ಮದುವೆ ಹೆಸರಿನಲ್ಲಿ ದೊಡ್ಡ ವಂಚನೆಯ ಜಾಲವೊಂದು ಬಯಲಾಗಿದೆ. ಫಸ್ಟ್‌ನೈಟ್ ದಿನ ಕುಟುಂಬಕ್ಕೆ ಮತ್ತಿನ ಔಷಧಿ ನೀಡಿ, ಮರುದಿನ ಬೆಳಗ್ಗೆ ವಧು ಹಣ ಮತ್ತು ಚಿನ್ನಾಭರಣಗಳೊಂದಿಗೆ ಪರಾರಿಯಾಗುತ್ತಾಳೆ. ಈ ಗ್ಯಾಂಗ್‌ನಿಂದ 10ಕ್ಕೂ ಹೆಚ್ಚು ಯುವಕರು ವಂಚನೆಗೊಳಗಾಗಿದ್ದಾರೆ.

ಹಲವು ವರ್ಷಗಳಿಂದ ಮದುವೆಯಾಗದ ಸಿಂಗಲ್ ಹುಡುಗರಿಗೆ ಸೋಶಿಯಲ್ ಮಿಡಿಯಾದಲ್ಲಿ ಮದುವೆ ಮಾಡಿಕೊಳ್ಳುವುದಾಗಿ ಚಂದದ ಫೋಟೋ ತೋರಿಸಿ, ಬಲೆಗೆ ಬೀಳಿಸಿಕೊಳ್ಳುವ ಹುಡುಗಿಯರ ಗ್ಯಾಂಗ್, ಮದುವೆಯಾಗಿ ಫಸ್ಟ್ ನೈಟ್ ಮರುದಿನವೇ ಪರಾರಿ ಆಗುವ ಹೊಸ ವಂಚನೆಯೊಂದನ್ನು ಆರಂಭಿಸಿದ್ದಾರೆ. ಫಸ್ಟ್‌ನೈಟ್ ದಿನ ಮನೆಯ ಎಲ್ಲ ಸದಸ್ಯರಿಗೂ ಮತ್ತಿನ ಔಷಧಿ ಬೆರೆಸಿದ ಆಹಾರವನ್ನು ನೀಡಿ, ಮನೆಯಲ್ಲಿದ್ದ ಎಲ್ಲ ಹಣ ಹಾಗೂ ಚಿನ್ನಾಭರಣದ ಸಮೇತವಾಗಿ ಪರಾರಿ ಆಗುತ್ತಾರೆ. ಇದೇ ಒಂದೇ ಜಿಲ್ಲೆಯಲ್ಲಿ ಸುಮಾರು 10ಕ್ಕೂ ಹೆಚ್ಚು ಯುವಕರು ನನ್ನ ಹೆಂಡತಿ ಹಣ-ಚಿನ್ನಾಭರಣ ಸಮೇತ ಓಡಿ ಹೋಗಿದ್ದಾಳೆ ಎಂದು ದೂರು ನೀಡಿದ್ದಾರೆ.

ಮದುವೆಯಾದ ಮರುದಿನ ಮನೆ ಮಂದಿ ಬೆಳಗ್ಗೆ ಎದ್ದು ನೋಡಿದಾಗ ವಧು ನಾಪತ್ತೆಯಾಗಿದ್ದಳು. ಜೊತೆಗೆ ಆಭರಣ ಮತ್ತು ಹಣವೂ ಮಾಯವಾಗಿತ್ತು. ಹತ್ತಕ್ಕೂ ಹೆಚ್ಚು ಯುವಕರು ದೂರು ನೀಡಿದಾಗ, ಇದೊಂದು ದೊಡ್ಡ ಮದುವೆ ಹೆಸರಿನಲ್ಲಿ ವಂಚನೆಯ ಗ್ಯಾಂಗ್‌ನಿಂದ ನಡೆದ ಕೃತ್ಯವೆಂಬುದು ಬೆಳಕಿಗೆ ಬಂದಿದೆ. ಈ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ. ವರನೊಂದಿಗೆ ಮೊದಲ ರಾತ್ರಿ ಕಳೆದ ನಂತರ, ಮರುದಿನ ಬೆಳಗ್ಗೆ ಹಣ ಮತ್ತು ಆಭರಣಗಳೊಂದಿಗೆ ಪರಾರಿಯಾಗುವ 'ಲೂಟೇರಿ ದುಲ್ಹನ್' (ಸುಲಿಗೆ ಮಾಡುವ ವಧುಗಳು) ಗ್ಯಾಂಗ್‌ನಿಂದ ಆತಂಕಗೊಂಡಿರುವುದಾಗಿ ಯುವಕರು ಹೇಳಿದ್ದಾರೆ. ಈ ವಂಚನೆಯ ನೇತೃತ್ವವನ್ನು ಮುಕೇಶ್ ಗುಪ್ತಾ ಎಂಬಾತ ವಹಿಸಿದ್ದಾನೆ ಎಂದು ಯುವಕರು ತಿಳಿಸಿದ್ದಾರೆ. ಮದುವೆ ಮಾಡಿಸಲು ಮುಕೇಶ್ ಗುಪ್ತಾ ಪ್ರತಿಯೊಬ್ಬರಿಂದ 1.25 ಲಕ್ಷ ರೂಪಾಯಿ ಪಡೆದಿದ್ದಾಗಿ ವಂಚನೆಗೊಳಗಾದ ಯುವಕರು ಹೇಳಿಕೆ ನೀಡಿದ್ದಾರೆ.

ಕರ್ವಾ ಚೌತ್ ಹತ್ತಿರದಲ್ಲಿ ಅವಸರದ ಮದುವೆ:

ಈ ವಿಷಯವನ್ನು ಯುವಕರು ಸ್ಥಳೀಯ ಆಡಳಿತದ ಗಮನಕ್ಕೆ ತಂದಿದ್ದಾರೆ. ಅಲಿಗಢದ ಮಾಜಿ ಮೇಯರ್ ಶಕುಂತಲಾ ಭಾರತಿ ಅವರು, ಅನೇಕ ಯುವಕರು ಹಣ ಮತ್ತು ಆಭರಣಗಳನ್ನು ಕಳೆದುಕೊಂಡಿರುವುದಾಗಿ ದೂರು ನೀಡಿದ್ದಾರೆ ಎಂದು ಹೇಳಿದ್ದಾರೆ. 'ಸೋಶಿಯಲ್ ಮೀಡಿಯಾ ಮತ್ತು ಫೋನ್ ಮೂಲಕ ಯುವಕರನ್ನು ಸಂಪರ್ಕಿಸಲಾಗುತ್ತಿತ್ತು. ಸುಂದರ ಹುಡುಗಿಯರ ಫೋಟೋಗಳನ್ನು ತೋರಿಸಲಾಗುತ್ತಿತ್ತು. ನಂತರ ಅವಸರದಲ್ಲಿ ದೇವಸ್ಥಾನ, ಮನೆ ಅಥವಾ ಸಣ್ಣ ಹಾಲ್‌ಗಳಲ್ಲಿ ಮದುವೆ ಮಾಡಿಸಲಾಗುತ್ತಿತ್ತು. ಹೆಚ್ಚಾಗಿ ಕರ್ವಾ ಚೌತ್ ಹತ್ತಿರದಲ್ಲಿಯೇ ಮದುವೆಗಳನ್ನು ಮಾಡಲಾಗುತ್ತಿತ್ತು. ಹೆಚ್ಚಿನ ಯುವಕರು ಗ್ರಾಮೀಣ ಪ್ರದೇಶದವರಾಗಿದ್ದು, ಅವಮಾನದ ಭಯದಿಂದ ಹಲವರು ಪೊಲೀಸರಿಗೆ ದೂರು ನೀಡಿಲ್ಲ ಎಂದು ತಿಳಿದುಬಂದಿದೆ.

ಊಟದಲ್ಲಿ ಮತ್ತಿನ ಔಷಧ:

ಅಲಿಗಢದ ನಿವಾಸಿ ಪ್ರತೀಕ್ ಶರ್ಮಾ ಅವರು ಕರ್ವಾ ಚೌತ್‌ನ ಮರುದಿನ 4.01 ಲಕ್ಷ ರೂಪಾಯಿ ಮತ್ತು ಚಿನ್ನಾಭರಣಗಳನ್ನು ಕಳೆದುಕೊಂಡಿದ್ದಾರೆ. ಇದೀಗ ಓಡಿ ಹೋಗಿರುವ ಪತ್ನಿ ಶೋಭಾ, ಕುಟುಂಬಕ್ಕೆ ಮತ್ತಿನ ಔಷಧಿ ಬೆರೆಸಿದ ಆಹಾರ ನೀಡಿ, ಚಿನ್ನ ಮತ್ತು ಹಣದೊಂದಿಗೆ ಪರಾರಿಯಾಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಮದುವೆ ಪ್ರಸ್ತಾಪವನ್ನು ತಂದಿದ್ದು ಆರೋಪಿ ಮುಕೇಶ್ ಗುಪ್ತಾ. 'ಲೂಟೇರಿ ದುಲ್ಹನ್' ಗ್ಯಾಂಗ್‌ನ ಇತರ ಸದಸ್ಯರಂತೆ ಈ ಮಹಿಳೆಯೂ ಬಿಹಾರ ಮೂಲದವಳು ಎಂದು ಪ್ರತೀಕ್ ಶರ್ಮಾ ಹೇಳಿದ್ದಾರೆ.

ಮದುವೆಯಾದ ಮರುದಿನ ಬೆಳಗ್ಗೆ ಎಚ್ಚರವಾದಾಗ, ಆಕೆ ಮನೆಯಲ್ಲಿದ್ದ ಎಲ್ಲಾ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದು ನಮಗೆ ತಿಳಿಯಿತು. ಆಕೆ ಬಿಟ್ಟುಹೋದ ಮೊಬೈಲ್ ಫೋನ್‌ಗೆ ಇದೇ ಗ್ಯಾಂಗ್‌ಗೆ ಸಂಬಂಧಿಸಿದ ಹಲವು ನಂಬರ್‌ಗಳಿಂದ ಕರೆಗಳು ಬರುತ್ತಿರುವುದನ್ನು ನಾವು ಪತ್ತೆಹಚ್ಚಿದ್ದೇವೆ' ಎಂದು ಪ್ರತೀಕ್ ಶರ್ಮಾ ನೀಡಿದ ದೂರಿನಲ್ಲಿ ಹೇಳಿದ್ದಾರೆ. ಯುವಕನ ದೂರಿನ ಮೇರೆಗೆ ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೂ ಯಾರಾದರೂ ವಂಚನೆಗೆ ಒಳಗಾಗಿದ್ದರೆ ದೂರು ಕೊಡುವಂತೆ ಮನವಿ ಮಾಡಿದ್ದಾರೆ.