬಣ್ಣದ ಕಾರು ಇವರಿಗೆ ಡಿಕ್ಕಿ ಹೊಡೆದಿದೆ. ಮೊದಲಿಗೆ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಕಾರು ನಂತರ ಇವರ ಮೇಲೇರಿ ಬಂದಿದೆ.

ಡಿಕ್ಕಿ ಹೊಡೆದು ಇಬ್ಬರನ್ನು ಎಳೆದೊಯ್ದ ಕಾರು:

ಕಾರು ತಮ್ಮತ್ತ ಬರುವುದನ್ನು ನೋಡಿದ ಮೂವರು ತಮ್ಮನ್ನು ತಾವು ಉಳಿಸಿಕೊಳ್ಳಲು ಪಾದಚಾರಿ ಮಾರ್ಗದ ಕಡೆಗೆ ಓಡಲು ಪ್ರಯತ್ನಿಸಿದ್ದಾರೆ. ಆದರೆ ವಾಹನವು ತುಂಬಾ ವೇಗವಾಗಿ ಚಲಿಸುತ್ತಿದ್ದರಿಂದ ಅವರಿಗೆ ಅಪಘಾತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕಾರು ಮೂವರಿಗೂ ಬಲವಾಗಿ ಡಿಕ್ಕಿ ಹೊಡೆದು, ರೋಹಿತ್ ಮತ್ತು ಕಪಿಲ್ ಅವರನ್ನು ಎಳೆದೊಯ್ದಿದೆ. ಅಂತಿಮವಾಗಿ ವಾಹನವು ರಸ್ತೆಯ ಎಡಭಾಗದಲ್ಲಿರುವ ಕಬ್ಬಿಣದ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ನಿಂತಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಸಾಫ್ಟ್‌ವೇರ್ ಇಂಜಿನಿಯರ್ ಅವಾಂತರ: 

ಈ ವಾಹನದ ವೇಗ ಎಷ್ಟು ತೀವ್ರವಾಗಿತ್ತೆಂದರೆ, ಘಟನೆಯಲ್ಲಿ ಒಂದು ವಿದ್ಯುತ್ ಕಂಬ ಮತ್ತು ಒಂದು ಮರ ಎರಡೂ ಉರುಳಿಬಿದ್ದಿವೆ. ಇತ್ತ ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸಿ ಮುಗ್ಧ ಜೀವಗಳ ಬಲಿ ಪಡೆದ ಕಾರು ಚಾಲಕನನ್ನು ಕರೋಲ್ ಬಾಗ್ ನಿವಾಸಿ, 29 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಶಿವಂ ಅರೋರಾ ಎಂದು ಗುರುತಿಸಲಾಗಿದೆ.

ಕಾರಿನಲ್ಲಿದ್ದ ಏರ್ ಬ್ಯಾಗ್ ಒಪನ್ ಆಗಿ ಕಾರಲ್ಲಿದ್ದವರೆಲ್ಲಾ ಬಚಾವ್:

ಆರೋಪಿ ವಸಂತ್ ಕುಂಜ್‌ನ ಹೋಟೆಲ್‌ನಲ್ಲಿ ನಡೆದ ತನ್ನ ವಿವಾಹ ಆರತಕ್ಷತೆಯಲ್ಲಿ ಭಾಗವಹಿಸಿ ತನ್ನ ಪತ್ನಿ ಮತ್ತು ಸಹೋದರನೊಂದಿಗೆ ಮನೆಗೆ ಹಿಂತಿರುಗುತ್ತಿದ್ದಾಗ ಘಟನೆ ನಡೆದಿದೆ. ಆರೋಪಿ ಶಿವಂ ಆರೋರಾ ನೋಯ್ಡಾದ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾನೆ. ಸಮಯಕ್ಕೆ ಸರಿಯಾಗಿ ಏರ್‌ಬ್ಯಾಗ್‌ಗಳು ನಿಯೋಜಿಸಲ್ಪಟ್ಟಿದ್ದರಿಂದ ಎಸ್‌ಯುವಿಯೊಳಗಿದ್ದ ಮೂವರಿಗೆ ಏನೂ ಆಗಿಲ್ಲ, ಅವರೇ ಸ್ವತಃ ವಾಹನದಿಂದ ಹೊರಬಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ

ಇದನ್ನೂ ಓದಿ:ಗೃಹಿಣಿಯ ಅನೈತಿಕ ಸಂಬಂಧಕ್ಕೆ ಅನಾಥರಾದ ಮಕ್ಕಳು: ಪತ್ನಿಯ ಕೊಲೆ ಮಾಡಿ ವಾಟ್ಸಾಪ್ ಸ್ಟೇಟಸ್ ಹಾಕಿದ ಪತಿ

ಎಸ್‌ಯುವಿ ಕಾರಿಗೂ ಅಪಘಾತದಿಂದ ಭಾರಿ ಹಾನಿಗೊಳಗಾಗಿದ್ದು, ನಾಲ್ಕು ಟೈರ್‌ಗಳು ಚೂರುಚೂರಾಗಿ, ಹಿಂಭಾಗದ ಕಿಟಕಿ ಒಡೆದು, ಮುಂಭಾಗದ ಭಾಗಕ್ಕೆ ತೀವ್ರ ಹಾನಿಯಾಗಿದೆ. ಮರ್ಸಿಡಿಸ್ ಕಾರನ್ನು ಆರೋಪಿಯ ಸ್ನೇಹಿತ ಅಭಿಷೇಕ್ ಎಂಬಾತನ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ, ಚಾಲಕ ಕುಡಿದಿದ್ದಾನೆಯೇ ಎಂದು ಪರಿಶೀಲಿಸಲು ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ಒಟ್ಟಿನಲ್ಲಿ ದೊಡ್ಡವರ ಆಡಂಬರದಿಂದಾಗಿ ತುತ್ತಿನ ಚೀಲ ತುಂಬಲು ಊರು ಬಿಟ್ಟು ಬಂದ 23ರ ಹರೆಯದ ನವ ತರುಣ ಜೀವ ಕಳೆದುಕೊಂಡಿದ್ದಾನೆ.